ಜಲಾಂತರ್ಗಾಮಿ ಸಿಡಿಮದ್ದು
ಜಲಾಂತರ್ಗಾಮಿ ಸಿಡಿಮದ್ದು - ಸಮುದ್ರದೊಳಗೆ ಸ್ಫೋಟಿಸಿದ ಸಿಡಿಮದ್ದು (ಮೈನ್). ನೌಕಾಯುದ್ಧದಲ್ಲಿ ಇದೊಂದು ಪ್ರಚಂಡ ಆಯುಧ. ಶತ್ರುಗಳ ಹಡಗುಗಳನ್ನು ಜಲಾಂತರ್ಗಾಮಿಗಳನ್ನೂ ನಾಶಮಾಡಲು ಇದರ ಬಳಕೆ ಉಂಟು.
ಸಿಡಿಮದ್ದು ಎಂಬುದು ಟಿ ಎನ್ ಟಿ ಮೊದಲಾದ ಸ್ಫೋಟಕ ವಸ್ತುಗಳನ್ನು ತುಂಬಿರುವ ಕೊಳಗದ ಆಕಾರದ ಅಥವಾ ಗೋಳಾಕಾರದ ಉಕ್ಕಿನ ಪೆಟ್ಟಿಗೆ ಇಲ್ಲವೆ ಪಾತ್ರೆ. ಗಾತ್ರ ದೊಡ್ಡದು. ಪೆಟ್ಟಿಗೆಯ ತೂಕ 500-1,850 ಪೌಂಡುಗಳು. ಸಿಡಿಮದ್ದಿನ ತೂಕ 200-1,030 ಪೌಂಡುಗಳಷ್ಟು. ಅದಕ್ಕೆ ಬೆಂಕಿಹೊತ್ತಿಸಲು ವಿದ್ಯುತ್ ಅಥವಾ ಯಾಂತ್ರಿಕ ಸಲಕರಣೆಗಳು ಪೆಟ್ಟಿಗೆಯೊಳಗೇ ಅಳವಡಿಸಲ್ಪಟ್ಟಿರುತ್ತವೆ. ಶತ್ರು ನೌಕೆ ಅದಕ್ಕೆ ತಗಲಿದಾಗ ಸಿಡಿಮದ್ದು ಗಟ್ಟಿ ಶಬ್ದದೊಡನೆ ಸ್ಫೋಟಿಸಿ ಆ ಹಡಗನ್ನು ಮುಳುಗಿಸುತ್ತದೆ. ಅಥವಾ ಅದಕ್ಕೆ ಬಹಳ ಹಾನಿ ಮಾಡುತ್ತದೆ. ಹಡಗಿನ ಭಾಗಗಳಲ್ಲೆಲ್ಲ ಅದರ ತಳ ಅತ್ಯಂತ ದುರ್ಬಲಸ್ಥಾನ. ಟಾರ್ಪೆಡೋ ಅಥವಾ ಷೆಲ್ ಗುಂಡುಗಳು ಹಡಗಿನ ಪಕ್ಕಕ್ಕೆ ಹೊಡೆದಾಗ ಅದಕ್ಕೆ ಧಕ್ಕೆಯಾದರೂ ಅದು ಉಳಿಯಬಹುದು. ಆದರೆ ಹಡಗಿನ ತಳಕ್ಕೆ ಹೊಡೆಯುವ ಸಿಡಿಮದ್ದು ಸ್ಫೋಟದ ಆಘಾತ ಅದನ್ನು ಕೂಡಲೇ ಮುಳುಗಿಸುತ್ತದೆ.
ಶತ್ರುಗಳ ದ್ವೀಪಗಳ ಮಧ್ಯದಲ್ಲಿರುವ ಇಕ್ಕಟ್ಟಾದ ಜಲಮಾರ್ಗಗಳು, ಬಂದರಿನ ಪ್ರವೇಶದ್ವಾರಗಳು, ಶತ್ರುಪಡೆಗಳು ಸಾಮಾನ್ಯವಾಗಿ ಹೋಗುವ ನೌಕಾಪಥಗಳು ಇವುಗಳಲ್ಲಿ ಮುಖ್ಯವಾಗಿ ಸಿಡಿಮದ್ದುಗಳನ್ನು ಸ್ಥಾಪಿಸಲಾಗುತ್ತದೆ. ರೇವು, ಕರಾವಳಿ, ವ್ಯಾಪಾರಿ ಹಡಗುಗಳ ವಾಣಿಜ್ಯ ಮಾರ್ಗಗಳಲ್ಲಿ ದಾಳಿಮಾಡಲು ಶತ್ರುಹಡಗುಗಳು ಹೋಗದಂತೆ ಅಲ್ಲಿ ಸಿಡಿಮದ್ದುಗಳನ್ನು ನೆಡಲಾಗುತ್ತದೆ. ಅವನ್ನು ನೆಡುವುದಕ್ಕಾಗಿಯೇ ವಿಶೇಷ ಬಗೆಯ ಹಡಗು, ವಿಮಾನಗಳಿವೆ.
ಸಿಡಿಮದ್ದುಗಳಲ್ಲಿ ಬಗೆಗಳು
[ಬದಲಾಯಿಸಿ]ಸಿಡಿಮದ್ದುಗಳಲ್ಲಿ ನಾನಾ ಬಗೆಗಳುಂಟು; ಸಮುದ್ರ ತಳದಲ್ಲಿ ಸ್ಥಿರವಾಗಿ ಸ್ಥಾಪಿಸಲ್ಪಡುವಂಥವು. ಹೊರಜಿಗಳಿಂದ ಸಮುದ್ರತಳದ ಲಂಗರಿಗೆ ಬಂಧಿಸಲ್ಪಟ್ಟು ಸಮುದ್ರದ ಮೇಲ್ಮೈಯ ಕೆಳಗೆ ಕಣ್ಣಿಗೆ ಕಾಣಿಸದಂತೆ ನಿಂತಿರುವಂಥವು. ಲೋಹದ ಬುರುಡೆಗೆ ಆಂಟೆನಾ ಎಂಬ ತಾಮ್ರದ ಉದ್ದ ತಂತಿಗಳಿಂದ ಸೇರಿಸಲ್ಪಟ್ಟೂ ನೀರಿನೊಳಗೆ ತೇಲುವಂಥವು. ಇತ್ಯಾದಿ ಹಗುರವಾದ ಸಿಡಿಗುಂಡುಗಳು ಶತ್ರು ಹಡಗುಗಳು ಹೋಗುವ ಮಾರ್ಗಗಳಲ್ಲಿ ಪ್ರವಾಹದಲ್ಲಿ ತೂರಿಕೊಂಡು ಹೋಗುವಂತೆ ಏರ್ಪಡಿಸಲ್ಪಡುತ್ತವೆ. ಕೆಲವು ಜೋಡಿ ಸಿಡಿಗುಂಡುಗಳು 100 ಉದ್ದದ ತಂತಿಯಿಂದ ಸಂಯೋಜಿಸಲ್ಪಟ್ಟೂ ಪ್ರವಾಹದಲ್ಲಿ ಜೊತೆಯಾಗಿ ತೇಲುತ್ತ ಹೋಗುತ್ತವೆ. ಅವು ಕೆಲವು ಗಂಟೆಗಳ ಬಳಿಕ ಅಪಾಯರಹಿತವಾಗುತ್ತವೆ. ಇಂಥವು ಬಹು ದೂರ ಹೋದಾಗ ಮಿತ್ರರಾಷ್ಟ್ರಗಳಿಗೆ ಕೆಡುಕು ಮಾಡುವುದಿಲ್ಲ. ಕೆಲವು ಸಿಡಿಮದ್ದುಗಳು ಜಲಾಂತರ್ಗಾಮಿಗಳ ಮೇಲೆ ನಿಶ್ಚಿತ ಆಳಗಳಲ್ಲಿ ಸ್ಫೋಟಿಸುತ್ತವೆ.
ಒತ್ತಡದ ಸಿಡಿಮದ್ದು
[ಬದಲಾಯಿಸಿ]ಇದು ಸ್ಫೋಟಿಸಲು ಹಡಗು ಇದಕ್ಕೆ ತಗಲಬೇಕಾಗಿಲ್ಲ ಇದರ ಮೇಲೆ ವಾಯು ತುಂಬಿದ ಒಂದು ರಬ್ಬರ್ ಚೀಲ ಉಂಟು. ಹಡಗು ಈ ಸಿಡಿಮದ್ದು ಇರುವ ನೀರಿನ ಮೇಲೆ ಹೋಗುವಾಗ ಹಡಗಿಗೂ ಚೀಲಕ್ಕೂ ಮಧ್ಯದಲ್ಲಿರುವ ನೀರಿನ ಒತ್ತಡ ಹೆಚ್ಚಾಗಿ ಚೀಲದೊಳಗಿರುವ ವಾಯುವನ್ನು ಒತ್ತುತ್ತದೆ. ಅದುಮಲ್ಪಟ್ಟ ವಾಯು ಒಂದು ಲೋಹದ ತುಂಡನ್ನು ನೂಕಿ ವಿದ್ಯುನ್ಮಂಡಲವನ್ನು ಪೂರ್ಣಮಾಡಿ ಸಿಡಿಮದ್ದನ್ನು ಸ್ಫೋಟಿಸುವುದು. ತೆಟ್ಟೆ ಕಡಲ ಬುಡದಲ್ಲಿ ಇದನ್ನು ಇಡಲಾಗುತ್ತದೆ, ಮೇಲೆ ಹೋಗುವ ಯಾವ ಹಡಗನ್ನೂ ಈ ಸಿಡಿಗುಂಡು ಚೂರುಚೂರಾಗಿ ಒಡೆಯುವುದು. ಸಾಗರದ ಭಾರಿಹಡಗನ್ನು ಕೂಡ ಎರಡು ತುಂಡು ಮಾಡುವಷ್ಟು ಸಾಮಥ್ರ್ಯ ಅದಕ್ಕೆ ಉಂಟು. ಅದರ ಆಕಾರ ಎಣ್ಣೆಪೀಪಾಯಿಯಂತೆ, ಉದ್ದ ಪೀಪಾಯಿಯ ಎರಡರಷ್ಟು. ಜಲಾಂತರ್ಗಾಮಿ ಅದನ್ನು ಟಾರ್ಪೆಡೊ ಕೊಳವೆಗಳ ಮೂಲಕ ಸಮುದ್ರದಲ್ಲಿ ನಾಟುತ್ತದೆ. ಅದನ್ನು ವಿಮಾನದ ದುಮುಕುಕೊಡೆಯಿಂದಲೂ ನಾಟಬಹುದು.
ಕಾಂತೀಯ (ಮ್ಯಾಗ್ನೆಟಿಕ್) ಸಿಡಿಮದ್ದು
[ಬದಲಾಯಿಸಿ]ಇದರೊಳಗೆ ನಾವಿಕರ ಕಾಂತ ಸೂಜಿಯಂತಿರುವ ಒಂದು ಕಾಂತದರ್ಶಿನಿಯನ್ನು ಅಳವಡಿಸಿದೆ. ಕಡಲಿನಲ್ಲಿ ಹೋಗುತ್ತಿರುವ ಹಡಗಿನ ಉಕ್ಕಿನ ಭಾಗಗಳು ಕಾಂತಕ್ಷೇತ್ರವನ್ನು ನಿರ್ಮಿಸುತ್ತವೆ. ಆ ಹಡಗು ಈ ಕಾಂತೀಯ ಸಿಡಿಮದ್ದಿನ ಮೇಲೆ ಎತ್ತರದ ನೀರಿನಲ್ಲಿ ಹೋಗುವಾಗ ಹಡಗಿನ ಒಡಲಿನ ಕಾಂತಕ್ಷೇತ್ರ ಆ ಸೂಜಿಯನ್ನು ಆಕರ್ಷಿಸುತ್ತದೆ. ಸೂಜಿ ವಿದ್ಯುನ್ಮಂಡಲವನ್ನು ಪೂರ್ಣಗೊಳಿಸುತ್ತದೆ. ಆಗ ಸಿಡಿಮದ್ದು ಸ್ಫೋಟಿಸುತ್ತದೆ. ಈ ಸಿಡಿಮದ್ದುಗಳನ್ನು ಸಾಮಾನ್ಯವಾಗಿ ವಿಮಾನಗಳಿಂದ ತೆಟ್ಟೆ ನೀರಿನೊಳಕ್ಕೆ ಹಾಕಲಾಗುತ್ತದೆ.
ಶಬ್ದತರಂಗಗಳಿಂದ ಸ್ಫೋಟಿಸುವ (ಆಕೌಸ್ಟಿಕ್) ಸಿಡಿಮದ್ದು
[ಬದಲಾಯಿಸಿ]ಈ ಸಿಡಿಮದ್ದಿನ ಮೇಲೆ ಬೀಳುವ ಶಬ್ದಗಳನ್ನು ವರ್ಧಿಸಲು ಅನುವಾಗುವಂತೆ ಇದನ್ನು ಧ್ವನಿವರ್ಧಕದಿಂದ ಸಜ್ಜುಗೊಳಿಸಿಟ್ಟಿರುತ್ತದೆ. ಹಡಗಿನಲ್ಲಿ ಸುತ್ತುತ್ತಿರುವ ಚಾಲಕದಂಡದ ಮತ್ತು ಎಂಜಿನ್ನುಗಳ ಶಬ್ದಗಳನ್ನು ಮೈಕ್ರೋಫೆÇೀನ್ ವರ್ಧಿಸುತ್ತದೆ. ಆ ಶಬ್ದ ತರಂಗಗಳು ಸಿಡಿಮದ್ದನ್ನು ಸ್ಫೋಟಿಸುತ್ತವೆ.
ಲಿಂಪೆಟ್ ಸಿಡಿಮದ್ದು
[ಬದಲಾಯಿಸಿ]ಸಿಡಿಮದ್ದಿನ ಪಾತ್ರೆಗೆ ಕಾಂತತ್ವವನ್ನು ಕೊಟ್ಟು, ಅದನ್ನು ಬಲು ಚಿಕ್ಕ ಜಲಾಂತರ್ಗಾಮಿಯಲ್ಲಿ ಒಯ್ದು, ಶತ್ರು ಹಡಗಿನ ಕೆಳಭಾಗಕ್ಕೆ ಸೇರಿಸಲಾಗುತ್ತದೆ. ಅದು ಹಡಗಿನ ಉಕ್ಕಿನಿಂದ ಆಕರ್ಷಿಸಲ್ಪಟ್ಟು ಅಲ್ಲೇ ಇದ್ದು ಸಾವಕಾಶವಾಗಿ ಸಿಡಿದು ಹಡಗನ್ನು ನಾಶಮಾಡುತ್ತದೆ.
ಸಿಡಿಮದ್ದು ಯುದ್ಧಗಳು
[ಬದಲಾಯಿಸಿ]ರಷ್ಯದ ಕ್ರಿಮಿಯಾ ಯುದ್ಧ (1854), ಅಮೆರಿಕದ ರಾಷ್ಟ್ರಾಂತರ್ಯುದ್ಧ (1801-65) ಫ್ರೆಂಚ್-ಪ್ರಷ್ಯನ್ ಯುದ್ಧ (1870), ರಷ್ಯ-ತುರ್ಕಿ ಯುದ್ಧ (1877-78) ರಷ್ಯ-ಜಪಾನ್ ಯುದ್ಧ (1904-05) ಮತ್ತು ಸ್ಪೇನ್-ಅಮೇರಿಕ ಯುದ್ಧ (1898) ಇವುಗಳಲ್ಲಿ ಸಿಡಿಮದ್ದುಗಳಿಂದ ಅನೇಕ ಹಡಗುಗಳು ಮುಳುಗಿದವು. ಒಂದನೆಯ ಮಹಾಯುದ್ಧದಲ್ಲಿ ಉತ್ತರ ಸಮುದ್ರದ ಸಿಡಿಮದ್ದುಗಳ ಶ್ರೇಣಿ ನಾರ್ವೆ ಕರಾವಳಿಯಿಂದ ಓರ್ಕ್‍ನೆ ದ್ವೀಪದವರೆಗೂ 230 ಮೈಲು ದೂರ, 15-35 ಮೈಲು ಅಗಲದಷ್ಟು ಹರಡಿತ್ತು. 70,000 ಸಿಡಿಗುಂಡುಗಳ ಭಾಗಗಳು ಅಮೆರಿಕದ ನೌಕಾ ಕಾರ್ಖಾನೆಯಲ್ಲಿ ತಯಾರಿಸಲ್ಪಟ್ಟವು. ಅವುಗಳಿಗೆ ಲಂಗರು ಹಾಕಿ ಸಮುದ್ರದೊಳಗೆ ನಿಲ್ಲಿಸಿದಾಗ ಕೆಲವೆಡೆ ನೀರು 1,100 ಆಳವಿತ್ತು. ಸಿಡಿಗುಂಡುಗಳನ್ನು ಒಂದೇ ಸಾಲಿನಲ್ಲಿ ನಿಲ್ಲಿಸಿದಾಗ ನೆಟ್ಟಾಗ ಜಲಾಂತರ್ಗಾಮಿಗಳನ್ನು ತಡೆಗಟ್ಟಲಾಗಲಿಲ್ಲ. ಅವು ಸಿಡಿಮದ್ದುಗಳ ಕೆಳಗೆ ತೂರಿಕೊಂಡು ಹೋಗದಂತೆ ಸಿಡಿಮದ್ದುಗಳು ಬೇರೆ ಬೇರೆ ಮಟ್ಟಗಳಲ್ಲಿ -45,80, 160, ಮತ್ತು 240 ಅಡಿಗಳಲ್ಲಿ ತೇಲುವಂತೆ ನೆಡಲ್ಪಟ್ಟವು. ಪ್ರತಿ ಸಿಡಿಮದ್ದಿಗೂ 30 ಉದ್ದದ ತಂತಿಯಿಂದ ತೇಲುವ ಬುರುಡೆಗಳನ್ನು ಲಗತ್ತಿಸಿತ್ತು. ನೌಕೆ ಅವುಗಳಲ್ಲಿ ಎಲ್ಲಿ ತಗಲಿದರೂ ಸಿಡಿಮದ್ದು ಕೂಡಲೆ ಸ್ಫೋಟಿಸುತ್ತಿತ್ತು.
ಬ್ರಿಟಿಷರು ಡೋವರ್ ಜಲಸಂಧಿಯಲ್ಲಿ ಸಿಡಿಮದ್ದುಗಳನ್ನು ಹಾಕಿ ಶತ್ರುಗಳ ಪ್ರವೇಶವನ್ನು ಬಂಧಿಸಿದ್ದರು. ಆದ್ದರಿಂದ ಜರ್ಮನರ ಜಲಾಂತರ್ಗಾಮಿಗಳು ಅಟ್ಲಾಂಟಿಕ್ ಸಾಗರಕ್ಕೆ ಹೋಗುವುದು ಅಸಾಧ್ಯವಾಯಿತು. ಜರ್ಮನರ ಅನೇಕ U -ದೋಣಿಗಳು ನಾಶವಾದವು. ರಷ್ಯನರು ಜರ್ಮನರ U -ದೋಣಿಗಳನ್ನು ತಡೆಗಟ್ಟಲು ಬಾಲ್ಟಿಕ್ ಸಮುದ್ರದ ಫಿನ್‍ಲೆಂಡ್ ಮತ್ತು ರಿಗಾ ಕೊಲ್ಲಿಗಳಲ್ಲೂ ಬಾಸ್ಪೊರಸಿನಲ್ಲೂ ಸಿಡಿಮದ್ದುಗಳನ್ನು ನೆಟ್ಟರು. ಎರಡನೆಯ ಮಹಾಯುದ್ಧದಲ್ಲಿ ಬ್ರಿಟಿಷರು ತಮ್ಮ ಕರಾವಳಿಯಲ್ಲಿ ಜರ್ಮನರು ಮುಂದುವರಿಯದಂತೆ 1,51,970 ಸಿಡಿಮದ್ದುಗಳನ್ನು ಸ್ಥಾಪಿಸಿದ್ದರು. ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡುಗಳ ಪೂರ್ವ ಕರಾವಳಿಯ ಉದ್ದಕ್ಕೂ 500 ಮೈಲು ಉದ್ದದ, 30 ಮೈಲು ಅಗಲದಷ್ಟು ಸಮುದ್ರ ಪ್ರದೇಶದಲ್ಲಿ 8 ಮೈಲು ಅಗಲದಷ್ಟು ಜಾಗವನ್ನು ಬಿಟ್ಟು ಎರಡು ಲಕ್ಷ ಸಿಡಿಮದ್ದುಗಳನ್ನು ನೆಟ್ಟಿತ್ತು. ಬ್ರಿಟಿಷರು ಡ್ಯಾನ್ಯೂಬ್ ನದಿಯೊಳಗೆ ಸಿಡಿಮದ್ದನ್ನು ಹಾಕಿದ್ದರು. ಅಮೆರಿಕನ್ನರು ಸಿಡಿಮದ್ದುಗಳನ್ನು ನೆಟ್ಟು ಜಪಾನಿಯರ ಹಡಗುಗಳನ್ನು ಹಾದಿಕಟ್ಟಿ ಅವರಿಗೆ ಆಹಾರ ಸಾಮಗ್ರಿಗಳೂ ಇತರ ಕಚ್ಚಾ ವಸ್ತುಗಳೂ ಹೋಗಲು ಅವಕಾಶವಿಲ್ಲದಂತೆ ಸಿಡಿಮದ್ದುಗಳನ್ನು ಹರಡಿದ್ದರು.