ವಿಷಯಕ್ಕೆ ಹೋಗು

ವಿಶ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಬಲ್ ಅಲ್ಟ್ರಾ-ಡೀಪ್ ಫೀಲ್ಡ್ ಚಿತ್ರವು ಈಗಿನ ತಂತ್ರಜ್ಞಾನಕ್ಕೆ ಗೋಚರವಾಗುವ ಅತ್ಯಂತ ದೂರದ ಬ್ರಹ್ಮಾಂಡಗಳಲ್ಲಿ (ಗ್ಯಾಲಕ್ಸಿ) ಕೆಲವನ್ನು ತೋರಿಸುತ್ತದೆ. (ಕರ್ಣವು ಚಂದ್ರನ ದೃಗ್ಗೋಚರ ವ್ಯಾಸದ ~1/10 ರಷ್ಟಿದೆ).[]

ವಿಶ್ವ ಎಂದರೆ ಸಮಸ್ತವನ್ನೂ ಒಳಗೊಂಡಿರುವ ಭೌತವ್ಯವಸ್ಥೆ (ಯೂನಿವರ್ಸ್). ನಮಗೂ ನಮ್ಮ ಉಪಕರಣಗಳಿಗೂ ಗೋಚರವಾಗುವ ಮತ್ತು ವರ್ತಮಾನದಲ್ಲಿ ಗೋಚರವಾಗದೆ ಮುಂದೆಂದೋ ಅನಾವರಣಗೊಳ್ಳಲಿರುವ ಸಕಲ ಭೌತಕಾಯಗಳ, ಶಕ್ತಿ ಆಕರಗಳ (energy sources) ಮತ್ತು ವಿಕಿರಣ ಮೂಲಗಳ ಸಮಗ್ರ ಸಮುದಾಯವಿದು. ವಿಶ್ವದ ವ್ಯಾಖ್ಯೆ ನಮ್ಮಿಂದ ಆರಂಭವಾಗಿ ಮುಂದೆ ನಮ್ಮ ನಗರ, ದೇಶ, ಭೂಮಿ, ಸೌರವ್ಯೂಹ, ಆಕಾಶಗಂಗೆ, ಇನ್ನೂ ಮುಂದಿನ ಬ್ರಹ್ಮಾಂಡಗಳ (ಗೆಲಾಕ್ಸಿ) ಸಮೂಹ ಹೀಗೆ ನಮ್ಮ ಗ್ರಹಣಸಾಮರ್ಥ್ಯಕ್ಕೆ ಅನುಗುಣವಾಗಿ ವಿಸ್ತರಿಸುತ್ತದೆ. ಈ ಬೆಳೆವಣಿಗೆ ಸಹಸ್ರಾರು ವರ್ಷಗಳ ದೀರ್ಘ ಅಧ್ಯಯನದ ಫಲ.

ವಿಶ್ವದ ಪರಿಕಲ್ಪನೆಯ ಇತಿಹಾಸ

[ಬದಲಾಯಿಸಿ]

ಚಂದ್ರ, ಸೂರ್ಯ ಮತ್ತು ನಾವು ಎಂಬ ಸಂಕುಚಿತ ಕಲ್ಪನೆಯಿಂದ ಈ ವಿಸ್ತೃತಹಂತ ಮುಟ್ಟುವಲ್ಲಿ ಮುಖ್ಯವಾದ ತಿರುವುಗಳನ್ನು ಒದಗಿಸಿದ್ದು ದೂರದರ್ಶಕಗಳು ಮತ್ತು ರೋಹಿತವಿಜ್ಞಾನ. ವಿಶ್ವಕೇಂದ್ರ ಎನಿಸಿಕೊಂಡಿದ್ದ ಭೂಮಿಯ ಪದಚ್ಯುತಿ (15-16ನೆಯ ಶತಮಾನ),[] ನಕ್ಷತ್ರಲೋಕದ ಹೊಸಹೊಸ ಆವಿಷ್ಕಾರಗಳು ಮುಂತಾದವು ನವನವೀನ ಚಿಂತನೆಗಳನ್ನು ಹುಟ್ಟು ಹಾಕಿದುವು. ಇವುಗಳಲ್ಲೊಂದು ಹೆನ್‌ರಿಚ್ ಆಲ್ಬರ್ಸ್ (1758-1840) ಎತ್ತಿದ ಪ್ರಶ್ನೆ: ಇರುಳ ಬಾನು ಕಪ್ಪು ಏಕೆ? ಯಾವುದೇ ದಿಕ್ಕಿಗೆ ದೃಷ್ಟಿ ಹರಿಸಿದರೂ ನಕ್ಷತ್ರಗಳು ಇದ್ದೇ ಇರುತ್ತವೆ. ಅಂದ ಮೇಲೆ ಸಹಸ್ರಾರು ಸೂರ್ಯರ ಪ್ರಕಾಶದಿಂದ ರಾತ್ರಿಯಲ್ಲೂ ಹೆಚ್ಚು ಬೆಳಕು ಇರಬೇಕಾಗಿತ್ತಲ್ಲವೇ? ಸರಳ ಎನ್ನಿಸುವ ಈ ಪ್ರಶ್ನೆಗೆ ಉತ್ತರಗಳು ಹಂತಹಂತವಾಗಿ ದೊರಕಿದ ಸಂದರ್ಭದಲ್ಲಿ ಅಧಿಕಾಧಿಕ ಸ್ಫುಟಚಿತ್ರ ಅನಾವರಣಗೊಂಡಿತು.

17 ನೆಯ ಶತಮಾನದಲ್ಲಿ ಸೂರ್ಯನಿಗೆ ದೊರಕಿದ ಸಾರ್ವಭೌಮತ್ವ ಹೆಚ್ಚು ಕಾಲ ಉಳಿಯಲಿಲ್ಲ. ನಮ್ಮ ಸೌರವ್ಯೂಹ ವಿಶ್ವಕೇಂದ್ರದಲ್ಲಿಲ್ಲ, ಆಕಾಶಗಂಗೆ ಎಂಬ ಸ್ಥಳೀಯ ಬ್ರಹ್ಮಾಂಡದ ಅಂಚಿನಲ್ಲಿದೆ ಎಂಬ ಅಂಶ ಬೆಳಕಿಗೆ ಬಂದಿತು. ಹಾಗಾದರೆ ವಿಶ್ವ ಎಂದರೆ ಆಕಾಶಗಂಗೆಯೇ? ಈ ಅಭಿಪ್ರಾಯಕ್ಕೂ ಚ್ಯುತಿ ಬಂದದ್ದು ಇತರ ಬ್ರಹ್ಮಾಂಡಗಳು ಪತ್ತೆಯಾದಾಗ. ಲೆವಿಟ್ (1868-1921) ಹಾಕಿಕೊಟ್ಟ ಸಿಫೈಡ್ ತಾರೆಗಳ ಕಾಂತಿಮಾನ-ಅವಧಿ ಸೂತ್ರದ ಸಹಾಯದಿಂದ ಹಬ್ಬಲ್ (1889-1953) ಮತ್ತು ಹ್ಯುಮಾಸನ್ (1891-1972) ಬ್ರಹ್ಮಾಂಡಗಳ ಬೃಹತ್ ಭಂಡಾರವನ್ನೇ ತೆರೆದಿಟ್ಟರು. ನಮ್ಮ ಆಸುಪಾಸಿನ ಸುಮಾರು 20 ಬ್ರಹ್ಮಾಂಡಗಳ ಗುಂಪಿನಂತೆಯೇ ಹಲವಾರು ಇತರ ಬ್ರಹ್ಮಾಂಡಗಳ ಗುಂಪುಗಳಿವೆ ಎಂದು ತಿಳಿದುಬಂದಿತು.

ಬ್ರಹ್ಮಾಂಡಗಳ ಚಲನೆ, ಆಕಾರ, ರಚನೆ ಮುಂತಾದ ಗುಣಗಳನ್ನು ಅಭ್ಯಸಿಸಿದ ಇವರು ಮುಖ್ಯ ನಿಯಮವೊಂದನ್ನು ಆವಿಷ್ಕರಿಸಿದರು. ದೂರದ ಬ್ರಹ್ಮಾಂಡಗಳು ಅಧಿಕಾಧಿಕ ವೇಗದಿಂದ ದೂರದೂರ ಧಾವಿಸುತ್ತಿವೆ; ವೇಗವನ್ನೂ, ದೂರವನ್ನೂ ಸರಳ ಸೂತ್ರದಿಂದ ವಿವರಿಸಬಹುದು. ಈ ಸೂತ್ರ ಹೀಗಿದೆ:

v = H0D, H0 = ಸ್ಥಿರಾಂಕ. D = ಬ್ರಹಾಂಡಕ್ಕೆ ಇರುವ ದೂರ, v = ಬ್ರಹ್ಮಾಂಡದ ಬೇರ್ಪಡಿಕೆಯ ವೇಗ

ಈ ಸೂತ್ರದಲ್ಲಿಯ ಸ್ಥಿರಾಂಕಕ್ಕೆ ಹಬ್ಬಲ್ ಸ್ಥಿರಾಂಕವೆಂದು (Hubble constant) ಹೆಸರು. ಉದಾಹರಣೆಗೆ ಕೃಷ್ಣವೇಣಿ (ಕೋಮಾ ಬೆರೆನಿಸಸ್) ನಕ್ಷತ್ರಪುಂಜದಲ್ಲಿಯ 300 ಮಿಲಿಯನ್ ಜ್ಯೋತಿರ್ವರ್ಷ ದೂರದ ಬ್ರಹ್ಮಾಂಡಗಳ ಗುಂಪು ಸೆಕೆಂಡಿಗೆ 7200 ಕಿಮೀ ವೇಗದಿಂದ ಧಾವಿಸುತ್ತಿದ್ದರೆ, ಅಜಗರ (ಹೈಡ್ರಾ) ಪುಂಜದ (2600 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿದೆ) ಗುಂಪು ಸೆಕೆಂಡಿಗೆ 60,000 ಕಿಮೀ ವೇಗದಿಂದ ಓಡುತ್ತಿದೆ. ಅಂದರೆ ಪ್ರತಿಯೊಂದು ಬ್ರಹ್ಮಾಂಡವೂ ನಮ್ಮಿಂದ ಮಾತ್ರವಲ್ಲ, ಪರಸ್ಪರವಾಗಿಯೂ ದೂರದೂರ ಸರಿಯುತ್ತಿವೆ ಎಂದಾಯಿತು. ಈ ವಿದ್ಯಮಾನಕ್ಕೆ ವ್ಯಾಕೋಚನಶೀಲ ವಿಶ್ವ (ಎಕ್ಸ್‌ಪ್ಯಾಂಡಿಂಗ್ ಯೂನಿವರ್ಸ್) ಎಂದು ಹೆಸರು.[]

ಮಹಾಬಾಜಣೆ ಮತ್ತು ಇತರ ಸಿದ್ಧಾಂತಗಳು

[ಬದಲಾಯಿಸಿ]

ಹಬ್ಬಲ್ ಸೂತ್ರದ ಪ್ರಕಾರ ನಾವು ಹೆಚ್ಚು ದೂರ ನೋಡಿದಷ್ಟೂ ಭೂತಕಾಲದ ಆಳಕ್ಕೆ ಪ್ರವೇಶಿಸುತ್ತಿದ್ದೇವೆ ಎಂದಾಗುತ್ತದೆ. ಸರಳವಾಗಿ ತೋರುವ ಈ ಸೂತ್ರ ಹೀಗೆ ವಿಶ್ವೋಗಮದ ಬಗ್ಗೆ ಸುಳುಹು ನೀಡುತ್ತದೆ. ಈಗ, 2600 ಮಿಲಿಯನ್ ಜ್ಯೋತಿರ್ವರ್ಷ ದೂರದ ಗುಂಪು ಸೆಕೆಂಡಿಗೆ 60,000 ಕಿಮೀ ವೇಗದಿಂದ ಧಾವಿಸುತ್ತಿದೆ ಎಂದಾದರೆ, ಹಿಂದೆ ಅದು 300 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿದ್ದಾಗ ಸೆಕೆಂಡಿಗೆ 7200 ಕಿಮೀ ವೇಗದಿಂದ ಧಾವಿಸುತ್ತಿದ್ದಿರಬೇಕು. ಹೀಗೆಯೇ ಗಣನೆಯನ್ನು ಭೂತಕಾಲಕ್ಕೆ ವಿಸ್ತರಿಸಿದರೆ, ಒಂದಾನೊಂದು ಗಳಿಗೆಯಲ್ಲಿ ಎಲ್ಲ ಬ್ರಹ್ಮಾಂಡಗಳೂ ಒಂದೇ ಬಿಂದುವಿನಲ್ಲಿ ಕೇಂದ್ರೀಕೃತವಾಗಿದ್ದಿರಬೇಕು ಎಂದಾಗುತ್ತದೆ. ಈ ಬೃಹಚ್ಚೈತನ್ಯಬಿಂದುವಿಗೆ ಬೇರೆ ಬೇರೆ ವಿಜ್ಞಾನಿಗಳು ಬೇರೆ ಬೇರೆ ಹೆಸರುಗಳನ್ನಿಟ್ಟುಕೊಂಡಿದ್ದರು - ಆದಿ ಅಣು, ಆದಿಬೀಜ, ಪರಮಾದಿ ಪರಮಾಣು ಇತ್ಯಾದಿ. ಆ ಬೀಜ ಸ್ಫೋಟಗೊಂಡಾಗ ವಿಶ್ವ ಸೃಷ್ಟಿಯಾಯಿತು.[] ಈ ಸ್ಫೋಟವನ್ನೇ ಬಿಗ್‌ಬ್ಯಾಂಗ್ - ಮಹಾ ಬಾಜಣೆ-ಎಂದು ಕರೆದಿದ್ದಾರೆ.

ಆಕಾಶಕಾಲದ (ಸ್ಪೇಸ್‌ಟೈಮ್) ವಿವರಣೆಗೆ ಐನ್‌ಸ್ಟೈನ್‌ರ ಸಾಪೇಕ್ಷತಾ ಸಿದ್ಧಾಂತದ ಅಗತ್ಯವಿದೆ. ಇಲ್ಲಿ ವ್ಯೋಮಕ್ಕೆ ನಾಲ್ಕು ಆಯಾಮಗಳಿವೆ. ಸಾಧಾರಣವಾಗಿ ಬಳಸುವ x, y, z ಜೊತೆಗೆ, ಕಾಲವೂ (t) ಸೇರುತ್ತದೆ. ಈಗ, ಆಕಾಶ-ಕಾಲಗಳು ವ್ಯೋಮದ ಅವಿಭಾಜ್ಯ ಅಂಗಗಳಾಗುತ್ತವೆ. ಇದು ಸಮತಲ ವ್ಯೋಮ. ಐನ್‌ಸ್ಟೈನ್‌ರ ಸಾರ್ವತ್ರಿಕ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ ವ್ಯೋಮ ಸಮತಲೀಯವಲ್ಲ. ಗುರುತ್ವಬಲದ ಕಾರಣವಾಗಿ ಅದು ವಕ್ರವಾಗುತ್ತದೆ.[] ಈ ಪರಿಕಲ್ಪನೆ ವಿಶ್ವದ ವ್ಯಾಕೋಚನವನ್ನು ಸಮರ್ಪಕವಾಗಿ ವಿವರಿಸುತ್ತದೆ. ವಿಸ್ತಾರ ಹೆಚ್ಚಿದಂತೆ ವಕ್ರತೆ ಸ್ಪಷ್ಟವಾಗುತ್ತದೆ. ಇದನ್ನು ಗಣಿತ ಸೂತ್ರಗಳಿಂದ ವಿವರಿಸುವಾಗ ವಿಶ್ವಸ್ಥಿರಾಂಕವೊಂದು (ಕಾಸ್ಮಾಲಾಜಿಕಲ್ ಕಾನ್‌ಸ್ಟೆಂಟ್) ಅವಶ್ಯವಾಗುತ್ತದೆ.

ಹಾಯ್ಲ್ (1915-2001) ಮತ್ತು ಸಂಗಡಿಗರು ಪ್ರಸ್ತುತಪಡಿಸಿದ ಸ್ತಿಮಿತಸ್ಥಿತಿ ಸಿದ್ಧಾಂತದ (ಸ್ಟೆಡಿ ಸ್ಟೇಟ್ ತಿಯರಿ) ಪ್ರಕಾರ ಯಾವುದೇ ನಿರ್ದಿಷ್ಟ ಅವಧಿಯೊಳಗೆ ಘನಗಾತ್ರವೊಂದರಲ್ಲಿ ಕಂಡು ಬರುವ ಬ್ರಹ್ಮಾಂಡಗಳ ಸಂಖ್ಯೆ ಸ್ಥಿರ. ಇದು ಬ್ರಹ್ಮಾಂಡಗಳ ಓಟವನ್ನು ವಿವರಿಸಿತಾದರೂ ಇತರ ಕೆಲವು ಅಂಶಗಳನ್ನು ಸಮರ್ಪಕವಾಗಿ ವಿವರಿಸಲಿಲ್ಲ.

ಮಹಾಬಾಜಣೆಯಾದ ಕೂಡಲೇ ವಿಕಿರಣ ಹರಡತೊಡಗಿತು. ಉಷ್ಣತೆ 15-20 ಬಿಲಿಯನ್ ಕೆಲ್ವಿನ್‌ನಿಂದ 9 ಬಿಲಿಯನ್ ಕೆಲ್ವಿನ್‌ಗೆ ಇಳಿಯಲು ಐದು ಮಿನಿಟುಗಳು ಸಾಕಾದುವು ಎಂದು ಸೈದ್ಧಾಂತಿಕವಾಗಿ ತಿಳಿದಿದೆ. ಆ ಬಳಿಕ ವಿಕಿರಣವು ವಸ್ತುವಾಗಿ ಮಾರ್ಪಡಲಾರಂಭಿಸಿತು. ಸುಮಾರು 250,000 ವರ್ಷಗಳಲ್ಲಿ ವಸ್ತುವಿನ ಅಂಶ ಪ್ರಧಾನವಾಯಿತು. ಇದೂ ಹರಡತೊಡಗಿದಂತೆ ಉಷ್ಣತೆ ಇಳಿಯುವುದು ಮುಂದುವರಿಯಿತು. ವಸ್ತು ಅಲ್ಲಲ್ಲಿ ಗುಂಪುಗೂಡಿ ಈ ಗುಂಪುಗಳು ಗುರುತ್ವಬಲದ ಪ್ರಭಾವಕ್ಕೊಳಗಾದುವು. ಬ್ರಹ್ಮಾಂಡಗಳ ರಚನೆಯಾಯಿತು. ಕ್ರಮೇಣ ಇವುಗಳಲ್ಲಿ ನಕ್ಷತ್ರಗಳು ರಚಿತವಾಗಿ ಸೌರವ್ಯೂಹಗಳು, ಅವುಗಳಲ್ಲಿ ಗ್ರಹಗಳು, ಭೂಮಿಯಂಥ ಗ್ರಹಗಳಲ್ಲಿ ಜೀವಿಗಳು ಹೀಗೆ ಮುಂದುವರಿಯಿತು.

ಹಬ್ಬಲ್ ನಿಯಮ ಈ ಸಿದ್ಧಾಂತಕ್ಕೆ ಮುಖ್ಯ ಸೂಚಕ. ಹರಡುತ್ತ ತಣ್ಣಗಾದ ವಿಶ್ವ ಇಂದಿಗೆ ಯಾವ ತಾಪದಲ್ಲಿದೆ? ಇದನ್ನು ಸೈದ್ಧಾಂತಿಕವಾಗಿ ಗಣಿಸುತ್ತಿದ್ದಂತೆ ಎರಡನೆಯದೊಂದು ಮುಖ್ಯ ಪುರಾವೆಯ ಸುಳು ಸಿಕ್ಕಿತು. 1960 ರ ದಶಕದಲ್ಲಿ ಪೆನ್ಸಿಯಾಸ್ ಮತ್ತು ವಿಲ್ಸನ್ ಎಂಬಿಬ್ಬರು ರೇಡಿಯೊ ದೂರದರ್ಶಕದ ಮೂಲಕ 3 ಕೆಲ್ವಿನ್ ತಾಪಕ್ಕೆ ಅನುಗುಣವಾದ ವಿಕಿರಣವನ್ನು ವಿಶ್ವದ ಮೂಲೆಮೂಲೆಯಲ್ಲೂ ಆಕಸ್ಮಿಕವಾಗಿ ಗುರುತಿಸಿದರು.[] 1992 ರಲ್ಲಿ ಹಾರಿದ ಬಾಹ್ಯಾಕಾಶ ಪ್ರಯೋಗಾಲಯ (ಕೋಬ್-ಕಾಸ್ಮಿಕ್ ಬ್ಯಾಕ್‌ಗ್ರೌಂಡ್ ಎಕ್ಸ್‌ಪ್ಲೋರರ್ - ಬ್ರಹ್ಮಾಂಡೀಯ ಹಿನ್ನೆಲೆ ವಿಕಿರಣಾನ್ವೇಷಕ ಎಂದರ್ಥ) ಇದನ್ನು ಪುಷ್ಟೀಕರಿಸಿತು.[]

ಆದಿಯಲ್ಲಿ ಇರಬೇಕಾಗಿದ್ದ ಹೀಲಿಯಮ್ ಪ್ರಮಾಣವನ್ನು ಪರೋಕ್ಷವಾಗಿ ಪರಿಶೀಲಿಸುವುದು 2004ರಲ್ಲಿ ಸಾಧ್ಯವಾಯಿತು. ಹೀಗೆ ಮೂರು ಪ್ರಾಯೋಗಿಕ ಪುರಾವೆಗಳು ದೊರಕಿರುವುದರಿಂದ ಮಹಾಬಾಜಣೆ ಸಿದ್ಧಾಂತ ಮಾನ್ಯತೆ ಪಡೆದಿದೆ.

ಈಚೆಗೆ ವಿಜ್ಞಾನಿ ಜಯಂತ ನಾರ್ಳೀಕರ್ (1938) ಮತ್ತು ವಿಕ್ರಮಸಿಂಘೆ (ವಿಶ್ವದ ಉಗಮ ಕುರಿತು) ಹೊಸತೊಂದು ಸಿದ್ಧಾಂತವನ್ನು ಮುಂದಿಟ್ಟಿದ್ದಾರೆ.

ಉಪಸಂಹಾರ

[ಬದಲಾಯಿಸಿ]

ನಮ್ಮ ಎಲ್ಲ ಜ್ಞಾನಭಂಡಾರಕ್ಕೆ ಆಧಾರವಾದ ಬೆಳಕು, ರೇಡಿಯೊ ಮುಂತಾದ ವಿದ್ಯುತ್ಕಾಂತ ವಿಕಿರಣಗಳ ವೇಗವೇ ನಮ್ಮ ಅರಿವನ್ನು ಮಿತಿಗೊಳಿಸಿದೆ. ದೂರದೂರದ ಬ್ರಹ್ಮಾಂಡಗಳ ವೇಗ ಅಧಿಕಾಧಿಕ. ಅಂದರೆ ಬೆಳಕಿನ ವೇಗದಷ್ಟು ವೇಗದಲ್ಲಿ ಅತಿ ದೂರದ ಬ್ರಹ್ಮಾಂಡವೊಂದು ಧಾವಿಸುತ್ತಿದ್ದರೆ ಅದರ ಅಸ್ತಿತ್ವದ ಅರಿವೂ ನಮಗಾಗದು. ಈ ಕಾರಣ ಅರಿವಿನ ನಮ್ಮ ವಿಶ್ವಕ್ಕೆ ಎಲ್ಲೆಯನ್ನು ನಿಸರ್ಗವೇ ವಿಧಿಸಿದಂತಾಗಿದೆ.

ವಿಶ್ವದ ಭವಿಷ್ಯವೇನು ಎಂಬುದನ್ನು ನಿರ್ಧರಿಸುವಲ್ಲಿ ವಿಶ್ವ ಸ್ಥಿರಾಂಕದ ಖಚಿತ ಮೌಲ್ಯದ ಅರಿವು ಅಗತ್ಯವಿದೆ. ವಿಶ್ವ ಈಗಿನಂತೆಯೇ ಸದಾ ವ್ಯಾಕೋಚಿಸುತ್ತಲೇ ಇರುವುದೇ? ಇನ್ನೊಂದು ಚಿಂತನೆಯಂತೆ ಮುಂದೊಮ್ಮೆ ಸಮಸ್ಥಿತಿ ತಲಪುವುದೇ? ಇವು ಕೆಲವು ಪ್ರಶ್ನೆಗಳು. ವಿಶ್ವ ಆಂದೋಲನ ಸ್ಥಿತಿಯಲ್ಲಿರಬಹುದು. ಒಂದು ಹಂತದಲ್ಲಿ ವ್ಯಾಕೋಚನ ನಿಂತು ಮತ್ತೆ ಸಂಕೋಚನ ಆರಂಭವಾಗಬಹುದು. ಇದು ಇನ್ನೊಂದು ಮಹಾಚೂರ್ಣನೆಗೆ (ಬಿಗ್ ಕ್ರಂಚ್) ಮೂಲವಾಗಬಹುದು ಎಂಬ ಸಿದ್ಧಾಂತವೂ, ಚಿಂತನೆಯೂ ಇವೆ.

ಉಲ್ಲೇಖಗಳು

[ಬದಲಾಯಿಸಿ]
  1. "Hubble sees galaxies galore". spacetelescope.org. Archived from the original on May 4, 2017. Retrieved April 30, 2017.
  2. A library catalogue of a 16th-century historian, Matthew of Miechow, bears that date and contains a reference to the manuscript, so it must have begun circulating before that date (Koyré 1973, p. 85; Gingerich 2004, p. 32).
  3. Overbye, Dennis (20 February 2017). "Cosmos Controversy: The Universe Is Expanding, but How Fast?". The New York Times. Retrieved 21 February 2017.
  4. Bridge, Mark (Director) (30 July 2014). First Second of the Big Bang. How The Universe Works. Silver Spring, Maryland. Science Channel. https://www.sciencechannel.com/tv-shows/how-the-universe-works/full-episodes/first-second. 
  5. Ehlers 1973, sec. 1.4, Schutz 1985, sec. 5.1
  6. "Nobel-prize winning accidents". Phys.org. Archived from the original on December 3, 2013. Retrieved April 24, 2012.
  7. "The Nobel Prize in Physics 2006". Nobel Foundation. Retrieved 2008-10-09.

ಗ್ರಂಥಸೂಚಿ

[ಬದಲಾಯಿಸಿ]
  • Ehlers, Jürgen (1973), "Survey of general relativity theory", in Israel, Werner (ed.), Relativity, Astrophysics and Cosmology, D. Reidel, pp. 1–125, ISBN 978-90-277-0369-9
  • Schutz, Bernard F. (1985), A first course in general relativity, Cambridge University Press, ISBN 978-0-521-27703-7

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: