ಅಟ್ರೊಪೀನ್
ಅಟ್ರೊಪೀನ್ ಎಂದರೆ ವೈದ್ಯಚಿಕಿತ್ಸೆಯಲ್ಲಿ ಬಳಸುವ ಹರಳಿನಂಥ ವಿಷಕಾರಕ ಕ್ಷಾರರೂಪಿ (ಆಲ್ಕಲಾಯ್ಡ್).
ರಾಸಾಯನಿಕ ರಚನೆ
[ಬದಲಾಯಿಸಿ]ನಿಸರ್ಗದಲ್ಲಿ ಅಟ್ರೊಪೀನ್ ಸಾಕಷ್ಟು ಸಿಗದಿದ್ದರೂ ಲೀವೊ-ಹಯೊಸಯ ಮೀನ್ನಿಂದ ಪಡೆಯಬಹುದು, ಬೆಲಡೊನ್ನ (ಅಟ್ರೋಪ), ಕುರಾಸಾನಿ (ಹಯೊಸಯಮಸ್), ಉಮ್ಮತ್ತಿಉಮ್ಮತ್ತಿ ಗಿಡಗಳಲ್ಲೂ ಇದು ದೊರೆಯತ್ತದೆ. ನೀರು ಬೆರೆಸಿದಾಗ ಮದ್ಯಸಾರದಿಂದ ಅಟ್ರೊಪೀನನ್ನು 1140-1160 ಸೆಂ. ಗ್ರೇ. ನಲ್ಲಿ ವಿಲೀನ ಬಣ್ಣವಿರದ ಹರಳುಗಳಾಗಿ ಪಡೆಯಬಹುದು. ಮದ್ಯಸಾರ ಕ್ಲೋರೊಫಾರ್ಮ್ಗಳಲ್ಲಿ ಸರಾಗವಾಗಿ ವಿಲೀನವಾಗುವುದಾದರೂ ಈಥರಿನಲ್ಲಿ ಅಷ್ಟಾಗಿಲ್ಲ. ನೀರಿನಲ್ಲಿ ವಿಲೀನವಾಗದು.
ಬಳಕೆ
[ಬದಲಾಯಿಸಿ]ಇದರ ಬಳಕೆ ಮುಖ್ಯವಾಗಿ ಸುತ್ತಂಚಿನ (ಪೆರಿಫೆರಲ್) ಪ್ರಭಾವಗಳ ಮೇಲಿದೆ.[೧] ಕಣ್ಣೊಳಗಿನ ಅಕ್ಷಿಪಟಲ (ರೆಟೀನ) ಪರೀಕ್ಷಿಸಲೂ ಮಸೂರಕ್ಕೂ ಕರಿಯಾಲಿಗೂ ನಡುವೆ ಅಂಟಿಕೊಳ್ಳದಂತೆ ಇಲ್ಲವೇ ಅಂಟಿರುವುದನ್ನು ಬಿಡಿಸಲೂ ಇದರ ದ್ರಾವಣದ ತೊಟ್ಟುಗಳನ್ನು ಹಾಕುವುದು ಸಾಮಾನ್ಯ ಬಳಕೆಯಲ್ಲಿದೆ. ಉಬ್ಬಸದಲ್ಲಿ ಎದೆಸೆಳೆತವನ್ನು ತಗ್ಗಿಸಲು ಹಿಂದೆ ಬಳಕೆಯಲ್ಲಿತ್ತು; [೨]೧೯೮೦ರ ದಶಕದಿಂದ ಅಡ್ರಿನಲೀನ್ ಬಂದ ಮೇಲೆ ಅಟ್ರೊಪೀನ್ ಬಳಕೆ ಇಲ್ಲ. [೩]ಮೂಗಿನ ಇಲ್ಲವೇ ಕಣ್ಣೀರಿನ ಸುರಿಕೆಗಳನ್ನು ಸುಮ್ಮನೆ ಒಣಗಿಸುವುದರಿಂದಲೇ ಇದು ನೆಗಡಿ ಬೇನೆಯ ಲಕ್ಷಣಗಳನ್ನು ಶಮನಗೊಳಿಸುತ್ತದೆ.
ಉಪಾನುವೇದನ (ಪ್ಯಾರಾಸಿಂಪತೆಟಿಕ್) ಚೋದನೆಯಿಂದಾದ ಕರುಳು ಸೆಡೆತಗಳನ್ನು ಅಟ್ರೊಪೀನ್ ಸಡಿಲಿಸುವುದರಿಂದ, ಕರುಳಿನ ನುಲಿತಗಳನ್ನು ತಗ್ಗಿಸುವ ಮದ್ದಾಗೂ ಅದೇ ಉದ್ದೇಶಕ್ಕಾಗಿ ಉಚ್ಚಾಟಿಕಗಳೊಂದಿಗೂ ಕೊಡುವುದುಂಟು. ಎಳೆಯ ಮಕ್ಕಳು ರಾತ್ರಿ ಹೊತ್ತು ಹಾಸಿಗೆ ಒದ್ದೆಗೊಳಿಸುವುದರ ಚಿಕಿತ್ಸೆಯಲ್ಲೂ ಕೆಲ ವೇಳೆ ಮೂತ್ರನಾಳದ, ಪಿತ್ತನಾಳದ ಸೆಡೆತಗಳನ್ನು ಕಳೆಯಲೂ ಬಳಕೆಗೆ ಬರುವುದು. ಅಟ್ರೊಪೀನನ್ನು ಹೊಂದಿರುವ ಬೆಲಡೊನ್ನ ಕ್ಷಾರರೂಪಿಗಳ ಕೇಂದ್ರದ ನರದ ಮಂಡಲದ ಮೇಲಿನ ಪ್ರಭಾವಗಳಿಂದ, ಆ ಮಂಡಲದ ಕೆಲವು ರೋಗಗಳಲ್ಲಿ ಕೊಡುವುದಾದರೂ ಉಸಿರಾಟದ ಚೋದಕವಾಗಿ ಅಟ್ರೊಪೀನ್ ಈಗ ಬಳಕೆಯಲ್ಲಿಲ್ಲ.[೪]
ಅನಾನುಕೂಲ
[ಬದಲಾಯಿಸಿ]ಅಟ್ರೊಪೀನನ್ನು ಕೊಟ್ಟಾಗ ಮೈಯಲ್ಲಿ ಎಲ್ಲೆಲ್ಲೂ ಅದರ ಪ್ರಭಾವ ಕಂಡುಬರುವುದೊಂದು ವೈದ್ಯಚಿಕಿತ್ಸೆಯಲ್ಲಿ ಅನಾನುಕೂಲ. ಇನ್ನೂ ಚೆನ್ನಾಗಿ ಖಚಿತವಾದ ಒಂದೋ ಎರಡೋ ಗುಣಗಳಿರುವ ಇದರ ಕೃತಕ ಬದಲಿಗಳ ತಯಾರಿಕೆಗಳು ಬರುತ್ತಿವೆ. ಹೀಗೆ ಬಂದವಲ್ಲಿ ಒಂದಾದ ಹೋಮಟ್ರೊಪೀನ್ ಕಣ್ಣಿಗೆ ಹಾಕಿದಾಗ, ಇದರ ಪ್ರಭಾವ ಬೇಗನೆ ಇಳಿಯುತ್ತದೆ. ಕೇಂದ್ರದ ನರಮಂಡಲದ ಮೇಲೆ ಪ್ರಭಾವ ಏನೂ ಇಲ್ಲವೆನ್ನಬಹುದು. ಅದೇ ಅಡಿಫೆನೀನ್, ಸಿಂಟ್ರೊಪಾನ್ಗಳಲ್ಲಿ, ಕಣ್ಣಿನ ಪಾಪೆಯಗಲಿಸದೆ, ಬಾಯೊಣಗಿಸದೆ, ಗುಂಡಿಗೆ ವೇಗಗೊಳಿಸದೆ, ಅಟ್ರೊಪೀನಿನ ಸೆಡೆತರೋಧಕ ಗುಣಗಳಿವೆ.[೫]
ಔಷಧೀಯ ಗುಣಗಳು
[ಬದಲಾಯಿಸಿ]ಕೇಂದ್ರದ ನರಮಂಡಲವನ್ನು ಮೊದಲು ಚೋದಿಸಿ, ಆಮೇಲೆ ಕುಗ್ಗಿಸುವ ಕೇಂದ್ರದ ಪ್ರಭಾವ ಅಟ್ರೊಪೀನಿಗಿದೆ. ಆದರೂ ಉಪಾನುವೇದನ ನರಮಂಡಲದ ಮೇಲಿನ ಕುಗ್ಗಿಸುವ ವರ್ತನೆಯೇ ಈ ಮದ್ದಿನ ವಿಶಿಷ್ಟ ಗುಣ. ನರದ ಆವೇಗಗಳು ಕೆಳಸಾಗುವುದರಿಂದ ಉಪಾನುವೇದನ ನರತಂತುಗಳ ಕೊನೆಗಳಲ್ಲಿ ಅಸಿಟೈಲ್ಕೋಲೀನ್ ಬಿಡುಗಡೆಯಾಗಿ ಹೇಗೋ ಕೆಲಸಗಾರಿ ಜೀವಕಣವನ್ನು ಚೋದಿಸುವುದು.
ನರದ ಕೊನೆಯಲ್ಲಿ ಅಸಿಟೈಲ್ಕೋಲೀನ್ ತಯಾರಿಕೆಯಲ್ಲಿ ಅಟ್ರೊಪೀನ್ ಕೈ ಹಾಕದಿದ್ದರೂ ಅಂತೂ ಗ್ರಾಹಕ (ರಿಸಿಪ್ಟಾರ್) ಜೀವಕಣದ ಮೇಲೆ ಅದರ ಪ್ರಭಾವಕ್ಕೆ ಅಡ್ಡಿಯಾಗುತ್ತದೆ. ಅಂಗರಚನೆಯಲ್ಲಿ ಅನುವೇದನ ನರದ ಮಂಡಲಕ್ಕೆ ಸೇರಿದ್ದರೂ ಅದರ ನರ ಕೊನೆಗಳಲ್ಲಿ ನಾರಡ್ರಿನಲೀನ್ಗಿಂತಲೂ ಅಸಿಟೈಲ್ಕೋಲೀನೇ ಬಿಡುಗಡೆ ಆಗುವುದರಿಂದ ಮಾನವನ ಬೆವರಿನ ಗ್ರಂಥಿಗಳ ಸುರಿಕ ಸರಗಳನ್ನು ಕುಗ್ಗಿಸುತ್ತದೆ. ಅನುವೇದನ, ಉಪಾನುವೇದನ ನರದ ಮಂಡಲಗಳು ಎರಡರ ನರಗಂಟುಗಳ (ಗ್ಯಾಂಗ್ಲಿಯಾನ್ಸ್) ನರಸಂಧಿಗಳಲ್ಲೂ (ಸೈನ್ಯಾಪ್ಸಸ್) ಅಸಿಟೈಲ್ಕೋಲೀನ್ ಬಿಡುಗಡೆ ಆಗುವುದಾದರೂ ಬಲು ದೊಡ್ಡ ಪ್ರಮಾಣಗಳಲ್ಲಿ ಕೊಟ್ಟ ಹೊರತು ಈ ಎಡೆಗಳಲ್ಲಿ ಆವೇಗಗಳ ಸಾಗಣೆಯನ್ನು ತಡೆಗಟ್ಟದು.
ಸುತ್ತಂಚಿನ ಪ್ರಭಾವಗಳಿಂದ ಆಗುವ ಅಟ್ರೊಪೀನಿನ ಗೊತ್ತಾದ ಪರಿಣಾಮಗಳಲ್ಲಿ ಬೆವರು. ಲೋಳೆ, ಜೊಲ್ಲು ಸುರಿಕೆಗಳೂ ಅಲೆಮಾರಿ (ವೇಗಸ್) ನರವನ್ನು ಕುಗ್ಗಿಸುವುದರಿಂದ ಆಗುವ ಗುಂಡಿಗೆಯ ಏರಿದ ವೇಗವೂ ಕಣ್ಣಪಾಪೆಯಗಲಿಕೆಯೊಂದಿಗೆ ನೋಟದ ಹೊಂದುವಳಿಯ (ಅಕಾಮಡೇಷನ್) ನಿಸ್ಸತ್ವತೆಯೂ ಪಂಗುಸಿರ್ನಾಳದ (ಬ್ರಾಂಕಿಯಲ್), ಕರುಳಿನ ಮತ್ತಿತರ ನಯಸ್ನಾಯುಗಳ ಸಡಿಲತೆಯೂ ಸೇರಿವೆ. ಉದ್ವೇಗ, ಸನ್ನಿ ಆಗಿ ಜಡತೆಯೂ ಮಿದುಳಕಾಂಡದ ನಿಸ್ಸತ್ವಕತೆಯೂ ಇದರ ಕೇಂದ್ರದ ಮೇಲಿನ ಪ್ರಭಾವಗಳಲ್ಲಿ ಸೇರಿವೆ.
ವಿಷಗುಣಗಳು
[ಬದಲಾಯಿಸಿ]ಅಟ್ರೊಪೀನ್ ವಿಷವೇರಿದ ರೋಗಿಯ ಪಾಡನ್ನು ಸರಳವಾಗಿ ಹೀಗೆ ಹೇಳಬಹುದು : 'ಮೊಲದಂತೆ ಬಿಸಿ, ಬಾವಲಿಯಂತೆ ಕುರುಡು, ಎಲುಬಿನಂತೆ ಒಣಕಲು, ಬೀಟ್ ಗೆಡ್ಡೆಯಷ್ಟು ಕೆಂಪು, ಕೋಳಿಯಂತೆ ಹುಚ್ಚು. ಬೆವರುವುದು ಕುಗ್ಗಿ, ಚಡಪಡಿಕೆಯಿಂದ ಮೈ ಕಾವೇರುತ್ತದೆ; ಕಣ್ಣುಪಾಪೆ ಅಗಲವಾಗಿ ಹಿಗ್ಗಿ, ನೋಟ ಮಂಜಾಗುತ್ತದೆ ; ಚರ್ಮ ಬಿಸಿಯಾಗಿ ಒಣಕಲಾಗಿ ಕೆಂಪೇರಿ, ಕೆಂಜ್ವರವೇನೋ (ಸ್ಕಾರ್ಲೆಟ್ ಫೀವರ್) ಎಂಬಂತೆ ದದ್ದುಗಳು ಕಾಣಿಸಬಹುದು; ರೋಗಿ ಉದ್ರೇಕಗೊಂಡು ತಬ್ಬಿಬ್ಬಾಗಿ ಭ್ರಮೆಗೊಳ್ಳುವನು. ಹಲವೇಳೆ ರೋಗಿಯಲ್ಲಿ ನಡುಕ ಸನ್ನಿಯಂತೆ (ಡೆಲೀರಿಯಂ ಟ್ರೆಮೆನ್ಸ್) ಆಗುತ್ತದೆ. ಬಾಯಿಂದ ತೆಗೆದುಕೊಂಡಿದ್ದರೆ ಹೊಟ್ಟೆ ತೊಳೆವುದೇ ಚಿಕಿತ್ಸೆ. ಸೆಳವುಗಳನ್ನು ತಡೆಯಲು ಮಾರ್ಫೀನ್ ಚುಚ್ಚಿ ಹೋಗಿಸಬೇಕಾಗಬಹುದು. ಸುತ್ತಂಚಿನ ಲಕ್ಷಣಗಳನ್ನು ಪೈಲೊಕಾರ್ಪೀನ್ ಕೊಟ್ಟು ಅಡಗಿಸಬಹುದು. ಜಡತೆ, ಮಾಂದ್ಯಗಳಿಗೆ ಕೆಫೀನ್ ಮತ್ತಿತರ ಚೋದಕಗಳನ್ನು ಕೊಡಬಹುದು. ಕೃತಕ ಉಸಿರಾಟವೂ ಬೇಕಾಗಬಹುದು.
ಕಚ್ಚ ಲೀವೊ-ಹಯಸಯಮೀನ್ನೊಂದಿಗೆ ತುಸು ಕ್ಷಾರವನ್ನು ಸೇರಿಸಿ ಅಟ್ರೊಪೀನನ್ನು ಗೊಂಚಲಿಕೆಯಿಂದ (ರೇಸಿಮೈಜೇಷನ್) ಪಡೆಯಬಹುದು. ಈಜಿಪ್ಟಿನ ಕುರಾಸಾನಿ ಇದಕ್ಕೆ ಒಳ್ಳೆಯದು. ಚೆನ್ನಾಗಿ ಹರಳಾಗುವ ಲವಣಗಳ ರೂಪದಲ್ಲಿ ಅಟ್ರೊಪೀನ್ ದೊರೆಯುವುದು. ವೈದ್ಯದಲ್ಲಿ ಹೆಚ್ಚಿನ ಬಳಕೆಯಲ್ಲಿರುವುದು ಇದರ ಸಲ್ಫೇಟು ಲವಣ. ಇದು ಉದ್ದನೆಯ ತೆಳ್ಳಗಿನ ಬಣ್ಣವಿರದ ಸೂಜಿಗಳಂತಿದ್ದು, ಗಾಳಿಗೆ ಸೋಕಿದರೆ ಪುಡಿಯಾಗುತ್ತದೆ. 1940 ಸೆಂ. ಗ್ರೇ. ನಲ್ಲಿ ವಿಲೀನವಾಗುವುದು. ಕೃತಕವಾಗಿ ಟ್ರೋಪೀನಿನ ಎಸ್ಟರಾಗಿ ಅಟ್ರೊಪೀನ್ ತಯಾರಾಗಿದೆ. ಇದನ್ನು ಉತ್ತಮಗೊಳಿಸುವ ಯತ್ನದಲ್ಲಿ ಹೋಮಟ್ರೊಪೀನೂ ಒಂದು.
ಉಲ್ಲೇಖಗಳು
[ಬದಲಾಯಿಸಿ]- ↑ https://books.google.com/?id=amgVAAAAYAAJ&pg=PA148
- ↑ https://books.google.ca/books?id=-YI9P2DLe9UC&pg=PA525
- ↑ https://www.drugs.com/monograph/atropine.html
- ↑ https://books.google.ca/books?id=VOLhBQAAQBAJ&pg=PA94
- ↑ http://www.anesthesiology.org/pt/re/anes/fulltext.00000542-199807000-00030.htm;jsessionid=GSJKLv9vLCdQSmpp6vH3xdhnzWN1hy3s7JqMNFpWkHhLbKJT5vLM!741375937!-949856145!8091!-1#P89