Showing posts with label Random thoughts. Show all posts
Showing posts with label Random thoughts. Show all posts

Thursday, January 06, 2022

ಸೀತೆ - ಸಂವಾದ

ಉತ್ತರಿಸಲೊಲ್ಲದ ಸೀತೆಗಿವೆ
ಪ್ರಶ್ನೆಗಳು ನೂರು

ಧನುವ ಮುರಿದವನಿಗೆ
ಮನವನಿತ್ತು ವರಿಸಿದೆ
ಸಾಕೇತವು ಸನಿಹವಾಗುವ ಮುನ್ನ
ಅವನೊಡನೆ ಅಡವಿಗೆ ನಡೆದೆ
ಅವನ ಸಂಗವಷ್ಟೊಂದು ಮುದವೇ ಸೀತೆ ?

ಖಗನವನು ನಿನ್ನ ನೋಯಿಸೆ
ಮುನಿದು ಮಹಾಸ್ತ್ರವನು ಬಿಸುಟ
ಹರುಷ ಉಳಿಯಲಿಲ್ಲ ಬಹುಕಾಲ
ಅವನ ತಪ್ಪಿ(?)ಗೆ  ಸ್ವರ್ಣ ಲಂಕೆಯ
ಅಶೋಕವನದ ಬಂಧಿಯಾದೆ
ಅವನ ಮೇಲದೆಷ್ಟು‌ ನಂಬಿಕೆಯೇ ಸೀತೆ ?


ವನವನವನೆಲ್ಲ ನಿನ್ನ ನೆನಹಿನಲಿ ಸುತ್ತಿದವ
ಸಾಗರವ ಹಾರಿ ಸೇತುವ ತೋರಿದವ
ವಿಜಯದುಂದುಭಿಯ ಮೊರೆತದಲಿ
ಹರಿದ ಕಂಬನಿಯ ಕುಯಿಲ ಮರೆತೆ
ಅವನ ಒಲವಷ್ಟು ಬಲವೇ ಸೀತೆ ?

  
ಧಗಿಸುವ ಜ್ವಾಲೆಯನಾಲಿಂಗಿಸಿದೆ
ಮುಗಿಯದ  ನೋವಿಗೆ ಮೌನಿಯಾದೆ
ಮಡಿಲ ತುಂಬಿತು‌ ಲೋಕದಪವಾದ
ಮರಳಿ ನಡೆದೆ ವನಾಂತರಂಗಕೆ
ಅವನೆಂದರದೆಷ್ಟು ಸಖ್ಯವೇ ಸೀತೆ ?


ಎಲ್ಲ ಕೇಳಿಯೂ ಮಾತನಾಡಲವಳು
ವಿದೇಹದ ಮುದ್ದು  ವೈದೇಹಿಯವಳು
ಮುಗುಳು ನಗೆಯೇ ಅವಳುತ್ತರ
ಹೇಳುತ್ತಿರಬಹುದೇ ಹೀಗೆ :
"ಗದ್ದಲದ ಪ್ರಶ್ನೆಗಳಿಗೆ ಮೌನವೇ ಉತ್ತರ!"

ನಗುವೊಂದನುಳಿದು ಅವಳೇನೂ ಹೇಳಲಿಲ್ಲ
ಶಿಲೆಯಲ್ಲೂ ಅವನೆಡವ ಬಿಡಲಿಲ್ಲ!


Monday, March 25, 2019

ಮಾಲಿ

The Gardner  by Rabindranth Tagore 

I run as a musk-deer runs in the shadow of the forest mad with his own perfume.
The night is the night of mid-May, the breeze is the breeze of the south.
I lose my way and I wander, I seek what I cannot get, I get what I do not seek.

From my heart comes out and dances the image of my own desire. The gleaming vision flits on.
I try to clasp it firmly, it eludes me and leads me astray. I seek what I cannot get, I get what I do not seek.

ಓದಿಸಿದ ಗೆಳತಿಗೆ ವಂದನೆಗಳು

ಈ ಕವಿತೆಯಿಂದ ಮೂಡಿದ ಸಾಲುಗಳು 

ವಾಸನೆಗಳ ಹೊತ್ತ ಮೃಗ, ಅಲೆವ ಮನಸು
ಬಿಂಬವನದಲ್ಲಿ ನಿಜವ ಕಾಣುವ ಕನಸು
ತನ್ನ ವಾಸನೆಗೆ ಮರುಳಾದ ತಾನು
ಸುಡುವ ಗ್ರೀಷ್ಮದ ಚಂದ್ರನಿಲ್ಲದ ಬಾನು
ಆಗಾಗ ಸುಳಿವ ತೆಂಕಣದ ತಿಳುಗಾಳಿ
ಬಯಸಿದ್ದು ದೊರೆಯದು
ದೊರೆತದ್ದು ಬಯಕೆಯಾಗಿರದು


ಕಣ್ಣಮುಂದೆ ಕುಣಿವ ಆಶಾಬಿಂಬ
ಭ್ರಮಯೇ ಬೆಳಕು ಬಾಳ ತುಂಬ
ಇರದ ಮರೀಚಿಕೆಗಾಗಿ ಸೆಣಸಾಟ
ಬಿಂಬ ಬೆಳಕಲಿ ಸಾಗೇ ಸಾಗುವ ಹುಡುಕಾಟ
ಹಿಡಿದೆನೆಂಬುದದು ಭ್ರಮೆ,
ಬಿಟ್ಟೆನೆಂಬುದು ಕೊನೆಯೇ?
ಉರುವಲದ ಬೂದಿಯವರೆಗಿನ ಪಯಣ
ಸಕಲಕೂ ಆ ಬಿಂಬ ಕಾರಣ
ಬಯಸಿದ್ದು ದೊರೆಯದು
ದೊರೆತದ್ದು ಬಯಕೆಯಾಗಿರದು

ಭೇಟಿ

ಗೆಳತಿ ಅನಘಾ ಅಮೃತಾ ಪ್ರಿತಂ ಅವರ ಕವಿತೆಯೊಂದನ್ನ ಕಳಿಸಿದ್ಲು .

एक मुलाकात
मैं चुप शान्त और अडोल खड़ी थी
सिर्फ पास बहते समुन्द्र में तूफान था……फिर समुन्द्र को खुदा जाने
क्या ख्याल आया
उसने तूफान की एक पोटली सी बांधी
मेरे हाथों में थमाई
और हंस कर कुछ दूर हो गया
हैरान थी….
पर उसका चमत्कार ले लिया
पता था कि इस प्रकार की घटना
कभी सदियों में होती है…..

लाखों ख्याल आये
माथे में झिलमिलाये

पर खड़ी रह गयी कि उसको उठा कर
अब अपने शहर में कैसे जाऊंगी?

मेरे शहर की हर गली संकरी
मेरे शहर की हर छत नीची
मेरे शहर की हर दीवार चुगली

सोचा कि अगर तू कहीं मिले
तो समुन्द्र की तरह
इसे छाती पर रख कर
हम दो किनारों की तरह हंस सकते थे

और नीची छतों
और संकरी गलियों
के शहर में बस सकते थे….

पर सारी दोपहर तुझे ढूंढते बीती
और अपनी आग का मैंने
आप ही घूंट पिया

मैं अकेला किनारा
किनारे को गिरा दिया
और जब दिन ढलने को था
समुन्द्र का तूफान
समुन्द्र को लौटा दिया….

अब रात घिरने लगी तो तूं मिला है
तूं भी उदास, चुप, शान्त और अडोल
मैं भी उदास, चुप, शान्त और अडोल
सिर्फ- दूर बहते समुन्द्र में तूफान है…..




https://youtu.be/g0yWu-UxUQU

ಮೇಲಿನ ಲಿಂಕ್ ನಲ್ಲಿ ಕವಿತೆಯನ್ನು ಕೇಳಬಹುದು.
ಕೃಪೆ :ಇಂಟರ್ನೆಟ್


  ಈ ಕವಿತೆಯಿಂದ ಮೂಡಿದ ಸಾಲುಗಳು ಕೆಳಗಿವೆ :

ಮೌನ ಮನೆ ಮಾಡಿತ್ತು ನನ್ನಲಿ
ಅದೊಂದು ದಿನ ಕಿನಾರೆಯಲಿ
ಕೂತವಳ ಒಳಗೆ ಶಾಂತಿ ನೆಲಸಿತ್ತು
ಪಕ್ಕದಲಿ ಬೋರ್ಗರೆಯುತ್ತಿದ್ದ
ಕಡಲಿತ್ತು
ಅಬ್ಬಬ್ಬ, ಅದೆಷ್ಟು ಅಲೆಗಳು ,
ಸದ್ದು - ಗದ್ದಲ, ಗಾಳಿ- ಸುಳಿ
ಅದಾವ ದೈವ ಮಾಯೆಯೊ
ಸುಳಿಗಾಳಿಯ ಪುಟ್ಟ ಪೊಟ್ಟಣ ಕಟ್ಟಿ
ಕೈಗಿತ್ತ ಸಾಗರ , ನಕ್ಕು ದೂರಾಯ್ತು
ಈ ಕ್ಷಣಗಳು ಮತ್ತೆ ಬಾರವು
ಬಾಚಿಟ್ಟುಕೋ ಎಂದು ಮನ ಕೂಗಿತ್ತು.
ಈ ಹೊರೆ ಹೊತ್ತು ಊರ ಹಾದಿಯ ಸೇರುವುದೆಂತು ?
ದಾರಿಗಳ ನಿಯಮ ಮೀರುವುದೆಂತು ?
ತಲೆ ತಗ್ಗಿಸಿ, ಹೊರೆ ಇಳಿಸಿಯೇ
ನಡೆಯ ಬೇಕು ಆ ಮನೆಗಳಲ್ಲಿ
ಒಳಗಿನ ಗೋಡೆ ಗೋಡೆಗೂ ಗುಟ್ಟಿನ
ಭಯ, ಆತಂಕವಿಹುದಲ್ಲಿ
ನೀನಾದರೂ ಸಿಕ್ಕಿದ್ದರೆ
ಥೇಟ್ ಆ ಕಡಲು ಸಿಕ್ಕಂತೆ !
ಈ ಹೊರೆಯ ಎದೆಯಲಿಟ್ಟು
ಎರಡು ದಡಗಳಂತೆ ನಕ್ಕು ಹಗುರಾಗಬಹುದಿತ್ತು...
ನಿನ್ನ ನರಸುವುದರಲಿ ಮುಗಿದಿತ್ತು ದಿನ
ಬೆಂಕಿಯುಗುಳದೆ ನುಂಗಿತೆನ್ನ ಮನ
ತೀರದಲುಳಿದ ಒಂಟಿ ನಾನು
ದಡವ ಹೊಡೆದುರುಳಿಸಿದೆ
ಹೊತ್ತುಮುಳುಗುವ ಹೊತ್ತಿಗೆ
ಪೊಟ್ಟಣವ ಮರಳಿಸಿದೆ
ಮಾಯವಾಗಿದೆ ತಾರೆ ಮಿಂಚಿನ ಕನಸು
ಹಾದಿ ಹೊರಳಲಿ ನಿನ್ನ ಕಂಡಿದೆ ಮನಸು
ಮತ್ತೆ ಮೌನ ಮನೆ ಮಾಡಿದೆ ನನ್ನಲಿ
ಗಾಳಿ ಸುಳಿಗೆ ಸಿಲಕದ ಶಾಂತಿ‌ ನಿನ್ನಲಿ
ಅಲ್ಲೆಲ್ಲೊ ಹರಿವ ಕಡಲು ಮಾತ್ರ ಭೋರ್ಗರೆಯುತ್ತಲೇ ಇದೆ.

Thursday, August 17, 2017

ಅಲೆಗಳು

ಪರ್ಷಿಯನ್ ಕವಿ ಸಿಯಾವಶ್ ಕಸ್ರಾಯಿ ಯವರ ಭಂವರ್  ನ  ಇಂಗ್ಲಿಷ್ ಭಾಷಾಂತರದ   ಭಾವಾನುವಾದ .
ಗೆಳತಿಯೋಬ್ಬರು ಈ ಕವಿತೆಯನ್ನು ಹಂಚಿಕೊಂಡಿದ್ದರು . ಆಗ ಹೊರ ಬಂದ ಸಾಲುಗಳು .

ಅವ್ಯಕ್ತ, ಅಮೂರ್ತ ತೀರ(?)ದೆಡೆಗೆ ಹರಿಯುತ್ತಿದ್ದೆವು
'ನಾ',' ನೀ' ನೆಂಬ ಎರಡು ಅಲೆಗಳು
ಸಂಗಮದ ಪಯಣ ಹಿತವಾಗಿತ್ತು
ನಮ್ಮ ಆಸೆ, ಕನಸು
ನೋವು, ನಲಿವು
ಗುರಿ,ಗಮ್ಯದೆಡೆಗೆ
ಏರಿದ್ದು,ಮತ್ತಿಳಿದಿದ್ದು
ಎಲ್ಲವೂ ಸಾಂಗತ್ಯಗಾನವಾಗಿತ್ತು
ಸಂತಸದ ಹಾಡಾದೆವು
ಸ್ವಚ್ಛವಾಗಿ ಹರಿದೆವು
ದೂರತೀರದ ನೋಟ ಕಂಡು ಪುಳಕಗೊಂಡೆವು
ಆದರೆ...
ಆದರೆ, ಅದೊಂದು ರಾತ್ರಿ ಗಾಳಿ ಸುಳಿಯಾಯ್ತು
'ನಾ' ನೆಂಬ ಅಲೆ ಒಂಟಿಯಾಯ್ತು
ಬಂಧದ ಮುತ್ತುಗಳು ಚೂರಾದವು
ಕಡಲಾಳದಲ್ಲೆಲ್ಲೊ ಕಳೆದುಹೋದವು
ಆ ಕ್ಷಣದಿಂದ ನಾನೊಂಟಿ!
ಕಳೆದ ಬಲದ ಅನ್ವೇಷಣೆ ಸಾಗಿದೆ
ಸರಿಯುತ್ತಿರುವ ಕ್ಷಣಗಳ ಲೆಕ್ಖ ತಪ್ಪಿದೆ
ಓಡುತ್ತಲೇ ಇರುವೆ ಕರೆಯುತ್ತಲವನ
ಒಂಟಿಯಾಗಿ...

Tuesday, December 01, 2015

ವಿಮರ್ಶಾ ಕಮ್ಮಟ - ಒಂದು ಗ್ರಹಿಕೆ

ವಿಧ್ಯಾರ್ಥಿ ದೆಸೆಯಿಂದಲೂ ನಾನು ಕಮ್ಮಟಗಳಿಗೆ ಹಾಜರಿ ಹಾಕಿದ್ದು ಅತೀ ಕಡಿಮೆ . ವಿಮರ್ಶೆಗೆ ಬೇಕಾದ ಆಳವಾದ ಅರಿವು , ಸಾಹಿತ್ಯದ ಓದು ಎರಡೂ ನನಗಿಲ್ಲವಾದ್ದರಿಂದ ವಿಮರ್ಶಾ ಕಮ್ಮಟಕ್ಕೆ ಹೋಗಲು ಅಳುಕಿನಿಂದಲೇ ಒಪ್ಪಿದ್ದೆ. ಸ್ಥಳವನ್ನು ತಲುಪಿದಾಕ್ಷಣ   ಆಯೋಜಕಿ , ಕಮ್ಮಟದ ಕನಸಿನ ಮೂಲ ಜಯಲಕ್ಷ್ಮಿ ಪಾಟಿಲ್ ಗುರುತು ಹಿಡಿದು ಮಾತನಾಡಿಸಿದ್ದು ಸ್ವಲ್ಪ ಧೈರ್ಯ ಬಂದಿತು . ನಂತರ ಜಯಶ್ರ್ರೀ ಕಾಸರವಳ್ಳಿ , ಜಯಶ್ರೀ ದೇಶಪಾಂಡೆ , ಸುಧಾ ಶೆರ್ನೋಬತ್, ತೇಜಸ್ವಿನಿ ಹೆಗಡೆ ಮುಂತಾದವರೊಂದಿಗೆ ಕಮ್ಮಟಕ್ಕೆ  ತಯಾರಾದೆವು .

ಓದಿಗೆ ದಿಕ್ಕು ಸೂಚಿಸಬಲ್ಲ ದಿವಾಕರ್ ಸರ್ ಮಾತು ಕೇಳುವುದು ಎಂದಿಗೂ ಹಿತ.  ಮನುಷ್ಯ ಬೆಳೆದಂತೆ ಅವನೊಳಗಿನ ವಿಚಾರಗಳೆಲ್ಲವೂ ಶಬ್ಧವಾಗಲಾರವು , ಆಗಬಾರದು ಕೂಡ .  ಇದು ಮನುಷ್ಯನಲ್ಲಿ ನಡೆಯುವ ಪ್ರಾಥಮಿಕ ಹಂತದ ವಿಮರ್ಶೆ . ರಾಜಾಸ್ಥಾನಗಳಲ್ಲಿದ್ದ ವಿದೂಷಕರು ವ್ಯವಸ್ಥೆಯನ್ನು ವಿಮರ್ಶಿಸಿದ , ಈಗಲೂ ಸ್ಟಾಂಡ್ ಅಪ್ ಕಾಮೆಡಿಯನ್ಸ್ ಆಗಿ ವಿಮರ್ಶಿಸುತ್ತಿರುವ ಎರಡನೇ ಹಂತದ ವಿಮರ್ಶಕರು . ಹೀಗೆ ಸಾಗುತ್ತಾ ಪಂಪ ತನ್ನ ಕೃತಿಗಳಲ್ಲಿ ಮಂಡಿಸಿದ ಅಂದಿನ ಸ್ಥಿತಿಗಳ ವಿಮರ್ಶೆ , ಮಾಸ್ತಿಯವರಂತಹ ಸಾಹಿತಿಗಳ ವಿಮರ್ಶೆಯ ಬಗ್ಗೆ ವಿವರಿಸಿದ ದಿವಾಕರ್ ರವರು  ಕನ್ನಡ ಸಾಹಿತ್ಯದ ವಿವಿಧ ಘಟ್ಟಗಳಲ್ಲಿ ಪ್ರವರ್ಧಮಾನಕ್ಕೆ ಬಂದ ವಿಮರ್ಶಾ ಪ್ರಸ್ಥಾನಗಳ ಬಗ್ಗೆ ವಿವರಿಸಿದರು. ಕಡೆಯಲ್ಲೀ ಬೇಂದ್ರೆಯವರ  'ಗಾರುಡಿಗ' ಕವಿತೆಯ ಸಾಲುಗಳು ಕುವೆಂಪುರವರ ಸಾಲುಗಳನ್ನು ಉದ್ಘರಿಸಿ ಕಮ್ಮಟಕ್ಕೊಂದು ಭಧ್ರ ಬುನಾದಿ ಹಾಕಿದರು .
ಸಿ.ಏನ್. ಆರ್ .ರಂತಹ ಉಪನ್ಯಾಸಕರ ಮಾತು ಯಾರಿಗೆ ತಾನೇ ರುಚಿಸುವುದಿಲ್ಲ ?  ಸಾಹಿತ್ಯ ವಿಮರ್ಶೆಯ ವಿವಿಧ ಆಯಾಮಗಳನ್ನು ವಿವರಿಸುತ್ತಾ ಅನಂತಮೂರ್ತಿಯವರ ಸಂಸ್ಕಾರವನ್ನು ಪ್ರಾಕ್ಟಿಕಲ್ ಆಗಿ ವಿಮರ್ಶಿಸಿದ ರೀತಿ ಸೊಗಸಾಗಿತ್ತು . ಕಾರಂತರ ಕಾದಂಬರಿಗಳ ಓದು ಮೊದಲು ಕೆಲವು ಪುಟಗಳವರೆಗೆ , ನನ್ನ ಮಟ್ಟಿಗೆ ಕಷ್ಟ . ಅವಧಿಯಲ್ಲಿ ಮೈ ಮನಗಳ ಸುಳಿಯಲ್ಲಿ ಬಗ್ಗೆ ಬರೆದಾಗ ಈ ಬಗ್ಗೆ ನಾನು ಉಲ್ಲೇಖಿಸಿದ್ದೆ . ಸಿ.ಏನ್.ಆರ್ ಕೂಡ ಅದೇ ಮಾತನ್ನು ಸಭೆಯಲ್ಲಿ ಹೇಳಿದಾಗ ವಿಮರ್ಶಕ ಮತ್ತು ಸಾಮಾನ್ಯ ಓದುಗರ ಅಭಿಪ್ರಾಯಗಳು ಒಂದೇ ಆಗಿರಬಹುದು ಎಂದು ಬೀಗಿದ್ದೆ.  ಮತ್ತೆ ಅವರೊಂದಿಗೆ ಆ ಬಗ್ಗೆ ಪ್ರಸ್ತಾಪಿಸಿದಾಗ ಅದನ್ನವರು ನಗುತ್ತಲೇ ಒಪ್ಪಿದ್ದರು . ಕೃತಿಯೊಂದನ್ನು ಪ್ರತೀ ಬಾರಿಯೂ ಓದಿದಾಗ ವಿಮರ್ಶಕನ ಗ್ರಹಿಕೆಯೂ ಬದಲಾಗಬಹುದು ಮತ್ತು ಅವನದನ್ನು ಒಪ್ಪಿಕೊಳ್ಳುತ್ತಾನೆ ಎಂದು ಯಾವುದೇ ಅಳುಕಿಲ್ಲದೇ ಅವರು ಹೇಳಿದ್ದು ಸದಾ ಸ್ಮರಣೀಯ. ದೊಡ್ಡವರು ದೊಡ್ದವರಾಗುವುದೇ ಇಂತಹ ಮಾತುಗಳಿಂದ. ಅವರೇ ಬರೆದ 'ಸಾಹಿತ್ಯ ವಿಮರ್ಶೆ ' ನಮಗೆಲ್ಲರಿಗೂ ಕಮ್ಮಟದ ಕುರುಹಾಗಿ ದೊರೆತದ್ದು ಬೋನಸ್.

ನವೋದಯದ ರಮ್ಯಕಾಲದ ವಿಮರ್ಶೆಯೂ ರಮ್ಯವಾಗಿತ್ತೆಂದು ಖಾತರಿಯಾಗಿದ್ದು ಡಾ.ಜಿ.ಬಿ. ಹರೀಶರ ಮಾತುಗಳನ್ನು ಕೇಳಿದಾಗ. 'ವಿಮರ್ಶಕ ದಂಡಧಾರಿಯಲ್ಲ ದೀಪಧಾರಿ ' ಎಂಬ ಕುವೆಂಪುರವರ ಮಾತು ಆ ಕಾಲದ ಕನ್ನಡಿ . ಎ.ಆರ್.ಕೃಷ್ಣಶಾಸ್ತ್ರಿಗಳಿಂದ ಮೊದಲುಗೊಂಡು ಡಿವಿಜಿ, ಮಾಸ್ತಿಯವರ ವಿಮರ್ಶೆಯ ವಿವಿಧ ಮಗ್ಗಲುಗಳನ್ನು ಪರಿಚಯಿಸಿದ ಹರೀಶರು ತಮ್ಮ ಉಪನ್ಯಾಸವನ್ನು ಪೂರ್ತಿ ಮಾಡಿದ್ದು ಚಿಂತನೆಗೆ ಹಚ್ಚಿದ ಮಾತೊಂದರಿಂದ : 'ವಸ್ತು ಕಾಣುವುದು ನೋಡುವ ಹಂಬಲವಿದ್ದಾಗ ಮಾತ್ರ '    ಮುಂದುವರೆದ ಚರ್ಚೆಯಲ್ಲಿ ಕೆ.ವೈ.ಏನ್. ಕೂಡ ಜೊತೆಯಾದದ್ದು  ಹುಗ್ಗಿಯ ಮೇಲೆ ತುಪ್ಪ ಸುರಿದಂತಿತ್ತು .  
ಎಸ್.ಆರ್ . ವಿಜಯಶಂಕರ್ ಅವರ ಲೇಖನಗಳನ್ನು ಅಲ್ಲಲ್ಲಿ ಓದಿದ್ದರೂ ಇದೇ ಮೊದಲ ಬಾರಿ ಅವರ ಉಪನ್ಯಾಸ ಕೇಳಿದ್ದು .  ಸಾಪೋಕ್ಲಿಸ್ ನ ಅಗೆಮೆಮ್ನಾನ್ ಮನಸ್ಥಿತಿಯಿಂದ ಮೊದಲುಗೊಂಡ ಉಪನ್ಯಾಸ ಅದೆಷ್ಟೋ ಪಾತ್ರಗಳ , ಲೇಖಕರ ಪರಿಚಯ ಮಾಡಿಸಿತ್ತು . ಎಂ.ಜಿ. ಕೃಷ್ಣ ಮೂರ್ತಿ , ಸುರೇಂದ್ರನಾಥ್ ಮಿಣಜಗಿ , ಕುರ್ತಕೋಟಿ , ಪುಣೇಕರ್ ಎಲ್ಲರೂ ನಮ್ಮ ನಡುವೆ ಬಂದಿದ್ದರು .  ಓದಲೇ ಬೇಕಾದ ಒಂದಷ್ಟು ಪ್ರಬಂಧಗಳು , ವಾಕ್ಯವೊಂದು ಒಳಗಿಳಿಯುವ ಬಗೆ ಎಲ್ಲವನ್ನೂ ಮನಮುಟ್ಟುವಂತೆ ವಿವರಿಸಿದ ಉಪನ್ಯಾಸ ಅವಧಿಯ ಅರಿವೆಯೇ ಇಲ್ಲದಂತೆ ಸಾಗಿತ್ತು.
ಕೃತಿಯೊಂದರ   ರೂಪಕ್ಕೆ ತಕ್ಕ ಆಶಯ, ಆಶಯಕ್ಕೆ ತಕ್ಕ ಆಕೃತಿ ಇರಬೇಕೆಂಬುದು  ರೂಪ ನಿಷ್ಠವಿಮರ್ಶೆಯ ಸಾರ . ವಿವರಿಸಿದವರು ಡಾ.ಮಧುಸೂಧನ .  ಸಾಹಿತ್ಯ ಪ್ರಕಾರಗಳು , ಛಂದೋ ರೂಪಗಳಿಂದ ಮೊದಲಾಗುವ ವಿಮರ್ಶೆ ಸಾಹಿತ್ಯ ಪ್ರಕಾರವೊಂದರ ಸಾಧ್ಯತೆಗಳನ್ನು ಕುರಿತು ಚಿಂತಿಸುತ್ತದೆ . ೨೦ನೇ ಶತಮಾನದಿಂದೀಚೆಗೆ ಪ್ರವರ್ಧಮಾನಕ್ಕೆ ಬಂದ ಮನೋವಿಶ್ಲೇಷಣಾತ್ಮಕ ವಿಮರ್ಶೆಯ ಪರಿಚಯವನ್ನೂ ಉಪನ್ಯಾಸಕಾರರು ಮಾಡಿಸಿದರು . ವಿಮರ್ಶಾ ಪ್ರಸ್ಥಾನವೊಂದು ಸರ್ವತಂತ್ರ ಸ್ವತಂತ್ರವಲ್ಲ , ಒಂದರೊಳಗೊಂದು ಬೆರೆತಾಗಲೇ ವಿಮರ್ಶೆ ಪೂರ್ಣವಾಗಬಹುದೆಂಬ ಮಾತನ್ನು ಎಲ್ಲ ಉಪನ್ಯಾಸಕಾರರು ಒತ್ತಿ ಹೇಳಿದರು .

ಎಲ್ಲೆಡೆಯಲ್ಲೂ ಸ್ತ್ರೀಯನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡುವ ಸಮಾಜ , ವೇದಿಕೆಯ ಮೇಲಿನಿಂದ ಮಾತನಾಡುವುದಕ್ಕೂ ಆಕೆಗೆ ಸರಿಯಾದ ಪೋಡಿಯಮ್ ವ್ಯವಸ್ಥೆಮಾಡಿಲ್ಲವೆಂದು ವ್ಯಂಗ್ಯ ಭರಿತ ಹಾಸ್ಯದೊಂದಿಗೆ ಮಾತಿಗಿಳಿದ ಡಾ.ಬಿ.ಏನ್. ಸುಮಿತ್ರಾ ಬಾಯಿ , ಮಹಿಳೆಯರು ಮೊದಲು ಬರೆಯಲು ಪ್ರಾರಂಭಿಸಿದಾಗ ಎದುರಿಸಿದ ಸವಾಲುಗಳು , ಮಾಸ್ತಿಯವರ ವಿಮರ್ಶೆಯಿಂದಾಗಿ ಬರಹವನ್ನೇ ನಿಲ್ಲಿಸಿದ ತಿರುಮಲಾಂಬರ ಪ್ರಸಂಗ,  ವಿಜಯಾ ದಬ್ಬೆ , ಪ್ರತಿಭಾ ನಂದಕುಮಾರ್ , ಸ.ಉಷಾ ಅವರ ಕವಿತೆಗಳಲ್ಲಿ ಕಾಣುವ ಸ್ತ್ರೀ ಜಗತ್ತುಗಳನ್ನೂ ವಿವರಿಸುತ್ತಲೇ  ಸ್ತ್ರೀವಾದಿ ವಿಮರ್ಶೆ  ಎಂಬುದು ಸಮಾಜದಲ್ಲಿ ತನ್ನಿರುವಿಕೆಯನ್ನು ಸಾಬೀತು ಮಾಡಲು ಹೊರಟ ಮಹಿಳಾ ಹೋರಾಟದ ಒಂದು ಮುಖ ಮಾತ್ರ ಎಂಬುದನ್ನು ಒತ್ತಿ ಹೇಳಿದರು . ಸಮಾನತೆಯನ್ನು ಸಾಧಿಸುತ್ತಿರುವ ಇಂದಿನ ಮಹಿಳೆಯ ಸಾಹಿತ್ಯವನ್ನು ಸ್ತ್ರೀವಾದಿ ತಕ್ಕಡಿಯಲ್ಲಿಡುವುದು ಎಷ್ಟು ಸರಿ ? ಎಂಬ ಜಯಶ್ರೀ ಕಾಸರವಳ್ಳಿಯವರ ಪ್ರಶ್ನೆಗೆ  ಸಮಯಾಭಾವದಿಂದ ಉತ್ತರ ದೊರೆಯಲಿಲ್ಲ . 
`ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣಮಿತ್ರ' ಘೋಷವಾಕ್ಯವನ್ನು ವಿವರಿಸುತ್ತಲೇ ಚಳುವಳಿಯಲ್ಲಿ ನಡೆದ ಕೆಲವು ಕಹಿ ಘಟನೆಗಳನ್ನೂ ನೆನಪಿಸಿಕೊಂದವರು ಬಂಡಾಯ ಸಾಹಿತ್ಯ ವಿಮರ್ಶೆಯನ್ನು ವಿವರಿಸಿದ ಡಾ.ಕೆ.ವೈ. ನಾರಾಯಣ ಸ್ವಾಮಿ ಯವರು.  ಸಾಹಿತ್ಯವೆಂಬುದು ಸಮಾಜಕ್ಕೆ ಹಿಡಿದ ಕನ್ನಡಿಯಾಗಬೇಕೆಂಬ ಆಶಯದೊಂದಿಗೆ ಉದಯಿಸಿದ ,ಇತಿಹಾಸದಿಂದಲೂ ಬೇರೆ ರೂಪಗಳಲ್ಲಿ ಚಾಲ್ತಿಯಲ್ಲಿರುವ ಬಂಡಾಯ ಸಾಹಿತ್ಯದ ಚರ್ಚೆ ಈ ಉಪನ್ಯಾಸದ ತಿರುಳು . 
ಕಮ್ಮಟದ ಕೊನೆಯ ಉಪನ್ಯಾಸವಾದ 'ಆಧುನಿಕೋತ್ತರ ವಿಮರ್ಶೆ' ಯ ಉಪನ್ಯಾಸ ಮುಗಿದ ನಂತರ ಅನಿಸಿದಿದ್ದು , ಅದು ವಿಮರ್ಶೆಯ ಉಪನ್ಯಾಸದ ಜೊತೆಗೆ ಇಂದಿನ ಸಮಾಜದ ಮನಸ್ಥಿತಿಯ ಬಗೆಗಿನ ಉಪನ್ಯಾಸವೂ ಆಗಿತ್ತು . ವಿರಚನೆಯಿಂದಲೇ ಶಬ್ಧವೊಂದು ಅರ್ಥಗಳಿಸಿಕೊಳ್ಳುವ ಪರಿಯನ್ನು ಡಾ. ಓ.ಎಲ್. ನಾಗಭೂಷಣ ಸ್ವಾಮಿಯವರು ವಿವರಿಸಿದ ರೀತಿ ಅದ್ಭುತವಾಗಿತ್ತು . ಡೆರಿಡಾ, ಗಾಯತ್ರಿ ದೇವಿ ಸ್ಪೀವಾಕ್ ರ ಸಿಧ್ಧಾಂತಗಳನ್ನು ಸರಳ ಉದಾಹರಣೆಗಳೊಂದಿಗೆ ಉಪನ್ಯಾಸಕಾರರು ವಿವರಿಸಿದರು . ಜ್ಞಾನವೆಂಬುದು ಸ್ಥಾನಾವಲಂಬಿತ (knowledge is positional) ಎಂಬ ಫುಕೋನ ಸಿಧ್ಧಾಂತ ಬಹುಶಃ ಇಂದು ನಾವರಿಯಬೇಕಿರುವ ಪ್ರಮುಖ ಸಿಧ್ಧಾಂತಗಳಲ್ಲೊಂದು .  ಕೃತಿ , ಕೃತಿಕಾರ , ಓದುಗ , ಲೋಕ ಇವುಗಳಲ್ಲಿ ಯಾವುದನ್ನೂ ತನ್ನ ಕೇಂದ್ರವನ್ನಾಗಿ ಪರಿಗಣಿಸದಿರುವುದು ಆಧುನಿಕೋತ್ತರ ವಿಮರ್ಶೆಯ ಪ್ರಮುಖ ಲಕ್ಷಣ ಎಂಬುದು ಈ ಉಪನ್ಯಾಸದ ಭಾರತ ವಾಕ್ಯವಾಗಿತ್ತು .  ಭಾಷೆ ಎಂಬುದು ಅರ್ಥಗಳ ಲೀಲೆ ಎಂಬುದು ನನಗಿಷ್ಟವಾದ ಸಾಲು.

ಎರಡು ದಿನಗಳ ಕಮ್ಮಟದಿಂದ ವಿಮರ್ಶೆಯನ್ನಲ್ಲದಿದ್ದರೂ ಸಾಹಿತ್ಯವನ್ನು ಓದುವ - ಅರ್ಥೈಸಿಕೊಳ್ಳುವ ರೀತಿ , ಕಾಲದೊಂದಿಗೆ ಹೆಜ್ಜೆಹಾಕುತ್ತ ಬದಲಾದ ಪರಿಮಾಣಗಳು, ಪತ್ರಿಕೆಗಳಲ್ಲಿ ಮರೆಯಾಗುತ್ತಿರುವ ವಿಮರ್ಶೆ ಮತ್ತು ಅದರಿಂದಾಗಿ ದಿಕ್ಕುತಪ್ಪುತ್ತಿರುವ ಅಥವಾ ದಿಕ್ಕುತಪ್ಪಬಹುದಾದ ಓದುಗ , ವಿಮರ್ಶಕನಿಗಿರಬೇಕಾದ ಸಾಹಿತ್ಯದ ಒಟ್ಟು ನೋಟ ... ಮುಂತಾದ ವಿಷಯಗಳ ಪರಿಚಯವಾಯಿತು . ಆಯೋಜಿಸಿದ ಜಯಲಕ್ಷ್ಮಿ ಪಾಟೀಲ್ ,ವೀರೇಂದ್ರ ಗೌಡ , ನಿರ್ದೇಶಿಸಿದ ದಿವಾಕರ್ ಸರ್ ಅವರಿಗೆ ವಂದನೆಗಳು . 

Thursday, October 30, 2014

ಬಲಿ

ಹಿಂದಿನ ಪೋಸ್ಟನ್ನು ತಿದ್ದಿದ ಮೊದಲ ಪ್ರಯತ್ನ ಕೆಳಗಿದೆ ....
(ತಿದ್ದದ  ಪ್ರಯತ್ನವನ್ನೂ ಓದುವಿರಾದರೆ  'ನಾವು ಮನುಜರು' ನೋಡಿ )


ಚಿತ್ರ ಕೃಪೆ : ಅಂತರ್ಜಾಲ 

ಕಾಮದ ಕತ್ತಲಾಟಕ್ಕೆ 
ಚಿಗುರಿದ ಮೊಳಕೆ 
ಮಡಿಲಿಲ್ಲ  ತಾಯಿ ಜೀವಕೆ !
ನೆನಪಾದಳು ಕೊಟ್ಟಿಗೆಯ ತುಂಗೆ 
ಹೇಗೂ 'ನವರಾತ್ರಿ'ಯ ಹೊತ್ತು 
ಚುಚ್ಚಿದರಾಯಿತು ಅವಳಿಗೆ ಬೀಜ ಹತ್ತು !
ಯಾರದ್ದದೆಂದು  ಕೇಳಲು ಅವಳಿಗಿಲ್ಲ ಬಾಯಿ 
ಹತ್ತುಪಾಲು  ವಾಸಿ ಹರಿದು ತಿನ್ನುವ ಕಸಾಯಿ 
ಅವಳ ಮಗುವಿನ ಹಾಲು 
ಇವಳ ಕಂದನ ಪಾಲು 
ಇದು ಜನನದ  ಬಲಿ !


ಜೀವ ಬೆಳೆಯಲು ಬೇಕೊಂದು ಮಡಿಲು 
ತಾಯಿ ಬೇರ ತಂದರಾಯ್ತು  ಮಹಾನಗರಿಗೆ  
ಸಿಗದ ಮಣ್ಣಿಗೆ ಚಡಪಡಿಸುತ್ತಿದೆ ಬೇರು  ಜೀವ 
ಕರುಳ ಬಳ್ಳಿಯ ಚಿಗುರು ಮರೆಸದು ಬೇರ ನೋವ 
ಇದು ಜತನದ  ಬಲಿ !


ಚಿಗುರಿಗೊಂದು ನೆಲ ಬೇಡವೇ ?
ತನ್ನದೆಂಬ ನೆಲೆ ಬೇಡವೇ ?
ಉರುಳಿದ ಗುಲ್ಮೊಹರಲಿತ್ತು 'ಮೈನಾ' ಗೂಡು 
ಇನ್ನು ಕೇಳುವರಾರು ಅವಳ ಪಾಡು ?
ಕಾದದೇ ಅಭಿಮನ್ಯುವಾದ ಅವಳ ಮರಿಗಳ ಹಾಡು 
ಕಟ್ಟಿದ ಎಂಟಸ್ತಿನ ಹೊರಗೊಂದು ಚಿಂದಿಯ ಡಬ್ಬ 
ಅದರಲೆಂದೂ ನಡೆಯಲಿಲ್ಲ ಮೈನಾ ಹಬ್ಬ 
ಇದು ನೆಲೆಯ ಬಲಿ !


 ಜೀವಜಾಲವ  ಕಾಣಬೇಕು ಬೆಳೆದ ಜೀವ
ಘರ್ಜಿಸುವುದ  ಮರೆತ ರಾಜ 
ಪಂಜರದಲಿಟ್ಟ ಮೂಕ ಗಿಳಿ 
ಆಡುವುದ ಮರೆತ ಮೊಲ 
ನೋಡುತ್ತಾ ನಿಂತ ಕಾಲ 
ಇದು ಬುಧ್ಧಿಯ  ಬಲಿ !


ಬಲಿಗಳಲ್ಲೇ ಬೆಳೆದ ಜೀವ 
ಚಕ್ರವರ್ತಿಯದಲ್ಲ ಮನೋಭಾವ 
ಹೇಗಾದಿತು ?
ಹೆಜ್ಜೆ ನಮಸ್ಕಾರದಲುದಯಿಸಿದ 
ತಂಗದಿರ, ತಾರೆಯರ  
ಬಲಿಗಳ ಪಯಣಕ್ಕಿಲ್ಲ ಕೊನೆ 
ಬದುಕು (?) ನಡೆಯುವುದೇ ಬಲಿಗಳಲ್ಲಿ 
ಅವರು ಕಲಿತ ಸತ್ಯ 
ನಾವೇ ಕಲಿಸಿದ ತಥ್ಯ 
ಜಗದಗಲ ಕಾಳಿಯ ನಾಲಿಗೆ 
ಬಲಿಯಾಗಲಿ  'ನಾನು' ನಾಳೆಗೆ . 

Monday, September 29, 2014

ನಾವು ಮನುಜರು

ಚಿತ್ರ ಕೃಪೆ : ಅಂತರ್ಜಾಲ


ತಿದ್ದುವ ಪ್ರಯತ್ನ  ಜಾರಿಯಲ್ಲಿದೆ ....
 ಹೊತ್ತು, ಹೆತ್ತು, ಪೊರೆದೆ
ಸುಖಿಸಲಿಲ್ಲವೇ ? ಎನ್ನುವುದೊಂದು ವಯಸು
ತಟ್ಟೆಯಲ್ಲಿನ ಊಟ ರುಚಿಸದಾದಾಗ
ಅಮ್ಮ ನೀನಿದ್ದರೆ ಚೆನ್ನಿತ್ತೆ  ಎನ್ನುವುದು ಮತ್ತೊಂದು
ಸಂತತಿ ಮುಂದುವರೆದಾಗ ನನ್ನ ಪೋರೆದಂತೆ
ಇದನ್ನೂ ಪೊರೆಯೆ ಎನ್ನುವುದು ಸ್ವಾರ್ಥವಲ್ಲ,
ಅಮ್ಮ, ಮೊಮ್ಮಕ್ಕಳ ಸುಖ ಕಾಣಲೆಂಬ ಹಂಬಲ !
ಅದೋ ಅಲ್ಲಿದೆ ನಿನಗೇಂತ ಒಂದು ರೂಮು
ಈ ಮಹಾನಗರದಲ್ಲಿ ಒಬ್ಬಳಿಗೆ ೧೦*೧೦ !
ಇನ್ನು ಎಲ್ಲರನ್ನೂ ಹೊತ್ತ ಅವಳಿದ್ದಾಳಲ್ಲ
ಅವಳ ಕಂಬನಿಗೆ ಕಣ್ಣಿಲ್ಲ
ಹೆತ್ತ ಮಕ್ಕಳೆಲ್ಲ ಕಿವುಡರು !

ಹೆಣ್ಣು ಕಾಯುತ್ತಿದ್ದಳು
ಮುರಿದ ಗೂಡಿಗೊಂದು
ಹರಿದ ಚಿಂದಿ ಹೊತ್ತು
ಗಂಡು ಬರುವನೆಂದು
ಗಂಡುಬರುವ ಹೊತ್ತಿಗೆ
ಗುಲ್ಮೊಹರ್ ಧರೆಗುರುಳಿದೆ
ತನ್ನವಳೊಂದಿಗೆ, ಇನ್ನೂ ಹೊರಬರದ
ತನ್ನ ಸಂತತಿಯೂ  ಕಳೆದಿದೆ ಎಂದು
ಅವನಾರಲ್ಲಿ ಮೊರೆಇಡಬೇಕು ?
ಅರೆ, ಗುಲ್ಮೊಹರ್ ಉರುಳಿದರೆನಾಯಿತು
ಅಲ್ಲಿ ಕಟ್ಟಿದ ಅಪಾರ್ಟ್ಮೆಂಟಿನ ಬಾಲ್ಕನಿಯಲ್ಲೊಂದು
ಹಳೇ  ರಟ್ಟಿನ ಪೆಟ್ಟಿಗೆ ಇಟ್ಟು , ಚಿಂದಿ ಬಟ್ಟೆ ಇಟ್ಟು ,
ಚಂದದ ಗೂಡನ್ನು ಕಟ್ಟಿ ಕೊಡಲಿಲ್ಲವೇ ?
ಅಜ್ಜ ಕಟ್ಟಿದ ಹಂಚಿನ ಮನೆ ಅವನಿಗೆ ಮನೆಎನಿಸಲಿಲ್ಲ
ಕಾಗಕ್ಕ , ಗುಬ್ಬಮ್ಮ , ಮೈನಾ ರಾಣಿ, ಹದ್ದು
ಮುದ್ದು ಗಿಳಿ ರಾಮ  ಯಾರೂ
 ಡಬ್ಬವನ್ನು ಗೂಡೆಂದು ಬಗೆಯಲೇ ಇಲ್ಲ !

ಅಜ್ಜನ ಮನೆಯನ್ನು  ಮೊಮ್ಮಗ
ಮರೆತನೆಂಬುದು ತಪ್ಪು ಎಣಿಕೆ
ಹಸಿರಿಗಾಗಿ , ಕೈತುತ್ತಿನ ನೆನಪಿಗಾಗಿ
ವಾರಾಂತ್ಯದ ಆನಂದಕ್ಕಾಗಿ
ತನ್ನ 'ಮನೆ'ಗಾಗಿ ಮೊಮ್ಮಗ ಅಜ್ಜನ ಮನೆ ಉಳಿಸಿದ
ಮಹಾನಗರಿಯಲ್ಲೊಂದು , ಹಳ್ಳಿ ಯಲೊಂದು
ಹೋದಲೆಲ್ಲಾ ಒಂದೊಂದು ಮನೆ
ಬೇರುಬಿಡಲಾಗದ ಗಿಡಕ್ಕೆ
ನೂರು ಸೂರು !

ಗೌರಿಗೊಂದು ಇಂಜೆಕ್ಷನ್
ಕೊಡಿಸಬೇಕು ಈ ವಾರದಲ್ಲಿ
ಅಜ್ಜಿ  ಹೇಳಿದರೆ , ಮೊಮ್ಮಗಳು ಕಣ್ಣರಳಿಸಿ
ಕೇಳುತ್ತಾಳೆ ಯಾಕಜ್ಜಿ ಗೌರಿಗೆ ಹುಶಾರಿಲ್ಲವೇ?
ಇಲ್ಲ ಕಣೆ ,  ಅವಳಿಗೊಂದು ಕರುಹುಟ್ಟಬೇಕು
ಹಸಿವು , ನಿದ್ರೆ, ಭಯ , ಲೈಂಗಿಕತೆ ...ಎಲ್ಲ ಜೀವಿಗೂ ಸಮಾನ
ಸಚ್ಚರಿತ್ರೆಯ ಸಾಲಿನಲ್ಲಿ ಗೌರಿ ಕೆನ್ನೆಗೆ ಹೊಡೆದಂತಾಗುತ್ತದೆ
ಅಳಲಾಗದೆ ಗೌರಿಯ ಮುಂದೆ ನಿಲ್ಲುತ್ತೇನೆ , ತಿವಿದು ಕೊಂದುಬಿಡೆ 
ಎಂದು ಬೇಡುತ್ತೇನೆ , ಕೆಚ್ಚಲಿಗೆ ಹಚ್ಚುವ ಯಂತ್ರದತ್ತ
ನೋಡುತ್ತಿದ್ದ ಗೌರಿ ,  ನನ್ನನ್ನೇ ಕೊಂದು ಮಾರಿಬಿಡೆ  ಎಂದಂತಾಗುತ್ತದೆ
ಹತ್ತರ ಮಗಳು ಮನೆ ಬಿಟ್ಟು ಹೊರಟರೆ
ಅವಳು ಬರುವವರೆಗೂ ಕಣ್ಣು ಹೊಸ್ತಿಲಕಡೆ
ಗೌರಿಯ ಶಾಪವಿರಬಹುದೇ ಇದು ? 

ಅಮ್ಮಾ, ಇದೇ ಏನೇ ಲಯನ್ ದ ಕಿಂಗ್
ಮೃಗಾಲಯದ  ಪಕ್ಕದ ರೋಡಿನ
ಟ್ರಾಫಿಕ್ಕಿನ ಸದ್ದಿನಲ್ಲಿ ಘರ್ಜಿಸುವುದನ್ನೂ
ಮರೆತು ಹೋಗಿರುವ  ರಾಜನನ್ನು
ಕಿಂಗ್ ಎಂದು ಹೇಗೆ ಪರಿಚಯಿಸಲಿ ?  

ಬೇಡಲು ಸೆರಗೂ ಇಲ್ಲದಂತೆ
ನಾವು ಕೊಂದ ತಾಯಂದಿರ ಲೆಖ್ಖ ಇಟ್ಟವರಾರು ?
ಒಬ್ಬಳನ್ನೇ ಸಾಕಲಾರದವರಿಗೆ
ಒಂಭತ್ತು ತಾಯಂದಿರ  ಪೂಜೆ
ಕಾಳಿ  ಅವತರಿಸುವ ದಿನವೆಂದು   ?
ನಮ್ಮೀ  ಸ್ವಾರ್ಥಕ್ಕೆ ಕೊನೆಯೆಂದು ?

ಕಾಳ ರಾತ್ರಿ ಕಳೆದು ಕಾಳಿ ಬೇಗ ಅವತರಿಸಲಿ. ಶುಭಾಶಯಗಳು

Tuesday, January 17, 2012

ಮಲ್ಲಿಗೆ ಹಂಬಿನ ಕಥೆ

ಆಸೆ ಇಂದಲೋ , ಪ್ರೀತಿಇಂದಲೋ,
 ಇನ್ಯಾವುದೋ ಭಾವದಿಂದಲೋ
ಹಾಕಿದೊಂದು ಬೀಜದಿಂದ ಬಳ್ಳಿಯೊಂದು ಹಬ್ಬಿತ್ತು.
ಸೃಷ್ಟಿ ನಿಯಮಕೆ ಸಾಕ್ಷಿಯಾಗಿತ್ತು

ಮಾಲಿಗದ ಕಂಡರೆ ಮುದ್ದು
ಎಲ್ಲ ನಿರ್ಭಂದಗಳೂ ಅದಕೆ ರದ್ದು
ಎಲ್ಲಿಂದರಲ್ಲಿ ಕಾಲಿಗೆ ತೊಡರುವ ಬಳ್ಳಿ
ಅಚ್ಚ ಮಲ್ಲಿಗೆ ಬಿಡುವ ಬಿಚ್ಚು ಬಳ್ಳಿ

ಹಬ್ಬುತ್ತಲೇ ಹೋಯ್ತು ಬಳ್ಳಿ ಸ್ವಚ್ಚಂದದಿಂದ
ಮಾಲಿ ನೋಡುತ್ತಿದ್ದ  ಪ್ರೀತಿ, ಗರ್ವದಿಂದ
ಹೂ ಬಿಟ್ಟ ಬಳ್ಳಿ ಆಹಾ ಎನಾನಂದ
ಇದೇ ಪೂ ನಾಕ ಕಾಣಿರೆಂದ


ಒಂದು ದಿನ ಮಾಲಿಗದೆನ್ನೆನಿಸಿತೋ ಬಳ್ಳಿಯ ಕಡಿದ
 ಚೂರು ಬೇರ, ತೆಗೆಯ ಲಾರದೆ, ತೆಗೆದ
ಇನ್ನೊಂದು ತೋಟದಲಿ ನೆಟ್ಟ
ಅದೆರೆಲ್ಲ ಹೊಣೆಯ ಇನ್ನೊಬ್ಬ ಮಾಲಿಗೆ ಬಿಟ್ಟ

ಹೊಸ ತೋಟ ಹೊಸ ಮಣ್ಣು
ನೋಡುತ್ತಿದ್ದಾವೆ ಅದೆಷ್ಟೊಂದು ಕಣ್ಣು
ಬಳ್ಳಿಗೆ ಎಲ್ಲವೂ ಹೊಸದು
ಮಾಡಲೇನೂ  ತೋಚದು

ಹೊಸ ತೋಟದಲ್ಲಿ ಹೊಸ ಚಪ್ಪರ
ಹೊಸ ನೀರು ಹೊಸ ಗೊಬ್ಬರ
ಬಳ್ಳಿಯ ಧರ್ಮ ಹಬ್ಬುವುದು
ಹಬ್ಬುತ್ತ ಹಬ್ಬುತ್ತ ಹೂ ಬಿಡುವುದು

ಧರ್ಮ ಪಾಲನೆಯಾಯಿತು
ಬಳ್ಳಿ ಅಷ್ಟಿಷ್ಟು ಬೆಳೆಯಿತು
ಆಮೇಲೆ ನಡೆದದ್ದು ಸಂಸಾರ ಸಮರ
ಅದು ಬಿಟ್ಟಿಲ್ಲ ಯಾವ ಪಾಮರರ

ಹೊಸ ತೋಟದ ಹಕ್ಕಿಗಾಗಿ ಗುದ್ದಾಟ
ಇಲ್ಲದ ಇದ್ದ ಎಲ್ಲದಕ್ಕಾಗಿ ಕಾದಾಟ
ಒಬ್ಬನಿಗೆ  ಬಳ್ಳಿಯ ಹೂ ಬೇಕು
ಅದ್ಯಾವನೋ ದೇವರಿಗೆ ಎಲೆಯೂ ಬೇಕು !

ಈ ತೋಟದಲ್ಲೆಲ್ಲ ಇದೆ ಸವಿ ಮಣ್ಣು, ಸಾರ ಗೊಬ್ಬರ
ಹಬ್ಬಲು ಕಾದಿದೆ ವಿಶಾಲ ಚಪ್ಪರ
ಎಲ್ಲ ಕೊಟ್ಟ ಮಾಲಿ ಕಿತ್ತುಕೊಂಡ ಒಂದು ವಸ್ತುವ
ಹಬ್ಬುವ ಸ್ವತಂತ್ರವ!




Monday, January 09, 2012

ಹೀಗೊಂದು ಸ್ವಗತ


ಚಿತ್ರ ಕೃಪೆ :ಅಂತರ್ಜಾಲ

ಹುಟ್ಟು ಒಂದು ಪವಾಡವೋ ಆಕಸ್ಮಿಕವೋ ನಾನರಿಯೆ
ತಂದೆ ಮಾಡಿದ ಯಜ್ಞದಿಂದ ಬಂದವಳೆಂದು ಜನ ಯಾಜ್ಞಸೇನೆ ಅಂದರು,
ಪಾಂಚಾಲ ದೇಶದವಳೆಂದು ಪಾಂಚಾಲಿ ಎಂದರು,
ಬಣ್ಣ ನೋಡಿ(?) ಕೃಷ್ಣೆ ಎಂದರು
ಆಗಲೂ ನಾ ನಗುತ್ತಲೇ ಇದ್ದೆ

ರಾಜ ಕುಮಾರಿಯ ಬಾಲ್ಯ ಚೆನ್ನಾಗೇ ಇತ್ತು
ಆಮೇಲೆ ನಡೆದದ್ದು ಸ್ವಯಂವರ
ವೀರಾಧಿವೀರನನ್ನೇ ಅಳಿಯನಾಗಿ ಪಡೆಯಬೇಕೆಂಬ ಅಪ್ಪನ ಹಂಬಲ,
ಒಂದು ವಿಚಿತ್ರವೆನಿಸುವ (?)  ಪಂದ್ಯ ಏರ್ಪಡುವಂತೆ ಮಾಡಿತ್ತು
ಆಗಲೂ ನಾ ನಗುತ್ತಲೇ ಇದ್ದೆ

ಕರ್ಣ ಬಿಲ್ಲನೆತ್ತ ಹೊರಟಾಗ ಗಾಭರಿಯಾಯಿತ? ಗೊತ್ತಿಲ್ಲ
ಆದರೆ ಅಷ್ಟರಲ್ಲಿ ಯಾರೋ ಅವನ ಕುಲದ ಪ್ರಶ್ನೆ ತೆಗೆದು,
ಅವನನ್ನು ಹಿಂದೆ ಕಳಿಸಿಯಾಗಿತ್ತು
ಇನ್ನುಳಿದವರು ಲೆಕ್ಕಕ್ಕೆ ಬಂದಿದ್ದರು
ಆಗಲೂ ನಾ ನಗುತ್ತಲೇ ಇದ್ದೆ

ಆಮೆಲೆದ್ದವನು ಪಾರ್ಥ
ಬಿಲ್ಲನೆತ್ತಿ , ಹೆಡೆಕಟ್ಟಿ  ಬಾಣ ಹೂಡಿದಾಗ,
ನನ್ನ ಮುಖದಲ್ಲೊಂದು ಮಂದಹಾಸ ಮೂಡಿ,
ನಾ ತಲೆ ತಗ್ಗಿಸಿಯಾಗಿತ್ತು
ಆಗಲೂ ನಾ ನಗುತ್ತಲೇ ಇದ್ದೆ

ಮುಂದಿನದೆಲ್ಲ ಇತಿಹಾಸ
ಐವರು ಗಂಡಸರೊಂದಿಗೆ,
ಬದುಕೆಲ್ಲ ನಿಂದನೆ, ಕಣ್ಣೀರಲ್ಲಿ   ಕಳೆದ ಅತ್ತೆಯೊಂದಿಗೆ
ಇಲ್ಲದ ರಾಜ್ಯದ ಪಟ್ಟ ಮಹಿಷಿಯಾಗಿ ನಡೆದೆ
ಆಗಲೂ ನಾ ನಗುತ್ತಲೇ ಇದ್ದೆ

ಗೆದ್ದು (?) ತಂದ ಪಾರ್ಥ ಮತ್ತೆ ಯಾರನ್ನೋ ಕರೆತಂದಾಗಲೂ
ಉಳಿದ ಗಂಡಂದಿರೂ ಅವನ ಹಾದಿ ಹಿಡಿದಾಗಲೂ
ದುರುಳನೊಬ್ಬ ಸೀರೆಯ ಸೆಳೆವಾಗಲೂ
ಮತ್ತೆ  ಐವರೊಂದಿಗೆ  ಕಾಡಿಗೆ ಹೊರಟಾಗಲೂ
ನಾ ನಗುತ್ತಲೇ ಇದ್ದೆ

ಆಮೇಲೆ ನಡೆದ ಕುರುಕ್ಷೇತ್ರದಲ್ಲಿ
ಹದಿನೆಂಟು ದಿನಗಳ ಘೋರ ನರಕ
ಗೀತೆಯ ತಂಪಿಗೂ,ಅದ್ದನ್ನಾರಿಸುವ ಶಕ್ತಿ ಇರಲಿಲ್ಲವೇನೋ
ಆಶ್ಚರ್ಯವಾಗಬಹುದು  ಲೋಕಕ್ಕೆ, ಆದರೆ
ಆಗಲೂ ನಾ ನಗುತ್ತಲೇ ಇದ್ದೆ

ಈಗ ಹೇಳುವೆ ಕೇಳಿ ನನ್ನ ನಗುವಿನ ರಹಸ್ಯ,
ಅವನೇ,ನನ್ನನ್ನು ತನ್ನ  ತಂಗಿ ಎಂದು ಬಗೆದ  ಆ ಸ್ವಯಂಭು !
ಐವರೊಂದಿಗೆ ಹಸೆಮಣೆ ಏರಿದಾಗ ಬಂದ,
ಸವತಿಯರಿಗೆ ತುಂಬು ಹೃದಯದಿಂದ ಆಶಿರ್ವದಿಸುವಾಗ ನನ್ನೊಡನಿದ್ದ,
ರಾಜ್ಯ ಹೋದಾಗ ಬಂದ,
ಮಕ್ಕಳು ಇನ್ನಿಲ್ಲವಾದಾಗ ಬಂದ
ಆ ಅನುತ್ತಮನೆ ನನ್ನೊಟ್ಟಿಗಿದ್ದಾಗ ನಾ ನಗದೆ ಹೇಗೆ ಇರಲಿ?
ಅವ ಬಂದು ಕಾಯ್ವಾಗ  ಒಮ್ಮೆ ಏನು, ಬಾರಿ  ಬಾರಿ ದುರುಳರೆನ್ನ ಸಭೆಯಲ್ಲಿ ನಿಲ್ಲಿಸಲಿ.
ಆದರೊಂದೇ ಪ್ರಾರ್ಥನೆ ಅಣ್ಣಾ,
ದೇಹಕ್ಕೊಂದು ಮರೆ ಕೊಟ್ಟು
ಆತ್ಮದ ಮರೆಯ ಸರಿಸಿ
ನಿನ್ನಳೊಂದಾಗುವಂತೆ ಹರಸು 

Thursday, November 10, 2011

ಎರವಲು

ಅವನ ಮೌನ ನನ್ನ ಶಬ್ಹಗಳನ್ನೂ ನುಂಗಿತ್ತು
ಅವನೊಂದು ನಗು ನಂದಿದ  ಆತ್ಮವನ್ನೂ ಹೊತ್ತಿಸಿತ್ತು

ಮೂಲ :वह चुप रहे तो मेरे दिल के दाग जलते हैं
जो बात करले तो भुजते चिराग जलते हैं

 ನಿನ್ನ ನೆನಹಲ್ಲೇ ನನ್ನ ಇರುವೆಲ್ಲ ಕಳೆಯಲಿ
ಇರುಳೂ ನೆನಪಲ್ಲೇ ಸಾಗಬೇಕು 
ಏಕೆಂದರೆ, ಕನಸ ಲಾಲಿಗಳೂ ನಿನ್ನೊಂದಿಗೇ ಹೊರಟು ಹೋಗಿವೆ

ಮೂಲ :तुम्हे याद करते करते जायेगी रैन सारि
तुम ले गए हो, अपने संग नींद भी हमारी

ಒಲವ ಭಾಷೆಯ ಮುರಿವ ಮನಸು ನನಗೂ ಇರಲಿಲ್ಲ, ನಿನಗೂ ಇರಲಿಲ್ಲ
ಆದರೆ, ಬದುಕು ನಮ್ಮ ಹಾದಿಯನ್ನೇ ಬೇರೆ ಮಾಡಿತಲ್ಲ

ಮೂಲ: न तुम बेवफा हो , न हम बेवफा हैं
मगर क्या करें, अपनी राहें जुदा हैं

ನೆನಪ ಮೂಟೆ ಕಟ್ಟಿ ಕಸದ ಬುಟ್ಟಿಗೆಸೆದಿದ್ದೇನೆ ನಾನು
ಆದರೇಕೋ ಬುಟ್ಟಿ ಖಾಲಿ ಮಾಡಲು ಮನಸೇ ಒಪ್ಪುತ್ತಿಲ್ಲ
ಮೂಲ: Ghazals by great Madan Mohan

Wednesday, October 19, 2011

ಸಾಧನ ಕೇರಿ

" ಕವಿ ಜೀವನದ ಬ್ಯಾಸರ ಹರಿಸಾಕ, ಹಾಡ ನುಡಿಸಾಕ
ಒಂದು ಹೂತ ಹುಣಸಿ ಮರ ಸಾಕ "
-- ಬೇಂದ್ರೆಯವರ ಜೋಗಿ ಕವನದಿಂದ

" ಅರ್ಥವಿಲ್ಲ ಸ್ವಾರ್ಥ ವಿಲ್ಲ ಬರಿಯ ಭಾವಗೀತ "
--ಬೇಂದ್ರೆಯವರದೇ ಕವಿತೆ ಇಂದ , ಕವಿತೆಯ ಹೆಸರು ಗೊತ್ತಿಲ್ಲ :-)

ಎರಡೂ ಕೇಳಿದ್ದು  ಬನ್ನಂಜೆಯವರ  ಮಾತಲ್ಲಿ

ಸೃಷ್ಟಿಸಿದೆನೆಂಬ ಗರ್ವ ಬೇಡ
ಹೊಗಳಿಕೆಗಾಗಿ ಪರ್ವ ಬೇಡ
ಪದಗಳಲ್ಲಿದ್ದ ಎಲ್ಲ ಭಾವ  ದಕ್ಕದು ಯಾರಿಗೂ
ಸ್ವತಹ ಅದನ ಬರೆದವನಿಗೂ!

ನಿನ್ನ ಸ್ಫುರಣ ಹೇಳಿದ್ದೊಂದು
ನಿನ್ನ ಮನ ಅರ್ಥೈಸಿದ್ದೊಂದು
ಪದ ಪ್ರಾಸ ಗಳ ಸುಳಿಯಲ್ಲಿ ಸಿಕ್ಕಿ
ನೀ ಬರೆದ್ದದೊಂದು
ಆದ್ದರಿಂದ
ಸೃಷ್ಟಿಸಿದೆನೆಂಬ ಗರ್ವ ಬೇಡ
ಹೊಗಳಿಕೆಗಾಗಿ ಪರ್ವ ಬೇಡ

ಓದ್ವ  ಅವನಾರೋ ?
ಬರೆದ ನೀನ್ಯಾರೋ ?
ಮನ ಮನಗಳ ನಡುವಿನ ಅಂತರ ದಲ್ಲಿ
ಅದೆಷ್ಟು ಭಾವಗಳು ಕಳೆದವೋ ?
ಆದ್ದರಿಂದ
ಸೃಷ್ಟಿಸಿದೆನೆಂಬ ಗರ್ವ ಬೇಡ
ಹೊಗಳಿಕೆಗಾಗಿ ಪರ್ವ ಬೇಡ

ವರಕವಿಯ ಕರದಲ್ಲಿ ಹುಣಸಿ ಮರದಲ್ಲೂ ಕವಿತೆ
ನಿನ್ನಿಂದ ಆ ಎತ್ತರಕ್ಕೆ  ಎರಲಾದಿತೆ ?
ಒಂದು ಪ್ರಯತ್ನ ನಡೆಯಲಿ ಸಾಧನ ಕೇರಿ ಎಡೆಗೆ
ಎಡೆ ಯಾಗಲಿ ನಿನ್ನೆಲ್ಲ ಅಹಂಕಾರ
ನೀನೆ ಇಲ್ಲದ ಮೇಲೆ ಗರ್ವವೆಲ್ಲಿಂದ?






Monday, October 17, 2011

ಬದುಕು

ಬಾಲ್ಯ ಮತ್ತು ವೃಧ್ಧಾಪ್ಯ  ಎರಡಕ್ಕೂ ಇರುವ ಸಮಾನ ಗುಣ ಹಠ.
ತಾನು ಹೇಳಿದ್ದು ಬಹು ಪಾಲು ವಿಷಯಗಳಲ್ಲಿ  ಹೇಗಾದರೂ ಸರಿ ನಡೆದೇ  ತೀರಬೇಕು.

ಬಾಲ್ಯಕ್ಕೆ ವಿವೇಕವಿಲ್ಲ, ವೃಧ್ಧಾಪ್ಯಕ್ಕೆ ದೇಹ ಮನಸು ಮಾತು ಕೇಳುತ್ತಿಲ್ಲ, ಇತರರಾದರು ಕೇಳಲಿ ಎಂಬಭಾವ ವೇನೋ ?
ಮಧ್ಯ ವಯಸ್ಸಿಗೆ ಬಾಲ್ಯ ಮತ್ತು ವೃಧ್ಧಾಪ್ಯದ ಜವಾಬ್ದಾರಿ :)

ಬನ್ನಂಜೆಯವರು  ಒಂದು ಪ್ರವಚನದಲ್ಲಿ, ಅವಧೂತರೊಬ್ಬರ ಬಗ್ಗೆ ಹೇಳುತ್ತಾರೆ.
ಅವರು ಹೇಳುತ್ತಿದರಂತೆ ಸಾವು ಸುಂದರ !

ದಿನ ದಿನವೂ ಸಿಧ್ಧಗೊಳಿಸುತ್ತದೆ ಬದುಕು
ಸಾವೆಂಬ ಅಂತಿಮ ಪರೀಕ್ಷೆಗಾಗಿ  !
ಇಲ್ಲಿ ಕಲಿತುದರೆಲ್ಲದರ ಪರೀಕ್ಷೆಯಂತೆ ಸಾವಿನಲ್ಲಿ!
ಪಾಠ ಚೆನ್ನಾಗಿ ಅಭ್ಯಾಸ ಮಾಡಿದವರು ನಗುತ್ತಲೇ ಪರೀಕ್ಷೆ  ಎದರಿಸುತ್ತಾರೆ
ಉಳಿದವರು ಪರೀಕ್ಷೆ ಮುಂದೂಡುವ ರೀತಿಗಳನ್ನು ಹುಡುಕುತಿರುತ್ತಾರೆ !

Monday, September 19, 2011

ಗರಿಕೆ

ತ್ರಿಗುಣಗಳ ಮೀರಿ ಬೆಳೆ
ಬದುಕು ವಿಶಾಲ ವಾಗಿರಲಿ
ಸರಳವಾಗಿ ಬದುಕು
ಸುಲಭವಾಗಿ ಕೈಗೆಟುಕು
ಅದಕ್ಕೆ ನೋಡು ಗಣಪನಿಗೆ ನಾನು ಬೇಕೇ ಬೇಕು

Tuesday, August 16, 2011

Random thoughts

ದೂರದೊಂದು ತೀರದಿಂದ ತೇಲಿದ್ದು ಪಾರಿಜಾತ ಗಂಧವೇ
ಆಗ ಬೇಕೆಂಬ ನಿಯಮವೇನಿದೆ?
ವ್ರಶಭೆಯನ್ನೇ ಮೋರಿ ಮಾಡಿದ ಮೇಲೆ ಪಾರಿಜಾತ ಗಂಧ ವೆಲ್ಲಿಂದ?

ಬಿಕ್ಕಲು ನೀರೆಗೆ ಕತ್ತಲೆಲ್ಲಿ?
ಎಲ್ಲ ಕಡೆ ಕೃತಕ ಬೆಳಕಿನ ಅಬ್ಬರ

ಹಿಂದೆ ಯಾವ ಜನುಮದಲ್ಲೋ ಮಿಂದ ಪ್ರೇಮದ ಜಲದ ಕಂಪೇ ಆಗ ಬೇಕು ಈ ಬದುಕಿಗೂ
ಈಗ ಗಂಗೆಯೇ ಮಲಿನ

ಮನಸು ಜಾರಿದ್ದು ಎಲ್ಲೆ ಮೀರಿದ್ದು ತಿಳಿಯುವಷ್ಟು ಹೊತ್ತು ಯಾರಿಗಿದೆ?

Wednesday, June 08, 2011

ಹನಿಗಳು

ಗೋಡೆಯಾಚೆ ನಿಂತು
ಇಬ್ಬರೂ ಕೂಗಿದ್ದೇ ಬಂತು
ನಮ್ಮೆಲ್ಲ ಧನಿಯನ್ನು
ಗೋಡೆ ನುಂಗಿಹಾಕುತಿತ್ತೆಂದು
ಯಾರಿಗೆ ಗೊತ್ತಿತ್ತು?


ಬಹಳ ವರ್ಷಗಳ ನಂತರ
ಗೆಳತಿಯೊಡನೆ ಮಾತಾಡಲು ಕುಂತರೆ
ಏನೊಂದೂ ತೋಚುತ್ತಿಲ್ಲ
ಎಲ್ಲಿಂದ ಪ್ರಾರಂಭಿಸುವುದು?
ಬದುಕ ಬವಣೆಗಳು,
ಕಂಡ ಖುಷಿಗಳು,
ಪಟ್ಟ ಸಾಹಸಗಳು,
ಉಂಡ ನೋವುಗಳು...
ಹೀಗೆ ಯೋಚಿಸುತ್ತ್ತಿರುವಾಗಲೇ
ಕರೆ ನಿಂತಿತ್ತು
ಇತ್ತೀಚಿನ ದಿನಗಳ
ಅತ್ಯುತ್ತಮ  ಸಂಭಾಷಣೆ ಇದೆಂದು ನಾನು ನಕ್ಕೆ 

Thursday, May 26, 2011

Random thoughts

ಸಂಬಧಗಳ ಹರಡಿಕೊಂಡು ಕೂತರೆ
ಸುತ್ತ ಎಲ್ಲ ಚಿಂದಿ
ಸೇರಿಸಿ ಒಪ್ಪವಾಗಿ ಹೊಲಿದರೆ
ಸುಂದರ ಕೌದಿ