ತೋರಮುಡಿವಿಡಿದು ಕುಡಿಯಂ
ನಾರಂ ತದೆವಂತೆ ತದೆದು ಬೀಟೆಯ ಕಾಲಿಂ
ಬಾರೇಳೆ ಬದಗನೊದೆದೊಡೆ
ಕೇರೆ ಪೊರಳ್ವಂತೆ ಕಾಲಮೇಲೆ ಪೊರಲ್ದಳ್
ಇದು ಜನ್ನನ ಯೋಶೋಧರ ಚರಿತೆಯ ಒಂದು ಪದ್ಯ . ಕಾವ್ಯವನ್ನು ಪೂರ್ತಿಯಾಗಿ ಓದಿಲ್ಲ, ಅಲ್ಲಲ್ಲಿ ಓದಿದ ಪದ್ಯಗಳಲ್ಲಿ ಈ ಪದ್ಯ ಬಹುದಿನದಿಂದ ಕಾಡುತ್ತಲೇ ಇದೆ. ಹೆಣ್ಣೊಬ್ಬಳು (ಅಮೃತಮತಿ) ಒಲವಿಂದಲೋ , ಆಕರ್ಷಣೆಯಿಂದಲೋ , ಕ್ಷಣದ ಸುಖಕಾಗಿಯೋ ಕಾಣದ ದಾರಿಯಲ್ಲಿ ತನ್ನ ಕನಸಿನ ಹುಡುಕಾಟಕ್ಕೆ ತೊಡಗುತ್ತಾಳೆ . ಹಾದಿಯಲ್ಲಿ ಸಿಕ್ಕವನಾದರೂ ಎಂಥವನು? ಅವಳ ಮುಂಗೂದಲ ಹಿಡಿದು, ತನ್ನ ಬಿರಿದ ಕಾಲುಗಳಿಂದ , ಮೈ ಮೇಲೆ ಬರೆ ಬರುವಂತೆ ಹೊಡೆಯುತ್ತಾನೆ. ಇನ್ನು ಅವಳಾದರೋ ಕೇರೆಯ ಹಾವು ಹೊರಳಿದಂತೆ ಅವನ ಕಾಲ ಮೇಲೆ ಹೊರಳುತ್ತಾಳೆ. ಬಟ್ಟೆಯನ್ನು ಒಗೆವಂತೆ ಎಂಬ ಹೋಲಿಕೆಯೂ ಇಲ್ಲಿ ಸಾಮಾನ್ಯರ ಭಾಷೆಯಾಗಿದೆ ("ಅರಿಬಿ ಶೆಳೆದಹಾಂಗ್ ಶೆಳೆದಾರ್ರಿ " ಎನ್ನುವುದು ಉತ್ತರ ಕರ್ನಾಟಕದಲ್ಲಿ ಇಂದಿಗೂ ಬಳಕೆಯಲ್ಲಿದೆ .)
ಒಲವು ಸ್ವಾತಂತ್ರ್ಯವನ್ನು ತರಬಹುದೆಂಬ ಕನಸಿನೊಂದಿಗೆ ಹೊರಟ ಹಲವರು ಇಂತಹ 'ಕೇರೆ' ಹಾವಿನ ದಾಸ್ಯವನ್ನು ಒಪ್ಪಿಕೊಳ್ಳುವುದು ದುರಂತ . ಇನ್ನು ಬದಗ (ಜಾರ)ರ ವರ್ತನೆಯಲ್ಲಿ ಬದಲಾವಣೆಯನ್ನು ಅಪೇಕ್ಷಿಸುವುದೂ ಸಲ್ಲದು.
ತನ್ನ ಕನಸಿನ ಪ್ರೀತಿಯನ್ನು ಹುಡುಕುತ್ತಾ ಹೊರಡುವ ಹೆಣ್ಣಿನ ಪಯಣದಲ್ಲಿ ಎದುರಾಗಬಹುದಾದ ಒಂದು ಘಟ್ಟವನ್ನು ಮೇಲಿನಪದ್ಯ ಹೇಳುತ್ತದೆ. ಕಾಲ ಬದಲಾದರೂ ಇದು ಮಾತ್ರ ಬದಲಾಗಿಲ್ಲ !
ಈ ಪದ್ಯದ ಗುಂಗಿನಲ್ಲಿರುವಾಗಲೇ ಮೈತ್ರೇಯಿ ದೇವಿಯವರ 'It does not die' ಓದಿದ್ದು ಕಾಕತಾಳೀಯವಾಗಿರಲಾರದು .
ಮೊದಲ ಪ್ರೀತಿಯ ಬಗ್ಗೆ ಸರಾಗವಾಗಿ ಮಾತನಾಡುವುದು ಕಷ್ಟ . ಆದರೆ , ಅದರ ಎಲ್ಲ ಅನುಭೂತಿಗಳೂ ಮನದ ಮೂಲೆಯಲ್ಲಿ ಜೀವಂತ. ಅಂತಹ ಒಂದು ಅನುಭೂತಿಯ , ಅದರ ಪರಿಣಾಮದ ಅನಾವರಣ ಈ ಪುಸ್ತಕ.
ಮನೆಯಲ್ಲಿ ಪಾತ್ರೆ ತೊಳೆಯುವ ಗೃಹಿಣಿಯನ್ನು ಗಮನಿಸಿ. ಎಲ್ಲ ಪಾತ್ರೆ ತೊಳೆದು ಕೊನೆಗೊಂದು ಪಾತ್ರೆಯನ್ನು ಹಾಗೇ ಬಿಡುತ್ತಾಳೆ'. ಜಿಡ್ಡು ಬಿಡಲಿ, ನೆನೆಯಲಿ ಎಂಬ ಕಾರಣಗಳನ್ನು ತನಗೆ ತಾನೇ ಕೊಟ್ಟುಕೊಳ್ಳುತ್ತಾಳೆ . ಅಂಟು ತೆಗೆಯಲಾರದ , ತೊರೆಯಲಾರದ ಮನಸು ನೂರಾರು ಕಾರಣ ಹುಡುಕುತ್ತದೆ.
ಹೆಣ್ಣಿಗೆ ಮನಸು ಮೊದಲಾದರೆ ಸಾಮಾನ್ಯವಾಗಿ ಗಂಡಿಗೆ ದೇಹ. ಹಾಸಿಗೆಯಿಂದ ಎದ್ದು ಮೀಸೆಯಡಿಯಲ್ಲಿ ನಗುವ ಗಂಡು , ನಾಚಿ ಮುಖ ಮುಚ್ಚಿಕೊಳ್ಳುವ ಹೆಣ್ಣಿನ , ನಮ್ಮ ಸಿನೆಮಾಗಳ ಕ್ಲೀಷೆ ಎನಿಸುವ ಚಿತ್ರ ! ಅವನಿಗದು ಗೆಲುವು , ಅವಳಿಗೆ ಒಲವಿನ ಒಂದು ಸ್ಥರ ಮಾತ್ರ.
'ನ ಹನ್ಯತೆ' ಬಗ್ಗೆ ಮೊದಲು ಓದಿದ್ದು ಸುನಾತ್ ಕಾಕರ ಬ್ಲಾಗಿನಲ್ಲಿ . ನಂತರದ ದಿನಗಳಲ್ಲಿ ತೇಜಸ್ವಿನಿ ಹೆಗಡೆಯವರೂ ಕೂಡ ಇದರ ಬಗ್ಗೆ ಬರೆದರು . ಬರಹ ಓದಿ ನಾಲ್ಕಾರು ವರ್ಷಗಳ ನಂತರ ಸ್ನೇಹಿತರೊಬ್ಬರಿಗೆ ಸುಮ್ಮನೇ ಈ ಪುಸ್ತಕ ಸಿಗಬಹುದೇ ಎಂದು ಕೇಳಿದರೆ ಅವರು ಎಲ್ಲೋ ಇದ್ದ ಇಂಗ್ಲಿಷ್ ಪುಸ್ತಕವನ್ನು (It does not die) ಹುಡುಕಿ ತಲುಪಿಸಿದ್ದರು . ಓದಿಸುವ ಸ್ನೇಹಿತರ ಋಣ ದೊಡ್ಡದು. ಬದುಕ ತೆರಿಡುವ ಶಿಕ್ಷಣಕ್ಕೆ ಬೆಲೆ ಎಲ್ಲಿ ?
ಕಥನದ ಕಾಲ ಸ್ವಾತಂತ್ರ್ಯ ಪೂರ್ವದ್ದು .ಲೇಖಕಿಯ ತಂದೆ ಆ ಕಾಲದ ಪ್ರಸಿಧ್ಧ ತತ್ವಶಾಸ್ತ್ರಜ್ಞರು , ಅನೂಕೂಲಸ್ಥರ ಕುಟುಂಬ .
ಲೇಖಕಿ ಮೈತ್ರೇಯಿ ಓದಿಕೊಂಡವಳು , ಜಾಣೆ , ತನ್ನ ಬರಹಗಳಿಂದ ರವಿಂದ್ರನಾಥ ಠಾಕೂರರನ್ನೂ ಸೆಳೆದವಳು ! ಇಂಥವಳಿಗೆ ತಂದೆಯ ಬಳಿ ತತ್ವಶಾಸ್ತ್ರ ಓದಲು ಬರುವ ಮಿರ್ಸಿಯಾ ಎಂಬ ಯೂರೋಪಿನ ಹುಡುಗನಲ್ಲಿ ಹರೆಯದ ಪ್ರೀತಿ ಚಿಗುರೊಡೆಯುತ್ತದೆ. ಕೆಲ ಸಮಯದ ನಂತರ ಇದು ತಂದೆಗೆ ಗೊತ್ತಾಗಿ ಅವರು ಇವರಿಬ್ಬರನ್ನು ಬೇರೆ ಮಾಡುವುದರಲ್ಲಿ ಯಶಸ್ವಿಯಾಗುತ್ತಾರೆ. ದೂರಾದರೂ ಹುಡುಗ ನೆನಪಾಗಿ ಹುಡುಗಿಯಲ್ಲಿ ಜೀವಂತ. ಅವರು ದೂರಾಗಿ ಹಲವು ವರ್ಷಗಳ ನಂತರ ತಾನು ಪ್ರೀತಿಸಿದ ಹುಡುಗ ತನ್ನ ಬಗ್ಗೆ ಪುಸ್ತಕ ಬರೆದಿದ್ದಾನೆ (Bengal Nights - Mircea Eliade.) ಎಂದು ಮೈತ್ರೇಯಿಗೆ ತಿಳಿಯುತ್ತದೆ. ಆದರೆ ಪುಸ್ತಕದಲ್ಲಿ ಆತ ಬರೆದ ಸತ್ಯ(?) ಅವಳನ್ನು ಇನ್ನಿಲ್ಲದಂತೆ ನೋಯಿಸಿ ಕಾಡುತ್ತದೆ . ತಾನೇ ಅವನನ್ನು ದೈಹಿಕ ಸಂಬಧಕ್ಕೆ ಪ್ರಚೋದಿಸಿದೆನೆಂದು ಓದಿ ಯಾವ ಹೆಣ್ಣು ತಾನೆ ಸುಮ್ಮನಿದ್ದಾಳು ?ಅಲ್ಲಿಯವರೆಗೆ ತಾನು ಕಾಪಿಟ್ಟ ಪ್ರೀತಿ ಇತ್ತ ನೋವನ್ನು ತಡೆದುಕೊಳ್ಳುವುದು ಹೇಗೆ ? ಮದುವೆಯಾದ ಹೆಣ್ಣು ತನ್ನ ಮೊದಲ ಪ್ರೀತಿಯನ್ನು ಮರೆಯುವುದು ಕಷ್ಟ ಎಂದುಕೊಂಡು ಜಿಡ್ಡಿನ ಪಾತ್ರೆಯಂತೆ ಪಕ್ಕಕ್ಕೆ ಇಡುತ್ತಾಳಾ ? ತಿಳಿಯದು ಆದರೆ ನಂತರದ ಆಕೆಯ ನಿರ್ಧಾರ ದಿಟ್ಟತನದ್ದು . ಹೆಣ್ಣೊಬ್ಬಳು ಅದರಲ್ಲೂ ಮದುವೆಯಾದ ಹೆಣ್ಣೊಬ್ಬಳು ತನ್ನ ಮೊದಲ ಪ್ರೀತಿಯ ಬಗ್ಗೆ ದಶಕಗಳ ಹಿಂದೆ ಬರೆಯುವುದು ಸುಲಭವಾಗಿರಲಿಕ್ಕಿಲ್ಲ !
ಬರೆಯಲು ಕುಳಿತ ಅವಳ ಕಣ್ಣ ಪರದೆಯ ಮುಂದೆ ಚಿತ್ರಗಳು ಸರಾಗವಾಗಿ ಮೂಡುತ್ತವೆ. ಹೆಣ್ಣು ಕನಸುಗಳನ್ನ ಅದರಲ್ಲೂ ಪ್ರೇಮದ ಕನಸುಗಳನ್ನ ಅಷ್ಟು ಸುಲಭವಾಗಿ ಮರೆಯುವುದಿಲ್ಲ. ದಶಕಗಳ ನಂತರವೂ ಆತನ ಪರಿಮಳ , ಹೆಜ್ಜೆ ಸಪ್ಪಳ , ಮುಖದ ಭಾವ ಎಲ್ಲವನ್ನೂ ಆಕೆ ಬರಹದ ಮೂಲಕ ಮತ್ತೆ ಜೀವಿಸುತ್ತಾಳೆ. ತಮ್ಮಿಬ್ಬರ ಭೇಟಿ , ಮಾತು ,ತನ್ನ ಆಗಿನ ಭಾವನೆಎಲ್ಲವನ್ನೂ ಆಕೆ ದಾಖಲಿಸಿದ್ದಾಳೆ. ೬೫ರ ಲೇಖಕಿ ಮತ್ತೆ ಹರೆಯಕ್ಕೆ ಏರುತ್ತಾಳೆ.
ಕಾಲ ಸರಿದಂತೆ ಎಲ್ಲವೂ ಹಳೆಯದೇ ಆಗಲೇಬೇಕೆನು ? ಯೋಚನೆಗೆ ಹಚ್ಚುವ ಇಂತಹ ಸಾಲುಗಳು ಕಾದಂಬರಿಯ ತುಂಬಾ ಸಿಗುತ್ತವೆ. ಪುಸ್ತಕದಲ್ಲಿ ನನಗೆ ತುಂಬ ಇಷ್ಟವಾಗಿದ್ದು ಅನಿಸಿದ್ದು ಲೇಖಕಿ ಮತ್ತು ರಬೀಂದ್ರ ನಾಥ ಟಾಗೋರರ ಸಂಬಂಧ. ಹರೆಯದ ಭಾವಲೋಕವನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ಆಲಿಸಬಲ್ಲ ,ಸಲನೀಡಬಲ್ಲ ಹಿರಿಯ ಜೀವವೊಂದರ ಸ್ನೇಹವನ್ನು ಲೇಖಕಿ ಅತ್ಯಂತ ಆಪ್ತವಾಗಿ ಚಿತ್ರಿಸುತ್ತಾರೆ. ಏನೂ ಆಗಬಲ್ಲ , ಏನೂ ಆಗದೇ ಉಳಿಯಬಲ್ಲ ಬಂಧದ ಕನಸು ಬಹುತೇಕ ಎಲ್ಲರಿಗೂ ಇರುತ್ತದೆ. ಆದರೆ ಅದು ದೊರೆಯುವುದು ಕೆಲವರಿಗೆ ಮಾತ್ರ. ಇನ್ನು ಆಕೆಯನ್ನು ಮದುವೆಯಾದ ಗಂಡ ಕೂಡ ಆಕೆಯನ್ನು ಅಷ್ಟೇ ಪ್ರೀತಿ ಗೌರವಗಳಿಂದ ಕಾಣುತ್ತಾರೆ . ಮಿರ್ಸಿಯಾ ಬರೆದ ಪುಸ್ತಕದ ಬಗ್ಗೆ ಗೊತ್ತಾಗಿ , ತಾನು ಅದಕ್ಕೆ ಉತ್ತರಿಸಬೇಕೆ ಬೇಡವೇ ಎಂಬ ಗೊಂದಲದಲ್ಲಿದ್ದ ಲೇಖಕಿಗೆ ಧೈರ್ಯ ತುಂಬುತ್ತಾರೆ.
ಪ್ರೀತಿಯ ಅಗತ್ಯ ವಯಸ್ಸಿಗೆ ತಕ್ಕಂತೆ ಬದಲಾಗುತ್ತಲೇ ಇರುತ್ತದೆ. ಸೌಂದರ್ಯ ಹರೆಯದ ಕನಸಾದರೆ, ಜವಾಬ್ದಾರಿ ನಂತರದ ನೀರಿಕ್ಷೆ. ಗೌರವ ಮಧ್ಯವಯಸ್ಸಿನ ಅಗತ್ಯ , ತನ್ನ ಅಸ್ಮಿತೆಯ ಒಟ್ಟಂದವನ್ನು ಸ್ಥಾಪಿಸುವಲ್ಲಿನ ಸಹಕಾರ ಕಟ್ಟಕಡೆಯ ಮೆಟ್ಟಿಲು. ಸಾಮಾನ್ಯವಾಗಿ ಎರಡು ಮೂರನೇ ಹಂತ ದಾಟುವ ದಾಂಪತ್ಯಗಳು ಕಡಿಮೆ. ಆದರೆ ಮೈತ್ರೆಯಿಯ ಗಂಡ ಆಕೆಯ ಅಸ್ಮಿತೆಗಾದ ಘಾಸಿಯನ್ನು ಮರೆತು ಬಿಡುವಂತೆ ಆಕೆಗೆ ಹೇಳುವುದೇ ಇಲ್ಲ ! ಕಡೆಗೆ ಆಕೆ ಈಗೊಮ್ಮೆ ಮಿರ್ಸಿಯಾನನ್ನು ನೋಡಿ ಬರುವೆ ಎಂದು ಹೊರಟಾಗ ಕೂಡ ಅವಳನ್ನು ತಡೆಯುವುದಿಲ್ಲ.
ಕಡೆಗೆ ಮಿರ್ಸಿಯಾನನ್ನು ನೋಡಿದ ಆಕೆಯದು ಜಿಡ್ಡಿನ ಪಾತ್ರೆಯನ್ನು ತೊಳೆಯದೆ ಬಿಟ್ಟ ಹೆಣ್ಣಿನ ಸ್ಥಿತಿ.
ಅವಮಾನದ ವಿರುದ್ಧ ದನಿಯೆತ್ತುವುದು ಪ್ರತಿ ಜೀವಿಯ ಹಕ್ಕು . ಕಳೆದ ಶತಮಾನದಲ್ಲಿ ಈ ಹಕ್ಕನ್ನು ಸ್ಥಾಪಿಸುವುದು ಸುಲಭವಾಗಿರಲಿಕ್ಕಿಲ್ಲ. ಒಂದು ಬಂಧದ ಎರಡು ಮುಖಗಳನ್ನು ಮಿರ್ಸಿಯಾ ಮತ್ತು ಮೈತ್ರೇಯಿ ಬರೆದ ಪುಸ್ತಕಗಳು ತೆರೆದಿಡುತ್ತವೆ. ಯಾವುದನ್ನು ಒಪ್ಪುತ್ತೇವೆ ಎಂಬ ಪ್ರಶ್ನೆ ನಮಗೆ ಬಿಟ್ಟಿದ್ದು .
ಈ ಕೃತಿ ಓದುವಾಗ ಮಿಂಚಿ ಮಾಯವಾದ ಯೋಚನೆಗಳು : ದೇಶದ ಬಹುಪಾಲು ಜನ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುತ್ತಿರುವಾಗಲೂ ಒಂದು ವರ್ಗದ ಭಾರತೀಯರು ಬ್ರಿಟಿಷರಲ್ಲಿ ಉನ್ನತ ಮಟ್ಟದ ಉದ್ಯೋಗ ಮಾಡುತ್ತಿದ್ದರು. ಇವರಲ್ಲಿ ಹೆಚ್ಚಿನ ಪಾಲು ಜನರಿಗೆ ಸ್ವಾತಂತ್ರ್ಯಾ ನಂತರವೂ ಉತ್ತಮ ಹುದ್ದೆಗಳು ದೊರೆತವು .ಇದಕ್ಕೆ ಹಲವಾರುಕಾರಣಗಳನ್ನೂ , ಅರ್ಥಗಳನ್ನೂ ಕೊಡಬಹುದು.
ತತ್ವ ಶಾಸ್ತ್ರವನ್ನು ಓದಿಕೊಂಡ ಲೇಖಕಿಗೆ ಪ್ರಾಣಿ ಬಲಿ ಒಪ್ಪಿತವಿಲ್ಲ . ಅಭ್ಯಂತರವಿಲ್ಲ. ಆದರೆ , ಆಹಾರವಾಗಿ ಸ್ವೀಕರಿಸುವ ಯಾವುದೇ ವಸ್ತುವನ್ನು ಮನುಷ್ಯ ತನ್ನ ದೈವದ ಮುಂದೆ ಇಡುತ್ತಾನೆ ಎಂಬ ಸತ್ಯವನ್ನೂ ತತ್ವ ಶಾಸ್ತ್ರ ಓದಿಕೊಂಡ ಲೇಖಕಿ ದಾಖಲಿಸಬಹುದಿತ್ತು.
ಯೊಚನೆಗೆಲ್ಲವನ್ನೂ ಮಾಯ ಮಾಡಿ ಮೊದಲ ಪ್ರೇಮದ ದಿವ್ಯಾನುಭವವನ್ನುಮತ್ತೆ ತೆರೆದಿಡುವಲ್ಲಿ ಮೈತ್ರೇಯಿ ಗೆಲ್ಲುತ್ತಾರೆ .
ಆತ ಬರೆದ ಪುಸ್ತಕವನ್ನೂ ಓದಬೇಕಿದೆ.
ಓದನ್ನು ದಾಖಲಿಸುವ ಸಲುವಾಗಿ ಮತ್ತೆ ಪುಸ್ತಕ ತೆರೆದಾಗಲೂ ಕಣ್ಣ ಮುಂದೆ ಅದೇ ಲೋಕ ತೆರೆದುಕೊಂಡಿತ್ತು . ಅದು ಒಲವಿನ ಶಕ್ತಿ !
ಚಿಪ್ಪು ತೆರೆದುಕೊಂಡ ಕ್ಷಣ
ಕನಸಿಗೆ ನೂರಾರು ಬಣ್ಣ
ಹಿಡಿಯಬೇಕು, ಚಿಟ್ಟೆ ಹಾರಬೇಕು
ಹೂದೋಟದ ಅಂದ ಸವಿಯಬೇಕು
ರೆಪ್ಪೆ ಸೇರದು , ರೆಕ್ಕೆ ದಣಿಯದು
ಮಾಟಗಾರನ ಹಿಂದಿನ ಓಟ
ಸಾವಧಾನ ಸಾವಧಾನ !
ಕಾಣಿಸದ ,ಕೇಳಿಸದ ಸಲಹೆ
ರಂಗುಗಳೆಲ್ಲ ಚಿತ್ರಕಾರನ ಸ್ವಂತ
ಅಲೆಯ ಮೇಲೆ ತೇಲಿ ತೇಲಿ
ರಚಿಸಿದ ಅವಳೆಂಬ ಚಿತ್ರ
ಮಾಯೆ ಹರಿ(?)ದಂದು
ಕುಂಚ ಒಗೆದ ಕಲಾವಿದ
ಕಲಸಿ ಚೆಲ್ಲಿದ ಅವಳೆಂಬ ಪಾತ್ರ
ಮತ್ತೆ ಮತ್ತೆ ಬಣ್ಣದ ಹುಡುಕಾಟ
ಅಲೆಗಳೊಂದಿಗೆ ಮುಗಿಯದ ಸೆಣಸಾಟ
ಮುಳುಗಿ, ತೇಲಿ ಈಜು ಕಲಿತ ಅವಳು
ಇಂದೂ ಕನಸಿಗೆ ನೂರಾರು ಬಣ್ಣ
ಅಂತರವಿಷ್ಟೇ ,
ಕುಂಚ ಅವಳದು
ಹಾಳೆ ಅವಳದು
ಕನಸೂ ಅವಳದು
ರಂಗೂ ಅವಳದು
ಚಿಪ್ಪು ತೊರೆದ ಹನಿಯೊಂದು ಮುತ್ತಾಗುವ
ಹಾಳೆಯಿಂದ ಹೊರ ಬಂದ ರಂಗು ಚಿತ್ರವಾಗುವ
ರೆಪ್ಪೆ ಮುಚ್ಚದ ,ರೆಕ್ಕೆ ದಣಿಯದ
ಹಕ್ಕಿಯ ಕಥೆ ಇದು
ಚಂದಿರನ ಹಂಗಿಲ್ಲದ ಆಗಸ ಅವಳದು !

ಸ್ವರ್ಣಾ, ಗಂಡು ಹೆಣ್ಣಿನ ನಡುವೆ ಬದುಕಿನ ವಿವಿಧ ಘಟ್ಟಗಳಲ್ಲಿ ಬದಲಾಗುವ ಬಂಧದ ಬಗೆಗೆ, ಸಂಬಂಧದ ಬಗೆಗೆ ತುಂಬ ಚೆನ್ನಾಗಿ ವಿವರಿಸಿದ್ದೀರಿ. ಮೆಚ್ಚಿಕೊಳ್ಳಬೇಕಾದ ಲೇಖನ. ಅದರಂತೆಯೇ ನಿಮ್ಮ ಕವನ ಸಹ. ನಿಮ್ಮ ಲೇಖನ ಓದುತ್ತಿರುವಂತೆಯೇ, ನಿಮ್ಮ ಕಿರುಕಾದಂಬರಿ ಅಥವಾ ನೀಳ್ಗತೆ (‘ಕಥೆಯಾದಳು ಹುಡುಗಿ’) ನೆನಪಾಯಿತು. ಚಿಟ್ಟೆಯ ಕನಸಿನಲ್ಲಿ ಅವಳ ರೆಕ್ಕೆಗಳು ಅವಳನ್ನು ಮಾಯಾಲೋಕಕ್ಕೆ ಕರೆದೊಯ್ಯುತ್ತವೆ. ಬೆಳಕು ಹರಿದಾಗ, ಬದುಕು ಬೇರೆಯೇ ಆಗಿರುತ್ತದೆ. ಇದನ್ನು ಅರಿಯುವುದೇ ಪ್ರಬುದ್ಧತೆ. ಈ ಪಾಠ ಕಲಿಯಲು ಬೇಸರವಿಲ್ಲ. ಇದೇ ಬದುಕು. ತುಂಬ ಸೊಗಸಾದ ಕಥೆಯನ್ನು ಬರೆದಿದ್ದೀರಿ.‘ನ ಹನ್ಯತೇ’ ಸಹ ಹಾಗೆಯೇ ಇದೆಯಲ್ಲವೆ?
ReplyDeleteನಮಸ್ತೆ ಕಾಕಾ , ನಿಮ್ಮ ಈ ಉತ್ತರ ನೋಡಿ ಬಹಳ ದಿನದ ನಂತರ ಬರೆದದ್ದು ಸಾರ್ಥಕ ಎನಿಸಿತು. ಹೌದು 'ನ ಹನ್ಯತೆ' ಓದುವುದು ಒಂದು ಪಯಣ. ಸೊಗಸಾದ ಪಯಣ
DeleteNice one
ReplyDelete