ವಿಷಯಕ್ಕೆ ಹೋಗು

ನರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತೋಳಲ್ಲಿನ ನರಗಳು (ಹಳದಿ ಬಣ್ಣದಲ್ಲಿ)

ನರವು ಬರೀ ಕಣ್ಣಿಗೆ ಗೋಚರಿಸುವಂತೆ ಬೆಳ್ಳಗೆ ಉದ್ದವಾದ ದಾರದಂತಿದ್ದು ಎಡ ಬಲ ಭಾಗಗಳಲ್ಲಿ ಒಂದೇ ರೀತಿಯಲ್ಲಿ ಮಿದುಳು ಮತ್ತು ಮಿದುಳುಬಳ್ಳಿಗಳಿಗೆ ಸೇರಿಕೊಂಡಿರುವ ಜೀವಂತರಚನೆ. (ನರತಂತು, ನರ್ವ್). ಸೇರ್ಪಡೆಯ ಸ್ಥಳದಿಂದ ಹೊರಕ್ಕೆ ಕ್ರಮಿಸುವ ಮಾರ್ಗದ ಉದ್ದಕ್ಕೆ ಪ್ರತಿಯೊಂದು ನರವೂ ಕವಲೊಡೆದು ಕಿರಿದಾಗುತ್ತ ಕೊನೆಗೆ ಯಾವುದೋ ಸ್ನಾಯು ಗ್ರಂಥಿ, ಮೂಳೆ ಅಥವಾ ಅಂಗವನ್ನೋ ಚರ್ಮದ ಬುಡವನ್ನೋ ಹೊಕ್ಕು ಕಣ್ಮರೆ ಆಗುತ್ತದೆ. ಕವಲುಗಳೂ ಹೀಗೆಯೇ. ಈ ರೀತಿ ನರಗಳು ದೇಹದ ಎಲ್ಲ ಭಾಗಗಳನ್ನೂ ಮಿದುಳು ಮತ್ತು ಮಿದುಳು ಬಳ್ಳಿಗಳಿಗೆ ಸಂಪರ್ಕಿಸುವ ಸಾಧನಗಳಾಗಿವೆ. ನರವೆಂದು ಗುರುತಿಸಬಹುದಾದ ಅವಯವ ಅತಿ ದಪ್ಪವೆಂದರೆ 8-9 ಮಿಮೀಗಳಷ್ಟಿರಬಹುದು. ವಾಸ್ತವವಾಗಿ ಇದು ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾದ ನೂರಾರು ತಂತುಗಳಿಂದಾದುದು. ಈ ತಂತುಗಳು ಸಾಮಾನ್ಯವಾಗಿ ನರದ ಬುಡದಿಂದ ಕೊನೆಯವರೆಗೂ ಅವಿಚ್ಛಿನ್ನವಾಗಿ ಹರಡಿಕೊಂಡಿರುತ್ತವೆ. ನರದ ಕವಲುಗಳಿಗೆ ನರತಂತುಗಳು ಅಖಂಡವಾಗಿ ಹೋಗುವುದೇ ವಿನಾ ಸ್ವತಃ ಒಂದು ನರತಂತು ಕವಲಾಗುವುದು ಅಪರೂಪ. ದೇಹದ ಹೊರ ಮತ್ತು ಒಳ ಆವರಣಗಳ ವ್ಯತ್ಯಾಸಗಳಿಂದ ಪಂಚೇಂದ್ರಿಯಗಳಲ್ಲಿಯೂ ದೇಹದ ಇತರ ಭಾಗಗಳಲ್ಲಿಯೂ ಉದ್ಭವಿಸಿದ ಇಂದ್ರಿಯ ಜ್ಞಾನ ಮತ್ತು ಇತರ ಸಂವೇದನೆಗಳನ್ನು ಮಿದುಳು ಮತ್ತು ಮಿದುಳು ಬಳ್ಳಿಗಳಿಗೆ ಒಯ್ದು, ತತ್ಫಲವಾಗಿ ಅಲ್ಲಿ ಉಂಟಾಗುವ ಪ್ರತಿಕ್ರಿಯಾ ಸಂದೇಶಗಳನ್ನು ಸ್ನಾಯು, ರಸಗ್ರಂಥಿ ಮುಂತಾದ ಕ್ರಿಯಾಂಗಗಳಿಗೆ ತಲಪಿಸುವುದು ನರತಂತುಗಳ ಕಾರ್ಯ. ಇಂಥ ತಂತುಗಳಿಗೆ ಅನುಕ್ರಮವಾಗಿ ಜ್ಞಾನವಾಹಿ ಮತ್ತು ಕ್ರಿಯಾವಾಹಿ ನರತಂತುಗಳೆಂದು ಹೆಸರು (ಸೆನ್ಸರಿ ಮತ್ತು ಮೋಟರ್ ನರ್ವ್ಸ್).

ಎಲ್ಲ ನರತಂತುಗಳೂ ಮಿದುಳು, ಮಿದುಳುಬಳ್ಳಿ ಅಥವಾ ನರಗ್ರಂಥಿಗಳಲ್ಲಿರುವ (ಗ್ಯಾನ್‍ಗ್ಲಿಯ) ನರಕೋಶಗಳ ಅಪವಾಹಿ (ಇಫರೆಂಟ್) ಅಥವಾ ಅಭಿವಾಹಿ (ಅಫರೆಂಟ್) ಚಾಚುಗಳ (ಆ್ಯಕ್ಸಾನ್ ಮತ್ತು ಡೆನ್‍ಡ್ರಾನ್) ಮುನ್ನಡೆಗಳೇ ಆಗಿವೆ. ನರತಂತುಗಳು ವಿವಿಧ ಗಾತ್ರದವು. ಕೆಲವು 1 ಮ್ಯೂಗಿಂತ (0.001 ಮಿಮೀ) ತೆಳ್ಳಗೂ ಇನ್ನು ಕೆಲವು 20 ಮ್ಯೂಗಳಷ್ಟು ದಪ್ಪಗೂ ಇರುವುವು. ಪ್ರತಿ ನರತಂತುವೂ ಬಂಧನಾಂಗಾಂಶದಿಂದಾದ (ಕನೆಕ್ಟಿವ್ ಟಿಶ್ಯೂ) ಎಂಡೊನ್ಯೂರಿಯಮ್ ಎಂಬ ಅತಿ ತೆಳುವಾದ ಪೊರೆಯಿಂದ ಕವಿಚಲ್ಪಟ್ಟಿದೆ. ಹತ್ತಾರು ನರತಂತುಗಳು ಸೇರಿ ಸಣ್ಣ ಮತ್ತು ದೊಡ್ಡಕಟ್ಟುಗಳಾಗಿ ವಿನ್ಯಾಸಗೊಂಡಿರುತ್ತವೆ. ಕಟ್ಟುಗಳ ನಡುವೆ ತಡಿಕೆಯಂತೆಯೂ ಅವುಗಳಿಗೆ ಹೊದ್ದಿಕೆಯಾಗಿಯೂ ಇರುವುದು ಪೆರಿನ್ಯೂರಿಯಮ್ ಎಂಬ ಬಂಧನಾಂಗಾಂಶದ ಕವಚ. ಇದು ತಕ್ಕಮಟ್ಟಿಗೆ ದಪ್ಪವಾಗಿ ದೃಢವಾಗಿರುವ ಪೊರೆ. ಏಟು ಬಿದ್ದಾಗ ಒಳಗಿರುವ ಸೂಕ್ಷ್ಮವಾದ ನರತಂತುಗಳಿಗೆ ಘಾತವಾಗುವುದನ್ನು ಇದು ಬಲುಮಟ್ಟಿಗೆ ತಪ್ಪಿಸುತ್ತದೆ. 2-3 ಮಿಮೀಗಳಿಗಿಂತ ದಪ್ಪವಾದ ನರಗಳಿಗೆ ರಕ್ತಪೂರೈಕೆ ಆಗುವುದಲ್ಲದೆ ಸ್ವತಃ ಅವಕ್ಕೇ ನರಪೂರೈಕೆಯೂ ಆಗುತ್ತದೆ. ಸ್ವಾಭಾವಿಕವಾಗಿಯೇ ಅತಿ ಸಣ್ಣವಾದ ಈ ರಕ್ತ ನಾಳಗಳೂ ನರಗಳೂ ಎಪಿನ್ಯೂರಿಯಮ್ಮನ್ನು ಕೊರೆದು ಒಳಹೋಗುತ್ತವೆ.

ನರತಂತುಗಳು ಎರಡು ಬಗೆ: ಬಿಳಿಯವು ಮತ್ತು ಭಸ್ಮವರ್ಣದವು. ಬಿಳಿಯವು ದಪ್ಪ, ಭಸ್ಮವರ್ಣದವು ಬಲು ತೆಳು (0.7 ಮ್ಯೂ -2 ಮ್ಯೂ). ನರಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವವು ಬಿಳಿಯವೇ. ಇವುಗಳಿಗೆ ಮೈಯಲಿನ್ ಅಥವಾ ಮೆಡ್ಯುಲ್ಲರಿ ಹೊದಿಕೆ ಇರುವುದರಿಂದ ಇವು ಬೆಳ್ಳಗೂ ದಪ್ಪಗೂ ಕಾಣುವುವು.

ಹೊದಿಕೆ ಇಲ್ಲದ ನರತಂತು ಭಸ್ಮವರ್ಣದ್ದಾಗಿರುತ್ತದೆ. ನರತಂತುವನ್ನು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿದಾಗ ಅದರ ಮಧ್ಯದಲ್ಲಿ ಉದ್ದಕ್ಕೂ ಕಾಂಡದಂತೆ ಕಾಣಬರುವುದು ತಿರುಳುಧಾರೆ (ಆ್ಯಕ್ಸಿನ್ ಸಿಲಿಂಡರ್). ವಾಸ್ತವವಾಗಿ ನರಕೋಶದ ಅಪವಾಹಿ ಅಥವಾ ಅಭಿವಾಹಿ ಚಾಚಿನ ಮುನ್ನಡೆ ಆಗಿರುವುದು ಇದೇ. ಇದನ್ನು ಸುತ್ತುವರಿದು ನ್ಯೂರಿಲೆಮ್ಮ ಎಂಬ ಅತಿ ತೆಳುವಾದ ಪೊರೆ ಇದೆ. ಅಷ್ಟು ತೆಳು ಪೊರೆಯಂತಿದ್ದರೂ ನಿಜವಾಗಿ ಇದು ಕೋಶಗಳಿಂದಾದ ಪೊರೆ. ಕೋಶಗಳ ಮಧ್ಯೆ ಇರುವ ಅಣುಕೇಂದ್ರ ಹಾಗೂ ಅದರ ಸುತ್ತ ಮಾತ್ರ ಗೋಚರವಾಗುವ ಜೀವವಸ್ತುವಿನಿಂದ ನ್ಯೂರಿಲೆಮ್ಮ ಕೋಶಗಳ ವಾಸ್ತವ್ಯ ವ್ಯಕ್ತವಾಗುತ್ತದೆ ನ್ಯೂರಿಲೆಮ್ಮ ತಿರುಳುಧಾರೆಯ ಉದ್ದಕ್ಕೂ ಹೊದ್ದಿರುವುದಾದರೂ ನರತಂತು ಅಂತ್ಯಗೊಳ್ಳುವಾಗ ಮತ್ತು ತಂತು ಮಿದುಳು, ವಿದುಳು ಬಳ್ಳಿ ಮತ್ತು ನರಗ್ರಂಥಿಗಳಲ್ಲಿ ಕೋಶವನ್ನು ಸೇರಿಕೊಳ್ಳಲು ಕ್ರಮಿಸುತ್ತಿರುವಾಗ ಸ್ವಲ್ಪದೂರ ಲೋಪವಾಗಿದ್ದು ಆ ಭಾಗದಲ್ಲಿ ತಿರುಳುಧಾರೆ ನಗ್ನವಾಗಿರುತ್ತದೆ. ಭಸ್ಮವರ್ಣದ ನರತಂತುವಿನ ರಚನೆ ಇಷ್ಟೆ. ಬಿಳಿ ನರತಂತುಗಳ ರಚನೆಯಲ್ಲಿ ಇವುಗಳ ಜೊತೆಗೆ ತೆಳುವಾದ ಅಥವಾ ದಪ್ಪವಾದ ಮೈಯಲಿನ್ ಹೊದಿಕೆಯೂ ಸೇರಿದೆ. ಮೇಲೆಯೇ ಹೇಳಿರುವಂತೆ ಈ ಕಾರಣದಿಂದಲೇ ಅವು ಬೆಳ್ಳಗೆ ಕಾಣುವುದು ಮತ್ತು ವಿವಿಧ ಗಾತ್ರದವಾಗಿರುವುದು (2 ಮ್ಯೂ-20 ಮ್ಯೂ). ಮೈಯಲಿನ್ ಹೊದ್ದಿಕೆ ನ್ಯೂರಿಲೆಮ್ಮಕ್ಕೂ ತಿರುಳುಧಾರೆಗೂ ನಡುವೆ ಉಪಸ್ಥಿತವಾಗಿದೆ. ಮೈಯಲಿನ್ ವಸ್ತು ಒಂದು ಸ್ನಿಗ್ಧ ರಾಸಾಯನಿಕವಾಗಿದ್ದು (ಲೈಪಿಡ್) ನರತಂತುವನ್ನು ಸುತ್ತಲಿನ ಅಂಗಾಂಗಗಳಿಂದ ವಿದ್ಯುದ್ರೋಧಿಸುತ್ತದೆ (ಇನ್‍ಸುಲೇಟ್). ಆದರೆ ನ್ಯೂರಿಲೆಮ್ಮದಂತೆ ನರತಂತುವಿನ ಉದ್ದಕ್ಕೂ ಅವಿರತವಾಗಿ ಮೈಯಲಿನ್ ಹೊದ್ದಿಕೆ ಇರುವುದಿಲ್ಲ. ಕ್ಲುಪ್ತ ಅಂತರಗಳಲ್ಲಿ ನ್ಯೂರಿಲೆಮ್ಮ ಮಡಚಿಕೊಂಡು ತಡಿಕೆಯಂತೆ ಒಳನುಗ್ಗಿ ಮೈಯಲಿನ್ ಹೊದ್ದಿಕೆಯನ್ನು ಸಮ ತುಂಡುಗಳಾಗಿ ಭಿನ್ನಗೊಳಿಸುತ್ತದೆ. ನರತಂತುವನ್ನು ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸಿದಾಗ ಇಂಥ ಒಂದೊಂದು ಸ್ಥಳವೂ ಬಿದಿರು ಗಳುವಿನ ಅಥವಾ ಕಬ್ಬಿನ ಜಲ್ಲೆಯ ಗಿಣ್ಣುಗಳನ್ನು ನೆನಪುಮಾಡಿಕೊಡುತ್ತದೆ. ಇವನ್ನು ಮೊತ್ತಮೊದಲು ನಿಖರವಾಗಿ ವರ್ಣಿಸಿದ ವಿಜ್ಞಾನಿ ರ್ಯಾನ್ವಿಯರನ ಗೌರವಾರ್ಥವಾಗಿ, 'ರ್ಯಾನ್‍ವಿಯರನ ಗಿಣ್ಣುಗಳೆಂದೇ ನಾಮಕರಿಸಲಾಗಿದೆ. ವಾಸ್ತವವಾಗಿ ನ್ಯೂರಿಲೆಮ್ಮದ ಅಕ್ಕಪಕ್ಕದ ಕೋಶಗಳು ಸೇರುವ ಕಡೆ ಉಂಟಾದ ಕೋಶಭಿತ್ತಿಗಳ ಜಂಟಿಸ್ಥಾನವೇ ಒಳನುಗ್ಗಿ ಗಿಣ್ಣಿನಂತಾಗಿದೆ. ಎರಡು ಗಿಣ್ಣುಗಳ ನಡುವಿನ ಉದ್ದಕ್ಕೂ ಪಸರಿಸಿ ನ್ಯೂರಿಲೆಮ್ಮದ ಒಂದೇ ಕೋಶ ಉಂಟು. ಇದರ ಮಧ್ಯದಲ್ಲೆ ಇದರ ಅಣುಕೇಂದ್ರ ಗುರುತಾಗುವಂತೆ ಇದೆ. ಗಿಣ್ಣುಗಳಿರುವ ಕಡೆ ತಿರುಳುಧಾರೆಗೆ ಮಡಿಚಿ ಒಳನುಗ್ಗಿರುವ ನ್ಯೂರೆಲೆಮ್ಮ ಕೋಶಗಳ ಜಂಟಿಸ್ಥಾನ ಮಾತ್ರ ಹೊದ್ದಿಕೆ. ಮೈಯಲಿನ್ ಹೊದ್ದಿಕೆ ಇಲ್ಲ. ಆದ್ದರಿಂದ ಇಲ್ಲಿ ವಿದ್ಯುತ್‍ಬೇರ್ಪಡೆ ಕುಸಿದು ನೆರೆಯಲ್ಲಿ ಪ್ರವಹಿಸಬಹುದಾದ ವಿದ್ಯುತ್ತು ನರತಂತುವನ್ನು ಪ್ರಚೋದಿಸಬಹುದಾಗಿದೆ. ನರತಂತುಗಳ ದಪ್ಪಕ್ಕೆ ಅನುಸಾರವಾಗಿ ಗಿಣ್ಣುಗಳು ಏರ್ಪಟ್ಟಿವೆ. ದಪ್ಪ ನರತಂತುಗಳಲ್ಲಿ ಗಿಣ್ಣುಗಳು ವಿರಳ. ಸಣ್ಣನರತಂತುಗಳಲ್ಲಿ ಹೇರಳ. ಭಸ್ಮವರ್ಣದ ನರತಂತುಗಳಿಗೆ ಹೋಲಿಸಿದರೆ ಬಿಳೀ ನರತಂತುಗಳಲ್ಲಿ ನರ ಪ್ರಚೋದನೆ (ನರ್ವ್ ಇಂಪಲ್ಸ್) ಒಯ್ಯಲ್ಪಡುವುದು ಅತಿಶೀಘ್ರ. ಈ ವ್ಯತ್ಯಾಸಕ್ಕೆ ಕಾರಣ ಹೀಗೆ: ಭಸ್ಮ ವರ್ಣದ ನರತಂತುವಿನಲ್ಲಿ ನರಪ್ರಚೋದನೆ ಒಂದು ಸ್ಥಳದಿಂದ ಅದರ ಒತ್ತಿನ ಸ್ಥಳಕ್ಕೆ ಕವರಿಕೊಂಡು ಉದ್ದಕ್ಕೂ ಪಸರಿಸುತ್ತ ಹೋಗುತ್ತದೆ- ಪಟಾಕಿಮದ್ದಿನ ದಾರವನ್ನು ಹೊತ್ತಿಸಿದರೆ ಅದು ಉದ್ದಕ್ಕೂ ಉರಿದುಕೊಂಡು ಹೋಗುವಂತೆ. ನರಪ್ರಚೋದನೆ ಉಂಟಾಗುವ ಸಮಯದಲ್ಲಿ ಸ್ಥಳೀಯವಾಗಿ ಕಿಂಚಿತ್ ವಿದ್ಯುತ್ ಬದಲಾವಣೆ ಕಂಡು ಬಂದು ಆ ನೆರೆಯಲ್ಲಿ ವಿದ್ಯುತ್‍ಪ್ರವಾಹ ಏರ್ಪಡುತ್ತದೆ. (ಆದ್ದರಿಂದಲೇ ಬಹುಶಃ ವಿದ್ಯುಚ್ಛಕ್ತಿಯೂ ನರಪ್ರಚೋದನೆಯನ್ನು ಉಂಟು ಮಾಡಬಲ್ಲದು). ಆದರೆ ಈ ವಿದ್ಯುತ್ ಪ್ರವಾಹ ಆ ಸ್ಥಳದ ಒತ್ತಿನ ಸ್ಥಳದಲ್ಲಿ ನರಪ್ರಚೋದನೆ ಉಂಟುಮಾಡುವುದೇ ಹೊರತು ಲೋಹತಂತಿಯಲ್ಲಿ ಒಯ್ಯಲ್ಪಡುವಂತೆ ನರದ ಮೂಲಕ ಹರಿದು ದೂರದಲ್ಲಿ ಎಲ್ಲೋ ನರಪ್ರಚೋದನೆಯನ್ನು ಉಂಟುಮಾಡುವುದಿಲ್ಲ. ಹಾಗೆ ಹರಿದು ಹೋಗುವಂತಿದ್ದರೆ ನರಪ್ರಚೋದನೆ ವಿದ್ಯುದ್ವೇಗದಲ್ಲಿ (ಅಂದರೆ ಸೆಕೆಂಡಿಗೆ ಸುಮಾರು 3 ಲಕ್ಷ ಕಿಮೀ) ಪ್ರಸಾರವಾಗಬೇಕಾಗಿತ್ತು. ಆದರೆ ವಾಸ್ತವವಾಗಿ ಬಿಳೀ ನರತಂತುವಿನಲ್ಲೂ ಅದರ ಗರಿಷ್ಠ ವೇಗ ಸೆಕೆಂಡಿಗೆ ಸುಮಾರು 120 ಮೀಗಳಷ್ಟು ಮಾತ್ರ. ಭಸ್ಮವರ್ಣದ ತಂತುವಿನಲ್ಲಿ ಇದರ ವೇಗ ಸೆಕೆಂಡಿಗೆ ಸುಮಾರು 1/2 ಮೀಟರಿನಷ್ಟು ಕಡಿಮೆ ಇರಬಹುದು. ಬಿಳೀ ನರತಂತುವಿನಲ್ಲಿ ನರಪ್ರಚೋದನೆಯ ಮುನ್ನಡೆಯ ರೀತಿ ಬೇರೆ. ಅದರಲ್ಲಿ ನರಪ್ರಚೋದನೆಯ ಸಾಗಣೆ ಶೀಘ್ರ. ಬಿಳೀನರತಂತುವಿನಲ್ಲಿ ನರಪ್ರಚೋದನೆ ಮೈಯಲಿನ್ನಿನ ವಿದ್ಯುತ್ ಬೇರ್ಪಡೆಯಿಂದಾಗಿ ಒಂದು ಗಿಣ್ಣಿನಹೊರವಲಯದಲ್ಲಿ ಮಾತ್ರ ವಿದ್ಯುತ್ ಬದಲಾವಣೆಯನ್ನು ಉಂಟುಮಾಡುವಂತಿರುವುದರಿಂದ ಅದರ ನೆರೆಯಲ್ಲಿ ಒಂದೆರಡು ಗಿಣ್ಣುಗಳಷ್ಟು ದೂರದಲ್ಲೆ ಕ್ಷೀಣಿಸುವ ವಿದ್ಯುತ್‍ಪ್ರವಾಹ ಏರ್ಪಡುತ್ತದೆ. ಈ ಪ್ರವಾಹ ಮುಂದಿನ ಗಿಣ್ಣಿನಲ್ಲಿ ಉದ್ದೀಪಕವಾಗಿ (ಸ್ಟಿಮ್ಯಲಸ್) ವರ್ತಿಸಿ ಅಲ್ಲಿ ನರಪ್ರಚೋದನೆಯನ್ನು ಉಂಟುಮಾಡುತ್ತದೆ. ತತ್ಫಲವಾಗಿ ಆ ವಲಯದಲ್ಲಿ ಮಾತ್ರ ವಿದ್ಯುತ್ ಬದಲಾವಣೆ. ಅದರ ನೆರೆಯಲ್ಲಿ ವಿದ್ಯುತ್ ಪ್ರವಾಹ ಅದು ಮುಂದಿನ ಗಿಣ್ಣಿನಲ್ಲಿ ಉದ್ದೀಪಕವಾಗಿ ವರ್ತಿಸುವುದು. ಈ ರೀತಿ ನರಪ್ರಚೋದನೆ ಗಿಣ್ಣು ಗಿಣ್ಣಿಗೆ ಕುಪ್ಪಳಿಸುತ್ತಾ ವಿದ್ಯುದ್ವೇಗದಲ್ಲಿ ಮುಂದುವರಿಯುತ್ತದೆ. ಈ ಕಾರಣದಿಂದ ನರಪ್ರಚೋದನೆಯ ಇಂಥ ಮುಂದೋಟ ಗಿಣ್ಣುಗಳು ಹತ್ತಿರ ಹತ್ತಿರವಾಗಿರುವ ನರತಂತುವಿಗಿಂತ ಗಿಣ್ಣುಗಳು ದೂರದೂರವಾಗಿರುವ ನರತಂತುವಿನಲ್ಲಿ ಶೀಘ್ರತರ. ಗಿಣ್ಣುಗಳೇ ಇಲ್ಲಿದಿದ್ದರೆ ಕುಪ್ಪಳಿಕೆ ಸಾಧ್ಯವಿಲ್ಲದೆ ನರಪ್ರಚೋದನೆಯ ಸಾಗಣೆ ಬಲು ನಿಧಾನ. ಗಿಣ್ಣುಗಳ ಅಂತರ ತಂತುವಿನ ಗಾತ್ರಕ್ಕೆ ತಕ್ಕಂತಿರುವುದರಿಂದ ನರಪ್ರಚೋದನೆಯ ಸಾಗಣೆಯೂ ಅಷ್ಟೆ. ಸಾಗಣೆಯ ವೇಗ 1 ಮ್ಯೂ ದಪ್ಪಕ್ಕೆ ಸರಾಸರಿ 6 ಮೀಟರುಗಳಷ್ಟು ಇರುವುದು ವ್ಯಕ್ತವಾಗಿದೆ. ಅಂದರೆ ಸಾಮಾನ್ಯವಾಗಿ ಬಿಳಿ ನರತಂತುಗಳಲ್ಲಿ ಸೆಕೆಂಡಿಗೆ 12 ರಿಂದ 120 ಮೀಟರ್‍ಗಳಷ್ಟು ವೇಗದಲ್ಲಿ ನರಪ್ರಚೋದನೆ ಮುಂದುವರಿಯುತ್ತದೆ ಎಂದಾಯಿತು. ಒಟ್ಟಿನಲ್ಲಿ ನರಪ್ರಚೋದನೆಯ ಪ್ರಸಾರವೇಗ ಭಸ್ಮ ವರ್ಣ ತಂತುವೋ, ಬಿಳಿತಂತುವೋ (ಬಿಳಿ ತಂತುವಾದರೆ ಅದರ ದಪ್ಪವೆಷ್ಟು) ಎನ್ನುವುದರ ಮೇಲೆ ಅವಲಂಬಿಸಿದೆ. ನರತಂತುಗಳಲ್ಲಿನ ಇನ್ನಾವ ವ್ಯತ್ಯಾಸವೂ ಸಂದೇಶ ಪ್ರಸಾರವೇಗದ ಮೇಲೆ ಪ್ರಭಾವ ಹೊಂದಿಲ್ಲ.

ಒಂದು ನರತಂತುವಿನಲ್ಲಿ ಅದರ ನಿರ್ದಿಷ್ಟ ವೇಗಪ್ರಮಾಣದಲ್ಲಿ ನರಪ್ರಚೋದನೆ ಮೇಲೆ ವಿವರಿಸಿರುವ ಕ್ರಮಗಳಿಂದ ಹಿಂದಕ್ಕಾಗಲಿ ಮುಂದಕ್ಕಾಗಲಿ ಒಯ್ಯಲ್ಪಡಬಹುದು.

ಆದರೆ ದೇಹದಲ್ಲಿ ಇರುವ ಏರ್ಪಾಡಿನಂತೆ ಜ್ಞಾನವಾಹಿಗಳು ತಮ್ಮ ಅಂತ್ಯಗಳಿಂದ ಮಿದುಳು ಮತ್ತು ಮಿದುಳುಬಳ್ಳಿಗಳ ಕಡೆಗೂ ಕ್ರಿಯಾವಾಹಿಗಳು ಮಿದುಳು ಮತ್ತು ಮಿದುಳುಬಳ್ಳಿಗಳಿಂದ ತಮ್ಮ ಅಂತ್ಯಗಳಿಗೂ ಮಾತ್ರ ನರಪ್ರಚೋದನೆಯನ್ನು ಒಯ್ಯುವಂತಿವೆ. ಇದಕ್ಕೆ ಕಾರಣ ಹೀಗೆ : ಎಲ್ಲ ನರತಂತುಗಳೂ ನರಕೋಶಗಳ ಅಪವಾಹಿ ಅಥವಾ ಅಭಿವಾಹಿ ಚಾಚುಗಳೆ ಎಂದು ಹಿಂದೆಯೇ ಹೇಳಿದೆ. ಪ್ರತಿಯೊಂದು ನರಕೋಶಕ್ಕೂ ಒಂದು ಅಪವಾಹಿ ಮತ್ತು ಒಂದೋ ಹೆಚ್ಚಾಗಿಯೋ ಅಭಿವಾಹಿಗಳು ಇರುವುದು ಸಾಮಾನ್ಯ. ಅಭಿವಾಹಿ ಚಾಚು ಅನೇಕ ಕವಲುಗಳಿರುವ ಅತಿ ಸೂಕ್ಷ್ಮಾಕಾರದ ಮರದಂತಿದೆ. ಕವಲುಗಳ ಅಂತ್ಯದ ಆವರಣದಲ್ಲಿ ನಿರ್ದಿಷ್ಟ ಭೌತಿಕ ವ್ಯತ್ಯಾಸ ಉಂಟಾದಾಗ ಇಲ್ಲವೆ ನಿರ್ದಿಷ್ಟ ರಾಸಾಯನಿಕ ಬಿಡುಗಡೆಆಗಿದ್ದಾಗ ಅವು ಪ್ರಚೋದನೆಗೊಂಡು ನರಪ್ರಚೋದನೆ ಕವಲಿನಲ್ಲಿ ಹಬ್ಬುತ್ತಾ ಕೊನೆಗೆ ಮಾತೃಕೋಶವನ್ನು ತಲಪುತ್ತದೆ. ಹಾಗೆ ತಲಪಿದಾಗ ಮಾತೃಕೋಶ ಪ್ರತಿಕ್ರಿಯೆ ತೋರುವುದರಿಂದ ಮರುನರಪ್ರಚೋದನೆ ಉಂಟಾಗಿ ಅದು ಕೋಶದ ಅಪವಾಹಿ ಚಾಚುವಿನ ಮೂಲಕ ಮುಂದುವರಿಯುತ್ತದೆ. ಅದರ ಅಂತ್ಯವನ್ನು ತಲಪಿದಾಗ ಅಲ್ಲಿ ನಿರ್ದಿಷ್ಟ ರಾಸಾಯನಿಕ ಬಿಡುಗಡೆಯಾಗುತ್ತದೆ. ಆದರೆ ಇದೇ ನರಪ್ರಚೋದನೆ ಅಭಿವಾಹಿಗಳ ಮೂಲಕ ಅಕಸ್ಮಾತ್ ಹರಿದು ಅವುಗಳ ಅಂತ್ಯವನ್ನು ತಲಪಿದರೆ ಅಲ್ಲಿ ಏನು ಪರಿಣಾಮವೂ ಉಂಟಾಗದೆ ನರಪ್ರಚೋದನೆ ನಂದಿಹೋಗುತ್ತದೆ. ಅಪವಾಹಿ ಚಾಚು ಉದ್ದವಾದ ದಾರದಂತಿರುತ್ತದೆ. ಗಮನಿಸುವ ಮಾರ್ಗಕ್ಕೆ ಅಲ್ಲೊಂದು ಇಲ್ಲೊಂದು ಕವಲುಗಳಿರಬಹುದು ಅಷ್ಟೆ. ಅಪವಾಹಿಯ ಅಂತ್ಯಗಳಲ್ಲಿ ಆಗಿರಬಹುದಾದ ಆವರಣ ವ್ಯತ್ಯಾಸಗಳಿಂದ ಅವು ಉದ್ರೇಕಗೊಳ್ಳುವುದಿಲ್ಲ. ಯಾವುದೇ ರೀತಿಯಿಂದ ಅವು ಉದ್ರೇಕಗೊಂಡು ನರಪ್ರಚೋದನೆ ಉಂಟಾಗಿ ಅದು ಅಭಿಮುಖವಾಗಿ ಪಸರಿಸುತ್ತಾ ಮಾತೃಕೋಶವನ್ನು ತಲಪಿದರೂ ಅದಕ್ಕೆ ಕೋಶ ಏನು ಪ್ರತಿಕ್ರಿಯೆಯನ್ನೂ ತೋರುವುದಿಲ್ಲ. ಅಂದರೆ ಅಭಿವಾಹಿಯಲ್ಲಿ ಕೋಶದಿಂದ ಮುನ್ನಡೆಯಬಹುದಾದ ನರಪ್ರಚೋದನೆ ನಂದಿಹೋಗುವಂತೆಯೇ ಅಪವಾಹಿಯಲ್ಲಿ ಕೋಶದ ಕಡೆಗೆ ಪಸರಿಸಬಹುದಾದ ನರಪ್ರಚೋದನೆಯೂ ನಂದಿಹೋಗುತ್ತದೆ. ಇಂಥ ನೈಸರ್ಗಿಕ ಏರ್ಪಾಡಿನಿಂದ ಕಾರ್ಯತಃ ನರಪ್ರಚೋದನೆ ಅಭಿವಾಹಿಯಲ್ಲಿಕೋಶದ ಕಡೆಗೆ ಮಾತ್ರ ಮತ್ತು ಅಪವಾಹಿಯಲ್ಲಿ ಕೋಶದ ಮುಂದಕ್ಕೆ ಮಾತ್ರ ಪಸರಿಸುವಂತಿದೆ. ಕ್ರಿಯಾವಾಹಿಗಳು ನಿರ್ದಿಷ್ಟ ನರಕೋಶಗಳ ಅಪವಾಹಿಗಳು. ಈ ನರಕೋಶಗಳಿಗೆ ಕ್ರಿಯಾತ್ಮಕ ನರಕೋಶಗಳೆಂದು ಹೆಸರು. (ಮೋಟಾರ್ ನರ್ವ್‍ಸೆಲ್ಸ್, ಮೊಟಾರ್ ನ್ಯುರೋನ್ಸ್) ಇವು ಮಿದುಳುಬಳ್ಳಿ ಮತ್ತು ಅನೈಚ್ಛಿಕ ಕ್ರಿಯಾ ನರ ಗ್ರಂಥಗಳಲ್ಲಿ (ಆಟೋನಾಮಿಕ್ ಗ್ಯಾನ್‍ಗ್ಲಿಯಾ) ಇರುವುವು. ಆದ್ದರಿಂದ ನರಪ್ರಚೋದನೆ ಈ ಸ್ಥಳಗಳಿಂದ ಹೊರಕ್ಕೆ ಮುನ್ನಡೆಯುತ್ತದೆ. ಕ್ರಿಯಾತ್ಮಕ ಕೋಶಗಳಿಗೆ ಸದೃಶವಾಗಿ ಇರುವ ನರಕೋಶಗಳು ಸಂವೇದನಾತ್ಮಕ ನರಕೋಶಗಳು (ಸೆನ್ಸರಿ ನರ್ವ್ ಸೆಲ್) ಇವು ಮಿದುಳಿನಲ್ಲಿ ಮತ್ತು ಮಿದುಳುಬಳ್ಳಿ ನರಗ್ರಂಥಿಗಳಲ್ಲಿ (ಸ್ಪೈನಲ್ ಗ್ಯಾನ್‍ಗ್ಲಿಯಾ) ಇರುವುವು.ಇವುಗಳ ಅಭಿವಾಹಿಗಳೆ ಜ್ಞಾನವಾಹಿ ನರತಂತುಗಳು. ಆದ್ದರಿಂದಲೇ ಇವುಗಳಲ್ಲಿ ನರಪ್ರಚೋದನೆ ಕೋಶಗಳ ಕಡೆಗೆ ಪಸರಿಸುತ್ತದೆ. ಸಂವೇದನಾತ್ಮಕ ನರಕೋಶಗಳ ಅಭಿವಾಹಿಗಳು ಇತರ ನರಕೋಶಗಳ ಅಭಿವಾಹಿಗಳಂತೆಯೇ ರಚಿತವಾಗಿರುತ್ತದೆ. ಮತ್ತು ಅಪವಾಹಿಯಂತೆಯೇ ಮಾತೃಕೋಶಕ್ಕೆ ಒಂದು ಮಾತ್ರ ಅಭಿವಾಹಿಯಿರುವುದು ಈ ನರಕೋಶಗಳ ವೈಶಿಷ್ಟ್ಯ. ಹೀಗಾಗಿ ಜ್ಞಾನವಾಹಿ ನರತಂತುಗಳಲ್ಲಿ ನರಪ್ರಚೋದನೆ ವಿವಿಧ ಜ್ಞಾನೇಂದ್ರಿಯಗಳಿಂದ (ಸೆನ್ಸರಿ ಆರ್ಗನ್ಸ್) ಮಿದುಳು ಮತ್ತು ಮಿದುಳುಬಳ್ಳಿಗೆ ಮಾತ್ರ ಹಾಗೂ ಕ್ರಿಯಾವಾಹಿ ತಂತುಗಳಲ್ಲಿ ಮಿದುಳು ಮತ್ತು ಮಿದುಳುಬಳ್ಳಿಗಳಿಂದ ದೇಹದ ವಿವಿಧ ಭಾಗಗಳಲ್ಲಿರುವ ಕ್ರಿಯಾಂಗಗಳಿಗೆ ಮಾತ್ರ ಪ್ರವಹಿಸಬಲ್ಲದು.

ಆಘಾತದಿಂದ ನರ ಛಿದ್ರಗೊಂಡರೆ ಅಥವಾ ಉದ್ದೇಶಪೂರ್ವಕವಾಗಿ ಅದನ್ನು ಛಿದ್ರಗೊಳಿಸಿದರೆ ನರದ ನೈಸರ್ಗಿಕ ದುರಸ್ತಿ ಇನ್ನಿತರ ಅಂಗಗಳಲ್ಲಿರುವಂತೆ ಇರುವುದಿಲ್ಲ. ಚರ್ಮ, ಮೂಳೆ, ಸ್ನಾಯು ಮುಂತಾದವುಗಳಲ್ಲಿ ಭಿನ್ನವಾದ ಭಾಗಗಳ ಅಂತ್ಯಗಳು ಒಂದಕ್ಕೊಂದು ಬಹಳ ದೂರದಲ್ಲಿಲ್ಲದಿದ್ದರೆ ಒಂದೆರಡು ದಿನ ಅಥವಾ ವಾರಗಳಲ್ಲಿ ಬೆಸೆದುಕೊಂಡು ಗಾಯಪೂರ್ವಸ್ಥಿತಿ ಲಭ್ಯವಾಗುತ್ತದೆ. ನರಛಿದ್ರವಾದರೆ ಎರಡು ತುದಿಗಳನ್ನೂ ಸಂಪರ್ಕಿಸಿ ಕಟ್ಟಿದರೆ ಮಾತ್ರ ಅಥವಾ ಎರಡು ತುದಿಗಳು 1-1 1/2 ಸೆಂಮೀಗಿಂತ ಹೆಚ್ಚು ದೂರದಲ್ಲಿ ಇಲ್ಲದಿದ್ದರೆ ಮಾತ್ರ ಅವು ಸೇರಿಕೊಂಡು ದುರಸ್ತಿ ಆಗಲು ಸಾಧ್ಯ. ಹಾಗಾಗಲು 3 ತಿಂಗಳೋ 6 ತಿಂಗಳೋ ಬೇಕು. ಹೆಚ್ಚುಕಡಿಮೆ ಮೊದಲಿನಂತೆ ಕ್ರಿಯಾಸೌಲಭ್ಯ ಲಭಿಸಬೇಕಾದರೆ ಒಂದು ವರ್ಷವೇ ಬೇಕಾದೀತು. ನರಛಿದ್ರವಾದಾಗ ಛಿದ್ರಿತ ಸ್ಥಳದಿಂದ ಮುಂದಕ್ಕೆ ಉದ್ದಕ್ಕೂ ನರತಂತುವಿನ ತಿರುಳುಧಾರೆ ಹಾಗೂ ಮೈಯಲಿನ್ ಹೊದಿಕೆ ನಶಿಸಿ ಜೀರ್ಣಿಸಿಹೋಗುತ್ತವೆ. ಆದರೆ ನ್ಯೂರಿಲೆಮ್ಮದ ಕೋಶಗಳ ಸಂಖ್ಯಾವೃದ್ಧಿ ಆಗುವುದು ಒಂದು ವಿಶೇಷ. ಈ ಮಾರ್ಪಾಡುಗಳು ನರಛಿದ್ರವಾದ ಒಂದೆರಡು ದಿನಗಳಲ್ಲೇ ಪ್ರಾರಂಭವಾದರೂ 2-3 ತಿಂಗಳುಗಳ ತನಕ ಮುಂದುವರಿದು ಕೊನೆಗೆ ಉಳಿದುಕೊಳ್ಳುವುದು ನ್ಯೂರಿಲೆಮ್ಮ ಕೋಶಗಳಿಂದ ಭರ್ತಿ ಆದ ಎನ್‍ಡೋನ್ಯೂರಿಯಮ್ ಕೊಳವೆ. ಗಾಯಸ್ಥಳದಿಂದ ಹಿಂದಕ್ಕೂ ನರತಂತುವಿನಲ್ಲಿ ಇಂಥ ನಾಶ ಕಂಡುಬರುತ್ತದೆ. ಆದರೆ ಸಾಮಾನ್ಯವಾಗಿ ಅತಿ ಹತ್ತಿರದ ರ್ಯಾನ್‍ವಿಯರನ ಗಿಣ್ಣಿನ ತನಕ ಮಾತ್ರ. ಛಿದ್ರಿತ ಸ್ಥಳದಿಂದ ಕೆಳಗಿರುವ ಭಾಗದ ತುದಿಯಲ್ಲಿ (ಲೋಯರ್ ಕಟ್ ಎಂಡ್) ನ್ಯೂರಿಲೆಮ್ಮಕೋಶಗಳ ಸಂಖ್ಯಾವೃದ್ಧಿಯಿಂದ ಆ ತುದಿ ಮೇಲಿನ ತುದಿಯನ್ನು ಸೇರಿಕೊಳ್ಳಲು ಬೆಳೆಯುತ್ತಿರುವಂತೆ ಕಾಣಿಸುತ್ತದೆ. ಮೇಲಿನ ತುದಿಯಲ್ಲಿ ಕೂಡ ಇಂಥ ಸ್ಥಿತಿ ಕಂಡುಬಂದರೂ ಕೆಳಗಿನ ತುದಿಯಲ್ಲಿರುವಷ್ಟು ಇರುವುದಿಲ್ಲ. ಅಂತೂ ಇವೆರಡು ತುದಿಗಳ ನಡುವೆ ನ್ಯೂರಿಲೆಮ್ಮಕೋಶಗಳ ಸೇತುವೆ ಸೃಷ್ಟಿ ಆಗುತ್ತದೆ. ಮೇಲೆ ಹೇಳಿದಂತೆ ಸಾಮಾನ್ಯವಾಗಿ ಈ ಸೇತುವೆ 1-1 1/2 ಸೆಂಮೀನಷ್ಟು ಇರುವುದಾದರೂ ಕೆಲವು ಸಂದರ್ಭಗಳಲ್ಲಿ 3 ಸೆಂಮೀನಷ್ಟು ಉದ್ದದ ಸೇತುವೆಯ ಸ್ಪಷ್ಟನೆಯೂ ಸಾಧ್ಯ. ಛಿದ್ರ ತಂತುವಿನ ಕೆಳ ತುಕ್ಕಡದಲ್ಲಿ ಮೇಲೆ ಹೇಳಿರುವ ಪರಿವರ್ತನೆಗಳು ಆಗುತ್ತಿರುವ ಕಾಲದಲ್ಲೇ ಮೇಲಿನ ತುಕ್ಕಡದ ತಿರುಳುಧಾರೆಯ ತುದಿ ಕೊನರುವುದಕ್ಕೆ ಪ್ರಾರಂಭಿಸಿ ಹತ್ತಾರು ಕಿರುಧಾರೆಗಳು ಎಲ್ಲ ದಿಶೆಗಳಲ್ಲೂ ಬೆಳೆದು ಮುಂದುವರಿಯುತ್ತದೆ. ಛಿದ್ರಿತ ಸ್ಥಳದಲ್ಲಿ ನ್ಯೂರಿಲೆಮ್ಮ ಸೇತುವೆಯನ್ನು ತಲಪಿದ ಕಿರುಧಾರೆಗಳು ಕೆಳತುಕ್ಕಡ ನಶಿಸಿ ಉಳಿಕೆಯಾಗಿರುವ ಎನ್‍ಡೋನ್ಯೂರಿಯಮ್ ಕೊಳವೆಯ ಒಳಹೊಕ್ಕು ಮುಂದುವರಿಯುವುವು. ಕ್ರಮೇಣ ಯಾವುದೋ ಒಂದು ಕಿರುಧಾರೆ ಉಳಿದುಕೊಂಡು ಮಿಕ್ಕವೆಲ್ಲ ನಶಿಸಿ ಹೋಗುತ್ತವೆ. ಉಳಿದುಕೊಂಡಿರುವ ಕಿರುಧಾರೆ ಸಹಜ ಗಾತ್ರದ ತಿರುಳುಧಾರೆಯಾಗಿ ವೃದ್ಧಿ ಆಗುತ್ತದೆ. ಎನ್‍ಡೊನ್ಯೂರಿಯಮ್ ಕೊಳವೆಯೊಳಗೆ ಇರುವ ನ್ಯೂರಿಲೆಮ್ಮ ಕೋಶಗಳ ಚಟುವಟಿಕೆಯಿಂದ ಇದಕ್ಕೆ ಮೈಯಲಿನ್ ವಸ್ತುವಿನ ಕವಚ ಕ್ರಮೇಣ ಲಭಿಸುವುದಲ್ಲದೆ ಆ ಕೋಶಗಳೂ ಸರಿಯಾಗಿ ಜೋಡಣೆಗೊಂಡು ತಿರುಳುಧಾರೆಗೆ ನ್ಯೂರಿಲೆಮ್ಮದ ಹೊದಿಕೆಯೂ ದೊರೆಯುವಂತಾಗುತ್ತದೆ. ಛಿದ್ರಿಸಿ ಅವನತಿಗೊಂಡ ನರದ ದುರಸ್ತಿ ಪೂರ್ತಿ ಆಗುವುದು ಈ ರೀತಿ. ಇದು ಮುಗಿಯಲು 6-8 ತಿಂಗಳುಗಳು, ಬಹುಶಃ ಒಂದು ವರ್ಷವೇ ಬೇಕಾಗಬಹುದು. ಎಷ್ಟೇ ಅಚ್ಚುಕಟ್ಟಾಗಿ ದುರಸ್ತಿ ಆದರೂ ಈ ತಂತು ಗರಿಷ್ಠ ಎಂದರೆ ಗಾಯಪೂರ್ವ ಗಾತ್ರದ 80%ನಷ್ಟು ಮಾತ್ರವಿರುತ್ತದೆ. ನರ ಛಿದ್ರಿಸದೆ ನಜ್ಜುಗುಜ್ಜಾಗಿದ್ದರೆ ದುರಸ್ತಿ ಶೀಘ್ರತಮ ಮತ್ತು ತೃಪ್ತಿಕರ. ಛಿದ್ರಿಸಿದ ನರದ ತುದಿಗಳು ಒಂದಕ್ಕೊಂದು ಅತಿ ದೂರದಲ್ಲಿದ್ದರೆ ಅಥವಾ ಅವುಗಳ ನಡುವೆ ರಕ್ತಗರಣೆ ಇತ್ಯಾದಿ ದುರ್ಮಾಂಸ ಇದ್ದರೆ ದುರಸ್ತಿ ಅಸಾಧ್ಯ.

ಇಂಥ ಸಂದರ್ಭಗಳಲ್ಲಿ ಮೇಲಿನ ತುಕ್ಕಡದ ತಿರುಳುಧಾರೆಯ ಕೊನರುಗಳೂ ಕೆಳತುಕ್ಕಡವಾದ ಎನ್ಡೋನ್ಯೂರಿಯಮ್ ಕೊಳವೆಯೂ ಕ್ರಮೇಣ ನಶಿಸಿ ಹೋಗುತ್ತವೆ. ಆದರೆ ಶಸ್ತ್ರಕ್ರಿಯೆಯಿಂದ ಎರಡು ತುದಿಗಳನ್ನೂ ಜೋಡಿಸಿದರೆ ಇಲ್ಲವೇ ವಿಶಿಷ್ಟವಾದ ಕೃತಕ ಕೊಳವೆಗಳನ್ನು ಆ ತುದಿಗಳ ನಡುವೆ ಸ್ಥಾಪಿಸಿದರೆ ಅಂಥ ಸಂದರ್ಭದಲ್ಲೂ ದುರಸ್ತಿ ಸಾಧ್ಯ. ಅಂತೂ ದುರಸ್ತಿ ಇಂಥ ನೈಸರ್ಗಿಕ ಮಾರ್ಗದಿಂದ ಆಗಬೇಕೇ ಹೊರತು ಬೇರೆ ಮಾರ್ಗದಿಂದಲ್ಲ. ಛಿದ್ರಿತ ನರದ ಎರಡು ತುದಿಗಳ ನಡುವೆ ಇನ್ನೊಂದು ನರದ ತುಕ್ಕಡವನ್ನು ನಾಟಿ ಹಾಕಿ ನರ ದುರಸ್ತಿ ಮಾಡುವ ಶಸ್ತ್ರಚಿಕಿತ್ಸೆ ಸಿದ್ಧಿಸಿದೆ ಎಂದು ಇನ್ನೂ ಹೇಳುವಂತಿಲ್ಲ. ಇಂಥ ಪ್ರಯತ್ನಗಳೇನೊ ಮುಂದುವರಿಯುತ್ತಿವೆ.

ನರ ಛಿದ್ರಗೊಂಡಾಗ ನರತಂತುಗಳು ನಶಿಸಿ ಹೋದರೂ ಅವುಗಳ ಕೊನೆಯಲ್ಲಿ ಸಾಮಾನ್ಯವಾಗಿ ಇರುವ ವಿವಿಧ ರೀತಿಯ ಅಂತ್ಯಾಂಗಗಳು (ಎಂಡ್ ಆರ್ಗನ್ಸ್)-ಅವು ಜ್ಞಾನವಾಹಿಗಳ ಅಂತ್ಯಾಂಗಗಳಾಗಲಿ, ಕ್ರಿಯಾವಾಹಿಗಳ ಅಂತ್ಯಾಂಗಗಳಾಗಲಿ-ಬಹುಕಾಲ ಅಸ್ತಿತ್ವದಲ್ಲಿರುತ್ತವೆ. ದುರಸ್ತಿ ಆದಾಗ ಮೊದಲಿನಂತೆಯೇ ಆಯಾ ತಂತುಗಳು ಆಯಾ ಅಂತ್ಯಾಂಗಗಳನ್ನು ಕೂಡಿಕೊಳ್ಳುತ್ತವೆ. ದುರಸ್ತಿ ಕಾಲದಲ್ಲಿ ಹೆಚ್ಚುವರಿ ಕಿರುಧಾರೆಗಳು ನಶಿಸಿಹೋಗುವಂತೆಯೇ ತನ್ನದಲ್ಲದ ಎನ್‍ಡೊನ್ಯೂರಿಯಮ್ ಕೊಳವೆಯೊಳಗೆ ಅಕಸ್ಮಾತ್ ಹೊಕ್ಕ ಕಿರುಧಾರೆಯೂ ನಶಿಸಿಹೋಗುವುದು ನಿಜ. ತನ್ನದಲ್ಲದ ಕೊಳವೆ ಎನ್ನುವ ವಿಷಯ ಕಿರುಧಾರೆಗೆ ಹೇಗೆ ಅರ್ಥವಾಗುತ್ತದೆ ಎನ್ನುವುದು ತಿಳಿಯದು. ಈ ರೀತಿ ತಪ್ಪು ಹೊಗುವಿಕೆ ಮತ್ತು ನಾಶ ಮೇಲೆ ಮೇಲೆ ಆಗುತ್ತ ಬಹುಕಾಲ ಅಂತ್ಯಾಂಗಕ್ಕೆ ನರತಂತುವಿನ ಸಂಪರ್ಕ ದೊರೆಯದೇ ಹೋದರೆ ಅಂತಿಮವಾಗಿ ಅದೂ ನಶಿಸಿ ಹೋಗುತ್ತದೆ. ಬಹು ಅಪರೂಪವಾಗಿ ಹೀಗೆ ನಶಿಸಿ ಹೋದಮೇಲೂ ಒಂದು ಕಿರುಧಾರೆ ಆ ಸ್ಥಳ ತಲಪಿದರೆ ಹೊಸ ಅಂತ್ಯಾಂಗದ ಸೃಷ್ಟಿ ಆಗುವುದೂ ಉಂಟು; ತನ್ನದಲ್ಲದ ಕೊಳವೆಯೊಳಗೆ ಅಪವಾದಾತ್ಮಕವಾಗಿಯೇ ಕಿರುಧಾರೆ ಮುಂದುªರಿದು ತನ್ನ ಸ್ವಭಾವಕ್ಕೆ ಅನುಸರಿಸುವಂತೆ ಅಂತ್ಯಾಂಗದ ರಚನೆಯನ್ನೇ ಬದಲಾಯಿಸುವುದೂ ಉಂಟು; ಇಲ್ಲವೇ ಸಂಪರ್ಕದ ವೈಪರೀತ್ಯದಿಂದ ಕ್ರಿಯಾವೈಪರೀತ್ಯ ಕಂಡುಬಂದು ಯಾವ ರೀತಿಯ ಅವ್ಯವಸ್ಥೆ ಉಂಟಾಗುವುದೆಂಬುದನ್ನು ಊಹಿಸಲಾಗದ ಸ್ಥಿತಿ ಒದಗುವುದೂ ಉಂಟು. ಆದರೆ ಸಾಮಾನ್ಯವಾಗಿ ಇಂಥ ಧಕ್ಕೆಗಳು ಒದಗದಂತೆ, ಅಸ್ತವ್ಯಸ್ತ ಸಂಪರ್ಕಗಳು ಉಂಟಾಗದಂತೆ ನರ ದುರಸ್ತಿ ಆಗುವುದು ಆಶ್ಚರ್ಯದ ಹಾಗೂ ಇನ್ನೂ ಸರಿಯಾಗಿ ತಿಳಿಯದ ವಿಷಯವಾಗಿದೆ.

ಮಿದುಳಿಗೇ ನೇರವಾಗಿ ಸೇರಿಕೊಂಡಿರುವ ನರಗಳನ್ನು ತಲೆನರಗಳೆಂದು (ಕ್ರೇನಿಯಲ್ ನವ್ರ್ಸ್) ಪ್ರತ್ಯೇಕವಾಗಿ ವಿವರಿಸಲಾಗಿದೆ. ಇವು 12 ಜೊತೆ. ಕಣ್ಣು, ಕಿವಿ, ಮೂಗು, ನಾಲಗೆ, ರುಂಡದ ಚರ್ಮ ಹಾಗೂ ಸ್ನಾಯುಗಳು. ಲಾಲಾಗ್ರಂಥಿಗಳು, ಗುಂಡಿಗೆ ಫುಪ್ಪುಸಗಳು, ಜಠರ, ಮೇದೋಜೀರಕಾಂಗ ಇತ್ಯಾದಿಗಳಿಗೆ ಈ ನರಗಳಿಂದ ಪೂರೈಕೆ ಆಗುತ್ತದೆ. ಮೇಲಿನಿಂದ ಕೆಳಕ್ಕೆ ಅನುಕ್ರಮವಾಗಿ ಇವನ್ನು ಮೊದಲನೆಯ, ಎರಡನೆಯ, ಇತ್ಯಾದಿ, ಹನ್ನೆರಡನೆಯ ತಲೆನರವೆಂದೇ ಸಂಬೋಧಿಸುವುದು ವಾಡಿಕೆ. ಅವು ಪೂರೈಸುವ ಅಂಗಗಳು, ಜರಗಿಸುವ ಕ್ರಿಯೆ, ಇತ್ಯಾದಿಗಳಿಗೆ ಅನುಸಾರವಾಗಿ ಅವಕ್ಕೆ ವಿಶಿಷ್ಟ ಹೆಸರುಗಳೂ ಉಂಟು. ಮೊದಲನೆಯ ತಲೆನರಕ್ಕೆ ಆಲ್ಫ್ಯಾಕ್ಟರಿ ನರ (ವಾಸನಗ್ರಾಹಿ ನರ) ಎಂದು ಹೆಸರು. ಅನಂತರ ಈ ನರಗಳಿಗೆ ಅನುಕ್ರಮವಾಗಿ ಪ್ರಕಾಶ (ಆಪ್ಟಿಕ್), ನೇತ್ರಚಾಲಕ (ಆಕ್ಯುಲೋಮೋಟರ್) ರಾಟೆಯುಕ್ತ (ಟ್ರೋಕ್ಲಿಯರ್), ತ್ರೈಮೂಲಿಕ (ಟ್ರೈಜೆಮಿನಲ್), ನೇತ್ರ ಹೊರಚಾಲಕ (ಆಬ್ಡ್ಯೂಸೆಂಟ್), ಮುಖಸಂಬಂಧಿಕ (ಫೇಶಿಯಲ್), ಶ್ರವಣಸಂಬಂಧಿಕ (ಆಡಿಟರಿ) , ನಾಲಗೆ-ಗಂಟಲು ಸಂಬಂಧಿಕ (ಗ್ಲಾಸೊಫೆರಿಂಜಿಯಲ್), ಅಲೆಮಾರಿ (ವೇಗಸ್), ಅನುಬಂಧಿಕ (ಆಕ್ಸೆಸರಿ) ಮತ್ತು ನಾಲಗೆಯಡಿ (ಹೈಪೊಗ್ಲಾಸಲ್) ನರಗಳೆಂದು ಹೆಸರು. ಇವುಗಳಲ್ಲಿ 1,2 ಮತ್ತು 8ನೆಯ ನರಗಳು ಸಂಪೂರ್ಣವಾಗಿ ಜ್ಞಾನವಾಹಿಗಳು; ಇವು ಅನುಕ್ರಮವಾಗಿ ವಾಸನೆ ದೃಷ್ಟಿ ಮತ್ತು ಶ್ರವಣಗಳಿಗೆ ಮೀಸಲಾದವು. 3,4,6,11 ಮತ್ತು 12ನೆಯ ನರಗಳು ಸಂಪೂರ್ಣವಾಗಿ ಕ್ರಿಯಾವಾಹಿಗಳು. 3,4,6ನೆಯ ನರಗಳೂ ಕಣ್ಣುಗುಡ್ಡೆಯನ್ನು ಚಲಿಸುವ ಸ್ನಾಯುಗಳಿಗೆ ಮತ್ತು ಕಣ್ಣಿನ ಪಾಪೆಯನ್ನು ಕಿರಿದು ಮಾಡುವ ಸ್ನಾಯುವಿಗೆ ಪೂರೈಕೆ ಆಗಿವೆ. 11ನೆಯದು ಹೆಕ್ಕತ್ತಿನ ಸ್ನಾಯುಗಳನ್ನೂ 12ನೆಯದು ನಾಲಗೆಯ ಸ್ನಾಯುಗಳನ್ನೂ ಪೂರೈಸುತ್ತವೆ. 5,7,9 ಮತ್ತು 10ನೆಯ ರುಂಡನರಗಳು ಮಿಶ್ರನರಗಳು. 5ನೆಯ ರುಂಡನರ ಚರ್ವಣ ಸ್ನಾಯುಗಳಿಗೂ (ಮ್ಯಾಸ್ಟಿಕೇಟರಿ ಮಸಲ್ಸ್) ಮುಖ ನಾಲಗೆಗಳ ಮೇಲ್ಮೈಗೂ ಪೂರೈಕೆ ಆಗಿ ಅಗಿಯುವ ಕ್ರಿಯೆಗೆ ಮತ್ತು ಮುಖ ನಾಲಗೆಗಳಲ್ಲಿ ಸ್ಪರ್ಶ, ಶೀತೋಷ್ಣ ಮತ್ತು ನೋವು ಇವುಗಳ ಗ್ರಹಿಕೆಗೆ ಕಾರಣವಾಗಿದೆ. 7ನೆಯದು ಮುಖ ಸ್ನಾಯುಗಳನ್ನು ಪೂರೈಸಿ ಮುಖಭಾವವನ್ನು (ಫೆಶಿಯಲ್ ಎಕ್ಸ್‍ಪ್ರೆಶನ್) ವ್ಯಕ್ತಪಡಿಸುವುದಕ್ಕೂ ಲಾಲಾಗ್ರಂಥಿಗಳನ್ನು ಪೂರೈಸಿ ಅವುಗಳ ಸ್ರವನಕ್ಕೂ ನಾಲಗೆಯ ಮುಂಭಾಗದಲ್ಲಿ ರುಚಿಗ್ರಹಣೆಗೂ ಕಾರಣವಾಗಿದೆ. 9ನೆಯ ನರ ಗಂಟಲಿನ ಸ್ನಾಯುಗಳಿಗೂ ಲಾಲಾಗ್ರಂಥಿಗಳಿಗೂ ಪೂರೈಕೆ ಆಗುವ ಕ್ರಿಯಾವಾಹಿ ಹಾಗೂ ನಾಲಗೆಯ ಹಿಂಭಾಗದ ರುಚಿಗ್ರಾಹಿ ಜ್ಞಾನವಾಹಿ. 10ನೆಯದು ಅಲೆಮಾರಿ ನರವೆಂದು ಅನ್ವರ್ಥನಾಮ ಉಳ್ಳದ್ದಾಗಿದೆ. ಏಕೆಂದರೆ ಇದು ರುಂಡನರವಾದರೂ ಮುಂಡದಲ್ಲಿ ಎದೆ ಮತ್ತು ಉದರ ಎರಡು ಕಡೆಯೂ ವ್ಯಾಪಕವಾಗಿ ಪಸರಿಸುವ ನರ. ಗುಂಡಿಗೆಯ ಮಿಡಿತದ ದರ, ಜಠರ, ಮೇದೋಜೀರಕಾಂಗಗಳ ಸ್ರವನ, ಜಠರ ಕರುಳುಗಳ ಚಲನೆ ಇವುಗಳಿಗೆ ಸಂಬಂಧಪಟ್ಟ ಕ್ರಿಯಾವಾಹಿ ಆಗಿರುವುದಲ್ಲದೆ ಫುಪ್ಪುಸಗಳಿಂದ ಪ್ರಜ್ಞಾಹೀನ ಸಂವೇದನೆಗಳಿಗೆ (ಅನ್‍ಕಾನ್ಶಿಯಸ್ ಸೆನ್ಸೇಷನ್ಸ್) ಮತ್ತು ಮುಂಡದ ಕೆಲವು ಅಂಗಗಳ ಯಾತನಾಗ್ರಹಣಕ್ಕೆ ಸಂಬಂಧಿಸಿದ ಜ್ಞಾನವಾಹಿಯೂ ಹೌದು.

ಮಿದುಳುಬಳ್ಳಿಗೆ ಸೇರಿಕೊಂಡಿರುವ ನರಗಳು 31 ಜೊತೆ. ಇವು ಬೆನ್ನುಹುರಿನರಗಳು (ಸ್ಪೈನಲ್ ನವ್ರ್ಸ್). ಇವೆಲ್ಲವೂ ಮಿಶ್ರನರಗಳೇ. ಆದರೆ ಇವು ಮಿದುಳುಬಳ್ಳಿಯೊಡನೆ ಸಂಪರ್ಕ ಪಡೆಯುವುದಕ್ಕೆ ಮೊದಲು ಕ್ರಿಯಾವಾಹಿ ತಂತುಗಳೂ ಜ್ಞಾನವಾಹಿ ತಂತುಗಳೂ ಬೇರ್ಪಟ್ಟು ನರ ಇಬ್ಭಾಗವಾಗಿ ಮಿದುಳುಬಳ್ಳಿಯನ್ನು ಕ್ರಿಯಾವಾಹಿ ಭಾಗ ಮುಂದುಗಡೆಯೂ ಜ್ಞಾನವಾಹಿ ಭಾಗ ಹಿಂದುಗಡೆಯೂ ಸೇರಿಕೊಳ್ಳುತ್ತವೆ. ಅಂದರೆ ಪ್ರತಿ ಮುಂಡನರಕ್ಕೂ ಮುಮ್ಮೂಲ ಅಥವಾ ಕ್ರಿಯಾಮೂಲ (ವೆಂಟ್ರಲ್ ರೂಟ್, ಮೋಟರ್ ರೂಟ್) ಮತ್ತು ಹಿಮ್ಮೂಲ ಅಥವಾ ಜ್ಞಾನಮೂಲ (ಡಾರ್ಸಲ್ ರೂಟ್, ಸೆನ್ಸರಿ ರೂಟ್) ಇದ್ದಂತಾಯಿತು. ಹಿಮ್ಮೂಲದಲ್ಲಿ ಉಬ್ಬಿದ ಗಂಟಿನಂತಿರುವ ಸ್ಥಳ ಉಂಟು. ಇದಕ್ಕೆ ಮಿದುಳುಬಳ್ಳಿಯ ನರಗ್ರಂಥಿ (ಸ್ಪೈನಲ್ ಗ್ಯಾನ್‍ಗ್ಲಿಯಾನ್) ಎಂದು ಹೆಸರು. ಮುಂಡನರದ ಜ್ಞಾನವಾಹಿ ತಂತುಗಳ ಮಾತೃಕೋಶಗಳಾದ ಸಂವೇದನಾತ್ಮಕ ನರ ಕೋಶಗಳು ಇರುವುದು ಇಲ್ಲೇ. ಈ ಕೋಶದ ಅಭಿವಾಹಿ ಚಾಚುಗಳೇ ಜ್ಞಾನವಾಹಿ ನರತಂತುಗಳಾಗಿರುವ ವಿಷಯವನ್ನು ಮೇಲೆ ಹೇಳಿದೆ. ಜ್ಞಾನವಾಹಿ ನರತಂತುಗಳ ಅಂತ್ಯದಲ್ಲಿ ವಿಶೇಷ ರಚನೆ ಉಳ್ಳ ಅತ್ಯಾಂಗಗಳಿರುವುದನ್ನೂ ಮೇಲೆ ಸೂಚಿಸಿದೆ. ಆಲ್ಫ್ಯಾಕ್ಟರಿ ನರದ ಅಂತ್ಯಾಂಗಗಳು ಮೂಗಿನ ಲೋಳೆಪೊರೆಯಲ್ಲೂ ಪ್ರಕಾಶನರದ ಅಂತ್ಯಾಂಗಗಳು ಕಣ್ಣಿನ ದೃಷ್ಟಿಪಟಲದಲ್ಲೂ ಶ್ರವಣನರದ ಅಂತ್ಯಾಂಗಗಳು ಒಳಕಿವಿಯಲ್ಲಿರುವ ಕಾರ್ಟಿಯ ಅಂಗದಲ್ಲೂ (ಆರ್ಗನ್ ಆಫ್ ಕಾರ್ಟಿ) 7ನೆಯ ಮತ್ತು 9ನೆಯ ರುಂಡನರದ ಜ್ಞಾನವಾಹಿ ತಂತುಗಳ ಅಂತ್ಯಾಂಗಗಳು ನಾಲಗೆಯ ಲೋಳೆಪೊರೆಯಲ್ಲೂ ಅಡಗಿವೆ. ಈ ಒಂದೊಂದು ಸ್ಥಳದಲ್ಲಿ ಇರುವ ಅಂತ್ಯಾಂಗಗಳಿಗೂ ಸ್ವಂತ ವಿಶಿಷ್ಟ ರಚನೆ ಉಂಟು. ಕಣ್ಣಿನಲ್ಲಿರುವುದು ದ್ಯುತಿ ಅಲೆಗಳಿಂದ ಮಾತ್ರ, ಕಿವಿಯಲ್ಲಿರುವುದು ಶಬ್ದ ಅಲೆಗಳಿಂದ ಮಾತ್ರ, ಮೂಗು ನಾಲಗೆಗಳಲ್ಲಿರುವುವು ವಿಶಿಷ್ಟ ರಾಸಾಯನಿಕ ಆವಿ ದ್ರಾವಣಗಳ ಸ್ಪರ್ಶದಿಂದ ಮಾತ್ರ ಉದ್ರೇಕಿಸಲ್ಪಡುತ್ತವೆ. 5ನೆಯ ರುಂಡನರ ಹಾಗೂ ಎಲ್ಲ ಮುಂಡನರಗಳ ಜ್ಞಾನವಾಹಿಗಳೂ ವಿಶೇಷವಾಗಿ ದೇಹದ ಎಲ್ಲ ಭಾಗಗಳಲ್ಲೂ ಚರ್ಮದ ಅಡಿಯಲ್ಲಿ ಮೂರುನಾಲ್ಕು ವಿಶಿಷ್ಟ ಮಾದರಿಯ ಸಂವೇದನಾಂತ್ಯಾಂಗಗಳಾಗಿ ಕೊನೆಗೊಳ್ಳುತ್ತವೆ. ಒಂದು ಮಾದರಿಯದು ಅದಕ್ಕೆ ಏನಾದರೂ ತಾಕಿದರೆ ಮಾತ್ರ ಉದ್ರೇಕಗೊಳ್ಳುತ್ತದೆ. ಇನ್ನೊಂದು ಅದು ಇರುವ ಸ್ಥಳದ ಉಷ್ಣತೆ ಕಡಿಮೆ ಆದಾಗ ಮಾತ್ರ ಉದ್ರೇಕಗೊಂಡರೆ ಮಗದೊಂದು ಅದು ಇರುವ ಸ್ಥಳದ ಉಷ್ಣತೆ ಹೆಚ್ಚಾದಾಗ ಮಾತ್ರ ಉದ್ರೇಕಗೊಳ್ಳುತ್ತದೆ. ಯಾವ ವಿಶಿಷ್ಟ ರಚನೆಯನ್ನೂ ತೋರದೆ ತಂತುವಾಗಿಯೇ ಅಂತ್ಯವಾಗುವ ಜ್ಞಾನವಾಹಿಗಳು ಸ್ಥಳಿಯವಾದ ಅನಿಷ್ಟ ಹಾಗೂ ಕೋಶಮಾರಕ ಪ್ರಚೋದನೆಗಳಿಂದ (ನಾಕ್ಯುಯಸ್ ಸ್ಟಿಮುಲೈ) ಉದ್ರೇಕಗೊಳ್ಳುತ್ತವೆ. ಇದರಿಂದ ನಮಗೆ ನೋವಿನ ಅರಿವು ಉಂಟಾಗುವುದು. ದೇಹದ ಎಲ್ಲ ಕೀಲುಗಳಿಗೂ ಐಚ್ಛಿಕ ಸ್ನಾಯುಗಳಿಗೂ 5ನೆಯ ರುಂಡನರದ ಮತ್ತು ಎಲ್ಲ ಮುಂಡನರಗಳ ಜ್ಞಾನವಾಹಿಗಳ ಪೂರೈಕೆ ಆಗುತ್ತದೆ. ಈ ಸ್ಥಳಗಳಲ್ಲೆಲ್ಲ ವಿಶೇಷ ರಚನೆಯುಳ್ಳ ಅಂತ್ಯಾಂಗಗಳಿವೆ. ವೇಗಸ್ ನರದ ಜ್ಞಾನವಾಹಿಗಳು ಫುಪ್ಪುಸಗಳಿಗೆ ಪೂರೈಕೆಯಾಗಿ ಅಂತ್ಯವಾಗುವ ಕಡೆಗಳಲ್ಲು ಇಂಥವೇ ಅಂತ್ಯಾಂಗಗಳಿವೆ. ಸ್ಥಳೀಯ ವಿಸ್ತರಣೆಯಿಂದ (ಸ್ಟ್ರೆಚಿಂಗ್) ಮಾತ್ರ ಇವು ಉದ್ರೇಕಗೊಳ್ಳುವುವು. ಇವು ಒಯ್ಯುವ ನರಪ್ರಚೋದನೆಗಳಿಂದ ಮುಖ್ಯವಾಗಿ ಪ್ರಜ್ಞಾಹೀನ ಸಂವೇದನೆ ಆಗಿದ್ದು ಅವು ಇಚ್ಛಾತೀತ ಪ್ರತಿಕ್ರಿಯೆಯನ್ನು ಉಂಟುಮಾಡುವಂಥವು. ಇವೇ ಜ್ಞಾನವಾಹಿಗಳಿಂದ ಆಯಾ ಸ್ಥಳಗಳ ಚಲನೆ ನೋವುಗಳೂ ಅರಿವಿಗೆ ಬರುವುದುಂಟು.

ಮಿದುಳುಬಳ್ಳಿ ನರಗ್ರಂಥಿಕೋಶಗಳ ಅಪವಾಹಿ ತಂತುಗಳು ಮಿದುಳುಬಳ್ಳಿಯ ಒಳಹೊಕ್ಕು ಅಲ್ಲಿ ನಿರ್ದಿಷ್ಟ ಕಂತೆಗಳಾಗಿ ವಿನ್ಯಾಸಗೊಂಡು ಮುಂದುವರಿದು ಮಿದುಳಿನಲ್ಲಿ ನಿರ್ದಿಷ್ಟ ಸ್ಥಾನವನ್ನು ತಲಪಿ ಅಲ್ಲಿಯ ಕೋಶಗಳ ನೆರೆಯಲ್ಲಿ ಅಂತ್ಯಗೊಳ್ಳುತ್ತವೆ. 5ನೆಯ ಕಪಾಲನರದ ಜ್ಞಾನವಾಹಿಗಳೂ ಬಹುಶಃ 7 ಮತ್ತು 9ನೆಯ ಕಪಾಲನರದ ಜ್ಞಾನವಾಹಿಗಳೂ ವಿದುಳಿನಲ್ಲಿ ಇದೇ ಸ್ಥಳವನ್ನು ಸೇರಿ ಅಂತ್ಯಗೊಳ್ಳುತ್ತವೆ. ಆಲ್ಫ್ಯಾಕ್ಟರಿ, ಪ್ರಕಾಶ, ಶ್ರವಣ ಮತ್ತು ವೇಗಸ್ ನರಗಳ ಜ್ಞಾನವಾಹಿಗಳು ಮಿದುಳಿನಲ್ಲಿ ಇನ್ನು ಬೇರೆ ಬೇರೆ ನಿರ್ದಿಷ್ಟ ಸ್ಥಳಗಳಲ್ಲಿ ಅಂತ್ಯಗೊಳ್ಳುತ್ತವೆ. ಎಲ್ಲ ಜ್ಞಾನವಾಹಿಗಳೂ ಒಯ್ಯುವ ನರಪ್ರಚೋದನೆಗಳು ಬಹುಶಃ ಒಂದೇ ವಿಧ. ಆದರೆ ಒಂದೊಂದು ತಂತುವೂ ನಿರ್ದಿಷ್ಟ ಸ್ಥಳದಲ್ಲಿರುವ ನಿರ್ದಿಷ್ಟ ಅಂತ್ಯಾಂಗದಿಂದಲೇ ನರಪ್ರಚೋದನೆಯನ್ನು ಪಡೆಯುವುದರಿಂದಲೂ ವಿವಿಧ ಸಂವೇದನೆಗಳಿಗೆ ಕಾರಣವಾದ ಎಲ್ಲ ಜ್ಞಾನವಾಹಿಗಳೂ ಮಿದುಳಿನಲ್ಲಿ ಆಯಾ ನಿರ್ದಿಷ್ಟ ಸ್ಥಳಗಳಿಗೆ ಮಾತ್ರ ನರಪ್ರಚೋದನೆಯನ್ನು ಒಯ್ಯುವುದರಿಂದಲೂ ನಮಗೆ ಸಂವೇದನೆಗಳ ವೈವಿಧ್ಯದ ಅರಿವು ಉಂಟಾಗುತ್ತದೆ. ಅಲ್ಲದೆ ನೋವು, ಸ್ಪರ್ಶ, ಶೈತ್ಯೋಷ್ಣಗಳ ದ್ಯುತಿಶಬ್ದಗಳ ಉಗಮಸ್ಥಳದ ಅರಿವೂ ಉಂಟಾಗುತ್ತದೆ. ಜ್ಞಾನವಾಹಿಗಳು ಒಯ್ಯುವ ಎಲ್ಲ ಪ್ರಚೋದನೆಗಳಿಂದಲೂ ವಿವಿಧ ಸಂವೇದನೆಗಳು ತಿಳಿವಳಿಕೆಗೆ ಬರುತ್ತವೆಂದು ಹೇಳಲಾಗುವುದಿಲ್ಲ. ಹೀಗೆ ಬಂದರೂ ಬರದಿದ್ದರೂ ಈ ಪ್ರಚೋದನೆಗಳು ಮಿದುಳು ಮತ್ತು ಮಿದುಳುಬಳ್ಳಿಯಲ್ಲಿ ಪರಿಣಾಮವನ್ನು ಉಂಟುಮಾಡುವುದು ಖಚಿತ.

ಬೆನ್ನುಹುರಿನರದ ಮುಮ್ಮೂಲ ಕ್ರಿಯಾವಾಹಿಗಳಿಂದಾದುದು ಎಂದೂ ಈ ತಂತುಗಳು ಮಿದುಳುಬಳ್ಳಿಯಲ್ಲಿರುವ ಕ್ರಿಯಾತ್ಮಕ ನರಕೋಶಗಳ ಅಪವಾಹಿಗಳೂ ಎಂದೂ ಹೇಳಿದೆ. ರುಂಡನರಗಳ ಕ್ರಿಯಾವಾಹಿಗಳೂ ಮಿದುಳಿನಲ್ಲಿ ನಿರ್ದಿಷ್ಟಸ್ಥಾನಗಳಲ್ಲಿರುವ ಕ್ರಿಯಾತ್ಮಕ ನರಕೋಶಗಳ ಅಪವಾಹಿಗಳು. ಇವೂ ಸೇರಿದಂತೆ ಎಲ್ಲ ಕ್ರಿಯಾವಾಹಿಗಳು ದೇಹದ ನಾನಾ ಭಾಗಗಳಲ್ಲಿರುವ ನಾಳಯುಕ್ತರಸಗ್ರಂಥಿಗಳಿಗೂ ಗುಂಡಿಗೆಯ ಸ್ನಾಯುವೂ ಕೂಡಿ ಎಲ್ಲ ಅನೈಚ್ಛಿಕ ಮತ್ತು ಐಚ್ಛಿಕ ಸ್ನಾಯುಗಳಿಗೂ ಪೂರೈಕೆ ಆಗುತ್ತದೆ. ಇವುಗಳಲ್ಲಿ ಪಸರಿಸುವ ನರಪ್ರಚೋದನೆಯ ಫಲ ರಸಗ್ರಂಥಿಗಳ ಸ್ರವನ ಮತ್ತು ಸ್ನಾಯುಗಳ ಸಂಕೋಚನ. ಸ್ಪಷ್ಟವಾಗಿ ಕಾಣಬರುವಂಥ ದೈಹಿಕ ಚಲನೆಗಳು ಸಾಮಾನ್ಯವಾಗಿ ಐಚ್ಛಿಕ. ರಸಗ್ರಂಥಿಗಳ ಸ್ರವನವೂ ಜಠರ, ಕರುಳು, ಮೂತ್ರಕೋಶ ಅಪಧಮನಿಗಳು, ಗುಂಡಿಗೆ, ಶ್ವಾಸನಾಳಗಳು ಮುಂತಾದ ಸ್ಥಳಗಳಲ್ಲಿ ಕಂಡುಬರುವ ಚಲನೆಯೂ ಐಚ್ಛಿಕ ನಿಯಂತ್ರಣಕ್ಕೆ ಹೊರಪಟ್ಟವು. ಅನೈಚ್ಛಿಕ ಕ್ರಿಯೆಗಳು ಜರಗುವಂತೆ ಮಾಡುವ ಕ್ರಿಯಾವಾಹಿಗಳನ್ನೆಲ್ಲ ಬೇರೆಯಾಗಿಯೇ ಗಣಿಸಿ ಅವಕ್ಕೆ ಒಟ್ಟಾಗಿ ಅನೈಚ್ಛಿಕನರಮಂಡಲ ಅಥವಾ ಜೀವಿ ತಾಧಿಷ್ಠಾನ ನರಮಂಡಲ (ಆಟೋನಾಮಿಕ್ ನರ್ವಸ್‍ಸಿಸ್ಟಮ್) ಎಂದು ಕರೆದಿದೆ. ಮಿಕ್ಕ ನರಗಳನ್ನೆಲ್ಲ ಮನೋಧಿಷ್ಠಾನ ನರಮಂಡಲಕ್ಕೆ (ಸೊಮ್ಯಾಟಿಕ್ ನರ್ವಸ್ ಸಿಸ್ಟಮ್) ಸೇರಿದವೆಂದು ಗಣಿಸಲಾಗಿದೆ. ಎಲ್ಲ ಅನೈಚ್ಛಿಕ ಕ್ರಿಯೆಗಳೂ ಪ್ರಥಮವಾಗಿ ಮಿದುಳು ಮತ್ತು ಮಿದುಳು ಬಳ್ಳಿಯಲ್ಲಿರುವ ಕ್ರಿಯಾತ್ಮಕ ನರಕೋಶಗಳ ಪ್ರತಿಕ್ರಿಯೆಯ ಪರಿಣಾಮವೇ ಆದರೂ ಕ್ರಿಯಾತ್ಮಕ ಅಂತ್ಯಾಂಗಗಳಿಗೆ (ಅನೈಚ್ಛಿಕ ಸ್ನಾಯುಗಳಿಗೆ ಮತ್ತು ನಾಳಯುಕ್ತ ರಸಗ್ರಂಥಿಗಳಿಗೆ) ಅಂತಿಮವಾಗಿ ಒದಗುವ ನರಪ್ರಚೋದನೆ ನರಗ್ರಂಥಿಗಳಲ್ಲಿರುವ ಕೋಶಗಳಲ್ಲಿ ಜನಿಸಿದುದು. ಈ ನರಗ್ರಂಥಿಗಳನ್ನೆಲ್ಲ ಅನೈಚ್ಛಿಕ ನರಗ್ರಂಥಿಗಳೆಂದು (ಆಟೊನಾಮಿಕ್ ಗ್ಯಾನ್‍ಗ್ಲಿಯ) ಕರೆದಿದೆ. ಅಂದರೆ ಅನೈಚ್ಛಿಕ ಕ್ರಿಯಾವಾಹಿಯ ಮಾರ್ಗ ವಿಚ್ಛಿನ್ನವಾಗಿದ್ದು ಈ ಮಾರ್ಗದಲ್ಲಿ ನರಗ್ರಂಥಿಪೂರ್ವ ಭಾಗ ಮತ್ತು ನರಗ್ರಂಥಿ ಉತ್ತರಭಾಗ ಇರುವುವೆಂಬುದನ್ನು ಇಲ್ಲಿ ಗಮನಿಸಬೇಕು. ವಾಸ್ತವವಾಗಿ ಇವೆರಡು ಭಾಗಗಳೂ ಬೇರೆ ಬೇರೆ ನರತಂತುಗಳೇ. ಅನೈಚ್ಛಿಕ ನರಗ್ರಂಥಿಗಳು ದೇಹದಲ್ಲಿ ಮೂರು ನಿರ್ದಿಷ್ಟ ಸ್ಥಳಗಳಲ್ಲಿ ಕಂಡುಬರುತ್ತವೆ. ಕಶೇರುಕ ಕಂಬದ (ವರ್ಟಿಬ್ರಲ್ ಕಾಲಮ್) ಇಕ್ಕೆಲಗಳಲ್ಲಿ ಉದ್ದಕ್ಕೂ ಇರುವವು ಒಂದು ಗುಂಪು. ಇವು ನರತಂತುಗಳಿಂದ ಒಂದಕ್ಕೊಂದು ಸೇರಿಸಲ್ಪಟ್ಟು ಎರಡು ಕಡೆಯೂ ಒಂದೊಂದು ಸರಪಣಿಯಂತಿವೆ. ಇವಕ್ಕೆ ಸಂವೇದಕ ಸರಪಣಿ (ಸಿಂಪಥೆಟಿಕ್ ಚೇಯ್ನ್) ಎಂದು ಹೆಸರು. ಎರಡನೆಯ ಗುಂಪಿಗೆ ಸೇರಿದವು ಮಧ್ಯಾಂತರ ನರಗ್ರಂಥಿಗಳು (ಇಂಟರ್‍ಮೀಡಿಯಟ್ ಗ್ಯಾನ್‍ಗ್ಲಿಯ). ಇವು ದೇಹಮಧ್ಯಗೆರೆಗೆ ಇನ್ನೂ ಸ್ವಲ್ಪ ದೂರದಲ್ಲಿ ಉದರದ ಹಿಂಭಿತ್ತಿಗೆ ಅಂಟಿಕೊಂಡಿವೆ. ಮೂರನೆಯ ಗುಂಪಿನವು ಅಂತ್ಯನರಗ್ರಂಥಿಗಳು (ಟರ್ಮಿನಲ್ ಗ್ಯಾನ್‍ಗ್ಲಿಯ). ಇವು ಅನೈಚ್ಫಿಕ ಕ್ರಿಯಾವಾಹಿನರಗಳು ಪೂರೈಕೆ ಆಗುವ ಅಂಗಗಳಲ್ಲೆ ಸಾಮಾನ್ಯ ಹುದುಗಿಕೊಂಡಿರುತ್ತವೆ.

ಅನೈಚ್ಛಿಕ ಕ್ರಿಯಾವಾಹಿಯ ನರಗ್ರಂಥಿಪೂರ್ವಭಾಗ ಮಿದುಳು ಮತ್ತು ಮಿದುಳುಬಳ್ಳಿಯಲ್ಲಿ ಇರುವ ನಿರ್ದಿಷ್ಟ ಕ್ರಿಯಾತ್ಮಕ ನರಕೋಶದ ಅಪವಾಹಿಯಾಗಿ ಹೊರಬಿದ್ದು ಮೇಲೆ ಹೇಳಿರುವ ಮೂರು ನರಗ್ರಂಥಿ ಗುಂಪುಗಳ ಪೈಕಿ ಒಂದು ನರಗ್ರಂಥಿಯನ್ನು ಸೇರಿ ಅಲ್ಲಿಯ ನರಕೋಶಗಳ ಸೆರೆಯಲ್ಲಿ ಅಂತ್ಯವಾಗುವುದು. ಈ ಕೋಶಗಳ ಅಪವಾಹಿತಂತುಗಳೂ ನರಗ್ರಂಥಿಯಿಂದ ಹೊರಹೊರಟು ಅನೈಚ್ಛಿಕ ಕ್ರಿಯಾವಾಹಿಯ ನರಗ್ರಂಥಿ ಉತ್ತರ ಭಾಗವಾಗಿ ಮುಂದುವರಿದು ಕ್ರಿಯಾಂಗಕ್ಕೆ ಪೂರೈಕೆ ಆಗುತ್ತದೆ. ಅನೈಚ್ಛಿಕ ಕ್ರಿಯಾವಾಹಿ ಮಾರ್ಗಗಳಲ್ಲೆಲ್ಲ ಇಂಥ ಏರ್ಪಾಡು ಕಡ್ಡಾಯವಾಗಿರುವುದು ಕಂಡುಬರುವುದು. ಈ ಏರ್ಪಾಡಿನಂತೆ ಅನೈಚ್ಛಿಕ ಕ್ರಿಯಾವಾಹಿ ಮಾರ್ಗದಲ್ಲಿ ಒಂದು ನರಗ್ರಂಥಿ ಇರಲೇಬೇಕು. ಕೆಲವು ಮಾರ್ಗಗಳಲ್ಲಿ ಎರಡೊ ಮೂರೊ ನರಗ್ರಂಥಿಗಳು ಇರುವುದೂ ಉಂಟು. ಆದರೆ ಅಂಥ ಕ್ರಿಯಾವಾಹಿ ವಿಚ್ಫಿನ್ನವಾಗುವುದು ಕೊನೆಯ ನರಗ್ರಂಥಿಯಲ್ಲಿ ಮಾತ್ರ. ಅದರ ಹಿಂದಿನ ನರಗ್ರಂಥಿ ಅಥವಾ ಗ್ರಂಥಿಗಳಲ್ಲಿ ಗ್ರಂಥಿಪೂರ್ವ ಭಾಗ ಅಂತ್ಯಗೊಳ್ಳದೆ ಕುಂದಿಲ್ಲದೆ (ಇನ್‍ಟ್ಯಾಕ್ಟ್) ಹಾಯ್ದು ಹೊರಬರುತ್ತದೆ. ಇನ್ನೊಂದು ಗಮನಾರ್ಹ ಅಂಶವೆಂದರೆ ನರಗ್ರಂಥಿ ಪೂರ್ವಭಾಗ ಯಾವಾಗಲೂ ಬಿಳಿನರತಂತುಗಳಿಂದಾಗಿರುವುದು ಮತ್ತು ನರಗ್ರಂಥಿ ಉತ್ತರಭಾಗ ಭಸ್ಮವರ್ಣತಂತುಗಳಿಂದಾಗಿರುವುದು.

ಅನೈಚ್ಛಿಕ ನರಮಂಡಲವು 'ಸಂವೇದಕ (ಸಿಂಪಥೆಟಿಕ್) ಮತ್ತು 'ಅನುಸಂವೇದಕ (ಪ್ಯಾರಾ ಸಿಂಪಥೆಟಿಕ್) ಎಂಬ ಎರಡು ವಿಭಾಗಗಳಾಗಿ ವಿನ್ಯಾಸಗೊಂಡಿದೆ. ಅನುಸಂವೇದಕ ವಿಭಾಗಕ್ಕೆ ಕಪಾಲ ನರಗಳ ಅನೈಚ್ಛಿಕ ಕ್ರಿಯಾವಾಹಿಗಳೂ (ಅಂದರೆ 3,7,9 ಮತ್ತು 10ನೆಯ ನರಗಳದ್ದು) ಮತ್ತು ಮುಂಡನರಗಳಲ್ಲಿ ಮೇಲಿನಿಂದ ಎಣಿಸಿದಂತೆ 26,27 ಬಹುಶಃ 28ನೆಯ ಜೊತೆಯೂ ಸೇರಿವೆ. ಇವೆಲ್ಲವೂ ನರಗ್ರಂಥಿಪೂರ್ವ ಭಾಗಗಳೇ. ಮುಂಡನರಗಳ ಅನೈಚ್ಛಿಕ ಕ್ರಿಯಾವಾಹಿಗಳು ಇಕ್ಕೆಲಗಳಲ್ಲೂ ಪೆಲ್ವಿಕ್ ನವ್ರ್ಸ್ ಎಂಬ ನರಗಳಾಗಿ ಕಿಬ್ಬೊಟ್ಟೆಯಲ್ಲಿ ಮುಂದುವರಿದು ಮೂತ್ರಕೋಶ ಮತ್ತು ಗುದನಾಳಗಳು ತಗಲಿಕೊಂಡಿರುವ ಸ್ಥಳದಲ್ಲಿ ಹುದುಗಿರುವ ಹೈಪೊಗ್ಯಾಸ್ಟ್ರಿಕ್ ನರಗ್ರಂಥಿಯೆಂಬ ಅಂತ್ಯನರಗ್ರಂಥಿಯಲ್ಲಿ ಕೊನೆಗೊಳ್ಳುತ್ತವೆ. ಅದರಿಂದ ಹೊರಟ ನರಗ್ರಂಥ್ಯೋತ್ತರ ಭಾಗಗಳು ಸನಿಹದಲ್ಲೇ ಇರುವ ಗುದನಾಳ ಹಾಗೂ ಮೂತ್ರಕೋಶಗಳ ಅನೈಚ್ಛಿಕ ಸ್ನಾಯುಗಳಿಗೆ ಪೂರೈಕೆ ಆಗುತ್ತವೆ. ಕಪಾಲನರಗಳೂ ಹೀಗೆಯೇ ನಿರ್ದಿಷ್ಟ ಅಂತ್ಯನರಗ್ರಂಥಿಯಲ್ಲಿ ವಿಚ್ಛಿನ್ನವಾಗಿ ನರಗ್ರಂಥ್ಯೋತ್ತರ ಭಾಗಗಳು ನೆರೆಯಲ್ಲೆ ಇರುವ ಅನೈಚ್ಛಿಕ ಕ್ರಿಯಾಂಗಗಳಿಗೆ ಪೂರೈಕೆ ಆಗುತ್ತವೆ. ಅನುಸಂವೇದಕ ನರಗಳು ಎಲ್ಲವೂ ಹೀಗೆ ಅಂತ್ಯನರಗ್ರಂಥಿಗಳಲ್ಲಿ ವಿಚ್ಛಿನ್ನವಾಗುವುದು ಮಾಮೂಲು. ಸಂವೇದಕ ವಿಭಾಗದ ನರಗ್ರಂಥಿಪೂರ್ವಭಾಗಗಳು 10ರಿಂದ 24ನೆಯ ಮುಂಡನರಗಳ ಮುಮ್ಮೂಲದ ಮೂಲಕ ಹೊರಬಿದ್ದ ವಿದುಳುಬಳ್ಳಿಯ ನಿರ್ದಿಷ್ಟ ಕ್ರಿಯಾತ್ಮಕ ನರಕೋಶಗಳ ಅಪವಾಹಿಗಳು. ಶೀಘ್ರದಲ್ಲೆ ಇವು ಮುಂಡನರದಿಂದ ಬೇರ್ಪಟ್ಟು ಅದೇ ನೇರದಲ್ಲಿರುವ ಸರಪಣಿ ನರಗ್ರಂಥಿಯನ್ನು ಸೇರುತ್ತವೆ. ಈ ಸೇರ್ಪಡೆ ತುಕ್ಕಡಕ್ಕೆ ಬಿಳೀ ಸಂಪರ್ಕಶಾಖೆ (ವೈಟ್ ರೇಮಸ್ ಕಮ್ಯೂನಿಕ್ಯಾನ್‍ಟಿಸ್)ಎಂದು ಹೆಸರು. ಕೆಲವು ನರಗ್ರಂಥಿಪೂರ್ವ ತಂತುಗಳು ಇಲ್ಲೆ ಅಂತ್ಯವಾಗಬಹುದು, ಇಲ್ಲವೇ ಸರಪಣಿಯ ಮೂಲಕ ಮೇಲಿನ ಅಥವಾ ಕೆಳಗಿನ ಒಂದೆರಡು ನರಗ್ರಂಥಿಗಳಲ್ಲಿ ಅಂತ್ಯವಾಗಬಹುದು. ಅವುಗಳಿಗೆ ಅನುಗುಣವಾದ ನರಗ್ರಂಥ್ಯೋತ್ತರ ತಂತುಗಳು ಹೊರಬಂದು ಪುನಃ ಮುಂಡನರವನ್ನೇ ಸೇರಿ ಅದರೊಡನೆಯೇ ಕ್ರಮಿಸುತ್ತ ಅದು ಪೂರೈಕೆ ಆಗುವ ಭಾಗಗಳಲ್ಲಿರುವ ಅನೈಚ್ಛಿಕ ಕ್ರಿಯಾಂಗಗಳನ್ನು ಪೂರೈಸುತ್ತವೆ. ಹೀಗೆ ಪುನಃ ಮುಂಡನರಕ್ಕೆ ಸೇರಿಕೊಳ್ಳುವ ತುಕ್ಕಡಕ್ಕೆ ಭಸ್ಮ ವರ್ಣದ ಸಂಪರ್ಕ ಶಾಖೆ (ಗ್ರೆ ರೇಮಸ್ ಕಮ್ಯೂನಿಕ್ಯಾನ್‍ಟಿಸ್) ಎಂದು ಹೆಸರು. ಬಿಳೀ ಸಂಪರ್ಕ ಶಾಖೆಗಳಲ್ಲಿರುವ ಹೊರಬಂದು ಕೂಡಿಕೊಂಡು 2-3 ಸ್ಪ್ಯ್ಲಾನ್‍ಕ್ನಿಕ್ ನರಗಳಾಗುತ್ತವೆ. ಇವು ಎಲ್ಲ 13 ಅಥವಾ 14ನೆಯ ಮುಂಡನರದಿಂದ 19-20ನೆಯ ಮುಂಡನರದವರೆಗೆ ಅವುಗಳ ಮುಮ್ಮೂಲಕ ಪ್ರಥಮವಾಗಿ ಹೊರಬಂದ ನರತಂತುಗಳು. ಸ್ಪ್ಲ್ಯಾನ್‍ಕ್ಲಿಕ್ ನರಗಳು ಇನ್ನೂ ನರಗ್ರಂಥಿಪೂರ್ವ ಭಾಗಗಳಾದ್ದರಿಂದ ಬಿಳೀ ನರಗಳೇ ಆಗಿವೆ. ಇವು ಮಧ್ಯಾಂತರ ನರಗ್ರಂಥಿಗಳಾದ ಸೀಲಿಯಕ್ ಮತ್ತು ಸುಪೀರಿಯರ್ ಮಿಸೆಂಟೆರಿಕ್ ನರಗ್ರಂಥಿಗಳಲ್ಲಿ, ಬಹುಶಃ ಇನ್‍ಫೀರಿಯರ್ ಮಿಸೆಂಟೆರಿಕ್ ನರಗ್ರಂಥಿಯಲ್ಲೂ ಅಂತ್ಯಗೊಳ್ಳುತ್ತದೆ. ಅವುಗಳಿಂದ ಹೊರಡುವ ನರಗ್ರಂಥ್ಯೋತ್ತರ ಭಾಗಗಳು- ಭಸ್ಮವರ್ಣದ ನರತಂತುಗಳು-ಉದರದಲ್ಲಿರುವ ಸ್ನಾಯುಯುಕ್ತ ಮತ್ತು ಗ್ರಂಥಿಯುಕ್ತ ಅಂಗಗಳಿಗೆ ಪೂರೈಕೆ ಆಗುತ್ತದೆ. ಹೀಗೆ ಸಂವೇದಕ ನರಗಳಲ್ಲಿ ವಿಚ್ಛಿನ್ನತೆ ಸರಪಣಿನರಗ್ರಂಥಿಗಳಲ್ಲಿ ಅಥವಾ ಮಧ್ಯಾಂತರ ನರಗ್ರಂಥಿಗಳಲ್ಲಿ ಕಂಡುಬರುವುದೇ ವಾಡಿಕೆ. ಸಂವೇದಕ ನರ ಅಂತಿಮ ನರಗ್ರಂಥಿಯಲ್ಲಿ ವಿಚ್ಛಿನ್ನವಾಗುವುದು ತೀರ ಅಸಾಧಾರಣ.

ಸಂವೇದಕ ಮತ್ತು ಅನುಸಂವೇದಕ ಎರಡು ವಿಧದ ನರಗಳೂ ಎಲ್ಲ ಅನೈಚ್ಛಿಕ ಕ್ರಿಯಾಂಗಗಳಿಗೂ ಸಾಮಾನ್ಯವಾಗಿ ಪೂರೈಕೆ ಆಗುತ್ತವೆ. ಯಾವುದೊ ಒಂದೇ ಬಗೆಯ ನರಪೂರೈಕೆ ಆಗುವುದು ಅಪರೂಪ. ದೇಹದಲ್ಲಿ ಎಲ್ಲೊ ಹಲವುಸ್ಥಳಗಳಲ್ಲಿ ಮಾತ್ರ ದ್ವಂದ್ವ ನರಪೂರೈಕೆ ಇರುವ ಅಂಗಗಳಲ್ಲಿ ಸಂವೇದಕ ಮತ್ತು ಅನುಸಂವೇದಕ ನರಗಳು ಒಂದಕ್ಕೊಂದು ವ್ಯತಿರಿಕ್ತ ಪ್ರತಿಕ್ರಿಯೆಯನ್ನು ಉಂಟುಮಾಡುವಂತಿದೆ. ಅವುಗಳಲ್ಲಿ ಒಂದು ಯಾವ ಕ್ರಿಯಾಂಗದಲ್ಲಿಯಾದರೂ ಉದ್ರೇಕದಿಂದ ಚಟುವಟಿಕೆಯನ್ನು ಹೆಚ್ಚಿಸಿದರೆ ಇನ್ನೊಂದು ಅದೇ ಅಂಗದ ಚಟುವಟಿಕೆಯನ್ನು ಶಮನ ಮಾಡುತ್ತದೆ. ಕುದುರೆಯ ಎರಡು ಲಗಾಮುಗಳಂತೆ ಈ ಜೋಡಿಹತೋಟಿ ಇರುವುದರಿಂದ ಅಂಗಗಳ ಕ್ರಿಯಾಸಾಧನೆಯನ್ನು ಅಗತ್ಯಕ್ಕೆ ಅನುಸಾರವಾಗಿ ನಿಯಮಿತಗೊಳಿಸಲು ಸುಲಭವಾಗಿದೆ. ಉದಾಹರಣೆಗೆ ಗುಂಡಿಗೆಯನ್ನು ತೆಗೆದುಕೊಳ್ಳಬಹುದು. ಗುಂಡಿಗೆಗೆ ಒದಗುವ ಅನುಸಂವೇದಕನರ ವೇಗಸ್ ನರದ ಮೂಲಕ ಬಂದೊದಗಿರುವುದು. ಇದು ಗುಂಡಿಗೆಗೆ ಒಯ್ಯುವ ನರಪ್ರಚೋದನೆಯಿಂದ ಗುಂಡಿಗೆ ಮಿಡಿತದ ದರ ಕಡಿಮೆ ಆಗುತ್ತದೆ. ಅಂದರೆ ಗುಂಡಿಗೆಯ ವಿಚಾರದಲ್ಲಿ ಅನುಸಂವೇದಕ ನರದ ಕ್ರಿಯೆ ಶಮನ (ಇನ್‍ಹಿಬಿಷನ್). ಗುಂಡಿಗೆಗೆ ಒದಗುವ ಸಂವೇದಕ ನರಗಳು ಗುಂಡಿಗೆಗೆ ಒಯ್ಯುವ ನರಪ್ರಚೋದನೆಯಿಂದ ಮೇಲೆ ಹೇಳಿದ ಕ್ರಿಯೆಗೆ ವ್ಯತಿರಿಕ್ತವಾದ ಪರಿಣಾಮ ಕಂಡುಬರುತ್ತದೆ. ಗುಂಡಿಗೆ ಉದ್ರೇಕಿಸಲ್ಪಟ್ಟು ಅದರ ಮಿಡಿತದ ದರ ಹೆಚ್ಚುತ್ತದೆ (ಆ್ಯಕ್ಸಲರೇಷನ್). ಗುಂಡಿಗೆಯ ಮಿಡಿತದ ದರ, ವ್ಯಾಯಾಮ ಅಥವಾ ಶ್ರಮ ಕೆಲಸಗಳನ್ನು ಮಾಡುತ್ತಿರುವಾಗ ಮಾಮೂಲಿಗಿಂತ ಅಧಿಕವಾಗಿರುವುದು ಎಲ್ಲರಿಗೂ ತಿಳಿದಿದೆ. ಈ ಹೆಚ್ಚಳ ಅನುಸಂವೇದಕ ನರದ ಮೂಲಕ ಗುಂಡಿಗೆಗೆ ಒದಗುವ ಶಾಮಕನರ ಪ್ರಚೋದನೆಗಳನ್ನು ಸ್ವಲ್ಪವಾಗಿ ಅಥವಾ ಪೂರ್ಣವಾಗಿ ತಡೆಹಿಡಿಯುವುದರಿಂದ ಕಾರ್ಯಗತವಾಗಬಹುದು. ಇಲ್ಲದೇ ಇದ್ದರೆ ಸಂವೇದಕ ನರದ ಮೂಲಕ ಒದಗುವ ಪ್ರಚೋದಕ ನರಪ್ರಚೋದನೆಗಳನ್ನು ಹೆಚ್ಚಿಸಿ ಗುಂಡಿಗೆಯ ಮಿಡಿತದ ವೇಗವನ್ನು ಹೆಚ್ಚಿಸಬಹುದು. ಯಾವುದೇ ಒಂದು ಹತೋಟಿಯಿಂದ ಅಗತ್ಯಕ್ಕೆ ತಕ್ಕಷ್ಟು ವೇಗವೃದ್ಧಿಯನ್ನು ಉಂಟುಮಾಡಬಹುದಾದರೂ ದೇಹದಲ್ಲಿ ನೈಸರ್ಗಿಕವಾಗಿ ಕಾಣಬರುವ ಏರ್ಪಾಡು ಎರಡು ಬಗೆ ನರಪ್ರಚೋದನೆಗಳ ಸಮಕಾಲಿಕವಾದ ನಿಯಂತ್ರಣ. ಈ ರೀತಿಯಿಂದ ಎಷ್ಟು ಅವಶ್ಯವೋ ಅಷ್ಟು ವೇಗವಾಗಿ ಗುಂಡಿಗೆಯ ಮಿಡಿತದ ದರ ಇರುವಂತೆ ಶೀಘ್ರವಾಗಿ ನಿಯಂತ್ರಿಸಬಹುದು. ದೇಹದಲ್ಲಿ ಎಲ್ಲ ಅಪಧಮನಿಗಳಿಗೂ ಸ್ವೇದಗ್ರಂಥಿಗಳಿಗೂ ಸಾಮಾನ್ಯವಾಗಿ ಸಂವೇದಕ ನರಪೂರೈಕೆ ಮಾತ್ರ ಆಗುತ್ತದೆ. ಬಹುಶಃ ಮೂತ್ರಕೋಶದ ಉಂಗುರ ಸ್ನಾಯುವಿಗೂ ಹೀಗೆಯೇ. ಇದಕ್ಕೆ ನರಗಳಿಲ್ಲ. ಜಠರ, ಮೇದೋಜೀರಕಾಂಗ ಇವುಗಳಿಗೂ ಕಣ್ಣಿನ ಪಾಪೆ ಮತ್ತು ಮೂತ್ರಕೋಶಗಳ ಸ್ನಾಯುಗಳಿಗೂ ಅನುಸಂವೇದಕ ನರ ಮಾತ್ರ ಪೂರೈಕೆ ಆಗುತ್ತದೆ ಎನ್ನಲಾಗಿದೆ. ಈ ಸ್ಥಳಗಳಲ್ಲಿ ಸಂವೇದಕ ನರಗಳ ಪೂರೈಕೆ ಆದರೂ ಬಹುಶಃ ಅವುಗಳ ಪ್ರಭಾವ ಬಲು ಕಡಿಮೆ ಆಗಿರುವುದರಿಂದ ಕಾರ್ಯತಃ ಅನುಸಂವೇದಕ ನರ ಪೂರೈಕೆ ಮಾತ್ರ ಇರುವಂತಿದೆ.

ಮುಂಡರಿನರದ ಇತರ ಕ್ರಿಯಾವಾಹಿಗಳು ಐಚ್ಛಿಕ ಸ್ನಾಯುಗಳಿಗೆ ಪೂರೈಕೆ ಆಗುತ್ತವೆ. ಇವುಗಳಿಂದ ಸ್ನಾಯುಗಳಿಗೆ ಒದಗುವ ಎಲ್ಲ ನರಪ್ರಚೋದನೆಗಳೂ ಸ್ನಾಯುವನ್ನು ಸಂಕೋಚಿಸುವಂಥವು. ಐಚ್ಛಿಕ ಸ್ನಾಯುಗಳಿಗೆ ಶಾಮಕ ಮತ್ತು ಪ್ರಚೋದಕ ಎಂಬ ಎರಡು ರೀತಿಯ ನರಪ್ರಚೋದನೆಗಳಿಲ್ಲ. ಅಂತೆಯೆ ಅವುಗಳಿಗೆ ಯಾವ ಶಾಮಕನರಗಳೂ ಇಲ್ಲ. ಪ್ರಚೋದನೆ ಮುಂದುವರಿಯದಿದ್ದರೆ ತಾನಾಗಿಯೆ ಸ್ನಾಯು ಸಂಕೋಚನ ಅಂತ್ಯವಾಗಿ ಸ್ನಾಯು ಸಡಿಲಗೊಳ್ಳುತ್ತದೆ. ಅಂದರೆ ಐಚ್ಛಿಕ ಕ್ರಿಯೆಯ ನಿಯಂತ್ರಣಕ್ಕೆ ದ್ವಂದ್ವ ಹತೋಟಿ ಇಲ್ಲವೆಂದಾಯಿತು.

ಈ ರೀತಿಯಲ್ಲಿ ಜ್ಞಾನವಾಹಿ ನರತಂತುಗಳು ದೇಹದ ವಿವಿಧ ಭಾಗಗಳಲ್ಲಿರುವ ಜ್ಞಾನಾತ್ಮಕ ಅಂತ್ಯಾಂಗಗಳನ್ನು ಮಿದುಳುಬಳ್ಳಿಯಲ್ಲಿ ಮತ್ತು ಮಿದುಳಿನಲ್ಲಿ ನಿರ್ದಿಷ್ಟ ಜ್ಞಾನಾತ್ಮಕ ಪ್ರದೇಶಗಳಿಗೂ, ಇವುಗಳಿಗೆ ಅನುಗುಣವಾದ ಕ್ರಿಯಾತ್ಮಕ ಪ್ರದೇಶಗಳನ್ನು ಕ್ರಿಯಾವಾಹಿ ನರತಂತುಗಳು ದೇಹದ ವಿವಿಧ ಭಾಗಗಳಲ್ಲಿರುವ ಕ್ರಿಯಾತ್ಮಕ ಅಂತ್ಯಾಂಗಗಳಾದ ಐಚ್ಛಿಕ ಮತ್ತು ಅನೈಚ್ಛಿಕ ಸ್ನಾಯುಗಳು ಹಾಗೂ ನಾಳಯುಕ್ತ ರಸಗ್ರಂಥಿಗಳಿಗೂ ಸಂಪರ್ಕಿಸುವ ಸಾಧನಗಳಾಗಿವೆ. ಇಂಥ ಸಂಪರ್ಕಗಳಿಂದ ದೇಹದ ವಿವಿಧ ಭಾಗಗಳು ಮಿದುಳು ಮತ್ತು ಮಿದುಳುಬಳ್ಳಿಯಲ್ಲಿ ಅವುಗಳಿಗೇ ಮೀಸಲಾಗಿರುವ ಬೇರೆಬೇರೆ ಭಾಗಗಳೊಡನೆ ನಿಕಟ ಸಂಬಂಧ ಹೊಂದಿವೆ. ತತ್ಫಲವಾಗಿ ದೇಹಕಾರ್ಯಗಳ ಸಮನ್ವಯ ಸಾಧ್ಯವಾಗಿದೆ. ಇದೇ ನರಗಳ ಮತ್ತು ನರಮಂಡಲದ ವಿಶಿಷ್ಟ ಕಾರ್ಯಭಾರ.

ಹೆಚ್ಚಿನ ಓದಿಗೆ

[ಬದಲಾಯಿಸಿ]
  • Nervous system William E. Skaggs, Scholarpedia
  • Bear, M. F.; B. W. Connors; M. A. Paradiso (2006). Neuroscience: Exploring the Brain (3rd ed.). Philadelphia: Lippincott. ISBN 0-7817-6003-8.
  • Binder, Marc D.; Hirokawa, Nobutaka; Windhorst, Uwe, eds. (2009). Encyclopedia of Neuroscience. Springer. ISBN 978-3-540-23735-8.
  • Kandel, ER; Schwartz JH; Jessell TM (2012). Principles of Neural Science (5th ed.). New York: McGraw-Hill. ISBN 0-8385-7701-6.
  • Squire, L. et al. (2012). Fundamental Neuroscience, 4th edition. Academic Press; ISBN 0-12-660303-0
  • Andreasen, Nancy C. (March 4, 2004). Brave New Brain: Conquering Mental Illness in the Era of the Genome. Oxford University Press. ISBN 978-0-19-514509-0. Archived from the original on February 24, 2007. {{cite book}}: Unknown parameter |dead-url= ignored (help)
  • Damasio, A. R. (1994). Descartes' Error: Emotion, Reason, and the Human Brain. New York, Avon Books. ISBN 0-399-13894-3 (Hardcover) ISBN 0-380-72647-5 (Paperback)
  • Gardner, H. (1976). The Shattered Mind: The Person After Brain Damage. New York, Vintage Books, 1976 ISBN 0-394-71946-8
  • Goldstein, K. (2000). The Organism. New York, Zone Books. ISBN 0-942299-96-5 (Hardcover) ISBN 0-942299-97-3 (Paperback)
  • Lauwereyns, Jan (February 2010). The Anatomy of Bias: How Neural Circuits Weigh the Options. Cambridge, Massachusetts: The MIT Press. ISBN 0-262-12310-X.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: