ವ್ಯಾಲೆಂಟಿನಾ ತೆರೆಷ್ಕೋವಾ
ವ್ಯಾಲೆಂಟಿನಾ ತೆರೆಷ್ಕೋವಾ (1937-). ಸೋವಿಯತ್ ರಷ್ಯದ ಪ್ರಪ್ರಥಮ ಮಹಿಳಾ ಅಂತರಿಕ್ಷಯಾತ್ರಿ.
ಜೀವನ
[ಬದಲಾಯಿಸಿ]ಪಶ್ಚಿಮ ರಷ್ಯದ ಯರಸ್ಲೊವ್[೧] ಬಳಿಯ ಮಸ್ಲೆನಿಕೊವದಲ್ಲಿ[೨] 1937 ಮಾರ್ಚ್ 6ರಂದು ಜನಿಸಿದಳು. 1945ರಲ್ಲಿ ಶಾಲೆಗೆ ಸೇರಿ ಮುಂದೆ 1953ರಲ್ಲಿ ಶಾಲೆ ಬಿಟ್ಟು ಅಂಚೆ ಮೂಲಕ ಓದು ಮುಂದುವರಿಸಿದಳು. 18ನೆಯ ವರ್ಷದಲ್ಲಿ ಒಂದು ಜವಳಿ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ ಈಕೆ ಯಂಗ್ ಕಮ್ಯುನಿಸ್ಟ್ ಲೀಗ್‌ನ ಸಕ್ರಿಯ ಸದಸ್ಯೆಯಾದಳು. ವಿಮಾನ ಚಾಲನೆಯಲ್ಲಿ ಅನುಭವವಿಲ್ಲದ ಈಕೆ ಕ್ರೀಡೆಯ ಭಾಗವಾಗಿ ಪ್ಯಾರಾಶೂಟ್ ನೆಗೆತವನ್ನು ಕಲಿತುದಲ್ಲದೆ 125ಕ್ಕೂ ಹೆಚ್ಚುಬಾರಿ ಪ್ಯಾರಾಶೂಟಿನಿಂದ ನೆಗೆದು ಅನುಭವಗಳಿಸಿದಳು. ರಷ್ಯದ ಬಾಹ್ಯಾಂತರಿಕ್ಷಯಾತ್ರಿಗಳ ತರಬೇತಿ ಶಾಲೆಗೆ ಈಕೆ ಸ್ವಇಚ್ಛೆಯಿಂದ ಸೇರಿದಳು. ಬಾಹ್ಯಾಂತರಿಕ್ಷದಲ್ಲಿ ಸೋವಿಯತ್ ಮಹಿಳೆ ಯೋಜನೆಗಾಗಿ ನಾಲ್ಕು ಮಂದಿ ಮಹಿಳೆಯರನ್ನು ಮೊದಲು ಆರಿಸಲಾಯಿತು.[೩][೪][೫] ತರಬೇತು ನೀಡಿದ ಅನಂತರ ಆ ನಾಲ್ವರಲ್ಲಿ ಈಕೆಯನ್ನು ಆಯ್ಕೆ ಮಾಡಲಾಯಿತು. ಈಕೆ ವಾಸ್ತಾಕ್ 6 ಎಂಬ ಗಗನನೌಕೆಯಲ್ಲಿ 1963 ಜೂನ್ 16 ರಿಂದ 19ರವರೆಗೆ 70 ಗಂಟೆ 50 ನಿಮಿಷಗಳಲ್ಲಿ ಭೂಮಿಯನ್ನು 48 ಬಾರಿ ಪ್ರದಕ್ಷಿಣೆ ಮಾಡಿದಳು;[೬] ಅಂದರೆ ಪ್ರತಿ 88 ನಿಮಿಷಗಳಿಗೊಂದಾವರ್ತಿ ಭೂಪ್ರದಕ್ಷಿಣೆ ಮಾಡಿದಂತಾಯಿತು. ಆಕಾಶ ನೌಕೆಯ ಯಂತ್ರಗಳನ್ನು ಸ್ವತಃನಿಯಂತ್ರಿಸಿದ ಈಕೆ ಗಗನನೌಕೆ ಮತ್ತೆ ಭೂವಾತಾವರಣಕ್ಕೆ ಪ್ರವೇಶಿಸಿದ ಕೂಡಲೆ ಪ್ಯಾರಾಶೂಟ್ ಮೂಲಕ ಮಧ್ಯ ಏಷ್ಯದ ಕಾಜ಼ಕ್‌ಸ್ತಾನದ ಕರಗಂಡ್‌ಗೆ 612 ಕಿಮೀ ದೂರದಲ್ಲಿ ಭೂ ಸ್ಪರ್ಶಿಸಿದಳು.[೭] ಇದು ಇವಳ ಜೀವಿತದ ಮಹತ್ಸಾಧನೆ (1963 ಜೂನ್). ಸೋವಿಯತ್ ರಷ್ಯ ಇವಳಿಗೆ ಸೋವಿಯತ್ ಒಕ್ಕೂಟದ ವೀರ ಮಹಿಳೆ ಎಂಬ ಬಿರುದು ನೀಡಿ ಸನ್ಮಾನಿಸಿತು. ವಿಶ್ವಸಂಸ್ಥೆ ಈಕೆಗೆ ‘ಶಾಂತಿ’ ಬಂಗಾರ ಪದಕ ನೀಡಿ ಗೌರವಿಸಿತು. ಗಗನಯಾತ್ರಿ ಆಂಡ್ರಿಯನ್ ಜಿ. ನಿಕೊಲೊಯೆವ್ ಇವಳ ಪತಿ.
ಉಲ್ಲೇಖಗಳು
[ಬದಲಾಯಿಸಿ]- ↑ "Preface" 2003, pp. 4–7.
- ↑ Evans 2010, p. 52.
- ↑ Shayler & Moule 2006, p. 45.
- ↑ Evans 2010, p. 49.
- ↑ Burgess & Hall 2009, pp. 229–231.
- ↑ Kennedy, Maev (17 September 2015). "First woman in space recalls mission's teething troubles". The Guardian. Archived from the original on 29 March 2016. Retrieved 3 April 2016.
- ↑ Shayler & Moule 2006, p. xxviii.