ವಿಷಯಕ್ಕೆ ಹೋಗು

ಪದವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪದವಿ ಎಂದರೆ ಕಾಲೇಜು ಅಥವಾ ವಿಶ್ವವಿದ್ಯಾಲಯ ತಾನು ನಿಷ್ಕರ್ಷಿಸಿರುವ ಪಠ್ಯಕ್ರಮವನ್ನು ಯಶಸ್ವಿಯಾಗಿ ವ್ಯಾಸಂಗ ಮಾಡಿ ಪಾರಂಗತರಾದವರಿಗೆ ನೀಡುವ ಪ್ರಶಸ್ತಿ.[] ಸದ್ಯದಲ್ಲಿ ಪ್ರಚಾರದಲ್ಲಿರುವ ಪದವಿಗಳು ಹದಿಮೂರನೆಯ ಶತಮಾನದಿಂದ ಪ್ರಚಾರದಲ್ಲಿರುವ ಪದವಿಗಳು ಹದಿಮೂರನೆಯ ಶತಮಾನದಿಂದ ಪ್ರಚಾರದಲ್ಲಿದ್ದರೂ ಅವುಗಳ ಮೂಲ ಅದಕ್ಕೂ ಹಿಂದೆ ಯೂರೋಪಿನ ಗಿಲ್ಡುಗಳು ನೀಡುತ್ತಿದ್ದ ಪ್ರಶಸ್ತಿಗಳಲ್ಲಿದೆ. ವಿಶ್ವವಿದ್ಯಾಲಯ ಅಥವಾ ಕಾಲೇಜು ನೀಡುವ ಪ್ರಥಮ ಪದವಿ ಬ್ಯಾಚಲರ್ ಪದವಿ. ಇದನ್ನು ಪಡೆದವರು ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಪದವಿಗೆ ವ್ಯಾಸಂಗ ಮಾಡುವುದಕ್ಕೂ ಅಧ್ಯಾಪಕರ ವೃತ್ತಿ ಶಿಕ್ಷಣ ಪಡೆದು ಅಧ್ಯಾಪಕರ ಕಾಲೇಜಿನಲ್ಲಿ ಬೋಧಿಸುವುದಕ್ಕೂ ಹಿಂದೆ ಅವಕಾಶವಿತ್ತು. ನ್ಯಾಯ, ಪೌರೋಹಿತ್ಯ, ವೈದ್ಯ ಈ ಶಾಸ್ತ್ರಗಳಲ್ಲಿ ಪ್ರಥಮ ಪದವಿ ಪಡೆದವರು ಆ ವೃತ್ತಿಯನ್ನು ಆರಂಭಿಸಲೂ ಸನ್ನದು ಪಡೆಯುತ್ತಿದ್ದರು. ಮಾನವತಾಶಾಸ್ತ್ರಗಳಲ್ಲಿ ಪ್ರಥಮ ಪದವಿ ಆ ಶಾಸ್ತ್ರದಲ್ಲಿ ಕೇವಲ ಪಂಡಿತರೆಂದು ಮಾತ್ರ ಸಂಕೇತಿಸುತ್ತಿತ್ತು.

ಸಾಮಾನ್ಯವಾಗಿ ಬ್ಯಾಚಲರ್ ಪದವಿ ಎರಡು ಅಥವಾ ಮೂರು ವರ್ಷದ್ದು ; ಮಾಸ್ಟರ್ ಪದವಿ ಎರಡು ವರ್ಷದ್ದು. ಅನಂತರದ ಡಾಕ್ಟರ್ ಪದವಿಗೆ ಕೆಲವು ವಿಶ್ವವಿದ್ಯಾಲಯಗಳು ನಿರ್ದಿಷ್ಟ ಕಾಲಾವಧಿ ಪಠ್ಯಕ್ರಮಾದಿಗಳನ್ನು ಗೊತ್ತು ಮಾಡಿದ್ದರೂ ಇನ್ನು ಕೆಲವು ಸಂಶೋಧನ ಪ್ರಬಂಧಕ್ಕೇ ಪದವಿ ನೀಡುವುದುಂಟು. ಯೂರೋಪಿನ ಕೆಲವು ದೇಶಗಳಲ್ಲಿ ಬ್ಯಾಚಲರ್ ಮತ್ತು ಮಾಸ್ಟರ್ ಪದವಿಗಳೇ ಇಲ್ಲದವರಿಗೂ ಅವರ ಪಾಂಡಿತ್ಯವನ್ನು ಪರಿಗಣಿಸಿ ಡಾಕ್ಟರ್ ಪದವಿಯನ್ನೇ ಪ್ರಥಮ ಪದವಿಯಾಗಿ ನೀಡುವುದುಂಟು. ಫ್ರಾನ್ಸಿನಲ್ಲಿ ನ್ಯಾಯಶಾಸ್ತ್ರವನ್ನುಳಿದ ಮಿಕ್ಕ ವಿಷಯಗಳಲ್ಲಿ ಲೈಸೆಂಷಿಯೇಟ್ ಎಂಬ ಪ್ರಥಮ ಪದವಿಯನ್ನೂ ಅನಂತರ ಡಾಕ್ಟರ್ ಪದವಿಯನ್ನೂ ನೀಡುವುದಿದೆ. ಜರ್ಮನಿಯಲ್ಲಿ ಡಾಕ್ಟರೇಟ್ ಒಂದೇ ವಿಶ್ವವಿದ್ಯಾಲಯ ನೀಡುವ ಪದವಿ ; ಈಚೆಗೆ 4-7 ಸೆಮೆಸ್ಟರುಗಳ ಆ ಪದವಿಗೆ ಹೋಗಲಾರದವರಿಗಾಗಿ ಡಿಪ್ಲೊಮ ಪದವಿಗಳನ್ನು ಆರಂಭಸಿವ ಪ್ರವೃತ್ತಿ ಹೆಚ್ಚುತ್ತಿದೆ. ಇಂಗ್ಲೆಂಡು, ಭಾರತ ಮತ್ತು ಕಾಮನ್ವೆಲ್ತ್ ದೇಶಗಳಲ್ಲಿ ಬ್ಯಾಚಲರ್, ಮಾಸ್ಟರ್ ಮತ್ತು ಡಾಕ್ಟರ್-ಈ ಮೂರು ಅಂತಸ್ತಿನ ಪದವಿಗಳೂ ಪ್ರಚಾರದಲ್ಲಿವೆ.

ಪ್ರಾರಂಭದಲ್ಲಿ ನ್ಯಾಯ, ದೇವತಾಶಾಸ್ತ್ರ (ಪೌರೋಹಿತ್ಯ) ಮತ್ತು ವೈದ್ಯ-ಇವು ಮೂರೇ ಶಾಸ್ತ್ರೀಯ ವೃತ್ತಿಗಳೆನಿಸಿದ್ದು ಅವುಗಳಲ್ಲಿ ಪದವಿಗಳನ್ನು ಪಡೆಯುವುದು ಪ್ರಶಸ್ತಿ ಎನಿಸಿದ್ದರೂ ಕ್ರಮ ಕ್ರಮವಾಗಿ ಗಣಿತ, ಖಗೋಳಶಾಸ್ತ್ರ, ಶಿಕ್ಷಣ ಇವೂ ಶಾಸ್ತ್ರೀಯ ವೃತ್ತಿಗಳಾಗುತ್ತ ಬಂದಂತೆ ಅವುಗಳ ಪದವಿಗೂ ಪ್ರಾಶಸ್ತ್ಯ ಬಂತು. ಈಗ ವಿವಿಧ ಮಾನವಿಕ ಶಾಸ್ತ್ರಗಳು, ಭಾಷಾವಿಜ್ಞಾನ, ಸಮಾಜ ವಿಜ್ಞಾನಗಳು ಭೌತ ಮತ್ತು ರಸಾಯನಶಾಸ್ತ್ರಗಳು, ನಿಸರ್ಗ ವಿಜ್ಞಾನಗಳೂ ಪದವಿ ಪಠ್ಯಕ್ರಮವನ್ನು ರೂಢಿಸಿಕೊಂಡಿವೆ. ವಿವಿಧ ಶಾಸ್ತ್ರೀಯ ವೃತ್ತಿಗಳೂ ಯಂತ್ರ ವಿಜ್ಞಾನಗಳೂ ಪದವಿಗಳನ್ನು ಕೊಡತೊಡಗಿವೆ. ಆಳವಾದ ಅನುಷ್ಠಾನ ಅಗತ್ಯವಿರುವ ಹಾಗೂ ಮಾನವನ ಆಸಕ್ತಿಗೂ ಜೀವನಕ್ಕೂ ಉಪಯೋಗವಾಗಬಲ್ಲ ಅನೇಕ ವಿಷಯಗಳಲ್ಲಿ ಈಗ ಪದವಿಗಳು ಏರ್ಪಟ್ಟಿವೆ. ಮೊದ ಮೊದಲು ಕೇವಲ ನಾಲ್ಕಾರು ವಿಷಯಗಳಲ್ಲಿ ಮಾತ್ರ ಪದವಿಗಳನ್ನು ನೀಡುತ್ತಿದ್ದ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಈಗ ಸುಮಾರು 200 ವಿಷಯಗಳಲ್ಲಿ ಪದವಿಗಳನ್ನು ನಿಡಲಾಗುತ್ತಿದೆ. ಯೂರೋಪಿನ ಸಾಂಪ್ರದಾಯಿಕ ಪದ್ಧತಿಯಂತೆ ಸಾಮಾನ್ಯ ಪಿಎಚ್.ಡಿ. ಪದವಿಯನ್ನು ವಿಶ್ವವಿದ್ಯಾಲಯದ ಅತ್ಯುನ್ನತ ಪದವಿಯೆಂದು ಪರಿಗಣಿಸಲಾಗುತ್ತಿದ್ದರೂ ಈಚೆಗೆ ಆಯಾ ವಿಷಯಗಳಲ್ಲಿನ ಡಾಕ್ಟರೇಟಿಗೇ ಅದಕ್ಕಿಂತ ಉನ್ನತ ಸ್ಥಾನ ನೀಡುವ ಸಂಪ್ರದಾಯ ಆಚರಣೆಗೆ ಬರುತ್ತಿದೆ. ಉದಾ : ಶಿಕ್ಷಣಶಾಸ್ತ್ರದ ಪಿಎಚ್.ಡಿ.ಗಿಂತ ಡಿ.ಎಡ್‍ಗೆ (ಡಾಕ್ಟರ್ ಆಫ್ ಎಜುಕೇಷನ್) ಹೆಚ್ಚಿನ ಅಂತಸ್ತನ್ನು ನೀಡಲಾಗುತ್ತಿದೆ.

ಗೌರವ ಪದವಿಗಳು

[ಬದಲಾಯಿಸಿ]

ವಿಶ್ವವಿದ್ಯಾಲಯ ಅಥವಾ ಕಾಲೇಜುಗಳು ಗೊತ್ತು ಮಾಡಿರುವ ಪಠ್ಯಕ್ರಮದಲ್ಲಿ ಪಾಂಡಿತ್ಯ ಸಾಧಿಸಿದವರಿಗೆ ನೀಡುವ ಪಾಂಡಿತ್ಯ ಪದವಿಗಳಂತೆ ಸಮಾಜದ ಯಾವುದಾದರೂ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅಥವಾ ಯಾವುದಾದರೂ ಜ್ಞಾನ ಅಥವಾ ವೃತ್ತಿಕ್ಷೇತ್ರದಲ್ಲಿ ಸಂಶೋಧನೆ ನಿರ್ಮಾಣ ಮುಂತಾದ ಕಾರ್ಯಸಾಧಿಸಿದ ಗಣ್ಯರನ್ನು ಗೌರವಿಸಲು ಗೌರವಪದವಿಗಳನ್ನು ನೀಡುವ ಸಂಪ್ರದಾಯ ಎಲ್ಲ ದೇಶಗಳಲ್ಲೂ ಪ್ರಚಾರದಲ್ಲಿದೆ. ಸಾಮಾನ್ಯವಾಗಿ ಅವೆಲ್ಲ ಡಾಕ್ಟರೇಟ್ ಪದವಿಗಳಾಗಿರುತ್ತವೆ. ಡಿ.ಎಸ್ಸಿ. (ಡಾಕ್ಟರ್ ಆಫ್ ಸೈನ್ಸ್), ಡಿ.ಲಿಟ್, (ಡಾಕ್ಟರ್ ಆಫ್ ಲೆಟರ್ಸ್), ಡಿ.ಲಿಟ್. (ಡಾಕ್ಟರ್ ಆಫ್ ಲಿಟರೇಚರ್), ಎಲ್‍ಎಲ್.ಡಿ. (ಡಾಕ್ಟರ್ ಆಫ್ ಲಾಸ್), ಡಿ.ಎಡ್. (ಡಾಕ್ಟರ್ ಆಫ್ ಎಜುಕೇಷನ್) ಡಿ.ಇ. (ಡಾಕ್ಟರ್ ಆಫ್ ಎಂಜಿನಯರಿಂಗ್) ಇವು ಮುಖ್ಯವಾದ ಗೌರವ ಪದವಿಗಳು. ಸಾಮಾನ್ಯವಾಗಿ ಅಂಥಗಣ್ಯರಿಗೆ ಗೌರವ ಪದವಿಗಳನ್ನು ವಿಶೇಷ ಘಟಿಕೋತ್ಸವದಲ್ಲಿ ನೀಡಲಾಗುವುದು.

ಭಾರತದಲ್ಲಿ ಪದವಿಗಳು

[ಬದಲಾಯಿಸಿ]

ಆಧುನಿಕ ಭಾರತದಲ್ಲಿ ಪ್ರಚಾರದಲ್ಲಿರುವ ಪದವಿಗಳು ಕಳೆದ ಶತಮಾನದಲ್ಲಿ ಭಾರತಕ್ಕೆ ಇಂಗ್ಲೆಂಡಿನಿಂದ ಆಯಾತವಾದ ಪರೀಕ್ಷಾ ಪದ್ಧತಿಯೊಡನೆ ಆಗಮಿಸಿದುವು. ಆದರೆ ಮಧ್ಯಯುಗಗಳಲ್ಲಿ ಯೂರೋಪಿನಲ್ಲಿ ಪ್ರಚಾರದಲ್ಲಿದ್ದ ಗಿಲ್ಡುಗಳಂಥ ಸಂಸ್ಥೆಗಳು ಪ್ರಾಚೀನ ಭಾರತದಲ್ಲಿ ಪ್ರಚಾರದಲ್ಲಿದ್ದುವೆಂಬ ವಿಷಯ ಪುರಾಣೇತಿಹಾಸಗಳಿಂದ ವ್ಯಕ್ತಪಡುತ್ತದೆ. ಪರಿಷತ್ತುಗಳೆಂಬ ಈ ಸಂಸ್ಥೆಗಳು ಗುರುಗಳ ಮುಖೇನ ಅಥವಾ ಖಾಸಗಿಯಾಗಿ ವ್ಯಾಸಂಗ ಮಾಡಿಕೊಂಡು ಪಾಂಡಿತ್ಯ ಸಾದಿಸಿದ ವಿದ್ಯಾರ್ಥಿಗಳನ್ನು ಸಾರ್ವಜನಿಕ ವೇದಿಕೆಗಳ ಮೇಲೆ ಪರೀಕ್ಷಿಸಿ ಅವರಿಗೆ ಪದವಿ ಪ್ರಶಸ್ತಿಗಳನ್ನು ನೀಡುವ ಪದ್ಧತಿಯಿತ್ತು. ಈ ಪದ್ಧತಿ ಇತ್ತೀಚಿನವರೆಗೂ ಒಂದು ರೀತಿಯಲ್ಲಿ ಮುಂದುವರಿಯುತ್ತಲೇ ಬಂದಿದೆ. ರಾಜಮಹಾರಾಜರಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ಕಲಾಪರಿಷತ್ತುಗಳು ವಿದ್ವಜ್ಜನರಿಗೆ ನೀಡುತ್ತಿರುವ ಪದವಿ ಪ್ರಶಸ್ತಿಗಳು ಈ ರೀತಿಯವೇ. ಆದರೆ ಸಾರ್ವಜನಿಕಸ್ಥಾನಗಳಿಗೆ ರಹದಾರಿಯಂತಿರುವ ಆಧುನಿಕ ವಿಶ್ವವಿದ್ಯಾಲಯಗಳ ಪದವಿಗಳ ಮುಂದೆ ಅವು ತಮ್ಮ ಆಕರ್ಷಣೆಯನ್ನು ಕಳೆದುಕೊಂಡಿವೆ.

ಸದ್ಯದಲ್ಲಿ ಭಾರತದಲ್ಲಿರುವ ವಿದ್ಯಾಪದವಿಗಳು ಇಂಗ್ಲೆಂಡ್ ಮತ್ತು ಕಾಮನ್ವೆಲ್ತ್ ರಾಷ್ಟ್ರಗಳಲ್ಲಿರುವಂತೆ ಮೂರು ಶ್ರೇಣಿಯಲ್ಲಿ ಪ್ರಚಾರದಲ್ಲಿವೆ. ಪ್ರಥಮ ಪಾಂಡಿತ್ಯ ಪದವಿಯಾದ ಬ್ಯಾಚಲರ್ ಪದವಿ ಎರಡು ಅಥವಾ ಮೂರು ವರ್ಷಗಳ ವಿಶ್ವವಿದ್ಯಾಲಯದಲ್ಲಿನ ಶಿಕ್ಷಣದಿಂದಲೂ ಎರಡನೆಯ ಅಂತಸ್ತಿನ ಮಾಸ್ಟರ್ ಪದವಿ ಬ್ಯಾಚಲರ್ ಪದವಿಯ ಅನಂತರದ ಎರಡು ವರ್ಷಗಳ ಶಿಕ್ಷಣದಿಂದಲೂ ಪಡೆಯತಕ್ಕದ್ದಾಗಿವೆ. ಇವೆರಡು ಪದವಿಗಳಿಗೂ ಮೇಲ್ಮಟ್ಟದ ಹಾಗೂ ವಿಶ್ವವಿದ್ಯಾಲಯದ ಅತ್ಯುನ್ನತ ಪದವಿಯೆನಿಸಿದ ಪಿಎಚ್.ಡಿ. ಪದವಿ ಸ್ವತಂತ್ರ ಅಥವಾ ನಿರ್ದೇಶಿತ ವ್ಯಾಸಂಗ ಅಥವಾ ಸಂಶೋಧನೆಗಳನ್ನು ನಡೆಸಿ ಪಡೆಯತಕ್ಕದ್ದಾಗಿದೆ. ಈಚೆಗೆ ಮಾಸ್ಟರ್ ಪದವಿಗೂ ಪಿಎಚ್.ಡಿ. ಪದವಿಗೂ ಮಧ್ಯೆ ಎಂ.ಫಿಲ್ ಎಂಬ ಪದವಿಯನ್ನೂ ಕೆಲವು ಕಡೆ ಅನುಷ್ಠಾನಕ್ಕೆ ತರಲಾಗಿದೆ. ಇವುಗಳ ಜೊತೆಗೆ ಮೇಲೆ ಉಲ್ಲೇಖಿಸಿರುವ ಗೌರವ ಪದವಿಗಳೂ ಪ್ರಚಾರದಲ್ಲಿವೆ. ಡಿ.ಎಸ್ಸಿ., ಡಿ.ಲಿಟ್., ಎಲ್‍ಎಲ್.ಡಿ., ಡಿ.ಇ.,ಡಿ.ಎಡ್.-ಮುಂತಾದ ಈ ಪದವಿಗಳನ್ನು ಅಭ್ಯರ್ಥಿ ನಡೆಸುವ ಅಧ್ಯಯನ ಸಂಶೋಧನಾದಿಗಳ ಪ್ರಕಟನೆಗೂ ನೀಡುವುದು ಆಚರಣೆಯಲ್ಲಿದೆ. ಸ್ವತಂತ್ರ ಸಂಶೋಧನೆಗಳಿಗಾಗಿ ನೀಡುವ ಇಂಥ ಪಾಂಡಿತ್ಯ ಪದವಿಗಳು ಪಿಎಚ್.ಡಿ.ಪದವಿಗಳಿಗಿಂತ ಮೇಲ್ಮಟ್ಟದವೆಂದು ಪರಿಗಣಿಸಲಾಗಿದೆ.

ಮೇಲೆ ಸೂಚಿಸಿದ ಮೂರು ಸ್ತರಗಳಲ್ಲಿನ ಪಾಂಡಿತ್ಯ ಪದವಿಗಳು ಸದ್ಯದಲ್ಲಿ ಪ್ರಚಾರದಲ್ಲಿರುವ ಎಲ್ಲ ವ್ಯಾಸಂಗ ವಿಷಯಗಳಲ್ಲೂ ಏರ್ಪಟ್ಟಿವೆ. ಈ ಪದವಿಗಳನ್ನು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಂತೆ ಪರಿಗಣಿತ ವಿಶ್ವವಿದ್ಯಾಲಯಗಳೂ ರಾಷ್ಟ್ರೀಯ ಪ್ರಾಮುಖ್ಯವುಳ್ಳ ಸಂಸ್ಥೆಗಳೂ ನೀಡುತ್ತವೆ. ತಾವು ಗೊತ್ತುಮಾಡಿರುವ ಪಠ್ಯಕ್ರಮವನ್ನು ಬೋಧಿಸಿ ಪರೀಕ್ಷೆ ನಡೆಸಿ ಉತ್ತೀರ್ಣರಾದವರಿಗೆ ಮಾತ್ರ ಈ ಪದವಿಗಳನ್ನು ನೀಡಲಾಗುತ್ತದೆ.

ಮೇಲಿನ ಪಾಂಡಿತ್ಯ ಪದವಿಗಳ ಜೊತೆಗೆ ವಿಶ್ವವಿದ್ಯಾಲಯಗಳೂ ಕಾಲೇಜುಗಳೂ ಕೆಲವು ವಿಷಯಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಗಳನ್ನು ನೀಡುತ್ತಿವೆ. ಮಾಸ್ಟರ್ ಪದವಿಗಿಂತ ಕಡಿಮೆ ಎನ್ನಬಹುದಾದ ಈ ಡಿಪ್ಲೊಮ ತರಗತಿಗಳು ಒಂದು ವರ್ಷದ ಅವಧಿಯವು. ಬ್ಯಾಚಲರ್ ಪದವಿ ಪಡೆದವರು ಮಾತ್ರ ಅದಕ್ಕೆ ಸೇರುವ ಅವಕಾಶವಿರುತ್ತದೆ. ಪ್ರೌಢಶಾಲೆಯ ಶಿಕ್ಷಣ ಮುಗಿಸಿದವರಿಗಾಗಿ ಏರ್ಪಡಿಸಿರುವ ಉದ್ಯೋಗ ಮತ್ತು ತಾಂತ್ರಿಕ ಶಿಕ್ಷಣದ ಡಿಪ್ಲೊಮಗಳು ಇವಕ್ಕಿಂತ ಬೇರೆಯಾದವು.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2017-02-10. Retrieved 2020-01-08.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: