ಶಾರ್ಕ್ ಮೀನು
ಶಾರ್ಕ್‌ಗಳು | |
---|---|
ಮೇಲೆ ಎಡಕ್ಕಿಂದ ಪ್ರದಕ್ಷಿಣವಾಗಿ: ಮುಳ್ಳುಗಳುಳ್ಳ ನಾಯಿಮೀನು, ಆಸ್ಟ್ರೇಲಿಯದ ಏಂಜಲ್‍ಶಾರ್ಕ್, ತಿಮಿಂಗಲು ಶಾರ್ಕ್, ಬಿಳಿ ಶಾರ್ಕ್, ಹಾರ್ನ್ ಶಾರ್ಕ್, ನೆರಿಗೆ ಶಾರ್ಕ್, ಸ್ಕಾಲಪ್ಡ್ ಹ್ಯಾಮರ್‌ಹೆಡ್ ಮತ್ತು ಜಪಾನೀಸ್ ಸಾಶಾರ್ಕ್. ಇವು ಅನುಕ್ರಮವಾಗಿ ಸ್ಕ್ವಾಲಿಫ಼ಾರ್ಮಿಸ್, ಸ್ಕ್ವಾಟಿನಿಫ಼ಾರ್ಮಿಸ್, ಒರೆಕ್ಟೊಲೋಬಿಫ಼ಾರ್ಮಿಸ್, ಲ್ಯಾಮ್ನಿಫ಼ಾರ್ಮಿಸ್, ಹೆಟೆರೊಡಾಂಟಿಫ಼ಾರ್ಮಿಸ್, ಹೆಕ್ಸ್ಯಾಂಕಿಫ಼ಾರ್ಮಿಸ್, ಕಾರ್ಕರೈನಿಫ಼ಾರ್ಮಿಸ್ ಮತ್ತು ಪ್ರಿಸ್ಟಿಯೋಫ಼ೋರಿಫ಼ಾರ್ಮಿಸ್ ಗಣಗಳನ್ನು ಪ್ರತಿನಿಧಿಸುತ್ತವೆ. | |
Scientific classification | |
ಕ್ಷೇತ್ರ: | Eukaryota |
ಸಾಮ್ರಾಜ್ಯ: | Animalia |
ವಿಭಾಗ: | ಕಾರ್ಡೇಟಾ |
ವರ್ಗ: | ಕಾಂಡ್ರಿಕ್‍ಥೈಸ್ |
ಕೆಳವರ್ಗ: | ಯೂಸೆಲಾಚೀ |
ಏಕಮೂಲ ವರ್ಗ: | ನೀಯೊಸೆಲಾಚೀ |
ಉಪವಿಭಾಗ: | ಸೆಲ್ಯಾಚಿಮೊರ್ಫ಼ಾ |
ಗಣಗಳು | |
| |
Synonyms | |
|
ಶಾರ್ಕ್ ಒಂದು ಜಲಚರ ಪ್ರಾಣಿ. ಶಾರ್ಕ್ ಮೀನುಗಳು ಕಾಂಡ್ರಿಕ್ತೈಸ್ ವರ್ಗಕ್ಕೆ ಸೇರಿದ ಮೃದ್ವಸ್ಥಿಯುಳ್ಳ ಮೀನುಗಳಾಗಿವೆ.[೧] ಇದು ಮೂಳೆಗಳನ್ನು ಹೊಂದಿರುವುದಿಲ್ಲ. ಇವುಗಳ ಬಣ್ಣ ಕೆನೆ, ಬೂದು, ಕಂದು, ಹಳದಿ ಅಥವಾ ನೀಲಿ. ಅತ್ಯಂತ ಚಿಕ್ಕ ಶಾರ್ಕ್ 15 ಸೆಂಮೀ, ದೊಡ್ಡದು 15 ಮೀ ಉದ್ದ ಬೆಳೆದಿರುತ್ತವೆ. ಸಾಮಾನ್ಯವಾಗಿ ಶಾರ್ಕ್ ಮೀನು ಹೊಸದಾಗಿ ಸೇರಿದ ನೀರಿನಲ್ಲಿ ವಾಸಿಸುವುದಿಲ್ಲ. ಅತಿ ಕಡಿಮೆ ಆಮ್ಲಜನಕವಿರುವ ನೀರಿನಲ್ಲಿಯೂ ಸಹ ೪-೫ ಗಂಟೆಯವರೆಗೆ ಶಾರ್ಕ್ ಜೀವಿಸಬಲ್ಲದು. ಶಾರ್ಕ್ ಮೀನು ಸಣ್ಣ ಸಣ್ಣ ಮೀನುಗಳು, ಸೀಗಡಿ, ಇತರ ಜಲಚರಗಳನ್ನು ಹಿಡಿದು ತಿನ್ನುತ್ತದೆ.
ನಡೆದಾಡುವ ಶಾರ್ಕ್‌ನಲ್ಲಿ ಕಿವಿರಸೀಳಿನ ಕೆಳಭಾಗದ ರೆಕ್ಕೆಗಳು ನಡೆಪಾದದಂತೆ ಮಾರ್ಪಾಡುಗೊಂಡಿರುತ್ತವೆ. ಇದು ತನ್ನ ರೆಕ್ಕೆಗಳ ಸಹಾಯದಿಂದ ನಡೆದು ಬೀಚಿನ ಮೇಲೆ ಓಡಾಡುತ್ತದೆ.
ಭಾರತದ ಕರಾವಳಿ ಕಡಲುಗಳಲ್ಲಿ ಕಾರ್ಕರೈನಿಡೀ ಕುಟುಂಬಕ್ಕೆ ಸೇರಿದ ಅನೇಕ ಶಾರ್ಕುಗಳು ವಾಸಿಸುತ್ತವೆ. ಇವುಗಳಲ್ಲಿ ಸ್ಕೊಲಿಯೊಡಾನ್ ಎಂಬ ಜಾತಿ ಮುಖ್ಯವಾದುದು. ಇದರಲ್ಲಿ 9 ಪ್ರಭೇದಗಳುಂಟು.
ದೇಹರಚನೆ
[ಬದಲಾಯಿಸಿ]ಶಾರ್ಕಿನ ದೇಹ ಉರುಳೆಯಾಕಾರದ್ದು. ದೇಹದ ಮೇಲೆ ಪಟ್ಟೆಗಳು, ಚುಕ್ಕೆಗಳು, ಅಥವಾ ಗಂತಿಗಳು ಇರುವುವು. ಎರಡು ತುದಿಗಳೂ ಚೂಪಾಗಿವೆ. ದೇಹವನ್ನು ಶಿರ, ಮುಂಡ ಮತ್ತು ಬಾಲವೆಂದು ಗುರುತಿಸಬಹುದು. ಶಿರದ ಕೆಳ ಪಾರ್ಶ್ವದಲ್ಲಿ ಅರ್ಧಚಂದ್ರಾಕೃತಿಯ ಬಾಯಿ ಹಾಗೂ ಮೂಗಿನ ಹೊಳ್ಳೆಗಳೂ ಮುಂಡದ ಮುಂಪಾರ್ಶ್ವದಲ್ಲಿ ಐದು ಜೋಡಿ ಕಿವಿರುಸೀಳುಗಳೂ ಇವೆ. ಕೆಳಪಾರ್ಶ್ವದಲ್ಲಿ ಗುದದ್ವಾರವಿದೆ. ದೇಹದಲ್ಲಿ ಕಿವಿರು ಸೀಳುಗಳ ಹಿಂದೆ ವಿಶಾಲ ಭುಜದ ಈಜುರೆಕ್ಕೆಗಳೂ ಗುದದ್ವಾರದ ಪಕ್ಕದಲ್ಲಿ ಸೊಂಟದ ಈಜುರೆಕ್ಕೆಗಳೂ ಇವೆ. ಜೊತೆಗೆ ದೇಹದ ಮಧ್ಯಾಕ್ಷದಲ್ಲಿ ಮೂರು ಮಧ್ಯದ ಈಜುರೆಕ್ಕೆಗಳಿವೆ. ಮೇಲಿನ ಪಾರ್ಶ್ವದಲ್ಲಿ ಒಂದು ದೊಡ್ಡ ಮುಂದಿನ ಈಜುರೆಕ್ಕೆ ಮತ್ತು ಬಾಲದ ಬುಡದಲ್ಲಿ ಹಿಂದಿನ ಈಜುರೆಕ್ಕೆಗಳಿವೆ. ಕೆಳಪಾರ್ಶ್ವದಲ್ಲಿ ಒಂದೇ ಈಜುರೆಕ್ಕೆ ಬಾಲದ ಬುಡದಲ್ಲಿದೆ. ಬಾಲದ ಈಜುರೆಕ್ಕೆ ದೊಡ್ಡದಾಗಿದ್ದು ಅದರಲ್ಲಿ ದೊಡ್ಡ ಮೇಲುಭಾಗವೂ ಚಿಕ್ಕ ಕೆಳಭಾಗವೂ ಉಂಟು.
ಚರ್ಮದಲ್ಲಿ ಎರಡು ಪದರಗಳಿವೆ. ಹೊರ ಚರ್ಮದಲ್ಲಿ ಲೋಳೆ ಕೋಶಗಳು ಒಳಚರ್ಮದಲ್ಲಿ ಸಂಯೋಜಕ ಅಂಗಾಂಶದ ತಂತುಗಳು, ನರಗಳು ಮತ್ತು ವರ್ಣಕೋಶಗಳೂ ಇವೆ. ಹೊರಚರ್ಮ ಸ್ರವಿಸುವ ಲೋಳೆಯಿಂದಾಗಿ ಶಾರ್ಕಿಗೆ ಬ್ಯಾಕ್ಟೀರಿಯಗಳಿಂದ ರಕ್ಷಣೆ ದೊರೆಯುತ್ತದೆ. ಚರ್ಮದ ಹೊರಭಾಗದಲ್ಲಿ ಸೂಕ್ಷ್ಮವಾದ ಪ್ಲಕಾಯಿಡ್ ಮಾದರಿಯ ಹುರುಪುಗಳಿವೆ. ಒಳಚರ್ಮದಿಂದ ಬೆಳೆಯುವ ಇವು ರಚನೆಯಲ್ಲಿ ಕಶೇರುಕಗಳ ಹಲ್ಲುಗಳನ್ನು ಹೋಲುತ್ತವೆ.
ಎಲ್ಲ ಶಾರ್ಕುಗಳಲ್ಲಿಯೂ ಕಾಂಡ್ರಿನ್ ಎಂಬ ಪ್ರೋಟೀನ್‌ರಚಿತ ಮೃದ್ವಸ್ಥಿ ಅಂಗಾಂಶದ ಅಸ್ಥಿಪಂಜರವಿದೆ. ಇದನ್ನು ಅಕ್ಷದ ಅಸ್ಥಿಪಂಜರ ಹಾಗೂ ಉಪಾಂಗಗಳ ಅಸ್ಥಿಪಂಜರ ಎಂದು ವಿಭಾಗಿಸಬಹುದು. ಇದು ದೇಹಕ್ಕೆ ಆಧಾರ ನೀಡಿ ಈಜಾಟದಲ್ಲಿ ಸಹಾಯಕವಾಗಿದೆ. ದೇಹಕ್ಕೆ ಆಧಾರ ನೀಡುವ ಅಕ್ಷದ ಅಸ್ಥಿಪಂಜರದಲ್ಲಿ ಎರಡು ಭಾಗಗಳಿವೆ. ಮೊದಲನೆಯದು, ಬೆನ್ನುಮೂಳೆ ಅಥವಾ ಕಶೇರು ಸ್ತಂಭ ಇನ್ನೊಂದು ತಲೆಬುರುಡೆ ಹಾಗೂ ದವಡೆಗಳು. ತಲೆಬುರುಡೆ ಟೊಳ್ಳಾಗಿದ್ದು ಒಳಭಾಗದಲ್ಲಿ ಮಿದುಳಿಗೂ ಅದರ ಉಭಯ ಪಾರ್ಶ್ವಗಳಲ್ಲಿ ಘ್ರಾಣೇಂದ್ರಿಯ, ಕಣ್ಣು ಹಾಗೂ ಒಳಕಿವಿಗೂ ಅವಕಾಶವಿದೆ. ಹಿಂದೆ ದೊಡ್ಡರಂಧ್ರವಿದ್ದು ಮಿದುಳುಬಳ್ಳಿ ಅದರ ಮೂಲಕ ಹೊರಬರುತ್ತದೆ. ತಲೆಬುರುಡೆಯ ಕೆಳಭಾಗದಲ್ಲಿ ದವಡೆಗಳಿವೆ. ಬೇಟೆ ಆಡುವಾಗ ಶಾರ್ಕ್ ಬಾಯಿಯನ್ನು ಅಗಲವಾಗಿ ತೆರೆಯಲು ಅನುಕೂಲವಾಗುವಂತೆ ದವಡೆಗಳು ಬುರುಡೆಗೆ ಜೋಡಣೆಗೊಂಡಿವೆ.
ಶಾರ್ಕಿನ ಜೀರ್ಣಾಂಗದಲ್ಲಿ ಅನ್ನನಾಳ ಹಾಗೂ ಗ್ರಂಥಿಗಳಿವೆ. ಬಾಯಿಯಲ್ಲಿ ಮೊನಚಾದ ಹಿಂಬಾಗಿದ ಹಲವಾರು ಹಲ್ಲುಗಳೂ ಇವೆ.[೨] ಜಠರದಲ್ಲಿ ಎರಡು ಭಾಗಗಳು: ಮುಂಭಾಗ ಜಠರ ರಸವನ್ನು ಸ್ರವಿಸುತ್ತದೆ, ಹಿಂಭಾಗದಲ್ಲಿ ಉಂಗುರಾಕಾರದ ಸ್ನಾಯುವಿದ್ದು ಇದು ಆಹಾರದ ಕಣಗಳನ್ನು ನಿಧಾನವಾಗಿ ಕರುಳಿಗೆ ಸಾಗಲು ಬಿಡುತ್ತದೆ. ಕರುಳಿನ ಒಳಭಾಗದಲ್ಲಿ ಸುರುಳಿ ಕವಾಟವಿದೆ. ಇದು ಆಹಾರ ಹೀರುವ ಮೇಲ್ಮೈಯನ್ನು ಹೆಚ್ಚಿಸಿ ಕರುಳಿನಲ್ಲಿ ಆಹಾರದ ಶೀಘ್ರ ಚಲನೆಗೆ ಸಹಕಾರಿಯಾಗಿದೆ. ಶಾರ್ಕಿನ ಯಕೃತ್ತು ದೊಡ್ಡದಾಗಿದ್ದು ಪಿತ್ತರಸವನ್ನು ಸ್ರವಿಸುತ್ತದೆ.[೩] ಮೇದೋಜೀರಕಾಂಗ ಜೀರ್ಣಕ್ರಿಯೆಗೆ ಅಗತ್ಯವಾದ ಕಿಣ್ವಗಳನ್ನೂ ಹಾರ್ಮೋನುಗಳನ್ನೂ ಸ್ರವಿಸುತ್ತದೆ.
ಶಾರ್ಕಿನ ಉಸಿರಾಟದ ಅಂಗಗಳು ಕಿವಿರುಗಳು. ಗಂಟಲಿನ ಪಾರ್ಶ್ವದಿಂದ ಹೊರಡುವ ಕಿವಿರುಗಳು ಹೊರಭಾಗದಲ್ಲಿ ತೆರೆದಿರುತ್ತವೆ. ಎರಡು ಕಿವಿರುಗಳ ನಡುವೆ ಮಾಂಸದ ಮಡಿಕೆಗಳಿದ್ದು ಅವುಗಳಲ್ಲಿ ರಕ್ತ ಶುದ್ಧವಾಗುತ್ತದೆ. ಉಸಿರಾಡುವಾಗ ಶಾರ್ಕ್ ತನ್ನ ಗಂಟಲಿನ ಪಾರ್ಶ್ವದ ಹಾಗೂ ತಳದ ಭಿತ್ತಿಗಳನ್ನು ಸ್ನಾಯುಗಳಿಂದ ಹಿಗ್ಗಿಸುತ್ತದೆ. ಇದು ನೀರನ್ನು ಒಳಸೆಳೆಯುತ್ತದೆ. ಅನಂತರ ಬಾಯಿ ಮುಚ್ಚಿಕೊಂಡು ಗಂಟಲಿನ ತಳದ ಭಿತ್ತಿಯನ್ನು ಮೇಲೇರಿಸುತ್ತದೆ. ಆಗ ನೀರು ಒತ್ತಡಕ್ಕೆ ಒಳಗಾಗಿ, ಕಿವಿರು ಸೀಳುಗಳ ಮೂಲಕ ಹೊರಕ್ಕೆ ಹರಿಯುತ್ತದೆ. ನೀರಿನಲ್ಲಿ ವಿಲೀನಿಸಿರುವ ಆಕ್ಸಿಜನ್ನನ್ನು ರಕ್ತ ಹೀರಿಕೊಳ್ಳುತ್ತದೆ.
ಗಂಡು ಶಾರ್ಕಿನಲ್ಲಿ ಒಂದು ಜೋಡಿ ವೃಷಣಗಳಿವೆ. ಅವು ಮೂತ್ರಪಿಂಡದ ಮುಂಭಾಗದ ಮಾರ್ಪಡಿಕೆಗಳು. ಹೆಣ್ಣಿನಲ್ಲಿ ಒಂದು ಅಂಡಾಶಯವಿದ್ದು ಇದು ಸ್ನಾಯುಗಳ ಮೂಲಕ ಅಂಡನಾಳಕ್ಕೆ ಕೂಡಿಕೊಂಡಿರುತ್ತದೆ. ಸಂಭೋಗ ಕ್ರಿಯೆಯಲ್ಲಿ ವೀರ್ಯಾಣುಗಳು ಹೆಣ್ಣಿನ ಮಲಕುಳಿಯ ಒಳಸೇರಿ ತತ್ತಿಗಳೆಡೆಗೆ ಸಾಗುತ್ತವೆ. ತತ್ತಿಗಳಲ್ಲಿ ಬಂಡಾರದ ಪ್ರಮಾಣ ಹೆಚ್ಚಿರುತ್ತದೆ.
ಶಾರ್ಕಿನ ಶರೀರ ನೀರಿನಲ್ಲಿ ಸುಲಭವಾಗಿ ಈಸಲು ಅನುಕೂಲವಾಗುವಂತೆ ಮಾರ್ಪಾಡಾಗಿದೆ. ಈಜುರೆಕ್ಕೆಯ ಬಡಿತದಿಂದ ಹಾಗೂ ಸ್ನಾಯುಗಳ ಸಂಕುಚನದಿಂದ ಶಾರ್ಕುಗಳು ಚಲಿಸುತ್ತವೆ. ಸ್ನಾಯುಗಳು ಬೆನ್ನೆಲುಬನ್ನು ಆಧಾರವಾಗಿಟ್ಟುಕೊಂಡು ಸಂಕುಚಿಸುತ್ತವೆ. ದೇಹದ ಎಡಬಲಗಳಲ್ಲಿ ಸಂಕುಚನಗಳು ಪರ್ಯಾಯವಾಗಿ ಆಗುತ್ತವೆ. ಅದರಿಂದ ಮೀನು ಒಮ್ಮೆ ಎಡಕ್ಕೆ ಇನ್ನೊಮ್ಮೆ ಬಲಕ್ಕೆ ಸಾಗುತ್ತದೆ. ಗಂಟೆಗೆ ಒಂದರಿಂದ ಒಂದೂಕಾಲು ಕಿಲೊಮೀಟರ್ ದೂರ ಚಲಿಸಬಲ್ಲದು. ಶಾರ್ಕಿನ ಯಕೃತ್ತಿನಲ್ಲಿ ಎಣ್ಣೆ ಹೆಚ್ಚಿನ ಪ್ರಮಾಣದಲ್ಲಿದೆ. ಅದರಿಂದ ದೇಹದ ಅಂಗಾಂಗಗಳ ಸಾಂದ್ರತೆ ನೀರಿಗಿಂತ ಕಡಿಮೆ ಇದ್ದು ದೇಹಕ್ಕೆ ಪ್ಲವನತೆ ಒದಗುತ್ತದೆ. ಆದ್ದರಿಂದ ಶಾರ್ಕ್ ಈಜುವಾಗ ಅತ್ಯಲ್ಪ ಪ್ರಮಾಣದ ಶಕ್ತಿ ಸಾಕಾಗುತ್ತದೆ.
ಸಂತಾನೋತ್ಪತ್ತಿ
[ಬದಲಾಯಿಸಿ]ಶಾರ್ಕುಗಳಲ್ಲಿ ಅಂಡೋತ್ಪಾದಕ, ಅಂಡಜೋತ್ಪಾದಕ, ಜೀವೋತ್ಪಾದಕಗಳೆಂಬ ಮೂರೂ ವಿಧಾನಗಳಲ್ಲಿ ಬೆಳೆವಣಿಗೆ ಆಗುತ್ತದೆ.[೪][೫] ಅಂಡೋತ್ಪಾದಕ ಪ್ರಭೇದಗಳಲ್ಲಿ ತಾಯಿ ತತ್ತಿಗಳನ್ನು ಕಡಲ ತಳದಲ್ಲಿರಿಸುತ್ತದೆ. ಇವು ಅಲ್ಲಿಯೇ ಬೆಳೆದು ಮರಿಗಳಾಗುತ್ತವೆ. ಎರಡನೆಯ ಬಗೆಯ ಸಂತಾನೋತ್ಪತ್ತಿಯಲ್ಲಿ ತತ್ತಿಗಳು ತಾಯಿಯ ದೇಹದಲ್ಲೇ ಉಳಿಯುತ್ತವೆ. ಅಲ್ಲಿಯೇ ಇವು ಬೆಳೆದು ಮರಿಗಳಾಗುತ್ತವೆ. ಆದರೆ ಬೆಳೆವಣಿಗೆಯ ಹಂತದಲ್ಲಿ ತಾಯಿಯಿಂದ ನೇರವಾಗಿ ಆಹಾರ ಪಡೆಯುವುದಿಲ್ಲ. ಜೀವೋತ್ಪಾದಕಗಳಲ್ಲಿ ತತ್ತಿಗಳು ತಾಯಿಯ ದೇಹದಲ್ಲಿಯೇ ಉಳಿಯುತ್ತವೆ ಹಾಗೂ ಭ್ರೂಣ ಬೆಳೆಯುವಾಗ ಜರಾಯು ಪದರಗಳ ಮೂಲಕ ತಾಯಿಯ ಶರೀರದಿಂದ ನೇರವಾಗಿ ಆಹಾರ ಪಡೆಯುತ್ತವೆ. ಇಂಥ ಬಗೆಗಳಲ್ಲಿ ಪೂರ್ಣ ಬೆಳೆದ ಮರಿಗಳು ಹೊರಬರುತ್ತವೆ.[೬]
ನಡವಳಿಕೆ
[ಬದಲಾಯಿಸಿ]ಶಾರ್ಕ್‌ಗಳು ಒಂಟಿ ಜೀವಿಗಳು. ಸುತ್ತಿಗೆ ತಲೆಯ ಶಾರ್ಕ್‌ನಂಥ ಕೆಲವು ಪ್ರಭೇದಗಳು ಗುಂಪಾಗಿ ಬದುಕುತ್ತವೆ. ಶಾರ್ಕುಗಳು ಈಜುಗಾರರ ಮೇಲೆಯೂ ಸಾಗರವಾಸಿ ಕೆಲವು ದೈತ್ಯಪ್ರಾಣಿಗಳ ಮೇಲೆಯೂ ಆಕ್ರಮಣ ಮಾಡುವುದುಂಟು.
ವಿಧಗಳು
[ಬದಲಾಯಿಸಿ]ಶಾರ್ಕ್ ಮೀನುಗಳಲ್ಲಿ ಪ್ರಧಾನವಾಗಿ ಎರಡು ವಿಧಗಳಿವೆ. ಅವುಗಳೆಂದರೆ ರೇ ಶಾರ್ಕ್ ಮತ್ತು ಸ್ಕೇಟ್ ಶಾರ್ಕ್. ಶಾರ್ಕ್ ಮೀನುಗಳ ರಚನೆ, ಆಕಾರ, ಗಾತ್ರ, ಚರ್ಮದ ಹೊದಿಕೆ ಇವುಗಳ ಆಧಾರದ ಮೇಲೆ ಸುಮಾರು ೫೦೦ ಕ್ಕೂ ಹೆಚ್ಚಿನ ಶಾರ್ಕ್ ಪ್ರಭೇದಗಳಿವೆ.[೭][೮] ಮರಳು ಶಾರ್ಕ್, ಬಿಳಿಶಾರ್ಕ್, ಮ್ಯಾಕೋಶಾರ್ಕ್, ತಿಮಿಂಗಿಲ ಶಾರ್ಕ್, ಹುಲಿಶಾರ್ಕ್, ಸುತ್ತಿಗೆ ತಲೆಯ ಶಾರ್ಕ್‌ಗಳು ಮುಖ್ಯ ಬಗೆಯವು.
ಶಾರ್ಕ್ ಮೀನುಗಳ ಉದಾಹರಣೆಗಳು
[ಬದಲಾಯಿಸಿ]ಕ್ರಮ ಸಂಖ್ಯೆ | ವರ್ಗ | ಉದಾಹರಣೆ |
---|---|---|
೧ | ಕಾಂಡ್ರಿಕ್ತೀಸ್ | Heterodontus galeatus |
೨ | ಕಾಂಡ್ರಿಕ್ತೀಸ್ | Carcharodon carcharias |
೩ | ಕಾಂಡ್ರಿಕ್ತೀಸ್ | Squatina angelus |
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Allen, Thomas B. (1999). The Shark Almanac. New York: The Lyons Press. ISBN 1-55821-582-4. OCLC 39627633
- ↑ Budker, Paul (1971). The Life of Sharks. London: Weidenfeld and Nicolson. ISBN 9780231035514.
- ↑ Compagno, Leonard; Dando, Marc; Fowler, Sarah (2005). Sharks of the World. Collins Field Guides. ISBN 978-0-00-713610-0. OCLC 183136093.
- ↑ "SHARKS & RAYS, SeaWorld/Busch Gardens ANIMALS, BIRTH & CARE OF YOUNG". Busch Entertainment Corporation. Archived from the original on 2013-08-03. Retrieved 2009-09-03.
- ↑ Adams, Kye R; Fetterplace, Lachlan C; Davis, Andrew R; Taylor, Matthew D; Knott, Nathan A (2018). "Sharks, rays and abortion: The prevalence of capture-induced parturition in elasmobranchs". Biological Conservation. 217: 11–27. doi:10.1016/j.biocon.2017.10.010. S2CID 90834034. Archived from the original on 2019-02-23. Retrieved 2018-11-24.
- ↑ Carrier, J.C; Musick, J.A.; Heithaus, M.R. (2012). Biology of Sharks and Their Relatives: Second Edition. Taylor & Francis Group.
- ↑ "Compagno's FAO Species List - 1984". Elasmo.com. Archived from the original on 2010-05-28. Retrieved 2009-09-14.
- ↑ "Echinorhiniformes". WoRMS. Retrieved 2022-01-29.
- ↑ ಬಲೆಗೆ ಸಿಲುಕಿ ಉಸಿರುಗಟ್ಟಿ ಸಾವು;ಅಪರೂಪದ 700 ಕೆ.ಜಿ ತೂಕದ ಶಾರ್ಕ್ ಸಾವು;28 Mar, 2017
ಹೆಚ್ಚಿನ ಓದಿಗೆ
[ಬದಲಾಯಿಸಿ]- Calma, Justine (16 August 2021). "How drones are changing our view of sharks". The Verge.
- Sharks 'critical' to restoring damaged ecosystems, finds study. The Guardian, 22 March 2021
- Musick, John A and Musick, Susanna (2011) "Sharks" Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ. In: Review of the state of world marine fishery resources, pages 245–254, FAO Fisheries technical paper 569, FAO, Rome. ISBN 978-92-5-107023-9.
- "Sharks Falling Prey To Humans' Appetites". National Geographic, 28 October 2010.