Thursday, January 06, 2022

ಸೀತೆ - ಸಂವಾದ

ಉತ್ತರಿಸಲೊಲ್ಲದ ಸೀತೆಗಿವೆ
ಪ್ರಶ್ನೆಗಳು ನೂರು

ಧನುವ ಮುರಿದವನಿಗೆ
ಮನವನಿತ್ತು ವರಿಸಿದೆ
ಸಾಕೇತವು ಸನಿಹವಾಗುವ ಮುನ್ನ
ಅವನೊಡನೆ ಅಡವಿಗೆ ನಡೆದೆ
ಅವನ ಸಂಗವಷ್ಟೊಂದು ಮುದವೇ ಸೀತೆ ?

ಖಗನವನು ನಿನ್ನ ನೋಯಿಸೆ
ಮುನಿದು ಮಹಾಸ್ತ್ರವನು ಬಿಸುಟ
ಹರುಷ ಉಳಿಯಲಿಲ್ಲ ಬಹುಕಾಲ
ಅವನ ತಪ್ಪಿ(?)ಗೆ  ಸ್ವರ್ಣ ಲಂಕೆಯ
ಅಶೋಕವನದ ಬಂಧಿಯಾದೆ
ಅವನ ಮೇಲದೆಷ್ಟು‌ ನಂಬಿಕೆಯೇ ಸೀತೆ ?


ವನವನವನೆಲ್ಲ ನಿನ್ನ ನೆನಹಿನಲಿ ಸುತ್ತಿದವ
ಸಾಗರವ ಹಾರಿ ಸೇತುವ ತೋರಿದವ
ವಿಜಯದುಂದುಭಿಯ ಮೊರೆತದಲಿ
ಹರಿದ ಕಂಬನಿಯ ಕುಯಿಲ ಮರೆತೆ
ಅವನ ಒಲವಷ್ಟು ಬಲವೇ ಸೀತೆ ?

  
ಧಗಿಸುವ ಜ್ವಾಲೆಯನಾಲಿಂಗಿಸಿದೆ
ಮುಗಿಯದ  ನೋವಿಗೆ ಮೌನಿಯಾದೆ
ಮಡಿಲ ತುಂಬಿತು‌ ಲೋಕದಪವಾದ
ಮರಳಿ ನಡೆದೆ ವನಾಂತರಂಗಕೆ
ಅವನೆಂದರದೆಷ್ಟು ಸಖ್ಯವೇ ಸೀತೆ ?


ಎಲ್ಲ ಕೇಳಿಯೂ ಮಾತನಾಡಲವಳು
ವಿದೇಹದ ಮುದ್ದು  ವೈದೇಹಿಯವಳು
ಮುಗುಳು ನಗೆಯೇ ಅವಳುತ್ತರ
ಹೇಳುತ್ತಿರಬಹುದೇ ಹೀಗೆ :
"ಗದ್ದಲದ ಪ್ರಶ್ನೆಗಳಿಗೆ ಮೌನವೇ ಉತ್ತರ!"

ನಗುವೊಂದನುಳಿದು ಅವಳೇನೂ ಹೇಳಲಿಲ್ಲ
ಶಿಲೆಯಲ್ಲೂ ಅವನೆಡವ ಬಿಡಲಿಲ್ಲ!


Thursday, February 06, 2020

ಪ್ರೀತಿ , ಪಯಣ , ಗಮ್ಯ




ತೋರಮುಡಿವಿಡಿದು ಕುಡಿಯಂ
ನಾರಂ ತದೆವಂತೆ ತದೆದು ಬೀಟೆಯ ಕಾಲಿಂ
ಬಾರೇಳೆ ಬದಗನೊದೆದೊಡೆ
ಕೇರೆ ಪೊರಳ್ವಂತೆ ಕಾಲಮೇಲೆ ಪೊರಲ್ದಳ್

ಇದು ಜನ್ನನ ಯೋಶೋಧರ ಚರಿತೆಯ ಒಂದು ಪದ್ಯ .  ಕಾವ್ಯವನ್ನು ಪೂರ್ತಿಯಾಗಿ ಓದಿಲ್ಲ, ಅಲ್ಲಲ್ಲಿ ಓದಿದ ಪದ್ಯಗಳಲ್ಲಿ ಈ ಪದ್ಯ ಬಹುದಿನದಿಂದ ಕಾಡುತ್ತಲೇ ಇದೆ.  ಹೆಣ್ಣೊಬ್ಬಳು (ಅಮೃತಮತಿ) ಒಲವಿಂದಲೋ , ಆಕರ್ಷಣೆಯಿಂದಲೋ , ಕ್ಷಣದ ಸುಖಕಾಗಿಯೋ ಕಾಣದ ದಾರಿಯಲ್ಲಿ  ತನ್ನ ಕನಸಿನ ಹುಡುಕಾಟಕ್ಕೆ ತೊಡಗುತ್ತಾಳೆ . ಹಾದಿಯಲ್ಲಿ ಸಿಕ್ಕವನಾದರೂ ಎಂಥವನು? ಅವಳ ಮುಂಗೂದಲ ಹಿಡಿದು,  ತನ್ನ ಬಿರಿದ ಕಾಲುಗಳಿಂದ , ಮೈ ಮೇಲೆ ಬರೆ ಬರುವಂತೆ ಹೊಡೆಯುತ್ತಾನೆ. ಇನ್ನು ಅವಳಾದರೋ ಕೇರೆಯ ಹಾವು ಹೊರಳಿದಂತೆ ಅವನ ಕಾಲ ಮೇಲೆ ಹೊರಳುತ್ತಾಳೆ. ಬಟ್ಟೆಯನ್ನು ಒಗೆವಂತೆ  ಎಂಬ ಹೋಲಿಕೆಯೂ ಇಲ್ಲಿ ಸಾಮಾನ್ಯರ ಭಾಷೆಯಾಗಿದೆ ("ಅರಿಬಿ ಶೆಳೆದಹಾಂಗ್  ಶೆಳೆದಾರ್ರಿ "  ಎನ್ನುವುದು ಉತ್ತರ ಕರ್ನಾಟಕದಲ್ಲಿ ಇಂದಿಗೂ ಬಳಕೆಯಲ್ಲಿದೆ .)

ಒಲವು ಸ್ವಾತಂತ್ರ್ಯವನ್ನು ತರಬಹುದೆಂಬ ಕನಸಿನೊಂದಿಗೆ  ಹೊರಟ ಹಲವರು  ಇಂತಹ 'ಕೇರೆ' ಹಾವಿನ ದಾಸ್ಯವನ್ನು ಒಪ್ಪಿಕೊಳ್ಳುವುದು ದುರಂತ . ಇನ್ನು ಬದಗ (ಜಾರ)ರ ವರ್ತನೆಯಲ್ಲಿ  ಬದಲಾವಣೆಯನ್ನು ಅಪೇಕ್ಷಿಸುವುದೂ ಸಲ್ಲದು.


ತನ್ನ ಕನಸಿನ ಪ್ರೀತಿಯನ್ನು  ಹುಡುಕುತ್ತಾ ಹೊರಡುವ ಹೆಣ್ಣಿನ ಪಯಣದಲ್ಲಿ ಎದುರಾಗಬಹುದಾದ ಒಂದು ಘಟ್ಟವನ್ನು ಮೇಲಿನಪದ್ಯ ಹೇಳುತ್ತದೆ. ಕಾಲ ಬದಲಾದರೂ  ಇದು ಮಾತ್ರ ಬದಲಾಗಿಲ್ಲ !

ಈ ಪದ್ಯದ ಗುಂಗಿನಲ್ಲಿರುವಾಗಲೇ   ಮೈತ್ರೇಯಿ ದೇವಿಯವರ  'It does not die' ಓದಿದ್ದು ಕಾಕತಾಳೀಯವಾಗಿರಲಾರದು .

ಮೊದಲ ಪ್ರೀತಿಯ ಬಗ್ಗೆ ಸರಾಗವಾಗಿ ಮಾತನಾಡುವುದು ಕಷ್ಟ . ಆದರೆ , ಅದರ ಎಲ್ಲ  ಅನುಭೂತಿಗಳೂ ಮನದ ಮೂಲೆಯಲ್ಲಿ ಜೀವಂತ. ಅಂತಹ ಒಂದು ಅನುಭೂತಿಯ , ಅದರ ಪರಿಣಾಮದ ಅನಾವರಣ ಈ ಪುಸ್ತಕ.

ಮನೆಯಲ್ಲಿ ಪಾತ್ರೆ ತೊಳೆಯುವ ಗೃಹಿಣಿಯನ್ನು ಗಮನಿಸಿ. ಎಲ್ಲ ಪಾತ್ರೆ ತೊಳೆದು ಕೊನೆಗೊಂದು ಪಾತ್ರೆಯನ್ನು ಹಾಗೇ ಬಿಡುತ್ತಾಳೆ'. ಜಿಡ್ಡು ಬಿಡಲಿ, ನೆನೆಯಲಿ ಎಂಬ ಕಾರಣಗಳನ್ನು ತನಗೆ ತಾನೇ  ಕೊಟ್ಟುಕೊಳ್ಳುತ್ತಾಳೆ . ಅಂಟು ತೆಗೆಯಲಾರದ , ತೊರೆಯಲಾರದ ಮನಸು ನೂರಾರು ಕಾರಣ ಹುಡುಕುತ್ತದೆ.


ಹೆಣ್ಣಿಗೆ ಮನಸು ಮೊದಲಾದರೆ ಸಾಮಾನ್ಯವಾಗಿ ಗಂಡಿಗೆ ದೇಹ.  ಹಾಸಿಗೆಯಿಂದ ಎದ್ದು ಮೀಸೆಯಡಿಯಲ್ಲಿ ನಗುವ  ಗಂಡು , ನಾಚಿ ಮುಖ ಮುಚ್ಚಿಕೊಳ್ಳುವ ಹೆಣ್ಣಿನ , ನಮ್ಮ ಸಿನೆಮಾಗಳ ಕ್ಲೀಷೆ ಎನಿಸುವ ಚಿತ್ರ ! ಅವನಿಗದು ಗೆಲುವು , ಅವಳಿಗೆ ಒಲವಿನ ಒಂದು ಸ್ಥರ ಮಾತ್ರ.

'ನ ಹನ್ಯತೆ' ಬಗ್ಗೆ ಮೊದಲು ಓದಿದ್ದು ಸುನಾತ್ ಕಾಕರ ಬ್ಲಾಗಿನಲ್ಲಿ . ನಂತರದ ದಿನಗಳಲ್ಲಿ ತೇಜಸ್ವಿನಿ ಹೆಗಡೆಯವರೂ ಕೂಡ ಇದರ ಬಗ್ಗೆ ಬರೆದರು . ಬರಹ ಓದಿ ನಾಲ್ಕಾರು ವರ್ಷಗಳ ನಂತರ  ಸ್ನೇಹಿತರೊಬ್ಬರಿಗೆ ಸುಮ್ಮನೇ ಈ ಪುಸ್ತಕ ಸಿಗಬಹುದೇ ಎಂದು ಕೇಳಿದರೆ ಅವರು ಎಲ್ಲೋ ಇದ್ದ ಇಂಗ್ಲಿಷ್ ಪುಸ್ತಕವನ್ನು (It does not die)  ಹುಡುಕಿ ತಲುಪಿಸಿದ್ದರು .  ಓದಿಸುವ ಸ್ನೇಹಿತರ ಋಣ ದೊಡ್ಡದು. ಬದುಕ ತೆರಿಡುವ ಶಿಕ್ಷಣಕ್ಕೆ ಬೆಲೆ ಎಲ್ಲಿ ?

 ಕಥನದ ಕಾಲ  ಸ್ವಾತಂತ್ರ್ಯ ಪೂರ್ವದ್ದು .ಲೇಖಕಿಯ ತಂದೆ ಆ ಕಾಲದ ಪ್ರಸಿಧ್ಧ ತತ್ವಶಾಸ್ತ್ರಜ್ಞರು , ಅನೂಕೂಲಸ್ಥರ ಕುಟುಂಬ .

ಲೇಖಕಿ ಮೈತ್ರೇಯಿ ಓದಿಕೊಂಡವಳು , ಜಾಣೆ , ತನ್ನ ಬರಹಗಳಿಂದ  ರವಿಂದ್ರನಾಥ ಠಾಕೂರರನ್ನೂ  ಸೆಳೆದವಳು ! ಇಂಥವಳಿಗೆ  ತಂದೆಯ ಬಳಿ ತತ್ವಶಾಸ್ತ್ರ ಓದಲು ಬರುವ ಮಿರ್ಸಿಯಾ ಎಂಬ ಯೂರೋಪಿನ  ಹುಡುಗನಲ್ಲಿ ಹರೆಯದ ಪ್ರೀತಿ ಚಿಗುರೊಡೆಯುತ್ತದೆ.  ಕೆಲ ಸಮಯದ ನಂತರ ಇದು ತಂದೆಗೆ ಗೊತ್ತಾಗಿ ಅವರು ಇವರಿಬ್ಬರನ್ನು ಬೇರೆ ಮಾಡುವುದರಲ್ಲಿ ಯಶಸ್ವಿಯಾಗುತ್ತಾರೆ.  ದೂರಾದರೂ ಹುಡುಗ ನೆನಪಾಗಿ ಹುಡುಗಿಯಲ್ಲಿ ಜೀವಂತ. ಅವರು ದೂರಾಗಿ ಹಲವು ವರ್ಷಗಳ ನಂತರ  ತಾನು ಪ್ರೀತಿಸಿದ ಹುಡುಗ  ತನ್ನ ಬಗ್ಗೆ ಪುಸ್ತಕ ಬರೆದಿದ್ದಾನೆ (Bengal Nights - Mircea Eliade.) ಎಂದು ಮೈತ್ರೇಯಿಗೆ  ತಿಳಿಯುತ್ತದೆ. ಆದರೆ ಪುಸ್ತಕದಲ್ಲಿ ಆತ ಬರೆದ ಸತ್ಯ(?) ಅವಳನ್ನು ಇನ್ನಿಲ್ಲದಂತೆ ನೋಯಿಸಿ ಕಾಡುತ್ತದೆ . ತಾನೇ ಅವನನ್ನು ದೈಹಿಕ ಸಂಬಧಕ್ಕೆ ಪ್ರಚೋದಿಸಿದೆನೆಂದು ಓದಿ ಯಾವ ಹೆಣ್ಣು ತಾನೆ ಸುಮ್ಮನಿದ್ದಾಳು ?ಅಲ್ಲಿಯವರೆಗೆ ತಾನು ಕಾಪಿಟ್ಟ ಪ್ರೀತಿ ಇತ್ತ ನೋವನ್ನು ತಡೆದುಕೊಳ್ಳುವುದು ಹೇಗೆ ? ಮದುವೆಯಾದ ಹೆಣ್ಣು ತನ್ನ ಮೊದಲ ಪ್ರೀತಿಯನ್ನು ಮರೆಯುವುದು ಕಷ್ಟ ಎಂದುಕೊಂಡು ಜಿಡ್ಡಿನ ಪಾತ್ರೆಯಂತೆ ಪಕ್ಕಕ್ಕೆ  ಇಡುತ್ತಾಳಾ  ? ತಿಳಿಯದು ಆದರೆ ನಂತರದ ಆಕೆಯ ನಿರ್ಧಾರ ದಿಟ್ಟತನದ್ದು . ಹೆಣ್ಣೊಬ್ಬಳು  ಅದರಲ್ಲೂ ಮದುವೆಯಾದ ಹೆಣ್ಣೊಬ್ಬಳು ತನ್ನ ಮೊದಲ ಪ್ರೀತಿಯ ಬಗ್ಗೆ ದಶಕಗಳ ಹಿಂದೆ ಬರೆಯುವುದು ಸುಲಭವಾಗಿರಲಿಕ್ಕಿಲ್ಲ !

ಬರೆಯಲು ಕುಳಿತ ಅವಳ ಕಣ್ಣ ಪರದೆಯ ಮುಂದೆ ಚಿತ್ರಗಳು ಸರಾಗವಾಗಿ ಮೂಡುತ್ತವೆ.  ಹೆಣ್ಣು ಕನಸುಗಳನ್ನ  ಅದರಲ್ಲೂ ಪ್ರೇಮದ ಕನಸುಗಳನ್ನ ಅಷ್ಟು ಸುಲಭವಾಗಿ ಮರೆಯುವುದಿಲ್ಲ. ದಶಕಗಳ ನಂತರವೂ ಆತನ ಪರಿಮಳ , ಹೆಜ್ಜೆ ಸಪ್ಪಳ , ಮುಖದ ಭಾವ ಎಲ್ಲವನ್ನೂ ಆಕೆ ಬರಹದ ಮೂಲಕ ಮತ್ತೆ ಜೀವಿಸುತ್ತಾಳೆ.  ತಮ್ಮಿಬ್ಬರ ಭೇಟಿ , ಮಾತು ,ತನ್ನ ಆಗಿನ ಭಾವನೆಎಲ್ಲವನ್ನೂ ಆಕೆ ದಾಖಲಿಸಿದ್ದಾಳೆ. ೬೫ರ ಲೇಖಕಿ ಮತ್ತೆ ಹರೆಯಕ್ಕೆ ಏರುತ್ತಾಳೆ. 

ಕಾಲ ಸರಿದಂತೆ ಎಲ್ಲವೂ ಹಳೆಯದೇ  ಆಗಲೇಬೇಕೆನು ?  ಯೋಚನೆಗೆ ಹಚ್ಚುವ ಇಂತಹ ಸಾಲುಗಳು ಕಾದಂಬರಿಯ ತುಂಬಾ ಸಿಗುತ್ತವೆ. ಪುಸ್ತಕದಲ್ಲಿ ನನಗೆ ತುಂಬ ಇಷ್ಟವಾಗಿದ್ದು ಅನಿಸಿದ್ದು ಲೇಖಕಿ ಮತ್ತು  ರಬೀಂದ್ರ ನಾಥ ಟಾಗೋರರ ಸಂಬಂಧ. ಹರೆಯದ ಭಾವಲೋಕವನ್ನು  ಯಾವುದೇ  ಪೂರ್ವಾಗ್ರಹವಿಲ್ಲದೇ ಆಲಿಸಬಲ್ಲ ,ಸಲನೀಡಬಲ್ಲ ಹಿರಿಯ ಜೀವವೊಂದರ ಸ್ನೇಹವನ್ನು ಲೇಖಕಿ ಅತ್ಯಂತ ಆಪ್ತವಾಗಿ ಚಿತ್ರಿಸುತ್ತಾರೆ. ಏನೂ ಆಗಬಲ್ಲ , ಏನೂ ಆಗದೇ ಉಳಿಯಬಲ್ಲ ಬಂಧದ ಕನಸು ಬಹುತೇಕ ಎಲ್ಲರಿಗೂ ಇರುತ್ತದೆ. ಆದರೆ ಅದು ದೊರೆಯುವುದು ಕೆಲವರಿಗೆ ಮಾತ್ರ. ಇನ್ನು ಆಕೆಯನ್ನು  ಮದುವೆಯಾದ ಗಂಡ ಕೂಡ ಆಕೆಯನ್ನು ಅಷ್ಟೇ ಪ್ರೀತಿ ಗೌರವಗಳಿಂದ ಕಾಣುತ್ತಾರೆ . ಮಿರ್ಸಿಯಾ ಬರೆದ ಪುಸ್ತಕದ ಬಗ್ಗೆ ಗೊತ್ತಾಗಿ , ತಾನು ಅದಕ್ಕೆ ಉತ್ತರಿಸಬೇಕೆ ಬೇಡವೇ ಎಂಬ ಗೊಂದಲದಲ್ಲಿದ್ದ ಲೇಖಕಿಗೆ ಧೈರ್ಯ ತುಂಬುತ್ತಾರೆ.

ಪ್ರೀತಿಯ ಅಗತ್ಯ ವಯಸ್ಸಿಗೆ ತಕ್ಕಂತೆ ಬದಲಾಗುತ್ತಲೇ  ಇರುತ್ತದೆ. ಸೌಂದರ್ಯ ಹರೆಯದ ಕನಸಾದರೆ, ಜವಾಬ್ದಾರಿ ನಂತರದ ನೀರಿಕ್ಷೆ. ಗೌರವ ಮಧ್ಯವಯಸ್ಸಿನ ಅಗತ್ಯ , ತನ್ನ ಅಸ್ಮಿತೆಯ ಒಟ್ಟಂದವನ್ನು ಸ್ಥಾಪಿಸುವಲ್ಲಿನ ಸಹಕಾರ ಕಟ್ಟಕಡೆಯ ಮೆಟ್ಟಿಲು. ಸಾಮಾನ್ಯವಾಗಿ ಎರಡು ಮೂರನೇ ಹಂತ ದಾಟುವ ದಾಂಪತ್ಯಗಳು ಕಡಿಮೆ. ಆದರೆ ಮೈತ್ರೆಯಿಯ ಗಂಡ ಆಕೆಯ ಅಸ್ಮಿತೆಗಾದ ಘಾಸಿಯನ್ನು  ಮರೆತು ಬಿಡುವಂತೆ ಆಕೆಗೆ ಹೇಳುವುದೇ ಇಲ್ಲ ! ಕಡೆಗೆ ಆಕೆ ಈಗೊಮ್ಮೆ ಮಿರ್ಸಿಯಾನನ್ನು ನೋಡಿ ಬರುವೆ ಎಂದು  ಹೊರಟಾಗ ಕೂಡ ಅವಳನ್ನು ತಡೆಯುವುದಿಲ್ಲ.

ಕಡೆಗೆ ಮಿರ್ಸಿಯಾನನ್ನು ನೋಡಿದ ಆಕೆಯದು ಜಿಡ್ಡಿನ ಪಾತ್ರೆಯನ್ನು ತೊಳೆಯದೆ ಬಿಟ್ಟ ಹೆಣ್ಣಿನ ಸ್ಥಿತಿ.

ಅವಮಾನದ ವಿರುದ್ಧ ದನಿಯೆತ್ತುವುದು ಪ್ರತಿ ಜೀವಿಯ ಹಕ್ಕು . ಕಳೆದ ಶತಮಾನದಲ್ಲಿ ಈ ಹಕ್ಕನ್ನು ಸ್ಥಾಪಿಸುವುದು ಸುಲಭವಾಗಿರಲಿಕ್ಕಿಲ್ಲ. ಒಂದು ಬಂಧದ ಎರಡು ಮುಖಗಳನ್ನು ಮಿರ್ಸಿಯಾ  ಮತ್ತು ಮೈತ್ರೇಯಿ ಬರೆದ ಪುಸ್ತಕಗಳು ತೆರೆದಿಡುತ್ತವೆ.  ಯಾವುದನ್ನು ಒಪ್ಪುತ್ತೇವೆ ಎಂಬ ಪ್ರಶ್ನೆ ನಮಗೆ ಬಿಟ್ಟಿದ್ದು .

ಈ ಕೃತಿ ಓದುವಾಗ ಮಿಂಚಿ  ಮಾಯವಾದ  ಯೋಚನೆಗಳು  : ದೇಶದ ಬಹುಪಾಲು ಜನ  ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುತ್ತಿರುವಾಗಲೂ ಒಂದು ವರ್ಗದ ಭಾರತೀಯರು ಬ್ರಿಟಿಷರಲ್ಲಿ ಉನ್ನತ ಮಟ್ಟದ ಉದ್ಯೋಗ ಮಾಡುತ್ತಿದ್ದರು. ಇವರಲ್ಲಿ ಹೆಚ್ಚಿನ ಪಾಲು ಜನರಿಗೆ ಸ್ವಾತಂತ್ರ್ಯಾ ನಂತರವೂ ಉತ್ತಮ ಹುದ್ದೆಗಳು ದೊರೆತವು .ಇದಕ್ಕೆ ಹಲವಾರುಕಾರಣಗಳನ್ನೂ , ಅರ್ಥಗಳನ್ನೂ ಕೊಡಬಹುದು.

ತತ್ವ ಶಾಸ್ತ್ರವನ್ನು ಓದಿಕೊಂಡ ಲೇಖಕಿಗೆ ಪ್ರಾಣಿ ಬಲಿ ಒಪ್ಪಿತವಿಲ್ಲ . ಅಭ್ಯಂತರವಿಲ್ಲ. ಆದರೆ , ಆಹಾರವಾಗಿ ಸ್ವೀಕರಿಸುವ ಯಾವುದೇ ವಸ್ತುವನ್ನು ಮನುಷ್ಯ ತನ್ನ ದೈವದ ಮುಂದೆ ಇಡುತ್ತಾನೆ ಎಂಬ ಸತ್ಯವನ್ನೂ ತತ್ವ ಶಾಸ್ತ್ರ ಓದಿಕೊಂಡ ಲೇಖಕಿ ದಾಖಲಿಸಬಹುದಿತ್ತು.


ಯೊಚನೆಗೆಲ್ಲವನ್ನೂ ಮಾಯ ಮಾಡಿ ಮೊದಲ ಪ್ರೇಮದ ದಿವ್ಯಾನುಭವವನ್ನುಮತ್ತೆ ತೆರೆದಿಡುವಲ್ಲಿ ಮೈತ್ರೇಯಿ ಗೆಲ್ಲುತ್ತಾರೆ .
 ಆತ  ಬರೆದ ಪುಸ್ತಕವನ್ನೂ ಓದಬೇಕಿದೆ.

ಓದನ್ನು ದಾಖಲಿಸುವ ಸಲುವಾಗಿ ಮತ್ತೆ ಪುಸ್ತಕ ತೆರೆದಾಗಲೂ ಕಣ್ಣ ಮುಂದೆ ಅದೇ ಲೋಕ ತೆರೆದುಕೊಂಡಿತ್ತು . ಅದು ಒಲವಿನ ಶಕ್ತಿ !


ಚಿಪ್ಪು ತೆರೆದುಕೊಂಡ ಕ್ಷಣ
ಕನಸಿಗೆ ನೂರಾರು  ಬಣ್ಣ
ಹಿಡಿಯಬೇಕು, ಚಿಟ್ಟೆ ಹಾರಬೇಕು
ಹೂದೋಟದ ಅಂದ ಸವಿಯಬೇಕು
ರೆಪ್ಪೆ ಸೇರದು , ರೆಕ್ಕೆ ದಣಿಯದು
ಮಾಟಗಾರನ ಹಿಂದಿನ ಓಟ
ಸಾವಧಾನ ಸಾವಧಾನ !
ಕಾಣಿಸದ ,ಕೇಳಿಸದ ಸಲಹೆ
ರಂಗುಗಳೆಲ್ಲ ಚಿತ್ರಕಾರನ ಸ್ವಂತ
ಅಲೆಯ ಮೇಲೆ ತೇಲಿ ತೇಲಿ
ರಚಿಸಿದ ಅವಳೆಂಬ ಚಿತ್ರ
ಮಾಯೆ ಹರಿ(?)ದಂದು
ಕುಂಚ ಒಗೆದ ಕಲಾವಿದ
ಕಲಸಿ ಚೆಲ್ಲಿದ ಅವಳೆಂಬ ಪಾತ್ರ
ಮತ್ತೆ ಮತ್ತೆ ಬಣ್ಣದ ಹುಡುಕಾಟ
ಅಲೆಗಳೊಂದಿಗೆ ಮುಗಿಯದ ಸೆಣಸಾಟ
ಮುಳುಗಿ, ತೇಲಿ  ಈಜು ಕಲಿತ ಅವಳು


ಇಂದೂ ಕನಸಿಗೆ ನೂರಾರು ಬಣ್ಣ
ಅಂತರವಿಷ್ಟೇ ,
ಕುಂಚ ಅವಳದು
ಹಾಳೆ ಅವಳದು
ಕನಸೂ ಅವಳದು
ರಂಗೂ ಅವಳದು
ಚಿಪ್ಪು ತೊರೆದ ಹನಿಯೊಂದು ಮುತ್ತಾಗುವ
ಹಾಳೆಯಿಂದ ಹೊರ ಬಂದ ರಂಗು ಚಿತ್ರವಾಗುವ
ರೆಪ್ಪೆ ಮುಚ್ಚದ ,ರೆಕ್ಕೆ ದಣಿಯದ
ಹಕ್ಕಿಯ ಕಥೆ ಇದು
ಚಂದಿರನ ಹಂಗಿಲ್ಲದ ಆಗಸ ಅವಳದು !











  



Monday, March 25, 2019

ಮಾಲಿ

The Gardner  by Rabindranth Tagore 

I run as a musk-deer runs in the shadow of the forest mad with his own perfume.
The night is the night of mid-May, the breeze is the breeze of the south.
I lose my way and I wander, I seek what I cannot get, I get what I do not seek.

From my heart comes out and dances the image of my own desire. The gleaming vision flits on.
I try to clasp it firmly, it eludes me and leads me astray. I seek what I cannot get, I get what I do not seek.

ಓದಿಸಿದ ಗೆಳತಿಗೆ ವಂದನೆಗಳು

ಈ ಕವಿತೆಯಿಂದ ಮೂಡಿದ ಸಾಲುಗಳು 

ವಾಸನೆಗಳ ಹೊತ್ತ ಮೃಗ, ಅಲೆವ ಮನಸು
ಬಿಂಬವನದಲ್ಲಿ ನಿಜವ ಕಾಣುವ ಕನಸು
ತನ್ನ ವಾಸನೆಗೆ ಮರುಳಾದ ತಾನು
ಸುಡುವ ಗ್ರೀಷ್ಮದ ಚಂದ್ರನಿಲ್ಲದ ಬಾನು
ಆಗಾಗ ಸುಳಿವ ತೆಂಕಣದ ತಿಳುಗಾಳಿ
ಬಯಸಿದ್ದು ದೊರೆಯದು
ದೊರೆತದ್ದು ಬಯಕೆಯಾಗಿರದು


ಕಣ್ಣಮುಂದೆ ಕುಣಿವ ಆಶಾಬಿಂಬ
ಭ್ರಮಯೇ ಬೆಳಕು ಬಾಳ ತುಂಬ
ಇರದ ಮರೀಚಿಕೆಗಾಗಿ ಸೆಣಸಾಟ
ಬಿಂಬ ಬೆಳಕಲಿ ಸಾಗೇ ಸಾಗುವ ಹುಡುಕಾಟ
ಹಿಡಿದೆನೆಂಬುದದು ಭ್ರಮೆ,
ಬಿಟ್ಟೆನೆಂಬುದು ಕೊನೆಯೇ?
ಉರುವಲದ ಬೂದಿಯವರೆಗಿನ ಪಯಣ
ಸಕಲಕೂ ಆ ಬಿಂಬ ಕಾರಣ
ಬಯಸಿದ್ದು ದೊರೆಯದು
ದೊರೆತದ್ದು ಬಯಕೆಯಾಗಿರದು

ಭೇಟಿ

ಗೆಳತಿ ಅನಘಾ ಅಮೃತಾ ಪ್ರಿತಂ ಅವರ ಕವಿತೆಯೊಂದನ್ನ ಕಳಿಸಿದ್ಲು .

एक मुलाकात
मैं चुप शान्त और अडोल खड़ी थी
सिर्फ पास बहते समुन्द्र में तूफान था……फिर समुन्द्र को खुदा जाने
क्या ख्याल आया
उसने तूफान की एक पोटली सी बांधी
मेरे हाथों में थमाई
और हंस कर कुछ दूर हो गया
हैरान थी….
पर उसका चमत्कार ले लिया
पता था कि इस प्रकार की घटना
कभी सदियों में होती है…..

लाखों ख्याल आये
माथे में झिलमिलाये

पर खड़ी रह गयी कि उसको उठा कर
अब अपने शहर में कैसे जाऊंगी?

मेरे शहर की हर गली संकरी
मेरे शहर की हर छत नीची
मेरे शहर की हर दीवार चुगली

सोचा कि अगर तू कहीं मिले
तो समुन्द्र की तरह
इसे छाती पर रख कर
हम दो किनारों की तरह हंस सकते थे

और नीची छतों
और संकरी गलियों
के शहर में बस सकते थे….

पर सारी दोपहर तुझे ढूंढते बीती
और अपनी आग का मैंने
आप ही घूंट पिया

मैं अकेला किनारा
किनारे को गिरा दिया
और जब दिन ढलने को था
समुन्द्र का तूफान
समुन्द्र को लौटा दिया….

अब रात घिरने लगी तो तूं मिला है
तूं भी उदास, चुप, शान्त और अडोल
मैं भी उदास, चुप, शान्त और अडोल
सिर्फ- दूर बहते समुन्द्र में तूफान है…..




https://youtu.be/g0yWu-UxUQU

ಮೇಲಿನ ಲಿಂಕ್ ನಲ್ಲಿ ಕವಿತೆಯನ್ನು ಕೇಳಬಹುದು.
ಕೃಪೆ :ಇಂಟರ್ನೆಟ್


  ಈ ಕವಿತೆಯಿಂದ ಮೂಡಿದ ಸಾಲುಗಳು ಕೆಳಗಿವೆ :

ಮೌನ ಮನೆ ಮಾಡಿತ್ತು ನನ್ನಲಿ
ಅದೊಂದು ದಿನ ಕಿನಾರೆಯಲಿ
ಕೂತವಳ ಒಳಗೆ ಶಾಂತಿ ನೆಲಸಿತ್ತು
ಪಕ್ಕದಲಿ ಬೋರ್ಗರೆಯುತ್ತಿದ್ದ
ಕಡಲಿತ್ತು
ಅಬ್ಬಬ್ಬ, ಅದೆಷ್ಟು ಅಲೆಗಳು ,
ಸದ್ದು - ಗದ್ದಲ, ಗಾಳಿ- ಸುಳಿ
ಅದಾವ ದೈವ ಮಾಯೆಯೊ
ಸುಳಿಗಾಳಿಯ ಪುಟ್ಟ ಪೊಟ್ಟಣ ಕಟ್ಟಿ
ಕೈಗಿತ್ತ ಸಾಗರ , ನಕ್ಕು ದೂರಾಯ್ತು
ಈ ಕ್ಷಣಗಳು ಮತ್ತೆ ಬಾರವು
ಬಾಚಿಟ್ಟುಕೋ ಎಂದು ಮನ ಕೂಗಿತ್ತು.
ಈ ಹೊರೆ ಹೊತ್ತು ಊರ ಹಾದಿಯ ಸೇರುವುದೆಂತು ?
ದಾರಿಗಳ ನಿಯಮ ಮೀರುವುದೆಂತು ?
ತಲೆ ತಗ್ಗಿಸಿ, ಹೊರೆ ಇಳಿಸಿಯೇ
ನಡೆಯ ಬೇಕು ಆ ಮನೆಗಳಲ್ಲಿ
ಒಳಗಿನ ಗೋಡೆ ಗೋಡೆಗೂ ಗುಟ್ಟಿನ
ಭಯ, ಆತಂಕವಿಹುದಲ್ಲಿ
ನೀನಾದರೂ ಸಿಕ್ಕಿದ್ದರೆ
ಥೇಟ್ ಆ ಕಡಲು ಸಿಕ್ಕಂತೆ !
ಈ ಹೊರೆಯ ಎದೆಯಲಿಟ್ಟು
ಎರಡು ದಡಗಳಂತೆ ನಕ್ಕು ಹಗುರಾಗಬಹುದಿತ್ತು...
ನಿನ್ನ ನರಸುವುದರಲಿ ಮುಗಿದಿತ್ತು ದಿನ
ಬೆಂಕಿಯುಗುಳದೆ ನುಂಗಿತೆನ್ನ ಮನ
ತೀರದಲುಳಿದ ಒಂಟಿ ನಾನು
ದಡವ ಹೊಡೆದುರುಳಿಸಿದೆ
ಹೊತ್ತುಮುಳುಗುವ ಹೊತ್ತಿಗೆ
ಪೊಟ್ಟಣವ ಮರಳಿಸಿದೆ
ಮಾಯವಾಗಿದೆ ತಾರೆ ಮಿಂಚಿನ ಕನಸು
ಹಾದಿ ಹೊರಳಲಿ ನಿನ್ನ ಕಂಡಿದೆ ಮನಸು
ಮತ್ತೆ ಮೌನ ಮನೆ ಮಾಡಿದೆ ನನ್ನಲಿ
ಗಾಳಿ ಸುಳಿಗೆ ಸಿಲಕದ ಶಾಂತಿ‌ ನಿನ್ನಲಿ
ಅಲ್ಲೆಲ್ಲೊ ಹರಿವ ಕಡಲು ಮಾತ್ರ ಭೋರ್ಗರೆಯುತ್ತಲೇ ಇದೆ.

Thursday, August 17, 2017

ಅಲೆಗಳು

ಪರ್ಷಿಯನ್ ಕವಿ ಸಿಯಾವಶ್ ಕಸ್ರಾಯಿ ಯವರ ಭಂವರ್  ನ  ಇಂಗ್ಲಿಷ್ ಭಾಷಾಂತರದ   ಭಾವಾನುವಾದ .
ಗೆಳತಿಯೋಬ್ಬರು ಈ ಕವಿತೆಯನ್ನು ಹಂಚಿಕೊಂಡಿದ್ದರು . ಆಗ ಹೊರ ಬಂದ ಸಾಲುಗಳು .

ಅವ್ಯಕ್ತ, ಅಮೂರ್ತ ತೀರ(?)ದೆಡೆಗೆ ಹರಿಯುತ್ತಿದ್ದೆವು
'ನಾ',' ನೀ' ನೆಂಬ ಎರಡು ಅಲೆಗಳು
ಸಂಗಮದ ಪಯಣ ಹಿತವಾಗಿತ್ತು
ನಮ್ಮ ಆಸೆ, ಕನಸು
ನೋವು, ನಲಿವು
ಗುರಿ,ಗಮ್ಯದೆಡೆಗೆ
ಏರಿದ್ದು,ಮತ್ತಿಳಿದಿದ್ದು
ಎಲ್ಲವೂ ಸಾಂಗತ್ಯಗಾನವಾಗಿತ್ತು
ಸಂತಸದ ಹಾಡಾದೆವು
ಸ್ವಚ್ಛವಾಗಿ ಹರಿದೆವು
ದೂರತೀರದ ನೋಟ ಕಂಡು ಪುಳಕಗೊಂಡೆವು
ಆದರೆ...
ಆದರೆ, ಅದೊಂದು ರಾತ್ರಿ ಗಾಳಿ ಸುಳಿಯಾಯ್ತು
'ನಾ' ನೆಂಬ ಅಲೆ ಒಂಟಿಯಾಯ್ತು
ಬಂಧದ ಮುತ್ತುಗಳು ಚೂರಾದವು
ಕಡಲಾಳದಲ್ಲೆಲ್ಲೊ ಕಳೆದುಹೋದವು
ಆ ಕ್ಷಣದಿಂದ ನಾನೊಂಟಿ!
ಕಳೆದ ಬಲದ ಅನ್ವೇಷಣೆ ಸಾಗಿದೆ
ಸರಿಯುತ್ತಿರುವ ಕ್ಷಣಗಳ ಲೆಕ್ಖ ತಪ್ಪಿದೆ
ಓಡುತ್ತಲೇ ಇರುವೆ ಕರೆಯುತ್ತಲವನ
ಒಂಟಿಯಾಗಿ...

Thursday, September 22, 2016

ಗೋಳಕದ ಹಾಡು

 ಪಿಂಕ್ ಸಿನೆಮಾ : ಹೆಣ್ಣು : ಸೀತೆ, ಸಾವಿತ್ರಿ ,ರಾಧೇ , ಪಾಂಚಾಲಿ , ದೇವಕಿ , ಯಶೋಧೆ , ಶರ್ಮಿಷ್ಠೆ , ದೇವಯಾನಿ ; ಎಲ್ಲವೂ  ಆಗಬಲ್ಲಳು. ಆದರೆ ಆಯ್ಕೆಯ ಸ್ವಾತಂತ್ರ್ಯ ಅವಳದ್ದಾಗಿರಬೇಕು. ಪಾತ್ರಗಳನ್ನು ಹೇರುವ ಅಧಿಕಾರ ಯಾರಿಗೂ ಇಲ್ಲ , ಇರಬಾರದು. ಅಂತಹ ಸಮಾಜ ಉಳಿಯಲಾರದು , ಉಳಿಯಬಾರದು.
ಚಿತ್ರಕೃಪೆ : ಅಂತರ್ಜಾಲ


ನಾ ಪ್ರಶ್ನೆಗಳ ಗೂಡು ತೊರೆದಾಗಿದೆ
ಆದರೂ ಆಗಾಗ ಅವರು ಕೇಳುತ್ತಾರೆ,
ಎಲ್ಲಿದ್ದೆ ? ಎಲ್ಲಿಗೆ ಪಯಣ ?

ಮಡಿಲಿನಿಂದ ಮಣ್ಣಿನವರೆಗೆ
ತೀರದಿಂದ ಕಡಲಿನವರೆಗೆ
ಬಾನಿನಿಂದ ಬಯಲಿನವರೆಗೆ
ಎಣಿಕೆ ಬಾರದ ಹೆಡ್ಡನ
ಲೆಖ್ಕದಲ್ಲಿ ಗಳಿಕೆಯಾವುದು ?
ನೀವೇ ಹೇಳಿ,ಎಲ್ಲ ಬಲ್ಲವರು !   

ಒಲವಿಗೂ ವ್ಯಾಮೋಹಕ್ಕೂ
ನಂಬಿಕೆಗೂ ನೀರೀಕ್ಷೆಗೂ
ಆಸೆಗೂ ಕನಸಿಗೂ
ಕಡಲ ಉಪ್ಪಿಗೂ ನೀರಿಗೂ
ಇರುವಷ್ಟೇ ಅಂತರ
ತಿಳಿಯಲಿಲ್ಲ , ನಾನಳಿಯಲಿಲ್ಲ !

ಉತ್ತರಿಸದೇ , ಉಸಿರೆತ್ತದೇ
ಹೊತ್ತು ಮುನ್ನಡೆದೇ(?) ನಡೆದೇ
ಗೋಳದಲ್ಲಿ ಬಂಧಿಯಾದ
 ಮೂರು ಮುಳ್ಳುಗಳನ್ನ
ಮುಳ್ಳುಗಳಿಗ್ಯಾರ ಹಂಗು ?
ಚಲಿಸುತ್ತವೆ , ಚುಚ್ಚುತ್ತವೆ !

ಎಂದೋ , ಒಳಗಿಂದೊಂದು ಶಾಂತ
ದನಿ ಕೇಳಿತು, ಯಾವುದಾದರೇನು
ಹಾದಿ,ಹೊತ್ತು ನಡೆ ಗೋಳಕವ
ಸುತ್ತು ತಿರುಗುವ ಬಾಲನಂತೆ
ಮಾಯವಾಗಲಿ ಮುಳ್ಳು ಮುಂದಿನಿಂದ ,
ಬಂದೇ ಬರುವುದು  ನೆರಳು ಹಿಂದಿನಿಂದ !
ಗೋಳಕದ ಆದಿ ಅಂತ್ಯಗಳೆರಡು ಉಸಿರಿನಲ್ಲಿ
ಎಣಿಕೆ ಮಾಡಲಿ ಬೇಡ ಮುಳ್ಳಿನಲ್ಲಿ !

ಈ ಸಾಲುಗಳು ಮೂಡಿದ್ದು ಅವಧಿಯಲ್ಲಿನ ಚಿತ್ರಕ್ಕೊಂದು ಕವಿತೆ ಸ್ಪರ್ಧೆಗಾಗಿ ಆದರೆ ಕಳಿಸಲೋ ಬೇಡವೋ ಎಂಬ ಪ್ರಶ್ನೆಗೆ ಉತ್ತರ ದೊರೆಯುವ ಮುನ್ನ ತೀರ್ಪುಗಾರರಾಗಿದ್ದ ಗೋಪಾಲ ವಾಜಪೇಯಿಯವರು ನಮ್ಮನಗಲಿದರು. ಹೌದು , ಇಲ್ಲ ಎಂಬ ಎರಡೇ ಆಯ್ಕೆಗಳನಿಟ್ಟಾಗ ಬದುಕು ತನ್ನದೇ ಆದ ಬೇರೆ ಆಯ್ಕೆ ಮಾಡಿಕೊಂಡಿತ್ತು.
ಅವರೊಡನೆ ನನಗಷ್ಟು ಒಡನಾಟವಿರಲಿಲ್ಲ, ಭೇಟಿಯಾಗಿದ್ದು ಎರಡೇ ಬಾರಿ ಆದರೂ ಅಂತಃಕರಣವೊಂದು ಮರೆಯಾದ ನೋವು ಕಾಡುತ್ತಿರುವುದು ಸತ್ಯ.


Tuesday, December 01, 2015

ವಿಮರ್ಶಾ ಕಮ್ಮಟ - ಒಂದು ಗ್ರಹಿಕೆ

ವಿಧ್ಯಾರ್ಥಿ ದೆಸೆಯಿಂದಲೂ ನಾನು ಕಮ್ಮಟಗಳಿಗೆ ಹಾಜರಿ ಹಾಕಿದ್ದು ಅತೀ ಕಡಿಮೆ . ವಿಮರ್ಶೆಗೆ ಬೇಕಾದ ಆಳವಾದ ಅರಿವು , ಸಾಹಿತ್ಯದ ಓದು ಎರಡೂ ನನಗಿಲ್ಲವಾದ್ದರಿಂದ ವಿಮರ್ಶಾ ಕಮ್ಮಟಕ್ಕೆ ಹೋಗಲು ಅಳುಕಿನಿಂದಲೇ ಒಪ್ಪಿದ್ದೆ. ಸ್ಥಳವನ್ನು ತಲುಪಿದಾಕ್ಷಣ   ಆಯೋಜಕಿ , ಕಮ್ಮಟದ ಕನಸಿನ ಮೂಲ ಜಯಲಕ್ಷ್ಮಿ ಪಾಟಿಲ್ ಗುರುತು ಹಿಡಿದು ಮಾತನಾಡಿಸಿದ್ದು ಸ್ವಲ್ಪ ಧೈರ್ಯ ಬಂದಿತು . ನಂತರ ಜಯಶ್ರ್ರೀ ಕಾಸರವಳ್ಳಿ , ಜಯಶ್ರೀ ದೇಶಪಾಂಡೆ , ಸುಧಾ ಶೆರ್ನೋಬತ್, ತೇಜಸ್ವಿನಿ ಹೆಗಡೆ ಮುಂತಾದವರೊಂದಿಗೆ ಕಮ್ಮಟಕ್ಕೆ  ತಯಾರಾದೆವು .

ಓದಿಗೆ ದಿಕ್ಕು ಸೂಚಿಸಬಲ್ಲ ದಿವಾಕರ್ ಸರ್ ಮಾತು ಕೇಳುವುದು ಎಂದಿಗೂ ಹಿತ.  ಮನುಷ್ಯ ಬೆಳೆದಂತೆ ಅವನೊಳಗಿನ ವಿಚಾರಗಳೆಲ್ಲವೂ ಶಬ್ಧವಾಗಲಾರವು , ಆಗಬಾರದು ಕೂಡ .  ಇದು ಮನುಷ್ಯನಲ್ಲಿ ನಡೆಯುವ ಪ್ರಾಥಮಿಕ ಹಂತದ ವಿಮರ್ಶೆ . ರಾಜಾಸ್ಥಾನಗಳಲ್ಲಿದ್ದ ವಿದೂಷಕರು ವ್ಯವಸ್ಥೆಯನ್ನು ವಿಮರ್ಶಿಸಿದ , ಈಗಲೂ ಸ್ಟಾಂಡ್ ಅಪ್ ಕಾಮೆಡಿಯನ್ಸ್ ಆಗಿ ವಿಮರ್ಶಿಸುತ್ತಿರುವ ಎರಡನೇ ಹಂತದ ವಿಮರ್ಶಕರು . ಹೀಗೆ ಸಾಗುತ್ತಾ ಪಂಪ ತನ್ನ ಕೃತಿಗಳಲ್ಲಿ ಮಂಡಿಸಿದ ಅಂದಿನ ಸ್ಥಿತಿಗಳ ವಿಮರ್ಶೆ , ಮಾಸ್ತಿಯವರಂತಹ ಸಾಹಿತಿಗಳ ವಿಮರ್ಶೆಯ ಬಗ್ಗೆ ವಿವರಿಸಿದ ದಿವಾಕರ್ ರವರು  ಕನ್ನಡ ಸಾಹಿತ್ಯದ ವಿವಿಧ ಘಟ್ಟಗಳಲ್ಲಿ ಪ್ರವರ್ಧಮಾನಕ್ಕೆ ಬಂದ ವಿಮರ್ಶಾ ಪ್ರಸ್ಥಾನಗಳ ಬಗ್ಗೆ ವಿವರಿಸಿದರು. ಕಡೆಯಲ್ಲೀ ಬೇಂದ್ರೆಯವರ  'ಗಾರುಡಿಗ' ಕವಿತೆಯ ಸಾಲುಗಳು ಕುವೆಂಪುರವರ ಸಾಲುಗಳನ್ನು ಉದ್ಘರಿಸಿ ಕಮ್ಮಟಕ್ಕೊಂದು ಭಧ್ರ ಬುನಾದಿ ಹಾಕಿದರು .
ಸಿ.ಏನ್. ಆರ್ .ರಂತಹ ಉಪನ್ಯಾಸಕರ ಮಾತು ಯಾರಿಗೆ ತಾನೇ ರುಚಿಸುವುದಿಲ್ಲ ?  ಸಾಹಿತ್ಯ ವಿಮರ್ಶೆಯ ವಿವಿಧ ಆಯಾಮಗಳನ್ನು ವಿವರಿಸುತ್ತಾ ಅನಂತಮೂರ್ತಿಯವರ ಸಂಸ್ಕಾರವನ್ನು ಪ್ರಾಕ್ಟಿಕಲ್ ಆಗಿ ವಿಮರ್ಶಿಸಿದ ರೀತಿ ಸೊಗಸಾಗಿತ್ತು . ಕಾರಂತರ ಕಾದಂಬರಿಗಳ ಓದು ಮೊದಲು ಕೆಲವು ಪುಟಗಳವರೆಗೆ , ನನ್ನ ಮಟ್ಟಿಗೆ ಕಷ್ಟ . ಅವಧಿಯಲ್ಲಿ ಮೈ ಮನಗಳ ಸುಳಿಯಲ್ಲಿ ಬಗ್ಗೆ ಬರೆದಾಗ ಈ ಬಗ್ಗೆ ನಾನು ಉಲ್ಲೇಖಿಸಿದ್ದೆ . ಸಿ.ಏನ್.ಆರ್ ಕೂಡ ಅದೇ ಮಾತನ್ನು ಸಭೆಯಲ್ಲಿ ಹೇಳಿದಾಗ ವಿಮರ್ಶಕ ಮತ್ತು ಸಾಮಾನ್ಯ ಓದುಗರ ಅಭಿಪ್ರಾಯಗಳು ಒಂದೇ ಆಗಿರಬಹುದು ಎಂದು ಬೀಗಿದ್ದೆ.  ಮತ್ತೆ ಅವರೊಂದಿಗೆ ಆ ಬಗ್ಗೆ ಪ್ರಸ್ತಾಪಿಸಿದಾಗ ಅದನ್ನವರು ನಗುತ್ತಲೇ ಒಪ್ಪಿದ್ದರು . ಕೃತಿಯೊಂದನ್ನು ಪ್ರತೀ ಬಾರಿಯೂ ಓದಿದಾಗ ವಿಮರ್ಶಕನ ಗ್ರಹಿಕೆಯೂ ಬದಲಾಗಬಹುದು ಮತ್ತು ಅವನದನ್ನು ಒಪ್ಪಿಕೊಳ್ಳುತ್ತಾನೆ ಎಂದು ಯಾವುದೇ ಅಳುಕಿಲ್ಲದೇ ಅವರು ಹೇಳಿದ್ದು ಸದಾ ಸ್ಮರಣೀಯ. ದೊಡ್ಡವರು ದೊಡ್ದವರಾಗುವುದೇ ಇಂತಹ ಮಾತುಗಳಿಂದ. ಅವರೇ ಬರೆದ 'ಸಾಹಿತ್ಯ ವಿಮರ್ಶೆ ' ನಮಗೆಲ್ಲರಿಗೂ ಕಮ್ಮಟದ ಕುರುಹಾಗಿ ದೊರೆತದ್ದು ಬೋನಸ್.

ನವೋದಯದ ರಮ್ಯಕಾಲದ ವಿಮರ್ಶೆಯೂ ರಮ್ಯವಾಗಿತ್ತೆಂದು ಖಾತರಿಯಾಗಿದ್ದು ಡಾ.ಜಿ.ಬಿ. ಹರೀಶರ ಮಾತುಗಳನ್ನು ಕೇಳಿದಾಗ. 'ವಿಮರ್ಶಕ ದಂಡಧಾರಿಯಲ್ಲ ದೀಪಧಾರಿ ' ಎಂಬ ಕುವೆಂಪುರವರ ಮಾತು ಆ ಕಾಲದ ಕನ್ನಡಿ . ಎ.ಆರ್.ಕೃಷ್ಣಶಾಸ್ತ್ರಿಗಳಿಂದ ಮೊದಲುಗೊಂಡು ಡಿವಿಜಿ, ಮಾಸ್ತಿಯವರ ವಿಮರ್ಶೆಯ ವಿವಿಧ ಮಗ್ಗಲುಗಳನ್ನು ಪರಿಚಯಿಸಿದ ಹರೀಶರು ತಮ್ಮ ಉಪನ್ಯಾಸವನ್ನು ಪೂರ್ತಿ ಮಾಡಿದ್ದು ಚಿಂತನೆಗೆ ಹಚ್ಚಿದ ಮಾತೊಂದರಿಂದ : 'ವಸ್ತು ಕಾಣುವುದು ನೋಡುವ ಹಂಬಲವಿದ್ದಾಗ ಮಾತ್ರ '    ಮುಂದುವರೆದ ಚರ್ಚೆಯಲ್ಲಿ ಕೆ.ವೈ.ಏನ್. ಕೂಡ ಜೊತೆಯಾದದ್ದು  ಹುಗ್ಗಿಯ ಮೇಲೆ ತುಪ್ಪ ಸುರಿದಂತಿತ್ತು .  
ಎಸ್.ಆರ್ . ವಿಜಯಶಂಕರ್ ಅವರ ಲೇಖನಗಳನ್ನು ಅಲ್ಲಲ್ಲಿ ಓದಿದ್ದರೂ ಇದೇ ಮೊದಲ ಬಾರಿ ಅವರ ಉಪನ್ಯಾಸ ಕೇಳಿದ್ದು .  ಸಾಪೋಕ್ಲಿಸ್ ನ ಅಗೆಮೆಮ್ನಾನ್ ಮನಸ್ಥಿತಿಯಿಂದ ಮೊದಲುಗೊಂಡ ಉಪನ್ಯಾಸ ಅದೆಷ್ಟೋ ಪಾತ್ರಗಳ , ಲೇಖಕರ ಪರಿಚಯ ಮಾಡಿಸಿತ್ತು . ಎಂ.ಜಿ. ಕೃಷ್ಣ ಮೂರ್ತಿ , ಸುರೇಂದ್ರನಾಥ್ ಮಿಣಜಗಿ , ಕುರ್ತಕೋಟಿ , ಪುಣೇಕರ್ ಎಲ್ಲರೂ ನಮ್ಮ ನಡುವೆ ಬಂದಿದ್ದರು .  ಓದಲೇ ಬೇಕಾದ ಒಂದಷ್ಟು ಪ್ರಬಂಧಗಳು , ವಾಕ್ಯವೊಂದು ಒಳಗಿಳಿಯುವ ಬಗೆ ಎಲ್ಲವನ್ನೂ ಮನಮುಟ್ಟುವಂತೆ ವಿವರಿಸಿದ ಉಪನ್ಯಾಸ ಅವಧಿಯ ಅರಿವೆಯೇ ಇಲ್ಲದಂತೆ ಸಾಗಿತ್ತು.
ಕೃತಿಯೊಂದರ   ರೂಪಕ್ಕೆ ತಕ್ಕ ಆಶಯ, ಆಶಯಕ್ಕೆ ತಕ್ಕ ಆಕೃತಿ ಇರಬೇಕೆಂಬುದು  ರೂಪ ನಿಷ್ಠವಿಮರ್ಶೆಯ ಸಾರ . ವಿವರಿಸಿದವರು ಡಾ.ಮಧುಸೂಧನ .  ಸಾಹಿತ್ಯ ಪ್ರಕಾರಗಳು , ಛಂದೋ ರೂಪಗಳಿಂದ ಮೊದಲಾಗುವ ವಿಮರ್ಶೆ ಸಾಹಿತ್ಯ ಪ್ರಕಾರವೊಂದರ ಸಾಧ್ಯತೆಗಳನ್ನು ಕುರಿತು ಚಿಂತಿಸುತ್ತದೆ . ೨೦ನೇ ಶತಮಾನದಿಂದೀಚೆಗೆ ಪ್ರವರ್ಧಮಾನಕ್ಕೆ ಬಂದ ಮನೋವಿಶ್ಲೇಷಣಾತ್ಮಕ ವಿಮರ್ಶೆಯ ಪರಿಚಯವನ್ನೂ ಉಪನ್ಯಾಸಕಾರರು ಮಾಡಿಸಿದರು . ವಿಮರ್ಶಾ ಪ್ರಸ್ಥಾನವೊಂದು ಸರ್ವತಂತ್ರ ಸ್ವತಂತ್ರವಲ್ಲ , ಒಂದರೊಳಗೊಂದು ಬೆರೆತಾಗಲೇ ವಿಮರ್ಶೆ ಪೂರ್ಣವಾಗಬಹುದೆಂಬ ಮಾತನ್ನು ಎಲ್ಲ ಉಪನ್ಯಾಸಕಾರರು ಒತ್ತಿ ಹೇಳಿದರು .

ಎಲ್ಲೆಡೆಯಲ್ಲೂ ಸ್ತ್ರೀಯನ್ನು ಎರಡನೇ ದರ್ಜೆಯ ಪ್ರಜೆಯಾಗಿ ನೋಡುವ ಸಮಾಜ , ವೇದಿಕೆಯ ಮೇಲಿನಿಂದ ಮಾತನಾಡುವುದಕ್ಕೂ ಆಕೆಗೆ ಸರಿಯಾದ ಪೋಡಿಯಮ್ ವ್ಯವಸ್ಥೆಮಾಡಿಲ್ಲವೆಂದು ವ್ಯಂಗ್ಯ ಭರಿತ ಹಾಸ್ಯದೊಂದಿಗೆ ಮಾತಿಗಿಳಿದ ಡಾ.ಬಿ.ಏನ್. ಸುಮಿತ್ರಾ ಬಾಯಿ , ಮಹಿಳೆಯರು ಮೊದಲು ಬರೆಯಲು ಪ್ರಾರಂಭಿಸಿದಾಗ ಎದುರಿಸಿದ ಸವಾಲುಗಳು , ಮಾಸ್ತಿಯವರ ವಿಮರ್ಶೆಯಿಂದಾಗಿ ಬರಹವನ್ನೇ ನಿಲ್ಲಿಸಿದ ತಿರುಮಲಾಂಬರ ಪ್ರಸಂಗ,  ವಿಜಯಾ ದಬ್ಬೆ , ಪ್ರತಿಭಾ ನಂದಕುಮಾರ್ , ಸ.ಉಷಾ ಅವರ ಕವಿತೆಗಳಲ್ಲಿ ಕಾಣುವ ಸ್ತ್ರೀ ಜಗತ್ತುಗಳನ್ನೂ ವಿವರಿಸುತ್ತಲೇ  ಸ್ತ್ರೀವಾದಿ ವಿಮರ್ಶೆ  ಎಂಬುದು ಸಮಾಜದಲ್ಲಿ ತನ್ನಿರುವಿಕೆಯನ್ನು ಸಾಬೀತು ಮಾಡಲು ಹೊರಟ ಮಹಿಳಾ ಹೋರಾಟದ ಒಂದು ಮುಖ ಮಾತ್ರ ಎಂಬುದನ್ನು ಒತ್ತಿ ಹೇಳಿದರು . ಸಮಾನತೆಯನ್ನು ಸಾಧಿಸುತ್ತಿರುವ ಇಂದಿನ ಮಹಿಳೆಯ ಸಾಹಿತ್ಯವನ್ನು ಸ್ತ್ರೀವಾದಿ ತಕ್ಕಡಿಯಲ್ಲಿಡುವುದು ಎಷ್ಟು ಸರಿ ? ಎಂಬ ಜಯಶ್ರೀ ಕಾಸರವಳ್ಳಿಯವರ ಪ್ರಶ್ನೆಗೆ  ಸಮಯಾಭಾವದಿಂದ ಉತ್ತರ ದೊರೆಯಲಿಲ್ಲ . 
`ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣಮಿತ್ರ' ಘೋಷವಾಕ್ಯವನ್ನು ವಿವರಿಸುತ್ತಲೇ ಚಳುವಳಿಯಲ್ಲಿ ನಡೆದ ಕೆಲವು ಕಹಿ ಘಟನೆಗಳನ್ನೂ ನೆನಪಿಸಿಕೊಂದವರು ಬಂಡಾಯ ಸಾಹಿತ್ಯ ವಿಮರ್ಶೆಯನ್ನು ವಿವರಿಸಿದ ಡಾ.ಕೆ.ವೈ. ನಾರಾಯಣ ಸ್ವಾಮಿ ಯವರು.  ಸಾಹಿತ್ಯವೆಂಬುದು ಸಮಾಜಕ್ಕೆ ಹಿಡಿದ ಕನ್ನಡಿಯಾಗಬೇಕೆಂಬ ಆಶಯದೊಂದಿಗೆ ಉದಯಿಸಿದ ,ಇತಿಹಾಸದಿಂದಲೂ ಬೇರೆ ರೂಪಗಳಲ್ಲಿ ಚಾಲ್ತಿಯಲ್ಲಿರುವ ಬಂಡಾಯ ಸಾಹಿತ್ಯದ ಚರ್ಚೆ ಈ ಉಪನ್ಯಾಸದ ತಿರುಳು . 
ಕಮ್ಮಟದ ಕೊನೆಯ ಉಪನ್ಯಾಸವಾದ 'ಆಧುನಿಕೋತ್ತರ ವಿಮರ್ಶೆ' ಯ ಉಪನ್ಯಾಸ ಮುಗಿದ ನಂತರ ಅನಿಸಿದಿದ್ದು , ಅದು ವಿಮರ್ಶೆಯ ಉಪನ್ಯಾಸದ ಜೊತೆಗೆ ಇಂದಿನ ಸಮಾಜದ ಮನಸ್ಥಿತಿಯ ಬಗೆಗಿನ ಉಪನ್ಯಾಸವೂ ಆಗಿತ್ತು . ವಿರಚನೆಯಿಂದಲೇ ಶಬ್ಧವೊಂದು ಅರ್ಥಗಳಿಸಿಕೊಳ್ಳುವ ಪರಿಯನ್ನು ಡಾ. ಓ.ಎಲ್. ನಾಗಭೂಷಣ ಸ್ವಾಮಿಯವರು ವಿವರಿಸಿದ ರೀತಿ ಅದ್ಭುತವಾಗಿತ್ತು . ಡೆರಿಡಾ, ಗಾಯತ್ರಿ ದೇವಿ ಸ್ಪೀವಾಕ್ ರ ಸಿಧ್ಧಾಂತಗಳನ್ನು ಸರಳ ಉದಾಹರಣೆಗಳೊಂದಿಗೆ ಉಪನ್ಯಾಸಕಾರರು ವಿವರಿಸಿದರು . ಜ್ಞಾನವೆಂಬುದು ಸ್ಥಾನಾವಲಂಬಿತ (knowledge is positional) ಎಂಬ ಫುಕೋನ ಸಿಧ್ಧಾಂತ ಬಹುಶಃ ಇಂದು ನಾವರಿಯಬೇಕಿರುವ ಪ್ರಮುಖ ಸಿಧ್ಧಾಂತಗಳಲ್ಲೊಂದು .  ಕೃತಿ , ಕೃತಿಕಾರ , ಓದುಗ , ಲೋಕ ಇವುಗಳಲ್ಲಿ ಯಾವುದನ್ನೂ ತನ್ನ ಕೇಂದ್ರವನ್ನಾಗಿ ಪರಿಗಣಿಸದಿರುವುದು ಆಧುನಿಕೋತ್ತರ ವಿಮರ್ಶೆಯ ಪ್ರಮುಖ ಲಕ್ಷಣ ಎಂಬುದು ಈ ಉಪನ್ಯಾಸದ ಭಾರತ ವಾಕ್ಯವಾಗಿತ್ತು .  ಭಾಷೆ ಎಂಬುದು ಅರ್ಥಗಳ ಲೀಲೆ ಎಂಬುದು ನನಗಿಷ್ಟವಾದ ಸಾಲು.

ಎರಡು ದಿನಗಳ ಕಮ್ಮಟದಿಂದ ವಿಮರ್ಶೆಯನ್ನಲ್ಲದಿದ್ದರೂ ಸಾಹಿತ್ಯವನ್ನು ಓದುವ - ಅರ್ಥೈಸಿಕೊಳ್ಳುವ ರೀತಿ , ಕಾಲದೊಂದಿಗೆ ಹೆಜ್ಜೆಹಾಕುತ್ತ ಬದಲಾದ ಪರಿಮಾಣಗಳು, ಪತ್ರಿಕೆಗಳಲ್ಲಿ ಮರೆಯಾಗುತ್ತಿರುವ ವಿಮರ್ಶೆ ಮತ್ತು ಅದರಿಂದಾಗಿ ದಿಕ್ಕುತಪ್ಪುತ್ತಿರುವ ಅಥವಾ ದಿಕ್ಕುತಪ್ಪಬಹುದಾದ ಓದುಗ , ವಿಮರ್ಶಕನಿಗಿರಬೇಕಾದ ಸಾಹಿತ್ಯದ ಒಟ್ಟು ನೋಟ ... ಮುಂತಾದ ವಿಷಯಗಳ ಪರಿಚಯವಾಯಿತು . ಆಯೋಜಿಸಿದ ಜಯಲಕ್ಷ್ಮಿ ಪಾಟೀಲ್ ,ವೀರೇಂದ್ರ ಗೌಡ , ನಿರ್ದೇಶಿಸಿದ ದಿವಾಕರ್ ಸರ್ ಅವರಿಗೆ ವಂದನೆಗಳು . 

Monday, November 09, 2015

ಈ ಜಗತ್ತಿನ ಕಥೆ


ಚಿತ್ರಕೃಪೆ : ಅಂತರ್ಜಾಲ

ಇತ್ತೀಚಿಗೆ ಓದಿದ ಪುಸ್ತಕ ಜೋಗಿಯವರ  'ವಿರಹದ ಸಂಕ್ಷಿಪ್ತ ಪದಕೋಶ'. ನೀಳ್ಗತೆ , ಸಣ್ಣ ಕಾದಂಬರಿ , ಗದ್ಯ ಪದ್ಯ ಯಾವ ಹೆಸರಿನಿಂದಲಾದಲೂ ಕರೆಯಬಹುದು.  ಒಂದು ಪ್ರಯಾಣದ ಅನುಭವವನ್ನು ನಮ್ಮದಾಗಿಸಿಕೊಳ್ಳುತ್ತಾ  ಓದಿದರೆ ಪಯಣವೂ ಕಳೆಗಟ್ಟುತ್ತದೆ. ನಾವು ಕೇಳಿಕೊಂಡು ಮರೆತ ಅಥವಾ ಇನ್ನೂ ಕೇಳಿಕೊಳ್ಳದಿರುವ ಪ್ರಶ್ನೆಗಳಿಗೆ ಮತ್ತೆ ದನಿಯಾಗುವ ಅಕ್ಷರಗಳು .  'ಫೇಸ್ ಬುಕ್  ಡಾಟ್ ಕಾಂ ....' ಆದ ಮೇಲೆ ಜೋಗಿಯವರ ಯಾವ ಪುಸ್ತಕವನ್ನೂ ನಾನು ಓದಿಲ್ಲ. ಅಲ್ಲಲ್ಲಿ ಓದಿದ ಕೆಲವು ಸಾಲುಗಳು ಮತ್ತು ಪುಸ್ತಕದ ಗಾತ್ರ  ಇಷ್ಟವಾಗಿ ತಂದದ್ದು 'ವಿರಹ...'  ಕನ್ನಡದ ಮಟ್ಟಿಗೆ ಇದು ಹೊಸ ಪ್ರಯೋಗವೆಂಬುದು ನನ್ನ ತಿಳುವಳಿಕೆ. ಈ ನವೀನ ಪ್ರಯೋಗ ಇಷ್ಟ ಆಯ್ತು. ಕಥೆಯ ಪಾತ್ರಗಳಾದ   ರಾಜೀವ , ವಂದನಾ , ವಿಶ್ವಾಸ ಎಲ್ಲರೂ ನಮ್ಮೊಳಗೇ ಇದ್ದಾರೆ. ಕಂಡುಕೊಳ್ಳುವ ಪ್ರಕ್ರಿಯೆಯೂ ಚಾಲ್ತಿಯಲ್ಲಿರಬಹುದು, ಕ್ರಿಯೆಯ ಇಂಧನವಾಗಿ ಇಂತಹ ಪುಸ್ತಕಗಳು ಒದಗಿಬರುತ್ತವೆ . ಈ ಪುಸ್ತಕದ ಓದು ಒಂದು ಅನುಭವವಾದ್ದರಿಂದ ಅದನಿಲ್ಲಿ ದಾಖಲಿಸುವುದು ಕಷ್ಟ.

ಮುನ್ನುಡಿಯಿಂದ : 'ಅಡ್ಡಡ್ಡ ಇದ್ದ ಮನೆಗಳು ಉದ್ದುದ್ದವಾಗಿ ಬೆಳೆದಿವೆ ಆದರೆ ಅಲ್ಲೂ ಕಥೆಗಳಿವೆ . ತುಮುಲಗಳಿವೆ , ಸ್ವಾರ್ಥ , ಸಂತೋಷ, ಪ್ರೀತಿ ,  ದ್ವೇಷ , ವಿಶ್ವಾಸ , ದ್ರೋಹ ಎಲ್ಲವೂ ಇದೆ.'  ಕೆಲವು ಕಥೆಗಾರರಿಗೆ ಹಲವು ಕಥೆಗಳು ಈ ಅಪಾರ್ಟ್ಮೆಂಟ್ಗಳ ಐಟಿ  ಬಿಟಿ ಜಗತ್ತಿನಲ್ಲಿ ಕಂಡಿವೆ. ಅಪಾರ್ಟ್ಮೆಂಟು ಗಳಾದರೇನು ? ಅಲ್ಲೂ ಮನುಷ್ಯರಿದ್ದಾರೆ , ಮನಸುಗಳಿವೆ. ನಿಜ ಅಲ್ವಾ ?
ಒಂದು ಅಪಾರ್ಟ್ಮೆಂಟಿನ ಕಥೆಯನ್ನು ಹೀಗೆ ಹೇಳಬಹುದು  : ಮಹಾನಗರಿಗೆ ಬಂದ ಎರಡು ಮೂರು ವರ್ಷಗಳಲ್ಲಿ ಯುವಕನಿಗೆ ಇಲ್ಲಿನ ಭೂಮಿಯ ಬೆಲೆ ಅಂದಾಜಾಗಿದೆ , ಭೂಮಿಯ ಮೇಲಿನ ಮನೆಯ ಆಸೆ ಬಿಟ್ಟ ಆತ ಹಸೆಮಣೆ ಏರುವ ಮುನ್ನ  'ಅಪಾರ್ಟ್ಮೆಂಟ್ ಮನೆ' ಖರೀದಿಸಿದ್ದಾನೆ . ಸಂಬಳದ ಕಾಲು ಭಾಗ ಸಾಲಕ್ಕೆ ಮೀಸಲಾದರೂ ಉಳಿದ ಮುಕ್ಕಾಲಿನಲ್ಲಿ ಜೀವನಕ್ಕೆ ಕೊರತೆ ಇಲ್ಲ . ಯುವಕನಿಗೊಂದು ಜೊತೆ ಸಿಕ್ಕಿತು , ಅವಳೂ ಇವನಂತೆ ಪದವಿಧರೆ , ಉದ್ಯೋಗಸ್ಥೆ. ತಂದೆ ತಾಯಂದಿರು ತಂತಮ್ಮ ಊರುಗಳಲ್ಲಿದ್ದಾರೆ . ಆಗೀಗ ಮಹಾನಗರಿಯ ಭೇಟಿ. ಮಾಲಿನ ಹೊಳೆವ ಗಾಜುಗಳು, ಸದಾ ಚಲಿಸುತ್ತಾ -ಹೆಜ್ಜೆ ಇಟ್ಟರೆ ಮೇಲೊಯ್ಯುವ ಎಸ್ಕಲೇಟರುಗಳು , ಜಾರುವ ನೆಲಗಳು , ರುಚಿಯಾದ ತಿಂಡಿ ಬಡಿಸುವ ದುಬಾರಿ ಹೊಟೇಲುಗಳು , ಎಲ್ಲೋ ಬುಕ್ ಮಾಡಿ ಎಲ್ಲೋ ಕುಂತು ನೋಡುವ ಸಿನೆಮಾಗಳು ...  ಯಾವುದೂ ಅವರ ಊರಿಗಿಂತ ಆಕರ್ಷಣೀಯವಾಗಿಲ್ಲ , ಇದು ಅವರ  ಮಟ್ಟಿಗಿನ ಸತ್ಯ . ಹಾಗಾಗಿ ತಿಂಗಳು ತುಂಬಿದ ನಂತರ ಅವರು ಮಹಾನಗರಿಯಲ್ಲಿ ಉಳಿಯುವುದಿಲ್ಲ.

ಹೊಸದಾಗಿ ಮದುವೆಯಾದ ಯುವಕ ,ಯುವತಿಗೂ ಇದು ಸೌಕರ್ಯವೇ.  ತಂದೆ ತಾಯಿ ಬಂದ ದಿನಗಳಲ್ಲಿ ಸಣ್ಣ ಪುಟ್ಟ ಕಿರಿಕಿರಿಗಳು ಸಾಮಾನ್ಯ . "ನಿನ್ನಮ್ಮನ ದನಿ ಜೋರು , ಎಷ್ಟು ಮಾತಾಡ್ತಾರೆ­ " "ಬೆಳ್  ಬೆಳಿಗ್ಗೆ ಐದು ಗಂಟೆಗೆ ಎದ್ದು ನಿನ್ನಪ್ಪ ಯಾವ ಕೆಲಸಕ್ಕೆ ಹೋಗ್ಬೇಕು ? " . ಅಲ್ಲಿನ್ನೂ ಸಂಬಂಧಗಳು ಹುಟ್ಟಿಲ್ಲ , ಅವರಿನ್ನೂ 'ನಿನ್ನಪ್ಪ' , 'ನಿನ್ನಮ್ಮ' . ಒಟ್ಟಿನಲ್ಲಿ ಹೆಚ್ಚಿನ ಮನೆಗಳಲ್ಲಿ ತಂದೆ ತಾಯಿ ಇವರೊಟ್ಟಿಗೆ ಇರುವುದಿಲ್ಲ . ಎಷ್ಟು ಕಾಲ ಒಟ್ಟಿಗಿದ್ದೆವೆಂಬುದಕ್ಕಿಂತ ಒಟ್ಟಿಗಿದ್ದಾಗ ಒಂದಾಗಿರುವುದು ಮುಖ್ಯವೆಂಬ ಧೋರಣೆ ಇಲ್ಲಿ ಸಾಮಾನ್ಯ . ಇನ್ನು ಈ ನವ ಜೋಡಿ ಫಾರಿನ್ ಗೆ ಹಾರಿದರೆ ಅಲ್ಲೂ ಇದೇ ಕಥೆ ಒಂದಷ್ಟು ಬದಲಾವಣೆಗಳೊಂದಿಗೆ ರಿಪೀಟ್ ಆಗುತ್ತದೆ .

ಹೀಗೆ ಕಾಲ ಸಾಗುವಾಗ , ಅವಳ ಒಡಲಲ್ಲಿ ಕುಡಿ ಅರಳುತ್ತದೆ . ಬಸಿರನ್ನು ಇಬ್ಬರೇ ನಿಭಾಯಿಸುವುದು ಕಷ್ಟವಲ್ಲ ಆದರೆ ಕಂದನನ್ನು ? ಮತ್ತೊಬ್ಬರ ಸುಪರ್ದಿಯಲ್ಲಿ ಬಿಟ್ಟು ಹೋಗುವುದಕ್ಕಿಂತ ನಮ್ಮವರಿದ್ದರೆ ಒಳ್ಳೆಯದು ಎಂಬ ಸತ್ಯ ಅರಿವಾಗುತ್ತದೆ. "ಅಯ್ಯೋ ಮಗಳ ಮನೆಲಿರೋದಾ ?  ನಿಮ್ಮತ್ತೆ ಮಾವನ್ನ ಕರಿ " ಅಂತ ಅವಳ ತಂದೆ ತಾಯಿ, "ಅಲ್ಲಿ  ಯಾಕೋ ಹಿಡಿಸೋಲ್ಲ ಕಣೋ ಅದೀಗ ಸೊಸೆಯ ಮನೆ ಅನ್ನಿಸ್ತಾ ಇದೆ  " ಅಂತ ಇವನ ತಂದೆ ತಾಯಿ, ಒಂದಷ್ಟು ಜಗ್ಗಾಟ ಮಾಡಿ ಕೊನೆಗೆ ಸರದಿಯಂತೆ ಮೊಮ್ಮಗುವಿನ ಸೇವೆಗೆ ಹಾಜರಾಗುತ್ತಾರೆ.  ಅಳಿಯನ ಸಿಡುಕು , ಬೇಜವಾಬ್ದಾರಿ , ಎಷ್ಟು ಮಾಡಿದರೂ ತೃಪ್ತಿ ಹೊಂದದ ಅತ್ತೆ ಮಾವ ... ಅವಳಮ್ಮನ ತಲೆನೋವುಗಳು. ತನ್ನಷ್ಟು ರುಚಿಯಾಗಿ ಅಡುಗೆ ಮಾಡದ , ಮಾತು ಮಾತು ಮಾತಿಗೂ ತನ್ನ 'ಪುಟ್ಟ'  ಮಗನ ಮೇಲೆ ರೇಗುವ, ಮಗುವನ್ನು ಬಿಟ್ಟು ಕೆಲಸಕ್ಕೆ , ಪಾರ್ಲರ್ ಗೆ ಹೋಗುತ್ತೆನೆನ್ನುವ  ಸೊಸೆ  ಅವನಮ್ಮನ ಸಮಸ್ಯೆಗಳು . ಬೀಗರನ್ನು ದೂರುವುದು ಈಗೀಗ ಕಡಿಮೆಯಾಗಿದ್ದರೂ ಆ ಸೀನಿಗೂ ಇಲ್ಲಿ ಅವಕಾಶ ಉಂಟು . ಈ ಎಲ್ಲಾ ಸಮಸ್ಯೆಗಳು ಸಾಮಾನ್ಯವಾಗಿ ಕೋಲ್ಡು ಫಿವರಿನಷ್ಟೇ  ಕಾಮನ್ನು . ಬೆನ್ನು , ಸೊಂಟಗಳ ಬಲ ಕಳೆದುಕೊಂಡ ಅಜ್ಜ , ಅಜ್ಜಿಯರು ಮಕ್ಕಳನ್ನು 'ಪ್ರ್ಯಾಂ' ಎಂಬ ಗಾಡಿಯಲ್ಲಿ ಕೂಡಿಸಿ ದಿನವೂ ಅಪಾರ್ಟ್ಮೆಂಟಿನ  ಕೆಳಗಿನ ಪುಟ್ಟ ಆಟದ ಮೈದಾನವಾದ ಕಾಮನ್ ಏರಿಯಾಗೆ ಕರೆದೊಯ್ಯುತ್ತಾರೆ. ಪಕ್ಕದ ಮನೆಯ ಮಗುವಿನ ಸಲುವಾಗಿ ತೆಲುಗೋ , ಮಲೆಯಾಳ ಅಜ್ಜ ಅಜ್ಜಿಗಳೋ ಬಂದಿದ್ದಾರೆ .  ಭಾಷಾಭೇದವಿಲ್ಲದೇ ಅಲ್ಲೊಂದು ಹಿರಿಯ ನಾಗರಿಕರ ವೇದಿಕೆ ಸಿಧ್ಧವಾಗುತ್ತದೆ . ಇದರ ನಡುವೆ ಅತ್ತೆ -ಸೊಸೆ , ಅತ್ತೆ -ಅಳಿಯ , ಅಮ್ಮ -ಮಗಳು , ಮಾವ -ಸೊಸೆ ಹೀಗೆ ಎಷ್ಟು ಪಾತ್ರಗಳ ಕಾಂಬಿನೇಶನ್ನುಗಳನ್ನೂ ಸೃಷ್ಟಿಸಬಹುದೋ  ಅಷ್ಟರ ನಡುವೆಯೂ ನಡೆಯುವ ವಾದಗಳು, ಕನಿಷ್ಟ ಎಂದರೂ ೨೫ ಎಪಿಸೋಡುಗಳಿಗೆ ಸರಕು. ಧಾರಾವಾಹಿ ಬರಹಗಾರರು ಇನ್ನೂ ಈ ಜಗತ್ತಿಗೆ ಅದೇಕೆ  ಕಾಲಿಟ್ಟಲ್ಲವೋ ? ಉಳಿದವರಂತಿದ್ದೂ ಉಳಿದುಹೋಗುವವರ ಕಥೆ ಇದು.  ಎಲ್ಲೋ ಸಿಗದ ಭಡ್ತಿ ಇನ್ನೆಲ್ಲೋ ಸಿಟ್ಟಾಗಿ ಪರಿವರ್ತನೆಯಾಗುತ್ತದೆ. ಗಂಡ ಹೆಂಡಿರು ಉಂಡು ಮಲಗಿದರೂ ಅಲ್ಲೊಂದು ಪರದೆ ಇದೆ. ಆಗೀಗ 'ನಮ್ಮ ಸಂಸಾರ  ಆನಂದ ಸಾಗರ ..' ಎನ್ನುತ್ತಲೇ ವಾರಾಂತ್ಯಕ್ಕಾಗಿ ಕಾಯುವವರ ಕಥೆ ಇದು.  ಇಲ್ಲಿ ತಮ್ಮದೇ ಆದ ಹವ್ಯಾಸಗಳನ್ನು ಕಟ್ಟಿಕೊಂಡು ತೃಪ್ತಿಯನ್ನು ಕಂಡುಕೊಂಡವರಿದ್ದಾರೆ,  ಮೊದಲ ತೇದಿಯ ಮಹಿಮೆಯಿಂದ ನಾನಿಲ್ಲಿ ಉಳಿದ್ದೇನೆ ಎಂದು  ಖುಲ್ಲಂ ಖುಲ್ಲಾ ಹೇಳುವವರಿದ್ದಾರೆ . ಒಟ್ಟಿನಲ್ಲಿ ಎಲ್ಲ ರೀತಿಯ ರಂಗುಗಳ 'ರಂಗತರಂಗ' . 

ಇದು ವರ್ಟಿಕಲ್ ವಠಾರಸ್ಥರ ಸ್ಥೂಲ ಕಥೆ . ಕಾಂಬಿನೆಶನ್ನುಗಳು ಬದಲಾದಂತೆ, ದೇಶ -ಕಾಲಕ್ಕನುಸಾರವಾಗಿ ಅಸಂಖ್ಯ ಕಥೆಗಳ ಕಣಜ ಇದು.  ಮಾನವ ಬದುಕಿನ ಮೂಲ , ಅಲ್ಲಿನ ಪ್ರಶ್ನೆಗಳು ಒಂದೇ ಆದರೂ ಪ್ರತಿಯೊಬ್ಬರ ಉತ್ತರಗಳು ಬೇರೆ , ಅವರದನ್ನು ಕಂಡುಕೊಳ್ಳುವ ಹಾದಿ ಬೇರೆ.  ಬಸಂತ ಕುಮಾರ ಮತ್ತು ಮಹಾಂತ ಕುಮಾರ ಒಂದೇ ಫ್ಲೋರಿನಲ್ಲಿ ಬದುಕುತ್ತಿರಬಹುದು , ಅವರು ಕೆಲಸ ಮಾಡುವ ಕ್ಷೇತ್ರ , ಕಿರಾಣಿ ಕೊಳ್ಳುವ ಆನ್ಲೈನ್ ಮಳಿಗೆ , ವಾರಾಂತ್ಯದಲ್ಲಿ ಹೋಗುವ ರೆಸಾರ್ಟು ಎಲ್ಲವೂ ಒಂದೇ ಆದರೂ  ಬಸಂತನೇ ಬೇರೆ ಮಹಾಂತನೇ ಬೇರೆ.  ಒಪ್ಪಿಕೊಂಡ ಜೋಗಿಯವರಿಗೆ ಧನ್ಯವಾದಗಳು.




(ಈಗಾಗಲೇ ಪ್ರಕಟವಾದ ಹಳೆಯದೊಂದು ಕವಿತೆ , ಈ ಸಂದರ್ಭಕ್ಕೆ ಸರಿಹೊಂದಬಹುದೆಂದು ಮತ್ತೆ ಹಾಕಿದ್ದೇನೆ )

ಅಪಾರ್ಟ್ಮೆಂಟಿನ ಬಾಲ್ಕನಿಯ ಅಮೃತ ಬಳ್ಳಿ
ಹಬ್ಬ ಬೇಕು, ಮನೆಗೆ ಹಾಕಿದ ಗ್ರಿಲ್ಲುಗಳ ನಡುವೆ.
ಆದರದೇಕೋ ಹಬ್ಬದು ?

ಕಬ್ಬಿಣದೊಂದಿಗಿನ   ನಂಟು ಬೇಡವಾಗಿದೆ ಅದಕೆ
ಎಲ್ಲಿಂದಲೋ ಒಂದು ಮಾರು ಮಾಸಿದ
ಚಳ್ಳೇದುರಿ  ತಂದು ಒಂದು ಮೊಳೆ ಹೊಡೆದು ಕಟ್ಟಿದೆ
ಅಮೃತಮತಿಗೆನಾನಂದ, ಏರಿದ್ದೆ ಏರಿದ್ದು,
ಅತ್ತ ಒಂದೆಲೆ, ಇತ್ತ ಒಂದೆಲೆ.

ಹೇಗೆ ಹೇಳಲಿ?   ಅಮುದೆಗೆ,
ಕಬ್ಬಿಣದ ನಡುವೆಯೂ ಬೆಳೆಯ ಬಹುದು ,
ಸೀಮೆಂಟಿನ ಕುಂಡದಲ್ಲೂ ಬೇರೂಡ ಬಹುದು.
ಕುಂಡವಾದರೇನು, ಅದರಲ್ಲೂ ಮಣ್ಣಿದೆ.
ಅಪಾರ್ಟ್ ಮೆಂಟಾದರೇನು, ಅಲ್ಲೂ ಮನೆ ಇದೆ !

Friday, October 16, 2015

ಪಾಚಿಗಟ್ಟಿದ ಪಾಗಾರ

ತಮ್ಮ ಬದುಕಿನ ಹಾಡುಗಳನ್ನು ಕೆಲವರು ಗಟ್ಟಿಯಾಗಿ ಹಾಡುವುದೇ ಇಲ್ಲ. ಹಾಡುಗಳೇ ಇಲ್ಲವೆಂದಲ್ಲ , ಎಲ್ಲರ ಬದುಕಿಗೂ ಒಂದು ಹಾಡು ಖಂಡಿತಾ ಇದೆ ಎಂಬ ನಂಬಿಕೆ ನನ್ನದು. ಎಲ್ಲವನ್ನೊಳಗೊಂಡ ಆ ಘನ ನೀಲ ಮೌನ ಕೂಡ ಒಂದು ಭಾವಗೀತೆ. ಎಲ್ಲೋ ಕೆಲವು ಕಿವಿಗಳು ಈ ಹಾಡನ್ನು ಆಲಿಸುತ್ತವೆ.

ಒಂದು ಮನೆಯೇ ಊರಾಗುವ ಹಳ್ಳಿಗಳಲ್ಲಿ ಬದುಕುವ ಹೆಂಗಸರನ್ನು ನೋಡಿ.  ಕಟ್ಟೆ ಮೀಟಿಂಗ್ ಗೊತ್ತಿಲ್ಲದ ಪ್ರಪಂಚ. ಮಹಾನಗರಿಯಲ್ಲಿದ್ದವರಿಗೂ ಕಟ್ಟೆ ಮೀಟಿಂಗ್ ಗೊತ್ತಿಲ್ಲ ಎನ್ನಬೇಡಿ , ಇತ್ತೀಚಿಗೆ ಜೋಗಿಯವರು ಬರೆದಂತೆ ಅಂದಿನ ವಠಾರಗಳೇ ಇಂದಿನ ಅಪಾರ್ಟ್ಮೆಂಟ್ಗಳಾಗಿ ಕಟ್ಟೆ ಮೀಟಿಂಗ್ ಗಳು ಮುಂದುವರೆದಿವೆ. ಇದಕ್ಕೆ ಅಪವಾದಗಳು ಇದ್ದಿರಬಹುದು . ಇದು ನಾ ಕಂಡ ಚಿತ್ರ. ತೋಟದ ಅಂಚಿನ  ಮನೆಯಲ್ಲಿ ಬದುಕುವ ಅವಳಿಗೆ ಮನೆಯವರು , ಮನೆಗೆಲಸ , ತೋಟ , ಕೊಟ್ಟಿಗೆಯಲ್ಲಿನ ದನಕರುಗಳು ಇಷ್ಟು ಬಿಟ್ಟರೆ ಬೇರೆ ಪ್ರಪಂಚಗೊತ್ತಿಲ್ಲ. ಇತ್ತೀಚಿಗೆ ಟಿ.ವಿ. , ಫೋನುಗಳು ಬಂದಮೇಲೆ ಅವಳಿಗೂ ಮಾತು ಬಂದಿರಬಹುದು ಆದರೆ ಅಲ್ಲಿಯವರೆಗೆ ಅವಳಿಗಿದ್ದಿದ್ದು  ಮೌನ ಸಾಮ್ರಾಜ್ಯ ಮಾತ್ರ. ಅವಳು ಮಾತೇ ಆಡುವುದಿಲ್ಲವೆಂದಲ್ಲ ತನ್ನ ಆಸೆಗಳನ್ನು , ಕನಸುಗಳನ್ನು ಮಾತುಗಳಲ್ಲಿ ಪೋಣಿಸಿದ್ದು  ಕಡಿಮೆ. ಮಾತು ಕಡಿಮೆಯಾದಂತೆ ತಾಳ್ಮೆ , ಸಹನೆ ಹೆಚ್ಚುತ್ತಾ ಹೋಗುತ್ತಾ ? ತುಟಿಯನ್ನೂ ಕಚ್ಚದೇ ಎಲ್ಲವನ್ನೂ ನುಂಗುವುದನ್ನು ಮೌನ ಕಲಿಸುತ್ತದಾ ? ಪ್ರತಿಭಟನೆಗೆ ಬೆಲೆ ಇಲ್ಲ , ಅವಕಾಶವಿಲ್ಲವೆಂದು ಆಕೆ ಆ ಮೌನದ ದಾರಿ ಹಿಡಿದಳಾ ? ಮೌನವೇ ತಾನಾದ ಆ ಲೋಕದಲ್ಲಿ ನಿಜಕ್ಕೂ ಅಷ್ಟೊಂದು ಸಮಾಧಾನ ಸಂತಸಗಳಿವೆಯಾ ? ಅವಳ ಉತ್ತರ ನನಗಿನ್ನೂ ಅರ್ಥವಾಗಿಲ್ಲ.

ತಂದೆಯ ಏಕಮಾತ್ರ ಮುದ್ದಿನ ಮಗಳವಳು, ಹಳ್ಳಿಯ ಸೀಮೆಯನ್ನು ದಾಟದವಳು. ಕುಂಟೆಬಿಲ್ಲೆ ಆಟ ಮುಗಿವ ಮೊದಲೇ ಮದುವೆಯಾಗಿ , ಲಂಗದಾವಣಿ ತೊಟ್ಟುಕೊಳ್ಳುವ ವಯಸಿನಲ್ಲಿ ಕೆಂಪುಸೀರೆ ಹೊದ್ದಳು. ಆದರೂ ಅದೆಷ್ಟು ಚಂದಗೆ ನಗು ನಗುತ್ತಲೇ ಬದುಕಿದಳೆಂದರೆ ತೀರದ ಧಾರೆಯನ್ನು ಕಂಗಳಲ್ಲಿ ತುಂಬಿದ ನಿಯತಿಗೂ ಕಿಚ್ಚು ಹತ್ತಿರಬೇಕು.  ಮತ್ತೊಬ್ಬಳು ಆದಾಯವನ್ನರುಸುತ್ತಾ ಪೇಟೆಯಿಂದ ಹಳ್ಳಿಗೆ ಹೋದವಳು. ಭಾಷೆ , ವೇಷ ಎಲ್ಲವನ್ನೂ ತನ್ನದಾಗಿಸಿಕೊಂಡು  ಶಾಂತ ಶರಾವತಿಯಾಗಿ ಬದುಕಿದವಳು. ಇನ್ನೊಬ್ಬಳು ಮದುವೆಯಲ್ಲಿ ಹಳ್ಳಿಗೆ 'ಕೊಡಲ್ಪಟ್ಟವಳು'. ಇನ್ನೊಂದಷ್ಟು ಜನರನ್ನು ಅಷ್ಟು ಹತ್ತಿರದಿಂದ ಕಂಡಿಲ್ಲವಾದರೂ ಅವರ ಹಾಡೂ ಇದಕ್ಕಿಂತ ಭಿನ್ನವೇನಲ್ಲ. ಇವು ದಾಖಲೆಯಾಗದ ಪ್ರತಿಭಟನೆಗಳಾ ಅಥವಾ ನಿರ್ಲಿಪ್ತತೆಯನ್ನು ಮುಟ್ಟಿದ ಮೌನವಾ, ತೀರದ ತಾಳ್ಮೆಯಾ  ? ಅವರವರ ಭಾವಕ್ಕೆ.

ನಾನು ಕಂಡಂತೆ ಇವರೆಲ್ಲರಿಗೂ ತಮ್ಮ ಸುತ್ತಲಿನ ಪರಿಸರದ ಬಗ್ಗೆ ಅತೀವವಾದ ಪ್ರೀತಿ ಇದೆ, ಪರಿಸರದೊಡನೆ ಒಂದಾಗಿ ಬದುಕುವುದು ಎಂಬುದರ ಕಾರ್ಯ ರೂಪ ಅವರ ಬದುಕು . ತೋಟದಲ್ಲಿ ಉದುರಿದ ಒಂದು ತೆಂಗಿನ ಗರಿ , ಕಳುವಾದ ಒಂದು ಗೊನೆ ಅಡಿಕೆ, ಕಡಿಮೆ ಕಲಗಚ್ಚು ಕುಡಿದ ಕೊಟ್ಟಿಗೆಯ ಕಾಳಿ..ಎಲ್ಲವೂ ಅವರಿಗೆ ತಿಳಿಯುತ್ತದೆ. ಅಕ್ಷರಶಃ ಇವುಗಳೊಂದಿಗೆ ಅವರು ಬಾಳುತ್ತಿದ್ದರು,ಬಾಳುತ್ತಿದ್ದಾರೆ.ಪ್ರಾಣಿಗಳ ಬಗೆಗಿನ  ವಿಶೇಷವಾದ ಮಮಕಾರಕ್ಕೆ , ಅವು ಇವರ ಭಾಷೆಯನ್ನು ಅರ್ಥಮಾಡಿಕೊಳ್ಳಬಲ್ಲವೆಂಬ ನಂಬಿಕೆಯೇ ?  ಮೊನ್ನೆ ಊರಿಗೆ ಹೋದರೆ 'ಇದರ ಕಣ್ಣು ನೋಡು ಒಂದು ಹಸಿರು , ಒಂದು ನೀಲಿ ' ಎಂದು ಇಂಥವಳೇ ಒಬ್ಬಳು  ಅದೆಷ್ಟು ಅಚ್ಚರಿಯಿಂದ ಹೇಳಿದ್ದಳೆಂದರೆ , ಮುಗಿಯದ ಕೆಲಸಗಳ , ಚಿಂತೆಗಳ   ನಡುವೆಯೂ ಬೆಕ್ಕಿನ ಕಣ್ಣನ್ನು ಗಮನಿಸುವಷ್ಟು ವ್ಯವಧಾನ ಈಕೆಗೆ ಎಲ್ಲಿಂದ ಬಂತು ? ಎಂಬುದು ನನಗೆ ಬೆಕ್ಕಿನ ಕಣ್ಣಿಗಿಂತ ಹೆಚ್ಚು ಅಚ್ಚರಿಯನ್ನುಂಟು ಮಾಡಿತ್ತು. ಹಿತ್ತಲಿಗೆ ಹೋದರೆ ಅಲ್ಲೊಂದು ಚಂದನೆಯ ಕರು ಮಲಗಿತ್ತು . ಹಿಂದೆಯೇ ಬಂದ ಅವಳು ನಕ್ಕು ನುಡಿದಿದ್ದಳು , 'ನೆನ್ನೆ ಹುಟ್ಟಿದೆ ಅಮ್ಮಿ, ಭಾಗ್ಯ ಅಂತ ಹೆಸರಿಡೋಣ ಅಂತಿದಿನಿ .'  ಜನನ ನಿಜಕ್ಕೂ ಸರಸವೇ ! ನಾಯಿ , ಬೆಕ್ಕು, ದನ ಇವುಗಳೊಂದಿಗೆ ಇತ್ತೀಚಿಗೆ ಇವಳ ಲಿಸ್ಟಿಗೆ ಸೇರ್ಪಡೆಯಾದ ಪ್ರಾಣಿ ಅಳಿಲು . ಅದಕ್ಕೊಂದು ಪುಟ್ಟ ಮನೆ ಮಾಡಿ ಅದರೊಂದಿಗೂ ಮಾತನಾಡುತ್ತಾಳೆ . 'ನಿಜವಾಗ್ಲೂ ಇವಕ್ಕೆ ಮಾತು ಅರ್ಥ ಆಗುತ್ತಾ ?' ಎಂಬ ಪ್ರಶ್ನೆಗೆ ಅನುಭವವೊಂದನ್ನು ಹೇಳಿದಳು  :  ಮನೆಯ ಹಿಂದಿನ ಪುಟ್ಟ ಗುಡ್ಡದಲ್ಲಿ ಗೇರು ಹಣ್ಣಿನ ಹಲವಾರು ಮರಗಳಿವೆ. ಅಲ್ಲಿಂದ ಹಣ್ಣು ಆಯ್ದು ತಂದು ಬೀಜ ಬೇರೆ ಮಾಡಿ ಕಾರ್ಖಾನೆಗೆ ಕೊಟ್ಟರೆ ಸ್ವಲ್ಪ ಹಣ ದೊರೆಯುತ್ತದೆ . ಆ ಹಣದಲ್ಲಿ  ಸೀರೆಯ  ಮೋಹ ತೀರಿಸಿಕೊಳ್ಳುವ ಕನಸು ಇವಳದ್ದು. ಕೊಟ್ಟಿಗೆಯಲ್ಲಿನ ಇವಳ ಗೆಳತಿ ಭೂದೇವಿ.  ದಿನವೂ ಗುಡ್ಡಕ್ಕೆ ಹೋಗಿ ಮೇಯ್ದು ಬರುವಾಗ ಒಂದಷ್ಟು ಗೇರು ಹಣ್ಣು ತಿಂದು ಬೀಜ ಬಾಯಲ್ಲಿಯೇ ಇಟ್ಟುಕೊಂಡು ಕೊಟ್ಟಿಗೆಗೆ ಬಂದು  ಉಗಿಯುತ್ತಿದ್ದಳಂತೆ.  ಅದನ್ನಿವಳು ಆರಿಸಿ ಒಟ್ಟು ಮಾಡಿ ಕಾರ್ಖಾನೆಗೆ ಕಳಿಸುವುದು . ಒಂದೆರಡು ತಿಂಗಳ  ನಂತರ ಕೆಲವು ದಿನ ಭೂದೇವಿ ಬೀಜ ತಂದಿಲ್ಲ . ಹಾಲು ಕರೆಯುತ್ತಿದ್ದಾಗ ಇವಳು ಸುಮ್ಮನೇ 'ಏನೇ ಭೂದೇವಿ ಹಣ್ಣು ತಿಂತಾ ಇಲ್ವಾ ? ಬೀಜ ಎಲ್ಲೇ ?' ಎಂದು ತನ್ನಾಸೆಯನ್ನೂ ಹೇಳಿಕೊಂಡಳಂತೆ. ಮಾರನೆಯ ದಿನ ಭೂದೇವಿಯ ಬಾಯಲ್ಲಿ  ಸುಮಾರು ಕಾಲು ಕೆ.ಜಿ. ಬೀಜ! ಅದೆಷ್ಟು ಹಿಗ್ಗಿನಿಂದ ಹೇಳಿದಳೆಂದರೆ ಹೊಸ ಸೀರೆಯನ್ನು ಕೊಂಡದ್ದಕ್ಕಿಂತಲೂ ಹೆಚ್ಚು ಸಂತಸ ಅವಳ ಮುಖದಲ್ಲಿತ್ತು.

ಬಂಧಗಳಿಗಿಂತ ಭಾವಮುಖ್ಯವೆಂದು ನಾನು ಇಲ್ಲಿರುವ ಯಾವುದೇ ಹೆಂಗಸಿಗೂ ಹೆಸರು ಕೊಟ್ಟಿಲ್ಲ , ಅವರೊಂದಿಗಿನ ನನ್ನ ಸಂಬಂಧವನ್ನೂ ಹೇಳಿಲ್ಲ. ಎಲ್ಲರ ಬದುಕಿನಲ್ಲೂ ಹೀಗೆ ಬದುಕನ್ನು ಚಂದವಾಗಿ ಬದುಕಿದವರಿರುತ್ತಾರೆ. ಇವರೆಲ್ಲರ ನೆನಪನ್ನು ಮತ್ತೆ ತಾಜಾ ಮಾಡಿದ್ದು ಮಿತ್ರಾ ವೆಂಕಟ್ರಾಜ ಅವರ ಕಾದಂಬರಿ  'ಪಾಚಿ ಕಟ್ಟಿದ ಪಾಗಾರ' . ಕಾದಂಬರಿಯಲ್ಲಿ ಸ್ತ್ರೀ ಪಾತ್ರಗಳಷ್ಟೇ ಮುಖ್ಯವಾದ ಪುರುಷಪಾತ್ರಗಳೂ ಇವೆ. ಕಥೆಯೊಂದಿಗೆ ಬೆಳೆಯುವ ಮಾಧವ , ಸೀತಾರಾಮ , ನಾಗರಾಜ ಇವರೆಲ್ಲರೂ ಮನಸಿನಲ್ಲಿ ಉಳಿಯುತ್ತಾರೆ .ಲೇಖಕಿಯೇ ಹೇಳುವಂತೆ ಈ ಕಥೆ ಮಾಧವನೆಂಬ ಪಾತ್ರದ್ದಾದರೂ  ಪಾರ, ಲಕ್ಷ್ಮೀದೇವಿ ಮತ್ತು ಕಮಲಿಯ ಕಥೆಯೂ ಜೊತೆಗೆ ಬೆಸೆದುಕೊಂಡಿದೆ.  ಈ ಮೂವರು ಸ್ತ್ರೀ ಪಾತ್ರಗಳು ಒಬ್ಬರಿಗೊಬ್ಬರು ಆಸರೆಯಾಗುವ ರೀತಿ , ಅರ್ಥ ಮಾಡಿಕೊಳ್ಳುವ ಪರಿ ಕಾದಂಬರಿಯ ಬಹು ಮುಖ್ಯ ಅಂಗ.  ಬದುಕಿನ ಬಗೆಗಿನ ಅವರೆಲ್ಲರ  ದೃಷ್ಟಿ ಎಲ್ಲವೂ ಯಾವುದೋ ಬಿಂದುವಿನಲ್ಲಿ ಒಂದಾಗುತ್ತದೆ . ನನ್ನನ್ನು ಅತೀ ಹೆಚ್ಚು ಕಾಡಿದ್ದು  ಕೆಮ್ಮಾಡಿ ಮನೆಯ ತಳಪಾಯವೆನ್ನಬಹುದಾದ  ಲಕ್ಷ್ಮಿದೇವಿ. ಗಂಡನೊಂದಿಗೆ ತೃಪ್ತ ಜೀವನ ನಡೆಸುತ್ತಿದ್ದ ಅವಳಿಗೆ ಭರದ ಸಿಡಿಲಾಗುವುದು ಮಗ ಮಾಧವ.  ಎಲ್ಲ ಆಘಾತಗಳ ನಡುವೆ , ತೀರದ ನೋವಿನ ನಡುವೆ ಲಕ್ಷ್ಮೀದೇವಿ ಅದೆಷ್ಟು ಸಂಯಮದಿಂದ ವರ್ತಿಸುತ್ತಾಳೆಂದರೆ ಓದುತ್ತಾ ಹೋದಂತೆ ಅವಳುಟ್ಟ ಒಂಭತ್ತು ಮೊಳದ ಕಚ್ಚೆ ಸೀರೆ , ಬೆಳ್ಳಿಯ ಡಾಬು , ಅವಳಮೊಗದ ಶಾಂತತೆ ಎಲ್ಲವೂ ಕಣ್ಣ ಪರದೆಯ ಮೇಲೆ ಮೂಡಲಾರಂಭಿಸುತ್ತವೆ . ಇದೆಲ್ಲದರ ಜೊತೆಗೆ  ತನ್ನಂತೆ ನೋವಿನಲ್ಲಿರುವ ಪಾರಳನ್ನು  ಅವಳು ಇನ್ನಿಲ್ಲದ ಮುಚ್ಚಟೆಯಿಂದ ಕಾಣುವಲ್ಲಿ ಅವಳ ಮನಸಿನ ವೈಶಾಲ್ಯ ಮತ್ತಷ್ಟು ಹೆಚ್ಚುತ್ತದೆ . ಹಸೆಮಣೆಯವರೆಗೂ ಕರೆತಂದು ಮಗ ಮಾಧವ ಕೈ ಬಿಟ್ಟ ಹೆಣ್ಣು , ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು,  ಬಂದು ಬೀಳುವುದು ಲಕ್ಷ್ಮಿದೇವಿಯ ಮಡಿಲಿಗೆ. ಎರಡು  ನೋವುಗಳು ಒಂದಕ್ಕೊಂದು ಆಧಾರವಾಗಿ ನಿಲ್ಲುವಬಗೆಯ ಚಂದದ ಚಿತ್ರಣವನ್ನು ಓದಿಯೇ ತಿಳಿಯಬೇಕು.  ಇವರಿಗೆ ಜೊತೆಯಾಗುವುದು ಮತ್ತೊಬ್ಬ ಸೊಸೆ ಕಮಲಿ.ಇವರೆಲ್ಲರಗಿಂತ ತುಸು ಭಿನ್ನವಾದ ಪಾತ್ರ ಲಕ್ಷ್ಮೀದೇವಿಯ ಹಿರಿಮಗಳು ಶಂಕರಿಯದ್ದು ,ತನ್ನೆಲ್ಲ ನೋವನ್ನೂ  ನಗುವಿನ ಶಾಖದಲ್ಲಿ ಕರಗಿಸಿ ಕೊನೆಗೊಮ್ಮೆ ಕರಗಿ ಕಂಬನಿ ತರಿಸುವ ಹೆಣ್ಣು. ಈ ಪಾತ್ರ ನೆನಪಾದಾಗಲೆಲ್ಲ ಇಂದಿಗೂ ಮೌನ ಕಂಬನಿಯಾಗುತ್ತದೆ.

ಪಾತ್ರ ಪರಿಸರಗಳ ರಚನೆಯಲ್ಲಿ ಎದ್ದು ಕಾಣುವ ಸೂಕ್ಷ್ಮತೆ ಇದು ಮಹತ್ವಾಕಾಂಕ್ಷಿ ಕಾದಂಬರಿ ಎಂಬ ಮಾತಿಗೆ ಪುರಾವೆಯಾಗಿ ನಿಲ್ಲುತ್ತದೆ. ಇಷ್ಟವಾದ ಮತ್ತೊಂದು ಅಂಶ ದಕ್ಷಿಣ ಕನ್ನಡ ಭಾಷೆ.   ಪುಸ್ತಕವೊಂದು ನಮ್ಮಲ್ಲಿ ವಿಚಾರ ತರಂಗಗಳನೆಬ್ಬಿಸಿ , ಮಾನವ ಬದುಕಿನ ಹಾದಿಯಲ್ಲಿ ಒಂದಷ್ಟು ದೂರಕ್ಕೆ ಕರೆದೊಯ್ದರೆ ಆ ಓದು ಸಾರ್ಥಕವೆಂಬ ನಂಬಿಕೆ ನನ್ನದು . ಈ ಓದು ಎಲ್ಲ ರೀತಿಯಲ್ಲೂ ಕಲಿಸಿದೆ . ಹಾಗಾಗಿ ಕಾದಂಬರಿಯ ಉಳಿದ ಪಾತ್ರಗಳ ಬಗ್ಗೆ , ಕಥೆ ಅಥವಾ ಶಿಲ್ಪದ ಬಗ್ಗೆ ನಾನು ಹೆಚ್ಚು ಬರೆದಿಲ್ಲ.
ರಕ್ಷಣೆಗೆಂದು ತನ್ನ ಸುತ್ತಲೂ ಕಟ್ಟಿಕೊಂಡ ಗೋಡೆ ಪಾಚಿಗಟ್ಟಿದ್ದರೂ ಅದನ್ನು ಒಪ್ಪಮಾಡಿಕೊಳ್ಳದ ಮಾಧವನ ಮನಸ್ಥಿತಿಯ, ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕೆಮ್ಮಾಡಿ ಮನೆಯ ಅವನತಿಯ, ವಿವಿಧ ಪಾತ್ರಗಳಲ್ಲಿ ಕುಸಿಯುತ್ತಿರುವ ಬದುಕಿನ ಮೌಲ್ಯಗಳ, ಕುಟುಂಬಗಳಲ್ಲಾಗುತ್ತಿರುವ ಬದಲಾವಣೆಗಳಿಂದ ಮೂಲೆಗೆ ಸರಿದು ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಬದುಕಿನ ಪಾಗಾರದ, ಪ್ರಾಚೀನತೆಯ  ಸಂಕೇತವೇ  'ಪಾಚಿ ಗಟ್ಟಿದ ಪಾಗಾರ ' ವಾಗಿರುಬಹುದೆಂದು ನನ್ನ ಗ್ರಹಿಕೆ . ಲೇಖಕಿಯ ಉಳಿದ ಕೃತಿಗಳನ್ನು ಇನ್ನಷ್ಟೇ ಓದಬೇಕೆಂಬ ಮಿತಿಯೊಂದಿಗೆ ಇದು ನನ್ನ ಓದಿನ ಅನುಭವ .

ಟಿಸಿಲೊಡೆದು ಹೂವಾಗಬೇಕೆಂದಿದ್ದೆ
ಒಳಸರಿದು 'ಬೇರಾ'ದೆ
ಕೋಮಲ ಪಾರಿಜಾತವಾಗಬೇಕೆಂದಿದ್ದೆ
ಬಿರಿದು ಸೇವಂತಿಯಾದೆ
ನುಡಿದು ಕೊಳಲಾಗಬೇಕೆಂದಿದ್ದೆ
ಬೆಳೆದು ಬಿದಿರಾದೆ
ಮನೆಯ ಕದವಾಗಬೇಕೆಂದಿದ್ದೆ
ಕಾದು ಹೊಸ್ತಿಲಾದೆ
ಸದಾ ಮಡಿಲಾಗಬೇಕೆಂದಿದ್ದೆ
ಅಗಲಿ ಹಾರೈಕೆಯಾದೆ
ಬೇಕೆಂದವುಗಳೆಲ್ಲ ಕನಸುಗಳಲ್ಲ,
ಜರುಗಿದ ಸತ್ಯ ಸಾಕ್ಷಾತ್ಕಾರವೂ
ಸುಂದರವೆಂದು ಅರಿವಿಗೆ ಬರಲು 
ಮಡಿಲು ತೆರೆದು  ತಾಯಾದೆ
ಅದನ್ನೂ  ಮೀರಿ ಸ್ತ್ರೀಯಾದೆ !



ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ .

Friday, October 09, 2015

ಪಯಣ -೨

A child's life is like a piece of paper on which every person leaves a mark - Chinese Proverb

ದಶಕಗಳ ನಂತರ ಶಾಲೆಗೆ ಭೇಟಿಯಿತ್ತು ಆಗಬೇಕಾದುದೇನು ? ಕಾಲ ಪ್ರವಾಹದ ರಭಸಕ್ಕೆ ನಮ್ಮ ಗುರುತುಗಳು ಉಳಿದಿರಬಹುದೆಂಬ ಭರವಸೆ ಇರಲಿಲ್ಲ . ಆದರೂ ಗೆಳತಿಯ ಆಸೆಯಂತೆ ನಾವು ಶಾಲೆಯ ದಾರಿ ಹಿಡಿದಿದ್ದೆವು . ಎಣಿಸಿದಂತೆ  ಅಲ್ಲಿ ಹಲವಾರು ಬದಲಾವಣೆಗಳಿದ್ದವು. ಹೊಸ ಅಂಗಡಿಗಳು ಎದ್ದಿದ್ದವು , ಶಾಲೆಯ ಸುತ್ತ ಬೇಲಿ ಹಾಕಲಾಗಿತ್ತು . ನಮ್ಮದಲ್ಲ ಈ ಹಾದಿ ಎಂಬ ಭಾವ ಬಲಿಯುವ ಮೊದಲು ಅಜ್ಜಿ ಕಂಡಿದ್ದಳು . ಅದೇ ಮೂಲೆಯಲ್ಲಿ ಗಾಡಿಯ ಹಿಂದೆ ಕೂತಲ್ಲೇ ನಿದ್ದೆ ಹೋಗಿದ್ದಳು . ಆಕೆ ೩೦ಕ್ಕೂ ಹೆಚ್ಚು ವರ್ಷಗಳಿಂದ ಶಾಲೆಯ ಎದುರಿಗೆ ,  ಹಣ್ಣುಗಳು  , ಇಲಾಯಚಿಕಾಯಿ, ಸೌತೆಕಾಯಿಗಳನ್ನು ಮಾರುತ್ತಾಳೆ . ನಮ್ಮ ಬಾಲ್ಯ ಮತ್ತು ಹರೆಯದ ಪ್ರಮುಖ ಕೊಂಡಿ. ೧೦ ಪೈಸೆಗೆ ಸೌತೆಕಾಯಿ ತುಂಡು, ೨೫ ಪೈಸೆಗೆ ಪೇರಲ ಹಣ್ಣು ದೊರೆಯುತ್ತಿದ್ದ ಕಾಲದಲ್ಲಿ ನಮ್ಮ ಬಳಿ ಪೈಸೆ ಇರುತ್ತಿದ್ದುದೇ ಅಪರೂಪ , ಅಜ್ಜಿಯ ಮುಖದಲ್ಲಿ ಮಂದಹಾಸವಿರುತ್ತಿದ್ದುದು ಇನ್ನೂ ಅಪರೂಪ . ಹನ್ನೆರಡು ವರ್ಷದ ಶಾಲಾ ಬದುಕಿನಲ್ಲಿ  ಅಜ್ಜಿಯೊಡನೆ ಹೆಚ್ಚೆಂದರೆ ನಾಲ್ಕು ಬಾರಿ ಮಾತನಾಡಿರಬಹುದು. ಆದರೂ ಅವಳ ದನಿ , ಗತ್ತು ಗೈರತ್ತು ನೆನಪಿದೆ. ಎಂದೂ ಆಪ್ತವಾಗಿ ಮಾತನಾಡದ ಅಜ್ಜಿ  ನೆನಪಿನ  ಭಾಗವಾಗಿದ್ದು  ಯಾವಾಗ ? ತನ್ನ ಮಾರಾಟದಿಂದ ಹೆಚ್ಚೆಂದರೆ ದಿನಕ್ಕೆ ೨೦೦-೩೦೦ ರೂಪಾಯಿ ಗಳಿಸುವ ಅಜ್ಜಿ , ಇಂದೂ ಕೂಡ ಅದೇ ಜಾಗದಲ್ಲಿ ತನ್ನ ವಯಸ್ಸನ್ನೂ ಲೆಕ್ಕಿಸದೇ ಕುಳಿತಿರುವುದೇಕೆ ? ಆ ಶ್ರಧ್ಧೆಯನ್ನು  ಇಷ್ಟು ವರ್ಷ ಅವಳು ಕಾಯ್ದುಕೊಂಡಿದ್ದು ಹೇಗೆ ?ಅವಳಿಗಿರುವ ಅಗತ್ಯಗಳಾದರೂ ಏನು? ಅಜ್ಜಿಯೊಡನೆ ಕುಳಿತು ಮಾತನಾಡುವ ಆಸೆ ಬಲವಾಗುತ್ತಿತ್ತು.   ನಮ್ಮ ಮುಂದೆಯೇ ಒಬ್ಬಾತ ಬಂದು 'ಏನಜ್ಜಿ ಊಟ ಆತಾ ?' ಎಂದರೆ 'ಹ್ಞೂ ' ಎಂಬ ಚುಟುಕಾದ ಉತ್ತರ ಕೊಟ್ಟು ಮತ್ತೆ ನಿದ್ದೆಗೆ ಜಾರಿದ ಅಜ್ಜಿಯನ್ನು ಕಂಡು ನಮ್ಮ ಪ್ರಶ್ನೆಗಳು ನಮ್ಮಲ್ಲೇ ಉಳಿದವು. ನಮ್ಮ ಕುರುಹೊಂದು ಸಿಕ್ಕಿದ್ದರಿಂದ ಕೊಂಚ ವಿಶ್ವಾಸದಿಂದಲೇ ನಾವು ಶಾಲೆಯ ಒಳನಡೆದೆವು .

ಎಲ್ಲದರಲ್ಲೂ ಮಧ್ಯಮವರ್ಗದಲ್ಲಿದ್ದ  ನಾವು ಅದೆಷ್ಟು ಜನ ಶಿಕ್ಷಕರ ನೆನಪಿನಲ್ಲಿ ಉಳಿದಿರಬಹುದು ? ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳುವುದಕ್ಕೂ  ಬಾಗಿಲಲ್ಲಿ ರಂಗಸ್ವಾಮಿ ಕಾಣುವುದಕ್ಕೂ ಸರಿ ಆಯ್ತು. 'ನಾವು ಇಲ್ಲೇ ಓದಿದವರು' ಎಂದರೆ 'ಗೊತ್ತಾಯ್ತಮ್ಮ ' ಎಂದು ಪರಿಚಯದ ನಗೆ ನಕ್ಕಿದ್ದರು. ಹೆಜ್ಜೆಗಳಲ್ಲಿನ ವಿಶ್ವಾಸ ಹೆಚ್ಚಾಯ್ತು.  ಸ್ಟಾಫ್ ರೂಮಿನ ಮುಂದೆ ನಿಂತು ಹಣುಕಿದರೆ ಒಳಗೆ ಬನ್ನಿ ಎಂದಿದ್ದು ಕೊಂಚ ಕಾಲ ಕಲಿಸಿದ ಶಿಕ್ಷಕಿ. ಪರಿಚಯ ಹೇಳಿದೊಡನೆ 'ಓ ಹೌದಲ್ಲ , ಗೊತ್ತೇ ಆಗಲಿಲ್ಲ ' ಎಂಬ ಉತ್ತರ ಬಂತು.   ಮಾಮೂಲಿ ಉಭಯ ಕುಶಲೋಪರಿಯ ನಂತರ ಮಾತು ಹೊರಳಿದ್ದು ಈಗಿನ ಶಿಕ್ಷಣ ಪಧ್ಧತಿಯ ಬಗೆಗೆ. ಆಕೆಯ ದನಿಯಲ್ಲಿ ಅಂದಿನ ಕಾಲ ಚಂದವಿತ್ತು ಎಂಬ ಭಾವವಿತ್ತು. ಕಲಿಸಿದ ಹುಡುಗಿಯರನ್ನು  ದಶಕಗಳ ನಂತರ ಕಂಡ ಖುಷಿ ಇತ್ತು . ಹಲವು ವರ್ಷ ಆಕೆಯನ್ನು ಕಂಡಿದ್ದೇನೆ , ಆಕೆ ಸ್ಥಿಮಿತ ಕಳೆದುಕೊಂಡಿದ್ದನ್ನು ನಾನು ನೋಡಿಲ್ಲ . ಒಂಭತ್ತನೇ ಕ್ಲಾಸಿನಲ್ಲಿದ್ದಾಗ ಈಕೆ ನಮ್ಮ ಕ್ಲಾಸ್ ಟೀಚರ್ ಆಗುವುದು ಬೇಡವೆಂದು ಖ್ಯಾತೆ ತೆಗೆದು ಟೀಚರ್ ನನ್ನು ಬದಲಿಸುವಂತೆ ಮಾಡಿದ್ದೆವು, ಆಗಲೂ ಆಕೆ ಅದೇ ನಗುವಿನೊಂದಿಗೆ ನಮ್ಮನ್ನು ಬೀಳ್ಕೊಟ್ಟಿದ್ದರು . ನಂತರವೂ ನಮ್ಮ ಕ್ಲಾಸಿನ ಯಾವುದೇ ಹುಡುಗಿ ಕಂಡರೂ ಅದೇ ಆಪ್ತತೆಯಿಂದ ಕಂಡಿದ್ದರು .

ನಮಗೊಬ್ಬ  'ಮಿಸ್  ' ಇದ್ದರು . ನಾವು   ಹೈಸ್ಕೂಲ್ ನಲ್ಲಿದ್ದಾಗ ಆಕೆ ಬಿ.ಎಡ್ . ಮುಗಿಸಿ ಹೊಸದಾಗಿ ಕೆಲಸಕ್ಕೆ ಸೇರಿದರು. ಕೆಲವೇ ದಿನಗಳಲ್ಲಿ ಎಲ್ಲರೂ 'ಭಾಳ ಒಳ್ಳೆಯವರ್ ನಮ್ ಮಿಸ್ಸು ..' ಹಾಡಿದ್ದೇ ಹಾಡಿದ್ದು. ಆಕೆಗೆ ಚಂದವಿದ್ದವರು , ಜಾಣರು ಅಥವಾ  ಶ್ರೀಮಂತರು ಎಂದರೆ ಹೆಚ್ಚು ಇಷ್ಟ ಎಂಬುದು ಕೆಲವರ ಅಭಿಪ್ರಾಯವಾಗಿತ್ತು. ಚಂದನೆಯ ಕಾಟನ್ ಸೀರೆ ಉಡುತ್ತಿದ್ದ , ಸದಾ ಹಸನ್ಮುಖಿಯಾಗಿದ್ದ ಅವರ  ಹಿಂದೆ ಯಾವಾಗಲೂ ಹುಡುಗಿಯರ ಹಿಂಡು  ನೆರೆದಿರುತ್ತಿತ್ತು . ಆಕೆಯ ಇಷ್ಟದ ಸ್ಟೂಡೆಂಟ್ ಆಗಲು ಎಲ್ಲರೂ ಹಾತೊರೆಯುತ್ತಿದ್ದೆವು . ಕಂಡಕೂಡಲೇ  ಆಕೆಗೆ ನಮ್ಮ  ಬ್ಯಾಚಿನ  ಶ್ರೀಮಂತ ಜಾಣೆಯ  ನೆನಪಾಗಿದ್ದಳು ! ಮಾತು ಶುರು ಮಾಡಿದ್ದೇ 'ಓ ನೀವು ಅವಳ ಬ್ಯಾಚಿನ ಹುಡುಗಿಯರು ಅಲ್ವಾ ?' ಎಂದು.   ಐ.ಟಿ. ಯಲ್ಲಿನ ದುಡ್ಡು ಬಿಟ್ಟು ಶಾಲೆಯ ಕಡೆ ಬರ್ತೀನಿ ಅಂದವಳು ಮಿಸ್ಸಿಗೆ ಬುಧ್ಧು ತರಹ ಕಾಣಿಸಿದಳು. ಮಿಸ್ ಜೊತೆ ಮಾತು ಮುಂದುವರೆಯಲಿಲ್ಲ , ಮುಂದುವರೆಸಲೇ ಬೇಕೆಂಬ ಆಸೆಯಾಗಲಿಲ್ಲ. 
ಹತ್ತನೇ ತರಗತಿಯಲ್ಲಿ ನಮಗೆ ಪಾಠ ಮಾಡಿದ  ಒಬ್ಬ ಟೀಚರ್ ಗೆ ಪಾಠ ಮಾಡುವ ಕಲೆ ಅಷ್ಟೇನೂ ಒಲಿದಿರಲಿಲ್ಲ. ಪುಸ್ತದಲ್ಲಿದ್ದ ಪಾಠವನ್ನು ಯತಾವತ್ತಾಗಿ ಓದಿದರೆ  ಪಾಠ ಮುಗಿದ ಲೆಕ್ಖ.  ನಗು ಮೊಗದ ಆಕೆ ಯಾವ ವಿಧ್ಯಾರ್ಥಿನಿಯನ್ನೂ  ಅಷ್ಟೇನೂ ಹಚ್ಚಿಕೊಂಡವರಲ್ಲ. ಗಡಿಯಾರ ತುಸು ನಿಧಾನವಾದರೂ ಆಗಿರಬಹುದು ಆದರೆ  ದಿನವೂ ೯.೧೫ಕ್ಕೆ ಸರಿಯಾಗಿ ಆಕೆ ತನ್ನಿಬ್ಬರು ಮಗಳಂದಿರೊಂದಿಗೆ ಶಾಲೆಯಲ್ಲಿರುತ್ತಿದ್ದರು.  ಯಾವುದೇ ಸಮಾರಂಭವಾದರೂ ಸಡಗರದಿಂದ ಸರಬರ ಓಡಾಡುತ್ತಿದ್ದರು. ಇಂದು ನಿಧಾನವಾಗಿ ನಡೆದು ಬಂದವರ ಮೊಗದಲ್ಲಿ ಮತ್ತದೇ ಮಂದಹಾಸವಿತ್ತು.  'ಈಗ ತಾನೇ ಸ್ಮಾರ್ಟ್ ಕ್ಲಾಸ್ ನಲ್ಲಿ ಹಿಂದಿನ ಬ್ಯಾಚುಗಳ ಹುಡುಗಿಯರು ಅಂತ ಹೇಳುತ್ತಿದ್ದೆ ಕಣ್ರೆ.' ಎಂದು ಮಾತಿಗಿಳಿದರು . ಗಡಿಯಾರ ಮರೆತಿರಬಹುದು ಈ ಟೀಚರ್ ಇನ್ನೂ ೯.೧೫ ನ್ನು ಮರೆತಿರಲಿಲ್ಲ.  ' ಎಷ್ಟು ಚಂದ ಪ್ರಬಂಧಗಳನ್ನ ಬರೆತಿದ್ರೆ ನೀವು , ಈಗ ಅವೆಲ್ಲಾ ಇಲ್ಲ ಕಣೆ ' ಎಂದು ಇಂದಿಗಿಂತ ನೆನ್ನೆ ಚಂದವಿತ್ತೆಂಬ ಷರಾ ಬರೆದಿದ್ದರು.
ನಾವು ಶಾಲೆಯಲ್ಲಿದ್ದಾಗ ಒಂದನೇ ತರಗತಿಯಿಂದಲೇ ಯಾವುದೇ ಬೇಧವಿಲ್ಲದೇ  ನಮ್ಮ ಕ್ಲಾಸ್ ರೂಂ ಗಳನ್ನು ದಿನವೂ ನಾವೇ ಗುಡಿಸಿ , ವಾರಕ್ಕೊಮ್ಮೆ  ಒರೆಸಬೇಕಿತ್ತು. 'ಈಗಲೂ ಹಾಗೇನಾ ಮ್ಯಾಮ್' ಎಂದರೆ ಅವರು ನಕ್ಕು ನಮ್ಮೊಂದಿಗೆ ಮಾತಿಗಿಳಿದಿದ್ದರು. ಈ ಶಿಕ್ಷಕಿ ನಮಗೆ ಯಾವತ್ತೂ ಕಲಿಸಿದವರಲ್ಲ. ಆದರೂ ಆಕೆಗೆ ಹೆಚ್ಚು ಕಡಿಮೆ  ಶಾಲೆಯ ಎಲ್ಲ  ವಿಧಾರ್ಥಿನಿಯರ ಹೆಸರು ಗೊತ್ತಿತ್ತು. 'ನಮ್ ಹುಡುಗ್ಯಾರು ...' ಎಂದೇ ಆಕೆ ಎಲ್ಲರನ್ನೂ ಕರೆಯುತ್ತಿದ್ದರು . ನಾವು ಪರಿಚಯ ಹೇಳಿ ಸುಮ್ಮನೇ ನಿಂತರೆ ಆಕೆ ಮಾತಿಗಿಳಿದಿದ್ದರು . ಆ ಮಾತುಗಳಲ್ಲಿ ಕೆಲವನ್ನಾದರೂ ಹಂಚಿಕೊಳ್ಳಲೇ ಬೇಕು , ' ಈಗ ಎಲ್ಲಾ  ಬದಲಾಗಿದೆ ಕಣ್ರೆ.  ಕಸ , ನೆಲ ಮಾಡಿದ್ರೆ ನಮ್ ಮಕ್ಕಳಿಗೆ ಅಲರ್ಜಿ ಆಗುತ್ತೆ  ಅಂತ ಪೇರೆಂಟ್ಸ್ ಜಗಳ ಆಡಿದರು. ಈಗ ಆ ಕೆಲಸ ರಂಗಸ್ವಾಮಿ ಮಾಡ್ತಾರೆ . ರೂಲ್ಸಿನ ಪ್ರಕಾರ ಒಂಭತ್ತನೇ ಕ್ಲಾಸಿನ ತನಕ ಯಾರನ್ನೂ ಫೇಲ್  ಮಾಡುವಂತಿಲ್ಲ . ಒಂದು ವಾಕ್ಯ ಬರೆಯಲು ಬಾರದಿದ್ದವರೂ ಹತ್ತನೇ ಕ್ಲಾಸಿಗೆ ಬರ್ತಾರೆ. ನಿಮ್ ಅಪ್ಪ ಅಮ್ಮಂದಿರು ಸ್ಕೂಲ್ಗೆ  ಬಂದ್ರೆ ಆಕಿನ ನಿಮ್ ಕೈಯಾಗ್ ಹಾಕಿವಿ . ನೋಡ್ಕೋರಿ . ತಪ್ ಮಾಡಿದ್ರೆ ನಾಲ್ಕು ಹಾಕ್ರಿ ಅನ್ನೋರು. ಈಗ ಹಾಗಿಲ್ಲ, ನಾವು ಫೀಸ್ ಕಟ್ಟಿದ್ದಿವಿ , ನೀವು ಪಾಠ ಮಾಡಿ ಸಾಕು . ಮುಂದಿನದನ್ನು ನಾವು ನೋಡ್ಕೊತಿವಿ ಅಂತ ಡೈರೆಕ್ಟ್ ಆಗೇ ಹೇಳ್ತಾರೆ. ಇಂದಿನ ಶಿಕ್ಷಕಿಯರಿಗೆ ಇವರು ಸ್ಟೂಡೆಂಟ್ಸ್ ಮಾತ್ರ . ಉಳಿದಂತೆ 'ಸ್ಟೂಡೆಂಟ್ ' ಏನು ಮಾಡಿದರೆ ನಮಗೇನು ಪಾಠ ಮಾಡುವುದು ಮಾತ್ರ ನಮ್ಮ ಕೆಲಸ ಅಂತಾರೆ.  ನಾವು 'ನಮ್ ಮಕ್ಳು'  ಅಂದ್ರೆ ಇವರೇ ನಗ್ತಾರೆ ಕಣ್ರೆ. ಈ ಕಡೆ ನಮ್ಮತನವನ್ನೂ ಬಿಟ್ಟು ಆ ಕಡೆ ಅನ್ಯರಂತೆಯೂ ಆಗದೇ ಉಳಿದುಬಿಟ್ಟೆವಾ  ಅಂತ ಭಯ ಆಗತ್ತೆ. ... '  ಮಿಸ್ ಮಾತು ಮುಂದುವರೆದಿತ್ತು. ಮುಂದೆ ಕೇಳಲು ನಮಗೂ  ಭಯವಾಗುತ್ತಿತ್ತು. ಬದಲಾವಣೆ ಜಗದ ನಿಯಮ , ಹೌದು ಆದರೆ ವಸಂತದ ಚಿಗುರು ಮಕ್ಕಳ ನಗು ಬದಲಾಗಬಾರದಲ್ಲವೇ ? ಬಾಳ ಪಯಣದಲ್ಲಿ ಒಂದಷ್ಟು ಸಾಧಿಸಿದರೆ , ಚಂದಗೆ ಬದುಕಿದರೆ ' ಇದು ನನ್ನ ಮಗು , ನಾ ನಡೆಯಲು ಕಲಿಸಿದ ಮಗು ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಶಿಕ್ಷಕರು , ಮಣ್ಣ ಮುದ್ದೆಗಳಿಗೆ ಮೂರ್ತಿಯ ರೂಪ ಕೊಟ್ಟವರು ಇವರೆಂಬ 'ಸ್ಟೂಡೆಂಟ್ಸ್'ಗಳ ಕೃತಜ್ಞತೆ ಬದಲಾಗಬಾರದಲ್ಲವೇ ?

ಗಣಿತದ ಸೂತ್ರಗಳನ್ನು ಬಾಯಿ ಪಾಠ ಮಾಡಿಸಿದವರು, ವಿಜ್ಞಾನದ ಜಗತ್ತನ್ನು ಪರಿಚಯಿಸಿದವರು , ಭಾಷೆಯ ಸೊಗಸನ್ನು ಕಲಿಸಿದವರು, ಆಸಕ್ತಿ ಇಲ್ಲದಿದ್ದರೂ ಪರವಾಗಿಲ್ಲ ಚಿತ್ರ ಬಿಡಿಸಿ ಎಂದವರು, ಪಾಠವನ್ನೇ ಮಾಡದವರು  ಎಲ್ಲ ಶಾಲೆಗಳಲ್ಲೂ ಎಲ್ಲ ರೀತಿಯ ಶಿಕ್ಷಕರೂ ಇರುತ್ತಾರೆ, ನಮ್ಮಲ್ಲೂ ಇದ್ದರು . ವರುಷಗಳು ಉರುಳಿದರೂ ಅಸಂಖ್ಯಾತ  ವಿಧ್ಯಾರ್ಥಿಗಳನ್ನು ಕಂಡರೂ ಅವರಿಗೆ ನಮ್ಮ ನೆನಪಿತ್ತು , ಬಹುಶಃ ಎಲ್ಲರ ನೆನಪೂ ಇರುತ್ತದೆ. 'ಯಾವ್ ಮೂಲ್ಯಾಗ್ ಹುಡುಕಿದ್ರೂ ನಮ್ ಹುಡುಗಿಯಾರ್  ಸಿಕ್ತಾರ್ ನೋಡ್ರಿ ' ಅಂತ ಒಬ್ಬರಿಗೊಬ್ಬರು ಹೇಳಿಕೊಂಡು ಖುಷಿ ಪಡುತ್ತಿದ್ದರು. ಇದೀಗ ಬಂದ ಹೊಸ ತಲೆಮಾರಿನ ಶಿಕ್ಷಕಿಯರೆದುರು 'ನಮ್ ಹುಡುಗಿಯರು,  ನೆನಪಿಟ್ ಕೊಂಡು ಬಂದಾರೆ ' ಅಂತ ಹೆಮ್ಮೆಯಿಂದ ಹೇಳಿಕೊಂಡರು .
ನಾವು ಅಂದು ಭೇಟಿ ಮಾಡಿದ ಶಿಕ್ಷಕಿಯರೊಡನಿನ ಸಂಭಾಷಣೆಯ ವರದಿಯನ್ನು ಮುಂದುವರೆಸುತ್ತಲೇ ಇರಬಹುದು. ಹಲವು ವಿಷಯಗಳು ವರದಿಗೆ ನಿಲುಕಲಾರವು . ಬದುಕಿನ ಬಹುತೇಕ ಸಂಗತಿಗಳು ಅಮೂರ್ತವಾಗಿ ಆರಂಭವಾಗಿ ಹಂತ ಹಂತವಾಗಿ ಮೂರ್ತವಾಗುತ್ತವೆ. ಈ ಭೇಟಿ , ತಯಾರಾದ ಮೂರ್ತಿ ತನ್ನ ಶಿಲ್ಪಿಯನ್ನು ತನ್ನೊಳಗೇ ಅರಸಬೇಕೆಂಬ ಸತ್ಯದರ್ಶನ ಮಾಡಿಸಿತ್ತು.  ಸಮಯ ಪರಿಪಾಲನೆ, ಸುತ್ತಲಿನವರೆಡೆಗೆ ತೋರಬೇಕಾದ ಪ್ರೀತಿ ,ವಿಶ್ವಾಸ , ಕಾಳಜಿ , ಬದುಕಿನಲ್ಲಿ ಉಳಿಸಿಕೊಳ್ಳ ಬೇಕಾದ  ಜೀವನ ಶ್ರಧ್ಧೆ, ಕಂಡುಕೊಳ್ಳಬೇಕಾದ ಸಮ ಚಿತ್ತ  ಮುಂತಾದ ಮೌಲ್ಯಗಳು  , ಮೀರಲೇ ಬೇಕಾದ ಮೇರೆಗಳು ಇವೆಲ್ಲವೂ ನಮ್ಮ 'ಮಿಸ್ ' ಗಳು  , ಅಜ್ಜಿ ರಂಗಸ್ವಾಮಿಯಂಥವರು ನಮ್ಮ ಬದುಕಿನ  ಕ್ಯಾನ್ವಾಸ್ ಮೇಲೆ ಬಿಡಿಸಿದ ಸುಂದರ ಚಿತ್ರಗಳು  ಎಂಬುದು ಅರಿವಿಗೆ ಬಂದಿತು. 

ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ.

Thursday, October 01, 2015

ಒಂದು ಪಯಣದ ನೆನಪು

ಬಾಲ್ಯಕ್ಕೆ ತಾನು ಕಟ್ಟಿದ ಕಪ್ಪೆ ಗೂಡಿಗಿಟ್ಟ ಹಳದಿ ಹೂವಿನ ಘಮವೂ ಗೊತ್ತು. ಹರೆಯದ ಹುಚ್ಚು ಹೊಳೆಯ ಗುಂಟ ಚಾಚಿಕೊಂಡ ಮರಳಲ್ಲಿ ಹೆಜ್ಜೆ ಗುರುತು ಸ್ಪಷ್ಟವಾಗಲ್ಲದಿದ್ದರೂ ಗುರುತಿಸಬಹುದಾದ ಹೆಜ್ಜೆ ಮೂಡುತ್ತದೆ. ನಂತರದ ಪಯಣವೇನಿದ್ದರೂ ರಭಸ, ಗಮ್ಯ , ಗುರಿಗಳಿಗೆ ಮೀಸಲು. ಅಂಕುಡೊಂಕಿನ , ಕಲ್ಲು ಮುಳ್ಳಿನ ಹಾದಿಯಲ್ಲಿ ಹೆಜ್ಜೆ ಮೂಡಿಸುವಷ್ಟು ಸಮಯ , ಸದವಕಾಶ ಸಿಗುವವರು ಕಡಿಮೆ. ಹಾದಿಯಲ್ಲಿ ಬಸವಳಿದು ಕುಂತಾಗ ಹೆಜ್ಜೆಗಳನ್ನು ಹುಡುಕುವ ಪ್ರಯತ್ನ ಮತ್ತೆ ಪ್ರಾರಂಭವಾಗುತ್ತದೆ.  ಸಾಗಿ ಬಂದ ಹಾದಿಯಲ್ಲಿ ಮತ್ತೆ ಒಂಟಿಯಾಗಿ ನಡೆಯುವುದು ಸುಲಭವಲ್ಲ , ಏಕಾಂತದ ಮೊದಲ ಹೆಜ್ಜೆ ಒಂಟಿತನವೇ ಎಂಬುದನ್ನು ನಂಬಿ ಸಾಗಿದಾಗ ಸಿಕ್ಕಿದ್ದು ಅಸ್ಪಷ್ಟ ಬೆರಳ ಗುರುತುಗಳು, ಆ ಗುರುತುಗಳ ಜಾಡು ಹಿಡಿದು ಹೆಜ್ಜೆಗಳನ್ನು ಹುಡುಕುವುದು ಬಾಕಿ ಇದೆ. ಈ ಬರಹ ಅಂತಹ ಒಂದು ಪಯಣದ ಅಸ್ಪಷ್ಟ ದಾಖಲೆ.

ಬಾರದ ಮಳೆಗೆ ಕಾದು  ಕಾದು ನಿದ್ದೆ ಹೋದ ಮಹಾನಗರಿ ಮುಸುಕು ಸರಿಸುವ ಮುಂಚೆಯೇ ಮನೆಯಿಂದ ಪಯಣ ಆರಂಭವಾಗಿತ್ತು . ಕುಸುಮಬಾಲೆ ಬರೆದಂತೆ 'ಸೂಟ್ಕೇಸ್ ನೊಂದಿಗೆ ಬಂದಿಳಿದ ಅದೆಷ್ಟೋ ಜನಕ್ಕೆ , ಲಾರಿ ತುಂಬಾ ಸಾಮಾನು ಕೊಟ್ಟ ನಗರಿ' ಯಲ್ಲಿ ಇನ್ನೂ ಬೆಳಕು ಹರಿದಿರಲಿಲ್ಲ. ಸರಿಯುತ್ತಿರುವ ಕ್ಷಣಗಳು ಅನುಭವವಾಗಿ , ಅನುಭೂತಿಯಾಗಿ ಒಳಗಿನೊಂದಿಗೆ ಬೆರೆಯುತ್ತಿದ್ದವು.  ಕೆಲ ದಶಕಗಳ ಹಿಂದೆ  ರವಿ ಬೆಳಗೆರೆ ಈ ನಗರವನ್ನು ಕೆಂಪೇಗೌಡರು ಹಾಕಿಸಿದ ಮಹಾ ಶಾಮಿಯಾನ ಎಂದು ಕರೆದಿದ್ದರು. ಸಮಾರಂಭ ಮುಗಿಯುವವರೆಗೆ ಮಾತ್ರ ಶಾಮಿಯಾನದ ಅಗತ್ಯ ಆಮೇಲೆ ?  ನೆಟ್ಟ ಗೂಟ , ಕಟ್ಟಿದ ಬಟ್ಟೆ , ಹಾಕಿದ ಹೂವು ಎಲ್ಲವೂ ಮತ್ತೆಲ್ಲಿಗೋ , ಇನ್ಯಾವ ಶಾಮಿಯಾನಕ್ಕೋ . ನಗರಗಳ ನೋವು ಕೇಳುವವರಾರು ? ಸದಾ  ಸವಿ ನಿದ್ದೆಯಲ್ಲಿರುವವರಂತೆಯೇ, ಈ  ನಗರದಲ್ಲೂ ರಾತ್ರಿಯಾಗದವರೂ ಇದ್ದಾರೆ . ಅದೆಷ್ಟೋ ಕಸುಬುದಾರರಿಗೆ ರಾತ್ರಿ ಎಂಬುದು ಅಪರಿಚಿತ. ಆದರೆ ನನಗೆ   ರಾತ್ರಿಯಾಗದವರು ಎನ್ನುತ್ತಿದ್ದಂತೆ ನನಗೆ ನೆನಪಾಗುವುದು ಅವರೇ ...ಕತ್ತಲಾಗುತ್ತಿದ್ದಂತೆ ಢಾಳಾಗಿ ಅಲಂಕರಿಸಿಕೊಂಡ  ಮೆಜೆಸ್ಟಿಕ್ಕಿನ ಸಣ್ಣ ಸಣ್ಣ ಸಂಧಿಗಳಲ್ಲಿ ಕಾಣುವ ಹೆಂಗಸರು . ಅವರನ್ನು ಎದುರಿಸಲಾಗದ ಭಯಕ್ಕೆ ಬಳಸಿ ಹೋದರೂ ಸರಿ , ಕೆಲವು ರಸ್ತೆಗಳಲ್ಲಿ  ನಾನು ಹೆಜ್ಜೆ ಇಡುತ್ತಿರಲಿಲ್ಲ . ಈಗವರು ಮೆಜಸ್ಟಿಕ್ಕಿಗಿಂತಲೂ ಹೆಚ್ಚಾಗಿ ಏರ್ಪೋರ್ಟ್ ರೋಡಿನಲ್ಲಿ ಕಾಣಿಸುತ್ತಾರೆ. ರಸ್ತೆ ಬದಲಾಯಿಸುವ ಅವಕಾಶವೂ ಇಲ್ಲ. ಎಲ್ಲಿಂದೆಲ್ಲಿಗೆ ಮಾನವತೆಯ  ಪಯಣ ? ಎಲ್ಲಿಯೋ ಓಡುತ್ತಿದ್ದ ಮನಸನ್ನು ಮತ್ತೆ ಹಿಡಿದು ತಂದಿದ್ದು ಟ್ಯಾಕ್ಸಿಯಲ್ಲಿ ಕೇಳಿ ಬಂದ ತೆಲುಗು ಹಾಡು. ಹೊರಗಡೆ ಕಣ್ಣು ಹಾಯಿಸಿದರೆ , ರಾತ್ರಿ ಗಾಡಿ ಓಡಿಸಿ ದಣಿದಿದ್ದ ಟ್ಯಾಕ್ಸಿ ಚಾಲಕರು ಅದಾಗಲೇ ತೆರೆದು ಒಲೆ ಹಚ್ಚಿದ್ದ ಕೆಲವು ಟೀ ಅಂಗಡಿಗಳಲ್ಲಿ ಒಂದಷ್ಟು ಚಹಾ ಹೀರಿ ಮುಂದಿನ ಪಯಣಕ್ಕೆ ಅಣಿಯಾಗುತ್ತಿದ್ದರು.  ನನ್ನ ಚಾಲಕ ಸಮಯಕ್ಕೆ ಸರಿಯಾಗಿ ನಿಲ್ದಾಣ ತಲುಪಿಸಿಯಾನೇ ? ಎಂಬ ಪ್ರಶ್ನೆಯನ್ನೂ ಮೀರಿ ಬೆಳಗೊಂದು ನನ್ನ ಮುಂದೆ ತೆರೆದುಕೊಳ್ಳುತ್ತಿತ್ತು. ತಲುಪಿದ ಗಮ್ಯ ನನ್ನದು ಮಾತ್ರ . ಚಾಲಕನಿಗೆ ಪಯಣವೇ ಗಮ್ಯ.  ಸತ್ಯ , ಗಮ್ಯ , ಪ್ರೀತಿ , ದ್ವೇಷ, ಅಸೂಯೆ ಎಲ್ಲವೂ ಅವರವರು ಕಂಡಂತೆ, ಉಂಡಂತೆ .

ಪಯಣಿಗರನ್ನು ನಿಗದಿತ ಸ್ಥಳಕ್ಕೆ  ಕರೆದೊಯ್ಯಲು , ಹಲವು ಪಯಣಗಳನ್ನೊಳಗೊಂಡ ಬೃಹತ್ ಪಯಣ ಸರಣಿಯಂತೆ  ಕಾಣುತ್ತಿದ್ದ  ಬಂಡಿ ಸಿಧ್ಧವಾಗಿ ನಿಂತಿತ್ತು.   ಮಾನವ ಜಗತ್ತಿನ ಎಲ್ಲ ಭಾವಗಳನ್ನು ದಿನವೂ ನೋಡುವ ಈ ಬಂಡಿಗೂ ದನಿ ಇರಬಹುದೇ ? ನಿರ್ಜೀವ , ಸಜೀವ ಎಂಬುದು ವಿಜ್ಞಾನದ ಮಾತಾಯ್ತು ಹೇಳುವ ಹಕ್ಕು ಎಲ್ಲರಿಗೂ ಸಮಾನ ಎಂಬುದು ಭಾವಲೋಕದ ಮೂಲವಲ್ಲವೇ ? ಹಲವು ಪ್ರಶ್ನೆಗಳಿಗೆ ಕಾಲ ಮಾತ್ರ ಉತ್ತರ ಕೊಡಬಲ್ಲುದು . ಕಿಟಕಿಯ ಪಕ್ಕದ ಸ್ಥಳ ದೊರೆಯದ್ದು ಇರಿಸು ಮುರಿಸು. ಇರಲಿ ಬಿಡು, ಬದುಕನ್ನು ಎಲ್ಲ ಕೋನಗಳಿಂದಲೂ ನೋಡು ಎಂಬ ಪಾಠವನ್ನು ಮತ್ತೆ ಹೇಳಿದ್ದು ಅಂದಿನ ಬೆಳಗು.  ಜೊತೆಗಾರನೊಡನೆ ಎಲ್ಲಿಗೋ ಹೊರಟ ವೃಧ್ಧ , ನಿದ್ದೆ ಮಂಪರಿನಲ್ಲಿ ಫೋನಿನಲ್ಲೇ  ವ್ಯಾಪಾರ ಮಾಡುತ್ತಿದ್ದ ಹರೆಯದ ವ್ಯಾಪಾರಿ, ಕಾಲು ಚಾಚುವಷ್ಟು ಸ್ಥಳದ ಹುಡುಕಾಟದಲ್ಲಿರುವ ಬಳಲಿದ ದಂಪತಿ ...ಅನಿವಾರ್ಯವಾಗಿ  ಒಂದಷ್ಟು ಹೊತ್ತು ಒಟ್ಟಿಗೆ ಸಾಗ ಬೇಕಾದ ಪಯಣಗಳು. ಪಯಣದ ಆರಂಭದಲ್ಲಿ ನೀ ಯಾರೋ ನಾ ಯಾರೋ ? ಎನ್ನುವಂತಿದ್ದರೂ ದಾರಿ ಸಾಗಿದಂತೆ ಒಬ್ಬರ ಮೇಲೊಬ್ಬರು ವಾಲಿ, ಕನಸುಗಳಲ್ಲಿ ತೇಲಿ ಪಯಣ ಮುಗಿಯುವಷ್ಟರಲ್ಲಿ ಮುಖದ ನರಗಳು ಸಡಿಲವಾಗಿ ಮುಗುಳ್ನಗೆಯೊಂದನ್ನು ಸೂಸುತ್ತವೆ. ಎದುರಾದ ಎಲ್ಲರಿಗೂ ಕೈಗಡದಂತೆ 'ನಗೆಗಡ' ಕೊಡಲು ಸಾಧ್ಯವಾದರೆ  ಬದುಕು ಸುಂದರವಾಗುತ್ತದೆ. ನನ್ನ ಪಾಲಿನ ಬಂಡಿಯ ಪಯಣ ಮುಗಿದು ನೆನಪುಗಳನ್ನು ಮತ್ತೆ ಪೋಣಿಸಲು ಹುಟ್ಟಿದ ಊರು ತಲುಪಿದ್ದೆ . ಬದಲಾವಣೆ ಜೀವಂತಿಕೆಯ ಪ್ರಮುಖ ಲಕ್ಷಣ, ನನ್ನೂರು ಕೂಡ ಜೀವಂತಿಕೆಯನ್ನು ಹೊತ್ತು ಮೆರೆಯುತ್ತಿತ್ತು.  ಗಿಳಿಗಳಿಗೆ ನೆರಳಾಗಿದ್ದ ಮರವೊಂದು ಉರುಳಿ ಡಾಂಬರಿನ ರಸ್ತೆಯಾಗಿತ್ತು . ಇಲ್ಲಿ ಹೆಜ್ಜೆ ಮೂಡುವುದಿಲ್ಲ! ಗಿಳಿಗಳಿಗೆ ನೆರಳಾಗಿ ನೆರಳಿಗೆ ಅಲೆಯುವಾ ಎಲೆ ..' ಹಂಸಲೇಖಾರ ಸಾಲು ನೆನಪಾಗಿತ್ತು. ಬೀದಿಗಳಲ್ಲಿದ್ದ ಸುಂದರ ಮರಗಳನ್ನು ಉರುಳಿಸಿ ಊರನ್ನು ಚಂದಗಾಣಿಸುವ ಪ್ರಯತ್ನದ ಭಾಗವಾಗಿ ,  ಎಲ್ಲಿಂದಲೋ  ತಂದ 'ಸೈಕಾಸ್' ಮರಗಳನ್ನು ನೆಡಲಾಗಿತ್ತು.  ನಾಲ್ಕೈದು ಅಡಿ ಬೆಳೆದ ನಂತರವೂ  ಎಲ್ಲಿ ನೆಟ್ಟರೂ ಬೆಳೆವ ಸೈಕಾಸ್ ,ಬೇರು ಬಿಟ್ಟು, ಗೂಡು ಕೊಟ್ಟು ನೆರಳಾಗುವ ಮರಗಳ ಸ್ಥಾನವನ್ನು ಆಕ್ರಮಿಸಿಕೊಂಡಿತ್ತು. ಇಂದಿನ ಕಾಲಮಾನದಲ್ಲಿ ಹೊರಗಿನ ಬೆಳವಣಿಗೆಗೆ  ಮಾತ್ರ ಆದ್ಯತೆ , ಬೇರುಗಳನ್ನು ಗಮನಿಸುವ ಪುರೊಸೊತ್ತು ಯಾರಿಗಿದೆ ? ಗೂಡಿಲ್ಲದೆ ಅಳುವ ಗಿಳಿಗಳ ಭಾಷೆ ಬಲ್ಲವರಾರು ?

ಹೆಜ್ಜೆಹೆಜ್ಜೆಗೊಂದು ಹೆಜ್ಜೆ ಸೇರುತ್ತಿದ್ದರೆ ದಾರಿಗೆಲ್ಲಿಯ ಕೊನೆ ? ಸುತ್ತಲ ಜಗತ್ತು ಪ್ರತೀ ಕ್ಷಣವೂ ಬದಲಾಗುತ್ತಲೇ ಇರುತ್ತದೆ. ನಮ್ಮ ಗಮನದ ಹಂಗು ಅದಕೆಲ್ಲಿ ? ಭಾವದಲ್ಲಿ ಬೆಸೆದ ಬಂಧಗಳೇ ಬದಲಾಗುವಾಗ ಸುತ್ತಲ ಜಗತ್ತು ಯಾವ ಲೆಕ್ಖ ? ಮನೆಯ ಬಾಗಿಲ ಕಂಡು ಲಹರಿ ತುಂಡಾಗಿತ್ತು.  ಒಳಗಿನ ಮನುಷ್ಯರೂ ಬದಲಾಗಿರಲಿಲ್ಲ ಅಥವಾ ಹಾಗೆ ನಂಬುವುದು ನನ್ನ ಇಂದಿನ ಅಗತ್ಯ . ಪ್ರಶ್ನೆಗಳೊಂದಿಗೆ ಆರಂಭವಾದ ಒಂದು ಪಯಣ ಪ್ರಶ್ನೆಗಳಲ್ಲೇ ಸಾಗಿ , ಪ್ರಶ್ನೆಗಳಲ್ಲೇ ಮುಗಿದಿತ್ತು . ಹಲವು ಬಾರಿ ಬದುಕು ಒಂದು ಪ್ರಶ್ನೆಗೆ ಮತ್ತೊಂದು ಪ್ರಶ್ನೆಯ ಮೂಲಕ ಉತ್ತರಿಸುತ್ತದೆ. ಪ್ರತೀ ದಿನವೂ  ಹೊಸ ಅಡುಗೆಯೊಂದನ್ನು ಮಾಡಿ , ಚಂದಮಾಮನನ್ನು ತೋರಿಸಿ 'ಒಂದೇ ತುತ್ತು ಉಣ್ಣು ಮಗು ' ಎನ್ನುವ ಅಮ್ಮನಂಥಾ ಬದುಕು. ಇವು ಒಂದು ಪಯಣದ ನಂತರ ನನ್ನ ನೆನಪಿನಲ್ಲುಳಿದ ಕೆಲವು ಅನುಭೂತಿಗಳು. ಚುಕ್ಕಿಗಳನಿಡುವ ಕಾರ್ಯ ಈಗಷ್ಟೇ ಆರಂಭವಾಗಿದೆ , ಚಿತ್ತಾರವಾಗಲು ಇನ್ನೂ ಕಾಯಬೇಕಿದೆ.

ದಾರಿಗಳು ಮತ್ತು ದಾರಿಹೋಕರ ನಡುವಿನ ಮಾತುಗಳನ್ನು ಗೆಳತಿ ಮಂಜುಳಾ ಸುಂದರ ಕವಿತೆಯಾಗಿಸಿದ್ದಳು . 'ಹೊಸ ಹೆಜ್ಜೆಗೊಂದು ಹೊಸ ಅನುಭೂತಿ ' ಇದು ಪಯಣದ ಪರಮ ಸತ್ಯ. ಅನುಭೂತಿಯಿಂದ ನಾವು ವಿಮುಖರಾದರೂ , ಅಲಕ್ಷಿಸಿದರೂ  ಅದು ಘಟಿಸುತ್ತಲೇ ಇರುತ್ತದೆ. ದಾರಿಹೋಕರು ದಾರಿಯೊಡನೆ ಮುನಿಯಬಾರದೆಂಬ ಸಾಲಿನೊಂದಿಗೆ ಅಂತ್ಯವಾಗುವ ಕವಿತೆ ನನ್ನಿಷ್ಟದ ಕವಿತೆಗಳಲ್ಲೊಂದು .
ಕವಿತೆಯ ಪೂರ್ಣ ಪಾಠ ಕೆಳಗಿದೆ  :

ತಿರು-ತಿರುಗಿ ನೋಡಿ ಕತ್ತುಳುಕಿದೆ
ಸಾಗಿ ಬಂದ ಹಾದಿ ತನ್ನ ಪಾಡಿಗೆ ತಾನಿದೆ
ನನ್ನಾತಂಕಗಳ
ತಿಳಿದೇ ಇಲ್ಲವೆಂಬ ಭಾವದ
ರಸ್ತೆಯ ನಿರಂಬಳ ನೋಟದಲಿ
ಮತ್ತಿನ್ನಿನೇನೋ ಕೇಳಿಸತೊಡಗಿದೆ...

ನನ್ನ ತುಳಿದವರೆಷ್ಟೋ ಹುಡುಗಿ..
ಲೆಕ್ಕವಿಡಲು ನನಗೆ ಬರುವುದಿಲ್ಲ
ನೀ ತಿರುಗಿ ನೋಡಿದರೂ
ನೋಡಿ ದಿಟ್ಟಿಸಿದರೂ
ದುರುಗುಟ್ಟಿ ಗದರಿದರೂ
ನಾನೇನೂ ಹೇಳಲಾರೆ ನಿನಗೆ
ಪ್ರಶ್ನೆ ಕೇಳುವುದು ನಿನ್ನ ಚಾಳಿಯೇ?
ಯಾರು-ಯಾರೆಂದು ನೆನಪಿರುವುದಿಲ್ಲ ನನಗೆ

ಸುಮ್ಮನೇ ನಾ ಹರವಿಕೊಂಡಿದ್ದೇನೆ
ಹರವಿದವರಾರೆಂಬುದೂ ನನಗೆ ಬೇಕಿಲ್ಲ
ನಿನ್ನ ತೀಕ್ಷ್ಣ ನೋಟಕೆ
ಇಷ್ಟಾದರೂ ಮಾತಾಗಿದ್ದೇನೆ
ಕೇಳಿಸಿಕೋ...

ತುಳಿತ ನೋವು ತಂದಿಲ್ಲ ಗೆಳತಿ
ಪ್ರತಿ ಕ್ಷಣವೂ ಹೊಸ ಸ್ಪರ್ಶದ
ಹಸಿವ ತಣಿಸಿದೆ!
ಹಿಂದಿರುಗಿ ಮರುಗಬೇಡ
ನಾ ಸಂತೈಸಲಾರೆ
ಪ್ರಶ್ನೆಗಳೊಡನೆ ನನ್ನ ದಿಟ್ಟಿಸಬೇಡ
ನಾನುತ್ತರಿಸಲಾರೆ
ಹೊಸ ಹೆಜ್ಜೆಗೊಂದೊಂದು
ಹೊಸ ಅನುಭೂತಿ
ಗಗನಕೇರಿ ನೀ ಹಾರಿದರೂ
ಇದಷ್ಟೇ ಪಯಣದ ರೀತಿ

ಬಿಕ್ಕಳಿಕೆ ನಿಲ್ಲಿಸು
ಹೆದೆಗೇರಿಸು ಕನಸು
ಸವೆಸಿದಷ್ಟೇ ದಾರಿ
ಹದವಾಗಿಸು ಮನಸು
ನಿನಗಿದು ತಿಳಿದಿರಲಿ
ಪಯಣದಲೆಂದೂ
ತರವಲ್ಲ ಮುನಿಸು!

ಇದು ದಾಖಲೆಯ ಅಂತ್ಯ ಮಾತ್ರ, ಪಯಣದ್ದಲ್ಲ !

ಕವಿತೆಯನ್ನು ಬಳಸಿಕೊಳ್ಳಲು ಅನುಮತಿ ಇತ್ತ ಮಂಜುಳಾಗೆ ಧನ್ಯವಾದಗಳು .


ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ.




Sunday, September 27, 2015

ಹೊಂದಾಣಿಕೆ ,ಶಿಲುಬೆ, ಸಂಬಂಧ


ಚಿತ್ರಕೃಪೆ : ಅಂತರ್ಜಾಲ




ಮನ್ನಣೆಯ ದಾಹವೆಂಬುದು ಆತ್ಮವನ್ನೇ ತಿನ್ನುವುದು ಎಂದು ತಿಮ್ಮಗುರು ಹೇಳಿದ್ದು ಕೇಳಿದಾಗ ಹೌದಾ ? ಅಷ್ಟು ತೀಕ್ಷ್ಣವಾ ? ಎಂಬ ಅನುಮಾನ ಕಾಡಿತ್ತು . ಬದುಕಿನ ಬಹುತೇಕ ಅನುಮಾನಗಳಿಗೆ ಬದುಕು ತನ್ನದೇ ಆದ ರೀತಿಯಲ್ಲಿ ಉತ್ತರ ಕೊಡುತ್ತದೆ. ಪ್ರಶ್ನೆ ಮರೆತರೂ ಉತ್ತರವಿತ್ತೇ ಸೈ ಎನ್ನುವ ಹಠಮಾರಿ !

ಪರಿಚಯಸ್ಥರಲ್ಲಿ ಒಬ್ಬರಿದ್ದಾರೆ. ' ಏ  ಆಯಮ್ಮ ಬಿಡ್ರಿ ಎಂಥಾ ಹೆಂಗ್ಸು, ಕೈ ಮುಗೀಬೇಕು !' ಎಂಬ ಉದ್ಗಾರವಿಲ್ಲದೇ ಅವರ ಬಗ್ಗೆ ಮಾತಾಡೋರು ಕಡಿಮೆ. ಯಾರಿಗೆ ಏನೇ ಕಷ್ಟ ಎಂದರೂ ಸಹಾಯಕ್ಕೆ ಸದಾ ಸಿಧ್ಧ. ಅವರ ಬಳಿ ಹಣವಿಲ್ಲದಿದ್ದರೂ ಸಾಲ ತಂದಾದರೂ ಪರರ ಕಷ್ಟ ನೀಗುವ ಮನಸು. ಆಕೆಗೆ ತಕ್ಕ ಗಂಡ, ಮರು ಮಾತನಾಡದೇ ಹೆಂಡತಿ ಹೇಳಿದ ಎಲ್ಲವನ್ನೂ ಪಾಲಿಸುವವರು. ಹಾಗೆ ಪಾಲಿಸದಿದ್ದರೆ ಆತನ ಹುಳುಕುಗಳೂ ಹೊಸ್ತಿಲು ದಾಟಿಯಾವೆಂಬ ಭಯವೂ ಇರಬಹುದು. ಅವರ ಮನೆಯಲ್ಲಿ ತಿಂಡಿಗೆ ಪೂರಿ ಮಾಡಿದರೆ ಒಂದು ನೂರು  ಪೂರಿ ಮಾಡಿ ಟೇಬಲ್ ಮೇಲೆ ಇಡುತ್ತಾರೆ. ಮನೆಗೆ ಹೋದ ಎಲ್ಲರಿಗೂ ಪೂರಿ ತಿಂದು ತಟ್ಟೆಯನ್ನು ಅವರಿಗೇ  ತೊಳೆಯಲು ಇಟ್ಟು ಬರುವ ಸ್ವಾತಂತ್ರ್ಯ ಕೊಟ್ಟಿದ್ದಾರೆ . ಇದು ಕಥೆಯಲ್ಲ ಜೀವನವೇ ! 'ಆಕಿ ಬಿಡ್ರಿ ಅನ್ನಪೂರ್ಣೆಶ್ವರಿ ಇದ್ದಂಗೆ ' ಎಂಬ ಬಿರುದನ್ನು ಸುತ್ತಲಿನವರು ದಯಪಾಲಿಸಿದ್ದಾರೆ ಮತ್ತು ಆಗಾಗ ಅವರ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಬಿರುದುಗಳನ್ನು ಸೇರಿಸುತ್ತಲೇ ಇರುತ್ತಾರೆ. 'ಅಯ್ಯೋ ನಮ್ಮನೇಲಿ ಎಷ್ಟು ಮಾಡಿದ್ರೂ ಖರ್ಚಾಗುತ್ತೆ ' ಎನ್ನುತ್ತಲೇ ಆಕೆ ಪೂರಿ ಕರಿಯುತ್ತಲೇ  ಇದ್ದರು .  ಒಂದು ದಿನ  ಮಗ ಬೆಳೆದು ನಿಂತ, ಅವನಿಗೊಂದು ಜೊತೆ ಬಂತು , ಮನೆಗೆ ಸೊಸೆ ಬಂದಳು.  ಇರುವ ಮೂರು ಮತ್ತೊಂದು ಜನಕ್ಕೆ ನೂರು ಪೂರಿ ಯಾಕೆ  ? ಇಷ್ಟೊಂದು ಸಾಲ ತೀರಿಸೋರು ಯಾರು ? ಎಂಬ ಪ್ರಶ್ನೆಗಳು ಆರಂಭವಾದವು.  ಈಗ ಸುತ್ತಲಿನವರು 'ಎಂಥಾ ಅತ್ತಿಗ್ ಎಂಥಾ ಸೊಸಿ. ಎಲ್ಲಾ ಕಲಿಗಾಲರಿ ' ಎನ್ನುತ್ತಿದ್ದಾರೆ.

ಒಂದೂರಲ್ಲೊಬ್ಬ ಯಜಮಾನ. ಊರಿನ ಎಲ್ಲರೂ ತನ್ನ ಮನೆಗೆ ಬರಬೇಕು , ಪರ ಊರಿನಿಂದ ಯಾರೇ ಬಂದರೂ ಅವರಿಗೆ ತನ್ನ ಮನೆಯಲ್ಲೇ ಆತಿಥ್ಯ ನಡೆಯಬೇಕು ಎಂಬ ಮನಸಿನವ.  ರಾತ್ರಿ ಊಟದ ಹೊತ್ತಿಗೆ ಬಂದ ಅತಿಥಿಗೂ 'ಸೊಲ್ಪ್  ಚಾ ಕುಡಿರಿ' ಎಂದು ಅದೇ ಉಸಿರಿನಲ್ಲಿ 'ಅರ್ಧ ಶುಗರ್ ಲೆಸ್ ಚಾ ತಾ ' ಎಂಬ ಆಜ್ಞೆ ಹೊರಡಿಸಿಬಿಡುತ್ತಾನೆ. ಅಡುಗೆ ಮನೆಯಲ್ಲಿ ಹಾಲಿದೆಯೇ  ? ಚಾಪುಡಿ ಮುಗಿದಿದೆಯಾ ? ಎಂಬ ಪ್ರಶ್ನೆಗಳು ಅವನಿಗೆ ಅಪರಿಚಿತ. ಮಕ್ಕಳಿಗೆ ಇಟ್ಟ ಹಾಲಿನಲ್ಲೋ , ಹೆಪ್ಪಿಗಿಟ್ಟ ಹಾಲಿನಲ್ಲೋ ಹಾಲು ತೆಗೆದು ಪಕ್ಕದ ಮನೆಯಿಂದ ಚಾಪುಡಿ ತಂದು ಆ ಸಾಧ್ವಿ ಶಿರೋಮಣಿ ಅರ್ಧ ಕಪ್ ಚಹಾದ ಆಜ್ಞೆಯನ್ನು ಪಾಲಿಸುತ್ತಾಳೆ. ಮೂರ್ನಾಲ್ಕು ದಶಕಗಳ ಕಾಲ ಅಜ್ಞಾ ಪರಿಪಾಲನೆ ಸುಸೂತ್ರ (?)ವಾಗಿ ನಡೆಯುತ್ತದೆ. ಆಜ್ಞೆಗಳನ್ನು ನಾನು ಪಾಲಿಸುವುದಿಲ್ಲ ಎಂದು ಹೇಳಲು ಹೆಂಡತಿಗೆ ಅವಳದ್ದೇ ಆದ ಕಾರಣಗಳಿವೆ . ಎಲ್ಲಕ್ಕಿಂತ ಒಂದು ತೂಕ ಹೆಚ್ಚಿರಬಹುದಾದ ಕಾರಣ 'ಅಯ್ಯಾ ಗಂಡ ಮಾಡಂದ್ರೂ  ಮಾಡ್ಲಿಲ್ ನೋಡ್ರಿ ಈಕಿ ಎಂಥಾ ಹೇಣ್ತಿ ' ಎಂದು ತನ್ನ ಪತ್ನಿತ್ವದ ಬಗ್ಗೆ ಅಪಸ್ವರಗಳು ಬಂದರೆ ?ಎಂಬುದಾಗಿರುತ್ತದೆ.  ಊರಿಗೆ ಬಂದ ಎಲ್ಲರೂ ಇವರ ಮನೆಯಲ್ಲೇ ತಿಂಗಳಾನುಗಟ್ಟಲೇ ಇದ್ದು  ' ಗಂಡ ಹೇಣ್ತಿ  ಅಂದ್ರ ಅವರ ನೋಡ್ರಿ , ಮನಿಗ್ ಹೋದ್ರೆ ಹೆಂಗ್ ನೋಡ್ಕೊತಾರ್ರಿ . ನಮ್ ತಂದಿ ತಾಯಿ ಇದ್ದಾಂಗೆ ಬಿಡ್ರಿ .'  ಎನ್ನುವ ಪತ್ರ ಇಲ್ಲದ ಸನ್ಮಾನ ಮಾಡಿ ಹೊರಡುತ್ತಾರೆ. ಒಂದು ದಿನ ಈ ಮನೆಗೂ ಸೊಸೆ ಬರುತ್ತಾಳೆ. 'ಅರ್ಧ ಕಪ್ ಶುಗರ್ ಲೆಸ್ ಚಾ ' ಎಂದರೆ 'ಇದೇನ್  ಹೊಟೇಲ್ ಏನ್ರೀ  ಈ ಹೊತ್ತಿನ್ಯಾಗ್ ಚಾ ಮಾಡಕ್ಕ ?' ಎಂಬ ಉತ್ತರ ಬರುತ್ತದೆ.  ಎಷ್ಟೋ ವರುಷ ಎಲ್ಲವನ್ನೂ ತೂಗಿಸಿದ 'ಸಾಧ್ವಿ ಶಿರೋಮಣಿ' ಗೂ ಮಾತು ಬರುತ್ತದೆ. 'ಸಾಕಾಯ್ತವ್ವ ಈ ಮನ್ಷಾನ್ ಕಟ್ಕೊಂಡು , ಒಂದಿನಾರಾ ಉಪ್ಪಿಗೈತಾ , ಉಣ್ಣಾಕೈತಾ  ನೋಡಲಿಲ್ಲ. ಹಿಂಗ ನೋಡು ನನ್ ಜೀವಾ ಹಣ್ಣಾತು ' ಎಂದು ಅಡುಗೆ ಮನೆಯಲ್ಲಿ ಪಿಸುಗುಡುತ್ತಾಳೆ. ಸುತ್ತಲಿನ ಜನ ಎಲ್ಲವನ್ನೂ ಮತ್ತೆ  ಕಲಿಯ ಮೇಲೆ ಹಾಕಿ 'ಪ್ಚ್ ಪ್ಚ್ ' ಎನ್ನುತಾರೆ . ಈ ಸಹಾನುಭೂತಿ  ಚಾ ತಪ್ಪಿದ್ದಕ್ಕೋ, ಆ ಯಜಮಾನನಿಗೋ , ಯಜಮಾನಿಗೋ , ಸೊಸೆಗೋ ? ಅವರವರ ಭಾವಕ್ಕೆ .

ಎಲ್ಲರನ್ನೂ ಒಪ್ಪಿಸಬೇಕೆಂಬ ಒಪ್ಪಣ್ಣಗಳು ಎಲ್ಲರ ಬದುಕಿನಲ್ಲೂ ಇರುತ್ತಾರೆ, ನಾವೇ ಅಂತಹ ವ್ಯಕ್ತಿತ್ವಗಳಾಗಿರಬಹುದು . ಮನೆಯವರ ಇಷ್ಟದಂತೆ ನಡೆದು ಒಳ್ಳೆಯವರಾಗುವ ಆಸೆಯಿಂದ ಶುರುವಾದ ಹೊಂದಾಣಿಕೆ ಮಾಡಿಕೊಳ್ಳುವ ಸ್ವಭಾವ ಸುತ್ತಲಿನ ಎಲ್ಲರೂ ಹೇಗೆ ಹೇಳಿದರೂ ಕೇಳುವ ಮಟ್ಟಕ್ಕೆ ಬಂದು ನಿಲ್ಲಬಹುದು . ಅಂತಹ ಎರಡು ವ್ಯಕ್ತಿತ್ವಗಳ ಬಗ್ಗೆ ಮೇಲೆ ಬರೆದಿದೆ .  ಬಹುತೇಕರು ತಾವೇ ಸೃಷ್ಟಿಸಿದ ಅಥವಾ ಯಾರೋ ಸೃಷ್ಟಿಸಿದ  ಪ್ರತಿಬಿಂಬದ ಬಂಧಿಯಾಗಿರುತ್ತಾರೆ. 'ಅವಾಂ ನನ್ ಮೇಲೆ ಎಷ್ಟ್ ಭರೋಸಾ ಇಟ್ಕೊಂಡಾನ' ಎಂದುಕೊಂಡು ಆ ಭರವಸೆಯನ್ನು ಸತ್ಯಮಾಡಲು ಇನ್ನಿಲ್ಲದ ಸಾಹಸ ಮಾಡುತ್ತಾರೆ. ಈ ಸಾಹಸಗಳಲ್ಲಿ ಬೇಕಿದ್ದೋ ಬೇಡವಾಗೋ ಅವರ ಹತ್ತಿರದವರು ಜೊತೆಗೂಡಲೇ ಬೇಕು. ಜೂಜಾಡಿದ್ದು ಧರ್ಮರಾಯ ,ಲೋಕದ ಕಣ್ಣಲ್ಲಿ 'ಭಲಾ ಭಲಾ ' ಎನಿಸಿಕೊಂಡಿದ್ದೂ ಧರ್ಮರಾಯ ಆದರೂ ಉಳಿದ ನಾಲ್ವರು ಮತ್ತು ಕಟ್ಟಿಕೊಂಡವಳಿಗೆ ಕಷ್ಟ ತಪ್ಪಲಿಲ್ಲ.  ಅತೀ ಒಳ್ಳೆಯತನವೆಂಬುದು ಅದೆಷ್ಟು ಬಲಿಗಳನ್ನು ಬೇಡುತ್ತದೆ ?

 ಮಾನವ ಸಂಘ ಜೀವಿ ,ನಿಜ. ಸಂಘದ ಭಾಗವಾಗಿರಲು ಅವನು ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು , ನಿಜ . ಆದರೆ ಎಲ್ಲಿಯವರೆಗೆ ? ಕನ್ನಡಿಯ ಮುಂದೊಂದು ಬಿಂಬ , ಒಳಗೊಂದು ಬಿಂಬ , ಸುತ್ತಲಿನವರ ಕಣ್ಣಲ್ಲಿ ಮತ್ತೊಂದು , ತನ್ನ ಅಂತರಂಗ ಮುಗದೊಂದು .ನಾಲ್ಕು ಬಿಂಬಗಳ ಗುದ್ದಾಟ ನಡೆಯುತ್ತಲೇ ಇರಬೇಕೇ ? ನಾಲ್ಕು ಜನರ ಜೊತೆ ಬದುಕಬೇಕೆಂದರೆ ಕೆಲವು ಹೊಂದಾಣಿಕೆಗಳು  ಬೇಕೇ ಬೇಕು. ತೇಪೆ ಇಲ್ಲದ ಹಾಗೆ ಹೊಂದಿಕೊಳ್ಳೋಕೆ ನಾವೇನು ಬೇರೆ ಮಾಡಿದ  ಒಂದೇ ವೃತ್ತದ , ಅರೆ ವೃತ್ತಗಳೇ ?  ಓರೆಕೋರೆಗಳನ್ನು ಹೊಂದಿಸಿಕೊಂಡು ಹಗ್ಗದ ಮೇಲೆ ನಡೆಯಲೇಬೇಕು . ಹಗ್ಗದ ಆಚೆ ಬದಿ ಬಿದ್ದರೆ 'ಜನ ಸೇರದ ಮನುಷ್ಯ' ನೆಂದು ಎಲ್ಲರೂ ದೂರ ಹೋದಾರು . ಹೋದರೂ ಚಿಂತೆ ಇಲ್ಲ ಒಂಟಿತನವನ್ನು ಎಕಾಂತವನ್ನಾಗಿಸಿಕೊಂಡು ಬದುಕುತ್ತೇನೆ ಎಂಬ ಶಕ್ತಿ ಇದ್ದರೆ ಸಲೀಸು. ಇಲ್ಲದಿದ್ದರೆ ಹಗ್ಗ, ನಡಿಗೆ ಇದ್ದಿದ್ದೆ. ಇನ್ನು ಈಚೆ ಬದಿ ಬಿದ್ದರೆ ನಮ್ಮತನವೇ ಕಾಣೆಯಾಗಿ ಒಂದೊಮ್ಮೆ ನಮ್ಮನ್ನೇ ಅರಸುವ ಸ್ಥಿತಿ ಬರಬಹುದು . ಆ ಸ್ಥಿತಿಯನ್ನೂ ಒಪ್ಪಿಕೊಂಡು  ಅಥವಾ ಕಡೆಗಣಿಸಿ ಬದುಕಬಲ್ಲೆ  ಎಂಬ ಛಾತಿ ಇದ್ದರೆ ಮತ್ತೆಲ್ಲವೂ ಸುಲಭ ಇಲ್ಲದಿದ್ದರೆ ಮತ್ತೆ ಇದ್ದೇ ಇದೆ ಹಗ್ಗದ ನಡಿಗೆ. ಮೇಲೆ ಹೇಳಿದ ವ್ಯಕ್ತಿಗಳು ಈಚೆ ಬದಿ ಬಿದ್ದವರು. ಸಂಘದ ಭಾಗವಾಗಲೇ ಬೇಕೆಂದು ಎಲ್ಲವನ್ನೂ ಒಪ್ಪಿಕೊಂಡವರು. ನಂತರ  ಪ್ರಶ್ನೆಗಳನ್ನು ಕಡೆಗಣಿಸಲಾಗದೇ ಒದ್ದಾಡುತ್ತಿರುವವರು.

ಅತೀ ಖಾಸಗಿಯಾದ ಗೆಳೆತನ , ದಾಂಪತ್ಯ ಎಲ್ಲದರಲ್ಲೂ ಹೊಂದಾಣಿಕೆ ಎಂಬ ಬೆಸೆವ ಗೋಂದು  ಇರುವುದು ಸಹಜ ಮತ್ತು ಸತ್ಯ . 'ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಬದುಕಿನಲಿ ' ಎಂಬ ಸಾಲು ಎಷ್ಟು ಸತ್ಯವೋ ಅಷ್ಟೇ ಸತ್ಯ ಹೊಂದಾಣಿಕೆಯ ಭಾರ ಹೆಚ್ಚಾದರೆ ಸಂಬಂಧಗಳು ಶಿಲುಬೆ ಎನಿಸತೊಡಗುತ್ತವೆ. ಏರಿರುವ ನನ್ನನ್ನೂ ಏಸುವಷ್ಟೇ ಗೌರವಿಸಲಿ ಎಂಬ ನಿರೀಕ್ಷೆ  ಆರಂಭವಾಗುತ್ತದೆ, ಪ್ರತೀ ಹೆಜ್ಜೆಯಲ್ಲೂ 'ನಾನು ಸರಿ ತಾನೇ ?' ಎಂಬ ಪ್ರಶ್ನೆ ಎದುರಾಗುತ್ತದೆ.  ಎಲ್ಲರನ್ನೂ ಎಲ್ಲ ಕಾಲಕ್ಕೂ ಮೆಚ್ಚಿಸಲು ಸಾಧ್ಯವಿಲ್ಲ ಎಂಬ ಸತ್ಯ ಮರೆತು ಹೋಗುತ್ತದೆ. ತನ್ನ ಮೇಲೆ ತನಗೇ ಇಲ್ಲ ಸಲ್ಲದ ಅನುಮಾನಗಳು ಆರಂಭವಾಗುತ್ತವೆ. ಶಿಲುಬೆಯನ್ನು ಹೆಗಲೆರಿಸುವ ಮುನ್ನ ಯೋಚಿಸುವುದು ಒಳಿತು ಏಕೆಂದರೆ ಅವರವರ ಶಿಲುಬೆಯನ್ನು ಅವರವರೇ ಹೊರಬೇಕು . ಮನ್ನಣೆಯ ಆಸೆ ದಾಹವಾಗದೇ ಹೊಂದಾಣಿಕೆ ಶಿಲುಬೆಯಾಗದಿದ್ದರೆ ಬದುಕು ಸಹ್ಯ.

 ಕನ್ನಡಿಯನ್ನು ಮತ್ತೆ ತಿಕ್ಕುತ್ತೇನೆ
ಆದರೂ ಹಣೆಯ ಮೇಲಿನ
ಮಸಿ ಮಾಯವಾಗುತ್ತಿಲ್ಲ
'ಏನೂ ಇಲ್ಲೊಮ್ಮೆ ನೋಡು '
ಹಣೆ ಮೇಲೇನೋ ಅಂಟಿದೆಯಾ ?
'ಏನಿಲ್ಲಾssss ಎಲ್ಲ ನಿನ್ನ ಭ್ರಾಂತು '
ಬೆನ್ನು ತೋರಿಸಿ, ಕೊಟ್ಟ
ಉತ್ತರವನ್ನೇಕೋ ನಂಬಲಾಗುತ್ತಿಲ್ಲ.
'ಪುಟ್ಟಾ ಹಣೆ ಮೇಲೇನೋ ಇದೆ ಅಲ್ವೇನೋ ?'
ಮುಗ್ಧತೆಗೊಂದು ಸವಾಲು
'ನನ್ನ ಗಾಳಿಪಟ ಹಾರಿ ಹೋಗ್ತಾ ಇದೆ.
ಹಿಡಿದು ತಾ . ಆಮೇಲೆ ನಿನ್ನ ಉತ್ತರ ' 
ಗಾಳಿಪಟ ಹಿಡಿದು ಕೊಟ್ಟ ಮೇಲೆ
ಉತ್ತರದ ನೆನಪು ಪುಟ್ಟನಿಗೆಲ್ಲಿ ? ಹಾರಿಯಾಯಿತು.
ಪ್ರಶ್ನೆ ಈಗ ಪ್ರಿಯಸಖಿ ಪ್ರಿಯಂವದೆಗೆ ವರ್ಗಾವಣೆ
'ಇದು ಈ ವಯಸ್ಸಿನ ಸಹಜ ಸಮಸ್ಯೆ
ನನಗೂ ಇತ್ತು, ನಾನು ಬೇಗ ವಾಸಿಮಾಡಿಕೊಂಡೆ.
ಕನ್ನಡಿ ನೋಡುವುದನ್ನು ಕಡಿಮೆ ಮಾಡು '
ಉತ್ತರ ಸಿಕ್ಕಿದೆ . ಸಮಾಧಾನವಿಲ್ಲ
ಕಂಡ ಕಂಡವರನ್ನು ಕೇಳುವುದು ತಪ್ಪಿಲ್ಲ
ಹಣೆ ಮೇಲೇನೋ ಇದೆ ಅಲ್ವಾ ?





                                           ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ

Wednesday, September 16, 2015

ತವರಿಗೆ ಬಾ ಗೌರಿ




ಚಿತ್ರಕೃಪೆ : ಅಂತರ್ಜಾಲ




ಹಬ್ಬದ ಹೊತ್ತಿನಲ್ಲಿ ಒಂದಷ್ಟು ನೆನಪುಗಳಿಗೆ ಮತ್ತೆ ಬಣ್ಣ ತುಂಬೋಣ . ಒಂದೆರಡು ದಶಕಗಳ ಹಿಂದೆ ಹೋಗೋಣ .

ಬಳೆ , ಬಿಚ್ಚೋಲೆ, ಮೊರದ ಜೊತೆ ಮುಂತಾದ  ಸಾಮಾನುಗಳನ್ನು ತರುವುದರೊಂದಿಗೆ ಗೌರಿ ಹಬ್ಬ ಶುರುವಾಗುತ್ತಿತ್ತು . ಕಪಾಟಿನ ಮೂಲೆಯಲ್ಲಿ ಪಂಚೆಯಲ್ಲಿ ಮುದುರಿ ಕುಳಿತಿರುತ್ತಿದ್ದ  ಬೆಳ್ಳಿಯ ಸಾಮಾನುಗಳು  (ಲಾಕರ್ನಲ್ಲಿಡೋ ಅಷ್ಟು ಬೆಳ್ಳಿ ಬಂಗಾರ ಇರಲಿಲ್ಲ ಆಗ) ಹೊರಬರುತ್ತಿದ್ದವು . ಬಟ್ಟಲುಗಳಿಗೆ ಅರಿಶಿನ ಕುಂಕುಮ ತುಂಬಿಸಿ , ಅನುಕೂಲ ತಟ್ಟೆ ಎಂದು ಕರೆಯಲ್ಪಡುವ ಒಂದು ದೊಡ್ಡ ಬೆಳ್ಳಿತಟ್ಟೆಯಲ್ಲಿ ಪೂಜೆ ಸಾಮನುಗಳನ್ನ ಅಣಿ ಮಾಡಿ ಇಡುತ್ತಿದ್ದೆವು. ಹಬ್ಬದ ಹಿಂದಿನ ರಾತ್ರಿ ಅಜ್ಜಿ ಒಮ್ಮೆ ತಯಾರಿಗಳನ್ನು ಪರೀಕ್ಷಿಸುತ್ತಿದ್ದಳು . ಮಾರನೆಯ ದಿನ ಬೆಳಿಗ್ಗೆ ಮೊಮ್ಮಕ್ಕಳು ಕಡ್ಡಾಯವಾಗಿ ಬೆಳ್ಳಿಯ ಗೆಜ್ಜೆ ಧರಿಸಿ ,  ಹೂ ಮುಡಿದು , ರೇಶಿಮೆಯ ಲಂಗ ಜಾಕೀಟು ತೊಟ್ಟುಕೊಳ್ಳಲೇ ಬೇಕಿತ್ತು . ಇದು ಅಜ್ಜಿಯ ಅಲಿಖಿತ ನಿಯಮ. ಹೀಗೆ ತಯಾರಾದ ಸವಾರಿ ಹಬ್ಬದ ದಿನ ನಸುಕಿನಲ್ಲೇ ಗುಡಿಗೆ ಹೊರಡುತ್ತಿತ್ತು . 

ಕೆಲವರು ಗೌರಿಯನ್ನು ಮನೆಯಲ್ಲೇ ಪೂಜಿಸಿದರೆ ಕೆಲವರಿಗೆ 'ಇಟ್ಟ ಮನೆ ಗೌರಿ' ಎಂಬ ಪಧ್ಧತಿ ಇದೆ. ಈ ಪದ್ಧತಿ ಇದ್ದವರು ಮನೆಯಲ್ಲಿ ಗೌರಿಯನ್ನು ಕೂಡಿಸುವುದಿಲ್ಲ. 'ಇಟ್ಟ ಮನೆಗೆ' ಹೋಗಬಹುದು  ಆದರೆ ಇಲ್ಲಿ ಹೆಣ್ಣು ಮಕ್ಕಳಿಗೆ ಕೆಲವು 'ಜಾಗತಿಕ' ಸಮಸ್ಯೆಗಳಿವೆ  ಉದಾಹರಣೆಗೆ ಅನ್ಯರ  ಮನೆಗೆ ಹೋದರೆ ಅವರು ತಾವು ಕಟ್ಟಿದ ಹೂವಿನ ಹಾರವನ್ನೇ ಮೇಲೆ ಹಾಕುತ್ತಾರೆ . ನೀವು ದೂರದಿಂದಲೇ ಪೂಜೆ ಮಾಡಿ ಎನ್ನುತ್ತಾರೆ.  ಅವರು ಹೇಳಿದ ಸಮಯಕ್ಕೇ ಪೂಜೆ. ಎಷ್ಟೋ ದಿನ ಕಷ್ಟ ಪಟ್ಟು, ವರ್ತಿ ಇಟ್ಟು ಮಾಡಿದ ನಮ್ಮ ಗೆಜ್ಜೆ ವಸ್ತ್ರ ವನ್ನು ಕೆಳಗೆ ಹಾಕಿ ತಮ್ಮದನ್ನೇ ಮೇಲೆ ಹಾಕುತ್ತಾರೆ . ಈ ಗೆಜ್ಜೆ ವಸ್ತ್ರದ ಬಗ್ಗೆ ಸುಶ್ರುತ ದೊಡ್ಡೇರಿ ತಮ್ಮ 'ಮೌನಗಾಳ ' ಬ್ಲಾಗಿನಲ್ಲಿ ಚಂದದ ಪ್ರಬಂಧ ಬರೆದಿದ್ದರು.

ಕೆಲವು ದೇವಸ್ಥಾನದಲ್ಲಿ ಗೌರಿಯನ್ನು ಕೂಡಿಸಿ ಅಲ್ಲಿನ ಪುರೋಹಿತರು ಪೂಜೆ ಮಾಡಿಸುತ್ತಾರೆ.ಮೇಲೆ ತಿಳಿಸಿದ ಸಮಸ್ಯೆಗಳಿಗೆ ಉತ್ತರವಾಗಿ ಅಮ್ಮನೂ ಅಂಥಾ ಒಂದು ದೇವಸ್ಥಾನಕ್ಕೆ ಹೋಗುತ್ತಿದ್ದಳು.ಅದೊಂದು ರಾಮ ದೇವಸ್ಥಾನ. ಪ್ರಾಂಗಣದಲ್ಲಿದ್ದ ಮಂಟಪದಲ್ಲಿ  ಮಣ್ಣಿನ ಗೌರಿ ಮತ್ತು ಅಲಂಕಾರದ ಗೌರಿ ಎಂದು ಕರೆಯಲ್ಪಡುವ  ೨-೩ ಅಡಿ ಎತ್ತರದ ಮರದ ಗೌರಿಯನ್ನು ಖುರ್ಚಿಯ ಮೇಲೆ ಕೂಡಿಸಿರುತ್ತಿದ್ದರು. ಮರದ ಗೌರಿಗೆ ಸೀರೆ ಉಡಿಸಿ , ಒಂದೆರಡು ಸರ ಹಾಕಿರುತ್ತಿದ್ದರು. ಆ ಗೌರಮ್ಮ ಎಷ್ಟು ಮುದ್ದಾಗಿದ್ದಳೆಂದರೆ ಪ್ರತೀ ವರ್ಷ ಅವಳನ್ನು ನೋಡಲು ನಾವು ಕಾತರದಿಂದ ಕಾಯುತ್ತಿದ್ದೆವು.  ನಮ್ಮ ಕಡೆ ಗೌರಿ ಎನ್ನುವುದಕ್ಕಿಂತ ಗೌರಮ್ಮ ಎನ್ನುವುದೇ ಹೆಚ್ಚು .

ದೇವಸ್ಥಾನದಲ್ಲಿ ಎಲ್ಲರೂ ಸಮಾನರು ಹಾಗಾಗಿ ಇಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದೇನೂ ಇರಲಿಲ್ಲ. ಇಲ್ಲಿನ ಸಮಸ್ಯೆಗಳು ಬೇರೆ ರೀತಿಯವು ಅಷ್ಟೇ.  ಮುದ್ದಾದ ಗೌರಿಯ ಎಡ ಬಲಕ್ಕೆ  ಮಂಟಪದ ಎರಡೂ ಬದಿ ೧೦-೧೫ ಜನ ಸಾಲಾಗಿ  ಕುಳಿತು ಪೂಜೆ ಮಾಡುವ ವ್ಯವಸ್ಥೆ ಮಾಡಿರುತ್ತಿದ್ದರು . ಇಟ್ಟ ವಿಗ್ರಹಕ್ಕೆ 'ಪ್ರಾಣ ಪ್ರತಿಷ್ಟಾಪನೆ' ಮಾಡುವುದು ಪೂಜೆಯ ಮುಖ್ಯ ಅಂಗ. ಹಾಗೆ ಮಾಡುವಾಗ ಜೋಯಿಸರು ಹೂವು ಅಕ್ಷತೆ ಹಿಡಿದು ಬಲ ಕೈಯಿಂದ ದೇವರನ್ನು ಸ್ಪರ್ಶಿಸಿಕೊಳ್ಳಿ ಎನ್ನುತ್ತಾರೆ . ೧೦-೧೫ ಜನ ಸಾಲಾಗಿ ಕುಳಿತ ಸಾಲಿನಲ್ಲಿ ಎಲ್ಲರೂ ಹೇಗೆ ಗೌರಿಯನ್ನು ಸ್ಪರ್ಶಿಸೋದು ? ಅದಕ್ಕೆ ಹಿಂದಿನವರು ಮುಂದಿನವರನ್ನು ಸ್ಪರ್ಶಿಸಿಕೊಳ್ಳಿ ಎನ್ನೋರು . ಬೇಗ ಬಂದು ಸಾಲಿಗೆ ಮೊದಲು ಕುಳಿತಿದ್ದರೆ ನಾನೇ ಗೌರಿಯನ್ನು  ಮುಟ್ಟ ಬಹುದಿತ್ತು ಎಂಬ ಆಸೆ ಬಹುತೇಕ ಹೆಂಗಸರದ್ದು . ಈ ರೀತಿಯ ಸ್ಪರ್ಧೆಗಳು ಒಗ್ಗಿ ಬರದ ಕಾರಣ ನಾನು ಇದರಲ್ಲಿ ಭಾಗವಹಿಸಿದ್ದು ಕಡಿಮೆ. ಆದರೆ ತಂಗಿಗೆ ಮಾತ್ರ ಅಮ್ಮನೇ ಮೊದಲನೇಯವಳಾಗಲಿ ಅನ್ನೋ ಆಸೆ. ೫.೩೦ಕ್ಕೆ ಪೂಜೆ ಶುರು ಎಂದರೆ ಇವಳು ಮೂರಕ್ಕೆ ಹೋಗಿ ಅಲ್ಲಿ ಮೊದಲ ಸೀಟು ಕಾಯ್ದಿರಿಸಿ  ಅಮ್ಮನನ್ನು ಗೌರಿಯ ಪಕ್ಕ ಪ್ರತಿಷ್ಟಾಪಿಸುವುದರಲ್ಲಿ ಯಶಸ್ವಿಯಾಗುತ್ತಿದ್ದಳು. ಕೆಲವು ವರ್ಷದ ನಂತರ ಇವಳಿಗಿಂತ ಜಾಣ ಹೆಂಗಸರು  ಬೇರೊಂದು ಉಪಾಯ ಮಾಡಿದರು. ಅವರ ಗಂಡಂದಿರ ಹತ್ತಿರ ಹಿಂದಿನ ದಿನ ರಾತ್ರಿಯೇ ಸಾಮಾನು ಕಳಿಸಿ ಮೊದಲ ಸೀಟನ್ನು ಕಾಯ್ದಿರಿಸಿಕೊಳ್ಳುತ್ತಿದ್ದರು.

ಎರಡು ಜೊತೆ ಬಾಗಿನಗಳನ್ನು ಜೋಡಿಸಿ ಒಂದನ್ನು ಗೌರಮ್ಮನಿಗೆ ಕೊಟ್ಟು ಮತ್ತೊಂದನ್ನು ಬೇರೆಯವರಿಗೆ ಕೊಡುವುದು ಪಧ್ಧತಿ.  ಈ ಬಾಗಿನ ಯಾರಿಗೆ ಕೊಡಬೇಕು ? ಹೋದವರ್ಷ ಯಾರಿಗೆ ಕೊಟ್ಟಿದ್ದೆ ? ನನಗೆ ಹೋದವರ್ಷ ಯಾರು ಕೊಟ್ಟಿದ್ದರು ? ಏನೇನು ಕೊಟ್ಟಿದ್ದರು ? ಈ ಬಾರಿ ಅವರಿಗೇ ಕೊಡಲಾ ?  ಗಂಡಸರಿಗೆ ಚುನಾವಣೆಯ ಫಲಿತಾಂಶ ಎಷ್ಟು ಮುಖ್ಯವೋ ಹೆಂಗಸರಿಗೆ ಈ ಪ್ರಶ್ನೆಗಳು ಅಷ್ಟೇ ಮುಖ್ಯ . ಅಳೆದು ತೂಗಿ  ಯಾರಿಗೋ ಬಾಗಿನ ಕೊಟ್ಟು, ಮನೆಗೆ ಬಂದು ,ಕಾಯಿ ಹೋಳಿಗೆ ಮಾಡಿ ತಿಂದರೆ ಗೌರಿಹಬ್ಬದ ಒಂದು ಮಜಲು ಮುಗಿದಂತೆ.  ಗೌರಿಗೆ ಉಪ್ಪಕ್ಕಿ ಇಟ್ಟು ಮತ್ತೆ ಅವಳನ್ನು ಗಂಡನ ಮನೆಗೆ ಕಳಿಸೋದು ಎರಡನೇ ಹಂತ .

ಕೈಲಾಸದಲ್ಲಿದ್ದ  'ಆರ್ಧ್ರ ಗರುವದ' ಹೆಣ್ಣು ಗೌರಿ ಬುವಿಯಲ್ಲಿದ್ದ ತವರಿಗೆ ಹೋಗಬೇಕೆಂದು ಆಸೆ ಪಡುತ್ತಾಳೆ.  ಗಂಗೆ ಇದ್ದೂ ಗೌರಿಯನ್ನು ಬಿಡಲೊಲ್ಲದ ಪರಶಿವ ಅದೆಷ್ಟೋ ಪುಸಲಾಯಿಸಿದ ಮೇಲೆ ಹೋಗಿ ಬಾ , ಆದರೆ ಮೂರು ದಿನ , ಐದು ದಿನ ತಪ್ಪಿದರೆ ಏಳು ದಿನದ ಒಳಗೆ ನೀನು ಹಿಂತಿರುಗಬೇಕು ಎನ್ನುತ್ತಾನೆ . ಅದಕ್ಕೆ ಗೌರಮ್ಮನನ್ನು ಏಳು ದಿನಗಳಿಗಿಂತ ಹೆಚ್ಚಿಗೆ ಇಟ್ಟುಕೊಳ್ಳಲ್ಲ ಅಂತ ನಮ್ಮಮ್ಮ ಕಥೆ ಹೇಳೋಳು.  ದೈವಕ್ಕೇ ತವರಾಗುವ ಕಲ್ಪನೆಯೇ ಎಷ್ಟು ಸೊಗಸಾಗಿದೆ! ಮಂಗಳವಾರ ಶುಕ್ರವಾರ ಕಳುಹಿಸುವಂತಿಲ್ಲ. ಮನೆಗೆ ಬಂದ ಮಗಳು ಇನ್ನೊಂದೆರಡು ದಿನ ಇದ್ದರೆ ಚೆನ್ನಿತ್ತು ಎಂಬ ಆಸೆ. ಮೂರು ಅಡಿಯ ಮುದ್ದು ಗೌರಿಗೆ ಅಮ್ಮ ಉಪ್ಪು ಅಕ್ಕಿಯನ್ನು ಮಡಿಲಲ್ಲಿ ಇಟ್ಟರೆ 'ಕಳಿಸೋದು ಬೇಡ ಬಿಡಮ್ಮ , ಇವಳಿಲ್ಲೇ ಇರಲಿ ' ಎಂದು ನಮಗೆ ಅನ್ನಿಸುತ್ತಿತ್ತಾ ? ಗೊತ್ತಿಲ್ಲ .

ಹೆಂಡತಿಯನ್ನು ಬಿಟ್ಟಿರಲಾರದ ಶಿವ 'ನಿನ್ನಮ್ಮ ಅಲ್ಲೇ ಕುಂತಾಳು , ಹೋಗಿ ಕರೆ ತಾ ' ಎಂದು ಗಣಪನನ್ನು ಗೌರಿಯ ಹಿಂದೆಯೇ ಕಳಿಸುತ್ತಾನಂತೆ. ಗೌರಿ ಹಬ್ಬದ ಸಂಜೆ ಪೇಟೆಗೆ ಹೋಗಿ ಮೂರ್ತಿ ಮಾಡುವವನಿಗೆ ಅಮ್ಮ ಕೊಟ್ಟ ದುಡ್ಡು ಕೊಟ್ಟು , ಅವನು ಕೊಟ್ಟ ಗಣಪನನ್ನು ಅಕ್ಕಿ ತುಂಬಿದ  ತಟ್ಟೆಯಲ್ಲಿಟ್ಟು ತರುತ್ತಿದ್ದೆವು. ನಂತರದ ದಿನಗಳಲ್ಲಿ ಅಮ್ಮ ಯಾರಿಂದಲೋ ಪರಸರ ಗಣಪತಿಯನ್ನು ಮಾಡಿಸಲು ಶುರು ಮಾಡಿ ಪೇಟೆಗೆ ಹೋಗುವುದು ನಿಂತುಹೋಯಿತು. ಹಳೆಯ ಕಾಲದ ದೊಡ್ಡ ಮರದ ಖುರ್ಚಿ ಗಣಪನ ಮಂಟಪವಾಗುತ್ತಿತ್ತು . ಸುತ್ತ ಮಾವಿನ ತೋರಣ , ಬಾಳೆಯ ಕಂಬ , ರಂಗೋಲಿ , ಅಲಂಕಾರ ಏನು ಸಡಗರ...  ಮನೆಗೆ ಯಾರೋ ಅತಿಥಿ ಬಂದಂತೆ.  'ಗಜಮುಖನೇ ಗಣಪತಿಯೇ ..' ಎಂದು ಎಲ್ಲ ಸ್ಪೀಕರುಗಳು  ಒಟ್ಟಿಗೆ ಹಾಡುವುದರೊಂದಿಗೆ ಹಬ್ಬ ಶುರುವಾಗುತ್ತಿತ್ತು. ಬರಾಕ್ನಿಂದ ಬಿನ್ ಲಾಡೆನ್ ವರೆಗೆ ಎಲ್ಲರೂ ಗಣಪತಿಯ ಪೆಂಡಾಲಿನಲ್ಲಿ ಕಾಣುತ್ತಿದ್ದರು , ಈಗಲೂ ಕಾಣುತ್ತಾರೆ.  ಎಲ್ಲರನೊಳಗೊಂಡವನು ಬೆನಕ.  ಚಕ್ಕುಲಿ , ಕಡುಬು, ಮೋದಕ... ಅದೆಷ್ಟು ಬಗೆಯ ತಿಂಡಿಗಳು. ಸಾಲು ಸಾಲು ಮನೆಗಳ ಪೂಜೆ ಒಪ್ಪಿಕೊಂಡ ಜೋಯಿಸರು ಬೆಳಗಿನಜಾವಕ್ಕೇ ಬರುತ್ತಿದ್ದರು. ಗಣಪ ಇಷ್ಟ ಆದರೆ ಬೇಗ ಏಳೋದು ಕಷ್ಟ!  ತಂಗಿ ಮಾತ್ರ ಮೊದಲೇ ಗಣಪನ ಮುಂದೆ ಕೂತಿರೋಳು. ಹಬ್ಬದೂಟವಾಗಿ ಒಂದು ರೌಂಡ್ ನಿದ್ದೆ ತೆಗೆಯುತ್ತಿದ್ದಂತೆ ಸಣ್ಣ ಸಣ್ಣ ಡಬ್ಬಗಳನ್ನು ಕೈಲಿ ಹಿಡಿದ ಮಕ್ಕಳ ಕೂಗು ಕೇಳೋದು . ೧೧, ೨೧, ೧೦೧ ಹೀಗೆ ಇಂತಿಷ್ಟು ಗಣಪನನ್ನು ನೋಡಿದರೆ ಇಷ್ಟಾರ್ಥ ಸಿಧ್ಧಿ, ವಿಧ್ಯಾರ್ಥಿಗಳಿಗೆ ವಿಧ್ಯೆ ಎಂದು ಯಾರೋ ಹೇಳಿದ್ದರೋ ಕಾಣೆ.  'ಗಣಪತಿ ಕುಂಡ್ರುಸಿರೇನ್ರಿ' ಎಂದು ಗೇಟಿನಲ್ಲೇ ನಿಂತು ಕೂಗೋರು.ಹೌದೆಂದರೆ ಗುಂಪಿನೊಡನೆ ಒಳಗೆ ಬಂದು 'ಶ್ರೀ ಶ್ರೀ ವಿಧ್ಯಾ ಗಣಪತಿ ಕೀ ಜೈ ' ಎಂದು ಕೂಗಿ ತಮ್ಮ ಡಬ್ಬದಿಂದ ತೆಗೆದ  ಅಕ್ಷತೆ ಹಾಕಿ ಹೊರಡೋರು.  ಕೆಲವು ಕಿಲಾಡಿ ಮಕ್ಕಳು ಮನೆಯವರು ಗಣಪನ ಮುಂದಿಟ್ಟಿದ್ದ ಎಲ್ಲ ಅಕ್ಷತೆಯನ್ನೂ ತಮ್ಮ ಡಬ್ಬಕ್ಕೆ ಸುರುವಿಕೊಂಡು ಹೋಗಿ ಬಿಡೋರು. ಸಂಜೆ ಸೂರ್ಯ ಜಾರುತ್ತಿದ್ದಂತೆ ಅಜ್ಜಿ ಎಚ್ಚರಿಸೋಳು 'ಆಕಾಶದ ಕಡೆ ನೋಡಲೇ ಬೇಡಿ', ಎಲ್ಲಿಂದಲೋ ಶಮಂತಕೋಪಾಖ್ಯಾನದ ಕಥೆ ಕೇಳಿ ಬರೋದು.ಅಷ್ಟರಲ್ಲಿ ರಾತ್ರಿಯಾಗಿ ಗಣಪನನ್ನು ವಾಪಾಸ್ ಕಳಿಸುವ  ತಯಾರಿ ಶುರುವಾಗುತ್ತಿತ್ತು .  ಮಾಡಿದ ಅಲಂಕಾರ ,ಗೆಜ್ಜೆ ವಸ್ತ್ರ , ಖಾಲಿ ಖುರ್ಚಿಯನ್ನು ನಮ್ಮ ಪಾಲಿಗೆ ಬಿಟ್ಟು ಸರಿಯಾಗಿ  ಮಾತನಾಡುವ ಮೊದಲೇ, ಬಂದ ಅತಿಥಿ  ಹೊರಟು ಬಿಡುತ್ತಿದ್ದ.

ಈ ಚಿತ್ರವನ್ನು ಶತಾವಧಾನಿ ಗಣೇಶರು ಸುಂದರ ಕವಿತೆಯನ್ನಾಗಿಸಿದ್ದರು. ಬಣ್ಣ ತುಂಬಲು ಕುಳಿತರೆ ನೆನಪುಗಳಿಗೆ ಬರವಿಲ್ಲ. 
 ಗಣಪ ಬರುವನೆಂಬ ಸಂಭ್ರಮ ಈಗಲೂ ಇದೆ. ತವರಿಗೆ ಬರುವ ಗೌರಿಯನ್ನು ಈಗಲೂ ಕಾಯುತ್ತೇವೆ. ನಮ್ಮೂರಿನ ಮುದ್ದುಗೌರಿಯಷ್ಟು ಸುಂದರಿಯನ್ನು ನಾನಿನ್ನೂ ನೋಡಿಲ್ಲ .  ಒಂದೆರಡು ವಾರಗಳ ಹಿಂದೆ ಸಂಧ್ಯಾರಾಣಿಯವರು ಬರೆದಂತೆ ಕಾಲ ಬದಲಾದರೂ ಗೌರಮ್ಮ ಬರುತ್ತಾಳೆಂಬ ಸಡಗರ ಕಡಿಮೆಯಾಗಿಲ್ಲ , ಉಪ್ಪಕ್ಕಿಯನಿಟ್ಟು  ಬಾಳು ಬಂಗಾರವಾಗಲಿ  ಮಗಳೇ, ಬೇಗ ಮತ್ತೆ ಬಾ  ಎಂದು ಹರಸುವ ತಾಯಿ ಬದಲಾಗಿಲ್ಲ.

                              ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ .


Thursday, September 10, 2015

ರೇಲ್ವೆ ನಿಲ್ದಾಣದಲ್ಲಿ


ಚಿತ್ರಕೃಪೆ :ಅಂತರ್ಜಾಲ




ಮುಳ್ಳಬೇಲಿಯಲೊಬ್ಬ ಹಸನ್ಮುಖಿ
ಗಂಧ ಗಾಳಿಯ ನಡುವೆ ತೂಗುತ್ತಾಳೆ
ತೊನೆಯುತ್ತಾಳೆ ಹಾಡೊಂದ ಗುನುತ್ತಾಳೆ
ಅವಳ ಹೆಸರು ಲೋಕಕ್ಕೆ ತಿಳಿದಿಲ್ಲ
ಅವಳ ಹಾಡಿಗೆ  ಸೊಲ್ಲಿಲ್ಲ .

ಬೇಲಿ ದಾಟಿದ ನಿಶ್ಯಬ್ಧ ಹಾಡ ತನ್ನದಾಗಿಸಿಕೊಂಡ ಕವಿಯದಕೆ ಮಲ್ಲಿಗೆ ಘಮ ನೀಡುತ್ತಾನೆ .

ಅರೇ ! ಹೀಗೂ ಬರೆಯಬಹುದೇ ? ಇದರ ಬಗ್ಗೆಯೂ  ಬರೆಯಬಹುದೇ ?'  ಎಂಬುದು ಕೆಲವು ಕವಿತೆಗಳನ್ನು ಕೇಳಿದಾಗ ನಮ್ಮ ಮೊದಲ ಅನಿಸಿಕೆಯಾಗಿರುತ್ತದೆ. ಕವಿಮನಸಿಗೆ ಅದೆಲೆಲ್ಲಿ ಕವಿತೆಗಳು ಕಾಣುತ್ತವೋ ? ಬಲ್ಲವರಾರು.

ಕೆ.ಎಸ.ಏನ್. ಅವರ ತೆರೆದ ಬಾಗಿಲು ಸಂಕಲನದ ಪ್ರಸಿಧ್ಧ ಕವಿತೆ 'ರೇಲ್ವೆ ನಿಲ್ದಾಣದಲ್ಲಿ '.  ಇತ್ತೀಚಿಗೆ ಕವಿಯ ಜನ್ಮ ಶತಮಾನೋತ್ಸವ ಸಂಧರ್ಭದಲ್ಲಿ ಬಹು ಚರ್ಚಿತವಾದ ಕವಿತೆ. ಬದುಕಿನ ಪ್ರತೀ ನಿಲ್ದಾಣಕ್ಕೂ ಒಂದು ಗುರುತಿದೆ ಆ ಗುರುತನ್ನು ಹಾಡಾಗಿ ಹಾಡಬಹುದು ,ಕಥೆಯಾಗಿ ಹೇಳಬಹುದು ಅಥವಾ ಮೌನವಾಗಿ ಬದುಕಿ ಬಿಡಬಹುದು.  ಹಾಗೆ ಮೌನವಾಗಿ ಬದುಕುವ ಜೀವಗಳ ಪಾಡನ್ನು ಕವಿ ಹಾಡುತ್ತಾರೆ. ಮೊದಲ ದಿನ ಮೌನ , ರೇಲ್ವೆ ನಿಲ್ದಾಣದಲ್ಲಿ ಅಂತಹ ಮೌನದ ಹಾಡುಗಳೆನಿಸುತ್ತವೆ.

ತವರು ತೊರೆದು ಮತ್ಯಾವುದೋ ಮನೆಯನ್ನು ಒಪ್ಪಿಕೊಂಡು ಅಲ್ಲಿನವರನ್ನು ಅಪ್ಪಿಕೊಳ್ಳುತ್ತಿರುವ ಹೆಣ್ಣಿಗೆ ಬಸಿರು , ಬಾಣಂತನವೆಂಬುದು ಮುಂದಿನ ಹಂತ . ಮದುವೆಯ ನಂತರ ಮೊದಲ ಬಾರಿಗೆ ಮತ್ತೆ ತಿಂಗಳಾನುಗಟ್ಟಲೆ ತವರ ಸುಖವನನುಭವಿಸುವ ಅವಕಾಶ. ಹಾಗೆಂದು ಇಲ್ಲಿ ಸಮಸ್ಯೆಗಳಿಲ್ಲವೆಂದಲ್ಲ. ಆ ಮನೆಯಲ್ಲಿ ಅತ್ತೆ ಮಾವ ಹೇಳಿದಂತೆ ಕೇಳಬೇಕು, ಇಲ್ಲಿ ಅಪ್ಪ ರಿಯಾಯಿತಿ ತೋರಿದರೂ ಅಮ್ಮನ ಮಾತನ್ನು ಪಾಲಿಸಲೇ ಬೇಕು . ಬಾಣಂತನದ ಪಥ್ಯೋಪಚಾರಗಳೆಲ್ಲವೂ ಅವಳ ಸುಪರ್ದಿಯಲ್ಲೇ . ಮೊದಲ ತಿಂಗಳು ಇದನ್ನು ಒಪ್ಪಿಕೊಂಡ ಬಾಣಂತಿಗೆ ಎರಡನೇ ತಿಂಗಳ ಹೊತ್ತಿಗೆ ಅದೇನೋ ಸಿಡಿಮಿಡಿ. ಮನೆಯಲ್ಲೇ ಇರಬೇಕಾದ ಸ್ಥಿತಿ,ನಿದ್ದೆ ಇಲ್ಲದ ರಾತ್ರಿಗಳು ಅವಳನ್ನು ಕಂಗಾಲಾಗಿಸುತ್ತವೆ. ಇದಕ್ಕೆ  ಸನ್ನಿ ಎಂಬ ವೈದ್ಯಕೀಯ ನಾಮವೂ ಇದೆ.  ಅಮ್ಮನಿಗೂ ಅವಳ ಉಪಚಾರ ಮಾಡಿ ಆಗೀಗ ಸುಸ್ತಾಗುವುದುಂಟು. ಆಗೆಲ್ಲ ಅಮ್ಮನ ವರಾತ ಶುರುವಾಗುತ್ತದೆ "೨೫ ದಿನದ ಹಸಿ ಬಾಣಂತಿ ಅಮ್ಮನ ಮನೆ ಬಿಟ್ಟು ಬಂದು ಹಾಸಿಗೆ ಹಿಡಿದ ನಿಮ್ಮಜ್ಜಿ ಸೇವೆ ಮಾಡಿದ್ದೆ.ಶಕ್ತಿ ಇದ್ದಾಗ ನನ್ನನ್ನು ಹುರಿದು ಮುಕ್ಕಿದ ಅತ್ತೆಗೆ ಕೊನೆಗಾಲದಲ್ಲಿ ಆಗಿದ್ದು ನಾನೇ." ಅಂತಲೋ ಇಲ್ಲ "ನಿಮ್ಮಜ್ಜಿ ನನಗೆ ದಿನಕ್ಕೆ ಒಂದೇ ಲೋಟ ನೀರು ಕೊಡುತ್ತಿದ್ದದ್ದು ಗೊತ್ತಾ ? ಗುಟುಕು ಗುಟುಕಾಗಿ ಕುಡಿಬೇಕಿತ್ತು. ಕತ್ತಲೆ ಕೋಣೆಯಿಂದ ಹೊರ ಬರುತ್ತಿದ್ದದ್ದು  ದಿನಕ್ಕೆರಡೇ ಬಾರಿ" ಎಂದು ಅವಳ ಮಡುಗಟ್ಟಿದ ದುಃಖವನ್ನು ಹೇಳಿಕೊಳ್ಳುತ್ತಾಳೆ . ಮೊದಲೇ ಖಿನ್ನಳಾಗಿರುವ ಬಾಣಂತಿ ಸಿಡುಕುತ್ತಾಳೆ ಇಲ್ಲವೇ ಮತ್ತಷ್ಟು ಖಿನ್ನಳಾಗುತ್ತಾಳೆ. ಆದರೆ ಅಮ್ಮ ಮಗಳ  ಈ ನೋವು ಶಾಶ್ವತವಲ್ಲ. ಇದು  ಆ ತಿಂಗಳ ಆ ವಾರದ ಕಥೆ ಮಾತ್ರ. ಮಗುವಿನ ಮೇಲಾದ ಸಣ್ಣ ಸಾಸಿವೆಯಷ್ಟಿರುವ ಕೆಂಪಾದ ಗುಳ್ಳೆ , ಏಳುವ ಹೊತ್ತಾದರೂ ಏಳದ ಕಂದ ಕಡೆಗೆ ಒಂದು ದಿನ ಮಗು ಕಕ್ಕ ಮಾಡಲಿಲ್ಲವೆಂಬ ವಿಷಯವೂ ...ಮತ್ತೆ ಮನೆಯವರಲ್ಲರನ್ನೂ ಬೆಸೆಯುತ್ತದೆ. ಇತ್ತೀಚಿಗೆ ಈ ಪ್ರಕರಣವನ್ನು ಸೊಗಸಾಗಿ ಕಟ್ಟಿ ಕೊಟ್ಟಿದ್ದು  ಕಥೆಗಾರ ಪದ್ಮನಾಭ ಭಟ್ ಶೆವ್ಕಾರ್ , ಕೇಪಿನ  ಡಬ್ಬಿ  ಸಂಕಲನದ 'ಚೇಳು ಕಚ್ಚಿದ ಗಾಯ ' ಕಥೆಯಲ್ಲಿ . ಮನೆಯ ನಾಲ್ಕು ಮೂಲೆಗಳಲ್ಲಿ ಕೂತು ಕೊರಗುತ್ತಿದ್ದ ಜೀವಗಳನ್ನು ಮತ್ತೆ ಬೆಸೆಯುವುದು ಮಗುವಿಗೆ ಚೇಳು ಕಚ್ಚಿರಬಹುದಾದ ಸಾಧ್ಯತೆ . ಬೆಸೆಯುವ ಶಕ್ತಿ ನೋವಿಗಿರುವಷ್ಟು ನಲಿವಿಗಿಲ್ಲ.

ತೊಟ್ಟಿಲ ಹೊತ್ಕೊಂಡು ತೌರ ಬಣ್ಣ ತೊಟ್ಟ ಬಾಣಂತಿಯ ಕಣ್ಣಲ್ಲಿ ಜಿನುಗಿ ಜಾರದೇ ಉಳಿದ  ಕಂಬನಿಯ ಹಾಡು, ರಾತ್ರಿಗಳ ನಿದ್ದೆಯನ್ನು ಬದಿಗಿಟ್ಟು, ಲಾಲಿ ಹಾಡಿದ ಅಮ್ಮನ  ಕಣ್ಣಲ್ಲಿ  ಧಾರೆಯಾಗಿ ಹರಿದ ಹಾಡು. ನಾಳೆಯಿಂದ "ಅಮ್ಮಾ ಪಾಪು ಅಳ್ತಾ ಇದೆ ಎತ್ತೆ " ಎನ್ನಲು ಅಮ್ಮನಿಲ್ಲ.  ಅಲ್ಲಿ ಅಮ್ಮನಿಗೆ ಮಂಚದಲ್ಲಿ ಮಗಳಿಲ್ಲ, ಕರುಳ ಬಳ್ಳಿಯ ತೊಟ್ಟಿಲಿಲ್ಲ. ನರಸಿಂಹಸ್ವಾಮಿಗಳು ಇವರಿಬ್ಬರ ಪಾಡನ್ನು ತಮ್ಮ ಕವಿತೆಯಲ್ಲಿ ಚಿತ್ರಿಸುತ್ತಾರೆ. 
ಈ ಕವಿತೆಯ ಸಾಲುಗಳೆಬ್ಬಿಸಿದ ಕೆಲ ತರಂಗಗಳು ಕೆಳಗಿವೆ :

ಕವಿತೆ ಪ್ರಾರಂಭವಾಗುವುದೇ ಬದುಕಿನ ನಿಲ್ದಾಣಗಳನ್ನು ಎಲ್ಲ ಬಗೆಯಲ್ಲೂ  ಹೋಲುವ ರೇಲ್ವೆ ನಿಲ್ದಾಣದಲ್ಲಿ. ತಾಯಿಗೆ, ರೈಲು ಹತ್ತಿದ ಮಗಳಿಗೆ ಎಷ್ಟು ಜಾಗ್ರತೆ ಹೇಳಿದರೂ ಸಾಲದು .  ಮೊನ್ನಿನ ತನಕ ಬೊಂಬೆಯನ್ನು ಮಗುವಾಗಿಸಿ ಆಡುತ್ತಿದ್ದವಳು ನೆನ್ನೆ ಶ್ರಿಮತಿಯಾಗಿ ಇಂದು ತಾಯಾಗಿದ್ದಾಳೆ . ಈ ಬೊಮ್ಮಟೆಯನ್ನು ನನ್ನ ಗೊಂಬೆ ಸಲಹಬಲ್ಲಳೆ ?  ತಾಯಿ ಕೂಗುತ್ತಾಳೆ ,
"ಎಲ್ಲಿದ್ದಿಯೇ ಮೀನಾ "

ತವರ ನೀರ ತೊರೆದು ಹೊರಟವಳ ಹೆಸರು ಮೀನಾ !

ಪ್ರಯಾಣಕ್ಕೆ ಹೊರಟವರಿಗೆಲ್ಲ ಕಾಡುವ ಮೊದಲ ಪ್ರಶ್ನೆ 'ಏನನ್ನೋ ಮರೆತಂತಿದೆ ?' ಇದು ನಿಲ್ದಾಣದಲ್ಲಿ ನಿಂತಿರುವ ತಾಯಿಯ ಪ್ರಶ್ನೆ ಕೂಡ. ತಾಯಿ ಮಗಳು ಇಬ್ಬರೂ ಇಲ್ಲಿ ಸಮಾನ ದುಃಖಿಗಳೇ , ಯಾರು ಯಾರಿಗೆ ಸಮಾಧಾನ ಮಾಡಬೇಕು ? ಎಂಬ ಪ್ರಶ್ನೆಗಿಲ್ಲಿ ಉತ್ತರವಿಲ್ಲ.

ಏನನ್ನೋ ಮರೆತಂತಿದೆ ಎನ್ನುವುದು  ಪಯಣ ಮುಂದೂಡುವ ತಾಯಿಯ ಹುನ್ನಾರವೂ ಆಗಿರಬಹುದು.ಅದು ಕಾರ್ಯ ಸಾಧಿಸದೇ ಹೋದಾಗ ತಾಯಿ ಹೊಸದೊಂದು ಕಾರಣ ಹುಡುಕುತ್ತಾಳೆ . ಮಗುವಿಗೆ ದೃಷ್ಟಿ ಬೊಟ್ಟಿಟ್ಟು
'ಮೈ ಬಿಸಿಯಾಗಿದೆಯಲ್ಲೆ
ಹೊರಡುವ ಸಮಯಕ್ಕೆ !'

ಎನ್ನುತ್ತಾಳೆ . ಅಷ್ಟರಲ್ಲಿ ಸಿಳ್ಳು ಹಾಕಿ ಹೊರಟ ಕಿಟಕಿಯ ಜೊತೆ ಓಡುತ್ತಾಳೆ, ಇನ್ನೂ ಒಂದಷ್ಟು ಹೊತ್ತು ಮಗಳನ್ನು , ಮೊಮ್ಮಗುವನ್ನು ಕಾಣುವ ಆಸೆಯಿಂದ . ಆದರೆ ಅಷ್ಟರಲ್ಲಿ ಹಬ್ಬಿದ ಎಂಜಿನ್ನಿನ ಸದ್ದಿನ  ನಡುವೆ ಉಳಿದ ಕೂಗು
'ಎಲ್ಲಿದಿಯೇ ಮೀನಾ
ಎಲ್ಲಿದ್ದೀಯೇ?'

ಕಿಡಿಯುಗುಳುವ ಬದುಕ ಬಂಡಿಯ ಕಿಡಿ ಒಳ ಬೀಳದಂತೆ ಕಿಟಕಿ ಮುಚ್ಚಿಕೋ ಎನ್ನುತ್ತಾಳೆ ತಾಯಿ . ಎಲ್ಲ ಕಿಡಿಗಳಿಂದ ನಿನ್ನನ್ನೂ , ಕಂದನನ್ನೂ ಕಾಪಾಡಿಕೋ ಎಂದೇ ? ಅವಳ ಕಣ್ಣಿನ ಕಿಡಿ ಮಗಳಿಗೆ ಕಾಣದಿರಲೆಂದೇ ? ಪದವಿಲ್ಲದ ಹಾಡುಗಳಿಗೆ ಶಬ್ಧವೂ ಬೇಕಿಲ್ಲ . 

ಕಿಡಿಯುಗುಳುವ ಬಂಡಿ , ಪೆಟ್ಟಿಗೆಯ ಜೊತೆಗೆ ಹಾಸಿಗೆಯನ್ನೂ ಹೊತ್ತೊಯ್ಯಬೇಕಾದ ಪಯಣ ಈಗಿಲ್ಲ.  ತಾಯಿಯೇ ಮಗಳಿರುವ ದೇಶಕ್ಕೆ ಹೋಗಿ ಅಲ್ಲೇ ಬಾಣಂತನ ಮುಗಿಸಿ ಬರುತ್ತಿರುವುದು  ಸಾಮಾನ್ಯವಾಗಿದೆ . ರೇಲ್ವೆನಿಲ್ದಾಣವೀಗ ವಿಮಾನ ನಿಲ್ದಾಣವಾಗಿದೆ. ಬದಲಾಗದಿರುವುದು ತಾಯಿ ಮತ್ತು ಮೀನಾ ಮಾತ್ರ !

Thursday, September 03, 2015

ಒಂದಷ್ಟು ಸ್ವಾರ್ಥದ ಕಥೆಗಳು



ಚಿತ್ರ ಕೃಪೆ : ಅಂತರ್ಜಾಲ



ಈ ಕಥೆಗಳಲ್ಲಿ ಯಾವುದೇ ಹೊಸತನವಿಲ್ಲ. ಅವೇ ಸವಕಲು ಕಥೆಗಳನ್ನು ಹೇಳಿ ಪ್ರಯೋಜನವೆನೆಂಬ ಪ್ರಶ್ನೆಯನ್ನು ಮೀರಿ ಇವನಿಲ್ಲಿಗೆ ತಂದಿದ್ದೇನೆ. 
ಸೂಚನೆ : ಇವ್ಯಾವೂ ಕಾಲ್ಪನಿಕ ಘಟನೆಗಳಲ್ಲ

ನೀರು ಉಳಿಸಿ. ಈ ಮಾತು ಎಲ್ಲೆಡೆ ಕೇಳಿ ಬರಲು ಶುರುವಾಗಿ ದಶಕಗಳೇ ಸಂದವು. ಓದಿಕೊಂಡ ಎಲ್ಲರೂ ಈ ಮಾತನ್ನು ಕೇಳಿರುತ್ತಾರೆ.
೧. ಅದೊಂದು ಸಾಫ್ಟ್ವೇರ್ ಕಂಪನಿ. ತಾಪಮಾನವನ್ನು ಸದಾ ೨೫ರ ಆಸುಪಾಸಿನಲ್ಲಿ ನಿರ್ವಹಣೆ ಮಾಡಲು ಯಂತ್ರಗಳಿವೆ ಒಳಗಿನ ಮನುಷ್ಯರ ಮನಸ್ಸು ಮಾತ್ರ ಸದಾ ಉಬ್ಬರಕ್ಕೆ ಸಿಕ್ಕಿದ ಸಮುದ್ರ. ಅಲ್ಲಿನ ಎಲ್ಲರಿಗೂ ಪ್ರಚಲಿತ ವಿದ್ಯಮಾನಗಳ ಅರಿವಿದೆ ಆದರೆ ನೀರನ್ನು ಹೇಗೆ ಬಳಸ ಬೇಕೆಂಬುದು ಮರೆತು ಹೋಗಿದೆ. ಕಛೇರಿ ತಲುಪಲು ೨ ಘಂಟೆಯ ಪ್ರಯಾಣಿಸಿದ ನಂತರ ಮುಖ ತೊಳೆಯಲು ಬಂದ ತರುಣಿ ಬರೋಬ್ಬರಿ  ೫ -೧೦ ನಿಮಿಷ ನಲ್ಲಿಯ ನೀರನ್ನು ಹರಿಸುತ್ತಾಳೆ . ಮಧ್ಯೆ ಅದನ್ನು ನಿಲ್ಲಿಸುವ ಗೋಜಿಗೆ ಅವಳು ಹೋಗುವುದಿಲ್ಲ. ಫ್ರೆಶ್ ಆದಮೇಲೆ ಅಲ್ಲೇ ಇಟ್ಟ ಟಿಶ್ಯೂ ರಾಶಿಯಿಂದ ಅನಾಮತ್ತಾಗಿ ನಾಲ್ಕೈದನ್ನು ಎಳೆದು ಒಂದೆರಡನ್ನು ಬೀಳಿಸಿ ಮುಖ ಒರೆಸಿ ಅವಿಷ್ಟನ್ನೂ ಕಸದ ಬುಟ್ಟಿಗೆ ಎಸೆದು ಮತ್ತೊಂದನ್ನು ತೆಗೆದು ಕೈ ಒರೆಸಿ ಹೊರಡುತ್ತಾಳೆ.  ಬೀಳಿಸಿದ ಒಂದೆರಡನ್ನು ತೆಗೆಯುವ ಕೆಲಸ ಹೌಸ್ ಕೀಪಿಂಗ್ ನವರದ್ದು .

೨. ಅವಳು  ವಿಜ್ಞಾನದ ವಿಧ್ಯಾರ್ಥಿ. ದೇಶದ ದೊಡ್ಡ ನಗರಗಳಲ್ಲಿ ಉತ್ತಮವೆಂದು ಹೆಸರು ಮಾಡಿದ ಶಾಲೆಯಲ್ಲಿ ಓದಿದವಳು.ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳಿಸಿದ ಜಾಣೆ. ಪ್ರತಿಷ್ಟಿತ ಐ.ಟಿ. ಕಂಪನಿಯ ಉದ್ಯೋಗಿ. ಮೊದಲ ತರಗತಿಯ ಮಗನ ಓದಿಗೆ ಗೂಗಲ್ ಜಾಲಾಡಿ ಅತ್ಯುತ್ತಮವಾದ ವಿಧಾನದಲ್ಲಿ ಅವನಿಗೆ ಪಾಠ ಮಾಡುತ್ತಾಳೆ. ಮೊದಲೇ ಮುನಿಸಿಕೊಂಡಿರುವ ಮಳೆರಾಯ ಮೊನ್ನೆ ಒಂದು ದಿನ ಒಂದರ್ಧ ಗಂಟೆ ಸುರಿದಿದ್ದಕ್ಕೆ , "ಅಯ್ಯೋ ಏನು ಮಳೆನಪ್ಪ , ಎಲ್ಲಾ ಕಡೆ ರಾಡಿಯಾಗುತ್ತೆ " ಅಂತಾಳೆ.

೩. ನೀರಿನ ಕೆಮಿಕಲ್ ಫಾರ್ಮುಲಾದ ಬಗ್ಗೆ ಮಗನಿಗೆ ಪಾಠ ಹೇಳುವ ತಾಯಿ , ಪಾತ್ರೆ ತೊಳೆಯಲು ನಿಂತರೆ ನಲ್ಲಿ ಮಾತ್ರ ಫುಲ್ ಸ್ಪೀಡಿನಲ್ಲಿ . ಅವಳಿಗೆ ತಕ್ಕ ಮಗ.

೪. ಪೇಪರ್ ನಲ್ಲಿ ಆ ಹಳ್ಳಿಯ ಬಳಿ ಪ್ಲಾಸ್ಟಿಕ್ ಕಸದಿಂದಾಗಿ ಆ ಖಾಹಿಲೆ ಹರಡುತ್ತಿದೆಯಂತೆ.  ಹಸುವಿನ ಹೊಟ್ಟೆಯಲ್ಲಿ ಮೂರ್ನಾಲ್ಕು ಕೆಜಿ ಪ್ಲಾಸ್ಟಿಕ್ ಸಿಕ್ಕಿತಂತೆ ಎಂದು ಪೇಪರ್ ಓದಿ ಪ್ಚ್ ಪ್ಚ್ ... ಎನ್ನುತ್ತಾಳೆ ಆನ್ಲೈನ್ ನಲ್ಲಿ ಪೇಪರ್ ಓದುವ ಚತುರೆ. ಮಾಲೊಂದರ ಪ್ರಸಿಧ್ಧ  ಹೊಟೇಲಿಗೆ ಹೋಗಿ ಕುಂತಾಗ ಮಾಣಿ ಬಂದು  "ನಾರ್ಮಲ್ ವಾಟರಾ ಮಿನರಲ್ ವಾಟರಾ ?" ಅಂದ್ರೆ ಉತ್ತರ "ಮಿನರಲ್ ವಾಟರ್" ಎಂದೇ ಆಗಿರುತ್ತದೆ . ಆ ಹೊಟೇಲಿನ ನೀರು ಶುಧ್ಧವಾಗಿಲ್ಲ ಎಂದ ಮೇಲೆ ಅಲ್ಲೇ ಮಾಡಿದ ಅಡುಗೆಗಳನ್ನು ತಿನ್ನುವುದು ಹೇಗೆ ? ಗ್ರಾಹಕರಿಗೆ ಶುಧ್ಧ ನೀರು ಕೊಡಬೇಕಾದ್ದು ಕೂಡ ಅವನ ಜವಾಬ್ದಾರಿಯಲ್ಲವೇ ? ಈ ಪ್ರಶ್ನೆಗಳನ್ನು ಹಲವರು ಎತ್ತಿದ ಪರಿಣಾಮವಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ. ಆದರೆ ಇನ್ನೂ ಹಲವು  ಪ್ರಶ್ನೆಗಳು ಹಾಗೇ ಉಳಿದಿವೆ.

೫. ದಶಕಗಳಿಂದ ಮದುವೆಗಳ ಊಟದ ವ್ಯವಸ್ಥೆ ಮಾಡುತ್ತಿರುವ ತಂದೆಯೊಡನೆ ಮಾತನಾಡುತ್ತಿದ್ದೆ. "ಇಡ್ಲಿ ಮಾಡಲು ನೀವು ಪ್ಲಾಸ್ಟಿಕ್ ಪೇಪರ್ ಬಳಸಬಾರದು ಅದು ಹಾನಿಕಾರಕ ಗೊತ್ತಾ ?" ಅಂದ್ರೆ ಅವರು ನಕ್ಕು ನುಡಿದಿದ್ದರು "ಹಾಗಾದ್ರೆ ಒಬ್ಬೊಬ್ಬರಿಗೂ ಅರ್ಧರ್ಧ ಲೀಟರ್ ನೀರಿನ ಬಾಟಲಿ ಕೊಡೋದು, ಅವರದರಿಂದ  ಒಂದೆರಡು ಗುಟುಕು ಕುಡಿದು ಅಲ್ಲೇ ಬಿಟ್ಟು ಹೋಗೋದು . ಪ್ರತೀ ಮದುವೆಯ ನಂತರ ಛತ್ರದ ಹಿಂಭಾಗದಲ್ಲಿ ಕಾಣುವ ಬಾಟಲಿಗಳ ಸಣ್ಣ ಸಣ್ಣ ಗುಡ್ಡಗುಡ್ಡಗಳು ಇವಕ್ಕೇನು ಹೇಳುತ್ತಿ ? ಈಗ ಅಡುಗೆ ಮಾಡಲು ಕೂಡ ಛತ್ರದ ನೀರು ಬಳಸುವ ಹಾಗಿಲ್ಲ ೫೦-೧೦೦  ಕ್ಯಾನ್  ಅಡುಗೆ ಮಾಡೋಕಂತಾನೆ ತರಿಸಿಬಿಡಿ ಅಂತಾರೆ . ಗೊತ್ತಾ ? " ಮಾತು ಮುಂದುವರೆಯಲಿಲ್ಲ. 

೬. ­­­­­­­ಮುಂದಿನದು ಸ್ವಲ್ಪ ಹಿಂದಿನ ಕಥೆ. ಸುಮಾರು ಎರಡು ದಶಕಗಳ ಹಿಂದೆ ೧೫ -೪೦ರಲ್ಲಿ ಕಟ್ಟಿದ ಪುಟ್ಟ ಮನೆ. ಮನೆಯೊಡತಿಗೆ ಮನೆಯ ಮುಂದೆ ತುಳಸಿ ವೃಂದಾವನಕ್ಕೆ ಜಾಗವಿದ್ದು ಪಕ್ಕದಲ್ಲಿ ಒಂದಷ್ಟು ಗಿಡಗಳನ್ನು ನೆಡುವಂತಿರಬೇಕು ಎಂಬ ಕನಸು . ಆ ಮನೆಯನ್ನು ಹಾಗೇ ಕಟ್ಟಲಾಯಿತು. ಪಕ್ಕದಲ್ಲಿದ್ದ ಅಷ್ಟೇ ಸಣ್ಣ ಜಾಗದಲ್ಲಿ ಇತ್ತೀಚಿಗೆ ಕಟ್ಟಿದ ಮತ್ತೊಂದು ಮನೆ , ಈಗ ಮನೆಯೊಡತಿ ಆಕೆಯ ಮನಸ್ಸು ಎರಡೂ ಹಿಂದಿನಂತಿಲ್ಲ  . ತುಳಸಿಯನ್ನು ಕುಂಡದಲ್ಲಿ ಬೆಳೆಸಿದರಾಯಿತು. ಗಿಡಗಳಾ ? ಸಾಧ್ಯವಾದರೆ  ತಾರಸಿ ಮೇಲೀನ ಜಾಗದಲ್ಲಿ ನೋಡೋಣ. ಮನೆಗಿನ್ನೊಂದು ರೂಮು ಬೇಕೇ ಬೇಕು ಎಂಬ ಬೇಡಿಕೆ ಆಕೆಯದ್ದು. ಅದಕ್ಕನುಗುಣವಾಗಿಯೇ ಕಟ್ಟಿದ ಮನೆ. ಮನೆಯ ಮುಂದೆ ಸಣ್ಣ ಕುಂಡದಲ್ಲಿ ಒಂಟಿಯಾಗಿ ಬೆಳೆದ ತುಳಸಿ .

೭. ಮಕ್ಕಳಿಗೆ ಬಳಸುವ ಬಳಸಿ ಬಿಸಾಡುವ ನ್ಯಾಪ್ಕಿನ್ ಗಳು ಒಂದೆರಡು ದಶಕಕಳೆದರೂ ಮಣ್ಣಿನೊಂದಿಗೆ ಸೇರಿ ಕೊಳೆಯುವುದಿಲ್ಲ ,ಗೊಬ್ಬರವಾಗುವುದಿಲ್ಲ   ಎಂಬ ಸತ್ಯ ಗೊತ್ತಿರುವ ಅಪಾರ್ಟ್ಮೆಂಟ್ ನಲ್ಲಿ ವಾಸಿಸುವ ಮನೆಯಲ್ಲೇ ಇರುವ ತಾಯಿ . ಅವಳ ಮಗು ಮಾತ್ರ ಮನೆಯಲ್ಲೂ ಪ್ಯಾಡಿಲ್ಲದೇ ಇರುವುದಿಲ್ಲ . 
ಮನೆಯಲ್ಲಿ ಗೊಬ್ಬರ ಮಾಡುವ ಮಾತು ಬಿಡಿ ಬಿಸಾಡುವಾಗ ಹಸಿ ಮತ್ತು ಒಣ ತ್ಯಾಜ್ಯಗಳನ್ನು ಬೇರೆ ಮಾಡುವ ಕಷ್ಟ ತೆಗೆದುಕೊಳ್ಳುವವರ ಸಂಖ್ಯೆ ಎಷ್ಟು ?  Sಣಚಿಟಿಜuಠಿ ಅomeಜiಚಿಟಿ ಉeoಡಿge ಅಚಿಡಿಟiಟಿ ಹೇಳುವಂತೆ ಹುಳುಗಳನ್ನು ಕೊಡವಿ ಬಿಸಾಕುವಂತೆ ಒಂದು ದಿನ ನಾವು ಇಲ್ಲವೇ ನಮ್ಮ ಮುಂದಿನ ಪೀಳಿಗೆ ಬಿಸಾಕಲ್ಪಡುತ್ತೇವೆ. ನಮಗಿಂತಲೂ ಮೊದಲೇ ಅವತರಿಸಿದ ಪೃಥ್ವಿ ಆತ್ಮರಕ್ಷಣೆಯ ಪ್ರಯತ್ನಕ್ಕೆ ಮುಂದಾದರೆ ನಮ್ಮ ಗತಿ ?

ಇನ್ನೆಷ್ಟು ಬರೆಯುವುದು ? ಇದನ್ನು ಓದಿದವರೆಲ್ಲರೂ ಇಂತಹುದೇ ಇನ್ನೊಂದಷ್ಟು ಕಥೆಗಳನ್ನು ಸೇರಿಸಬಹುದು. ಈ ಕಥೆಗಳ ಭಾಗವಾದ ನಾವೆಲ್ಲರೂ ನಮ್ಮದೇ ಆದ ಕಾರಣಗಳನ್ನು ಕೊಡಬಹುದು. ನಾವಿಲ್ಲಿ ಯಾರನ್ನೂ ನಂಬಿಸಬೇಕಿಲ್ಲ . ಭೂಮಿಗೆ ನಾವು ಬೇಕಿಲ್ಲ , ನಮಗೆ ಭೂಮಿ ಬೇಕು ಎಂಬ ಸತ್ಯ ತಿಳಿಯದವರೇನಲ್ಲ ನಾವು ಆದರೂ ಹೀಗೇಕೆ ? ನಾಶವೊಂದರ ಸಾಕ್ಷಿಯಾಗಬೇಕಾದ ಪೀಳಿಗೆ ತಯಾರಾಗುವ ಪರಿಯೇ ಇದು ?

ಕಾಮದ ಕತ್ತಲಾಟಕ್ಕೆ
ಚಿಗುರಿದ ಮೊಳಕೆ
ಮಡಿಲಿಲ್ಲ  ತಾಯಿ ಜೀವಕೆ !
ನೆನಪಾದಳು ಕೊಟ್ಟಿಗೆಯ ತುಂಗೆ
ಹೇಗೂ 'ನವರಾತ್ರಿ'ಯ ಹೊತ್ತು
ಚುಚ್ಚಿದರಾಯಿತು ಅವಳಿಗೆ ಬೀಜ ಹತ್ತು !
ಯಾರದ್ದದೆಂದು  ಕೇಳಲು ಅವಳಿಗಿಲ್ಲ ಬಾಯಿ
ಹತ್ತುಪಾಲು  ವಾಸಿ ಹರಿದು ತಿನ್ನುವ ಕಸಾಯಿ
ಅವಳ ಮಗುವಿನ ಹಾಲು
ಇವಳ ಕಂದನ ಪಾಲು
ಇದು ಜನನದ  ಬಲಿ !

ಜೀವ ಬೆಳೆಯಲು ಬೇಕೊಂದು ಮಡಿಲು
ತಾಯಿ ಬೇರ ತಂದರಾಯ್ತು  ಮಹಾನಗರಿಗೆ 
ಸಿಗದ ಮಣ್ಣಿಗೆ ಚಡಪಡಿಸುತ್ತಿದೆ ಬೇರು  ಜೀವ
ಕರುಳ ಬಳ್ಳಿಯ ಚಿಗುರು ಮರೆಸದು ಬೇರ ನೋವ
ಇದು ಜತನದ  ಬಲಿ !

ಚಿಗುರಿಗೊಂದು ನೆಲ ಬೇಡವೇ ?
ತನ್ನದೆಂಬ ನೆಲೆ ಬೇಡವೇ ?
ಉರುಳಿದ ಗುಲ್ಮೊಹರಲಿತ್ತು 'ಮೈನಾ' ಗೂಡು
ಇನ್ನು ಕೇಳುವರಾರು ಅವಳ ಪಾಡು ?
ಕಾದದೇ ಅಭಿಮನ್ಯುವಾದ ಅವಳ ಮರಿಗಳ ಹಾಡು
ಕಟ್ಟಿದ ಎಂಟಸ್ತಿನ ಹೊರಗೊಂದು ಚಿಂದಿಯ ಡಬ್ಬ
ಅದರಲೆಂದೂ ನಡೆಯಲಿಲ್ಲ ಮೈನಾ ಹಬ್ಬ
ಇದು ನೆಲೆಯ ಬಲಿ !

 ಜೀವಜಾಲವ  ಕಾಣಬೇಕು ಬೆಳೆದ ಜೀವ
ಘರ್ಜಿಸುವುದ  ಮರೆತ ರಾಜ
ಪಂಜರದಲಿಟ್ಟ ಮೂಕ ಗಿಳಿ
ಆಡುವುದ ಮರೆತ ಮೊಲ
ನೋಡುತ್ತಾ ನಿಂತ ಕಾಲ
ಇದು ಬುಧ್ಧಿಯ  ಬಲಿ !

ಬಲಿಗಳಲ್ಲೇ ಬೆಳೆದ ಜೀವ
ಚಕ್ರವರ್ತಿಯದಲ್ಲ ಮನೋಭಾವ
ಹೇಗಾದೀತು ?
ಹೆಜ್ಜೆ ನಮಸ್ಕಾರದಲುದಯಿಸಿದ
ತಂಗದಿರ, ತಾರೆಯರ 
ಬಲಿಗಳ ಪಯಣಕ್ಕಿಲ್ಲ ಕೊನೆ
ಬದುಕು (?) ನಡೆಯುವುದೇ ಬಲಿಗಳಲ್ಲಿ
ಅವರು ಕಲಿತ ಸತ್ಯ
ನಾವೇ ಕಲಿಸಿದ ತಥ್ಯ
ಜಗದಗಲ ಕಾಳಿಯ ನಾಲಿಗೆ
ಬಲಿಯಾಗಲಿ  'ನಾನು' ನಾಳೆಗೆ .

(ಈ ಕವಿತೆ  ಈಗಾಗಲೇ ಇಲ್ಲಿ ಪ್ರಕಟವಾಗಿದ್ದರೂ , ಈ ಪೋಸ್ಟಿಗೆ ಹೆಚ್ಚು ಸೂಕ್ತವಾಗಬಹುದೆಂದು ಮತ್ತೆ ಹಾಕಿದ್ದೇನೆ )

ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ .

Thursday, August 27, 2015

ಗುಬ್ಬಿಯಂತಹ ಸಂಬಂಧಗಳ ಕುರಿತು


ಚಿತ್ರಕೃಪೆ : ಅಂತರ್ಜಾಲ

ನಾನಾ ರೀತಿಯ ಸಂಬಂಧಗಳು  ನಮ್ಮ ಬದುಕಿನ ಭಾಗವಾಗಿ ಉಳಿಯುತ್ತವೆ. ಕೊನೆಯವರೆಗೂ ಜೊತೆ ಸಾಗಿದಂತವು , ಮುಗುಳು ನಗೆಯೊಡನೆ ಮುನ್ನಡೆದಂತಹವು , ಬದುಕಿನ ಎಲ್ಲ ಪಾಠಗಳನ್ನೂ ಕಂಬನಿಯಲ್ಲಿ ಬರೆಸಿ ಕಲಿಸಿದಂತವು...  ಇಲ್ಲಿ ದಾಖಲಾದವು ಕೂಡ ಕಾಡುವ ಮುಖಗಳೇ ಆದರೆ ಇವುಗಳೊಂದಿಗೆ ಕೊಂಚ ಹೆಚ್ಚೆನಿಸುವಷ್ಟು ಒಡನಾಟವಿದೆ. ಬದುಕಿನ ಕೆಲ ಪಾಠಗಳನ್ನು ಕಲಿಸಿವೆ, ಕ್ಷಣಗಳಲ್ಲಿನ ಬದುಕನ್ನು ಸಂಭ್ರಮಿಸುವುದನ್ನು ಕಲಿಸಿವೆ.

ಕೆಲ ವರ್ಷಗಳ ಹಿಂದೆ ಮನೆಯ ಹೊಸ್ತಿಲಿಗೆ ಅಂಟಿಕೊಂಡು ಕುಳಿತು ಅನ್ನಕ್ಕೆ ಬೇಕಾದಷ್ಟು ಅಕ್ಕಿಯನ್ನು ದಿನವೂ ಸ್ವಚ್ಚಗೊಳಿಸುವುದು  ಹೆಂಗಸರ ನಿತ್ಯ ಕ್ರಿಯೆಯಾಗಿತ್ತು . ಸಿಕ್ಕ ಒಂದೆರಡು ಭತ್ತವನ್ನು ಕಸದ ಬುಟ್ಟಿಗೆ ಹಾಕುವ ಪಧ್ಧತಿ ಇರಲಿಲ್ಲ. ಅಲ್ಲೇ  ಮುಂದೆ ಎಸೆಯುತ್ತಿದ್ದರು. ಎಲ್ಲಿಂದಲೋ ಹಾರಿ ಬಂದ ಗುಬ್ಬಿ ಭತ್ತವನ್ನು ತಿಂದು ಚೀಂವ್ ಗುಟ್ಟಿ ಹಾರಿ ಹೋಗುತ್ತಿತ್ತು.  ಗುಬ್ಬಿ ನಮ್ಮ ದೈನಂದಿನ ಬದುಕಿನ ಭಾಗವಾಗಿತ್ತು. ಈಗ ಹೊಸ್ತಿಲಿನ ಮುಂದೆ ಕೂರುವರಾರು ? ಅಕ್ಕಿಯಲ್ಲಿ ಭತ್ತವೆಲ್ಲಿ ? ಒಂದೊಮ್ಮೆ ಭತ್ತವನ್ನು ಕೊಂಡು ತಂದು ಹಾಕಿದರೂ ಗುಬ್ಬಿ ಎಲ್ಲಿ ?  ಮುಷ್ಠಿ ರಾಗಿಯನ್ನು ದಿನವಿಡಿ ತಿನ್ನುತ್ತಿದ್ದ ಗುಬ್ಬಿಯ ಜಾಗವನ್ನು ನಿಮಿಷಾರ್ಧದಲ್ಲಿ ತಟ್ಟೆ ಧಾನ್ಯವನ್ನು ಮುಗಿಸುವ ಪಾರಿವಾಳ ಆಕ್ರಮಿಸಿಕೊಂಡಿದೆ. ಸಣ್ಣ ದನಿಯ  ಸೆಣಸಲಾರದ ಗುಬ್ಬಿಗಿಲ್ಲಿ ಸ್ಥಳವಿಲ್ಲ. ನಮ್ಮ ಬದುಕಿನಿಂದಲೂ ಕೆಲವು ಗುಬ್ಬಿಗಳು ಮರೆಯಾಗಿವೆ.

ಸೂಪರ್ ಮಾರ್ಕೆಟ್ ಬಂದಿರದ ಕಾಲದಲ್ಲಿ ಸಾಮಾನ್ಯವಾಗಿ ಶೆಟ್ಟರ ಅಂಗಡಿಯಿಂದ ಅಥವಾ ನ್ಯಾಯಬೆಲೆ ಅಂಗಡಿಯಿಂದ  ಅಕ್ಕಿ ತರಲಾಗುತ್ತಿತ್ತು. ಊಟದ ಅಕ್ಕಿ ಎಂಬ ಹೆಸರಿದ್ದರೂ ಅದರಲ್ಲಿ  ಭತ್ತ , ಸಣ್ಣ ಸಣ್ಣ ಕಲ್ಲುಗಳು ಧಾರಾಳವಾಗಿ ಸಿಗುತ್ತಿದ್ದವು. ಇನ್ನು ರಾಗಿ , ಗೋಧಿಯ ಕಥೆ ಬೇರಿರಲಿಲ್ಲ. ಧಾನ್ಯ ತಂದಾಗ ಸಾಮಾನ್ಯವಾಗಿ ತಿಂಗಳ ಮೊದಲ ವಾರ, ಮನೆಯ ಮುಂದಿನ ಅಂಗಳದಲ್ಲೋ ಅಥವಾ ಒಳಗಿನ ವರಾಂಡದಲ್ಲೋ ಈ ಧಾನ್ಯ ಹಸನು ಮಾಡುತ್ತಿದ್ದರು. ಧಾನ್ಯದಲ್ಲಿದ್ದ ಗಟ್ಟಿ ಕಲ್ಲು ಮಣ್ಣಿನ ಹೆಂಟೆಗಳನ್ನು ತೆಗೆದ ನಂತರ ಒಂದು ಮೊರದಲ್ಲಿ ತುಂಬಿ ಹಗುರಾದ ಕಸ ತೆಗೆಯುವ ಕ್ರಿಯೆ ನಡೆಯುತ್ತಿತ್ತು. ನಮ್ಮಲ್ಲಿ ಇದನ್ನು ಕೇರುವುದು ಎನ್ನುತ್ತಾರೆ.  ಆ ಕೇರುವ ಶಬ್ದ ಅದೆಷ್ಟು ಲಯಬಧ್ಧವಾಗಿರುತ್ತಿತ್ತೆಂದರೆ ಅದನ್ನು ಕೇಳಲೆಂದೇ ನಾವು ಆ ಜಾಗದಲ್ಲಿ ಜಮಾಯಿಸುತ್ತಿದ್ದೆವು . ಈ ಹಸನು ಮಾಡುವ ಕ್ರಿಯೆ ನಡೆಯುವಾಗಲೂ ಗುಬ್ಬಿಗಳು  ಆಗಾಗ ಇಣುಕುತ್ತಿದ್ದವು.  ಕೆಲವು ಹೆಂಗಸರಿಗೆ ಈ ಕೇರುವ ಕ್ರಿಯೆ ಒಲಿದಿರಲಿಲ್ಲ. ಹಾಗಾಗಿ ಅವರು ನಿಪುಣ ಹೆಂಗಸರ ಮೊರೆ ಹೋಗಬೇಕಿತ್ತು. ಇದಕ್ಕೆಂದೆ ಕೆಲವು ಹೆಂಗಸರು ಮಧ್ಯಾಹ್ನದ ಹೊತ್ತಿಗೆ "ಏನಾರ ಹಸನ್ ಮಾಡಬೇಕೆನವ್ವ " ಅಂತ ಬರೋರು . ನಮ್ಮೂರಿನಲ್ಲಿ ಹಾಗೆ ಬರುತ್ತಿದ್ದವಳ ಹೆಸರು ಕೆಂಚಮ್ಮ , ಇಳಕಲ್ ಕಾಟನ್ ಸೀರೆಯನ್ನು ನೀಟಾಗಿ ಉಟ್ಟು ತಲೆಯ ಮೇಲೆ ಮುಸುಕೆಳೆಯುತ್ತಿದ್ದ ಅಜ್ಜಿ.  ಒಂದೆರಡು ಗಂಟೆಗಳ ಕಾಲ ಕೂತು ಯಾವ ಧಾನ್ಯ ಕೊಟ್ಟರೂ ಸ್ವಚ್ಚ ಮಾಡಿ ಹೊರಡುತ್ತಿದ್ದಳು.   ಮಧ್ಯೆ ಮಧ್ಯೆ ಚಹಾ , ತಿಂಡಿಗಳು ಸರಬರಾಜಗುತ್ತಿದ್ದವು . ಇದೆಲ್ಲಕ್ಕಿಂತ ಮುಖ್ಯ ಮನೆ ಹೆಂಗಸಿನ ಗೋಳಿಗೆ ಕಿವಿಯಾಗುತ್ತಿದ್ದಳು ಕೆಂಚಮ್ಮ  . ಮನುಷ್ಯ ಪ್ರಾಣಿಯ ಹಲವಾರು ನೋವುಗಳಿಗೆ  ಬೇಕಾಗುವುದು ಕೇಳುವ ಕಿವಿ ಮಾತ್ರ ಎಂಬ ಕೌನ್ಸೆಲ್ಲಿಂಗ್ ನ ಮೊದಲ ಸತ್ಯವನ್ನು ಕೆಂಚಮ್ಮ ಅದಾವ ಶಾಲೆಯಲ್ಲಿ ಕಲಿತಿದ್ದಳೋ? ಹಸನು ಮಾಡಲು ಧಾನ್ಯ ಕೊಟ್ಟ ಹೆಂಗಸರು , ಮಕ್ಕಳು ಮಾತು ಕೇಳಲ್ಲ ಅನ್ನೋದರಿಂದ ದುಡ್ಡು ಕಾಸಿನ ತಾಪತ್ರಯದವರೆಗೆ ಎಲ್ಲವನ್ನೂ  ಅವಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಇನ್ನು ಅವಳೋ,"ಯಾಕ್  ಅಮ್ಮನ ಮಾತು ಕೇಳಾಕ್ ಬರಂಗಿಲ್ಲನು ನಿನಗ " ಅಂತ  ಮಕ್ಕಳಿಗೊಂದು ಕ್ಲಾಸ್ ಶುರು ಹಚ್ಚಿ ಬಿಡೋಳು. ಹೆಂಗಸರ ಮನದಲ್ಲಿ  ಎಷ್ಟೋ ದಿನದಿಂದ ಕುದಿಯುತ್ತಿದ್ದ ಎಲ್ಲ ನೋವನ್ನೂ ಕೆಂಚಮ್ಮ ಕೇರಿ ಬಿಸಾಕಿರುತ್ತಿದ್ದಳು. ಹೆಂಗಸರ ಮನಸ್ಸನ್ನೂ ಹಸನು ಮಾಡಿರುತ್ತಿದ್ದಳು.  ಕೆಲಸ ಮುಗಿಸಿ ಹೊರಟವಳಿಗೆ ಹೆಂಗಸರು ಅದೇನು ಕೊಡುತ್ತಿದ್ದರೋ ಗೊತ್ತಿಲ್ಲ . ಒಟ್ಟಿನಲ್ಲಿ ಕೆಂಚಮ್ಮ ಮತ್ತು ಅವರ ನಡುವೆ ಒಳ್ಳೆಯ ಗೆಳೆತನವಿತ್ತು. ಹಬ್ಬಕ್ಕೆ , ಮನೆಯ ಸಮಾರಂಭಗಳಿಗೆ ಕೆಂಚಮ್ಮ ಇದ್ದರೇನೇ ಕಳೆ .  ಈಗ ಬೆಂಗಳೂರಿನಲ್ಲೇನು ಸಣ್ಣ ಸಣ್ಣ ಊರುಗಳಲ್ಲಿಯೂ  ಶೆಟ್ಟರ ಅಂಗಡಿಗಳೇ ಕಾಣೆಯಾಗುತ್ತಿವೆ. ಪಾಕೇಟಿನಲ್ಲಿ ಸ್ವಚ್ಚ ಮಾಡಿದ ಧಾನ್ಯಗಳು ಸಿಗುತ್ತವೆ. ನಮ್ಮೂರಿನ ಕೆಂಚಮ್ಮ ಹೋಗಿ ವರ್ಷಗಳು ಕಳೆದಿವೆ. ಹೆಂಗಸರು ಪುಕ್ಕಟೆಯಾಗಿ ದೊರೆತಿದ್ದ ಕೌನ್ಸೆಲ್ಲರ್ ಒಬ್ಬಳನ್ನು ಕಳೆದುಕೊಂಡಿದ್ದಾರೆ. ಆ ಮನೆಯ ಮಕ್ಕಳು ತಮ್ಮ ಸಮಸ್ಯೆ ಹೇಳಿಕೊಳ್ಳಲು ದುಡ್ಡು ಕೊಟ್ಟು ಕೌನ್ಸೆಲ್ಲರ್ ಗಳನ್ನು ಹುಡುಕುತ್ತಿದ್ದಾರೆ. ಕೇರುವ ಸದ್ದು ಕೇಳದೇ ಯಾವದೋ ಕಾಲವಾಯಿತು. ಇವೆಲ್ಲವೂ ಹೋದ ಮೇಲೆ ಅಡುಗೆ ಮನೆಯಲ್ಲಿ ಮೊರಕ್ಕಿನ್ನೇನು ಕೆಲಸ ? ಎಲ್ಲವೂ ಹೋದ ಮೇಲೆ ಗುಬ್ಬಿಯಾದರೂ ಯಾಕೆ ಉಳಿದೀತು?

ಶೆಟ್ಟರ ಅಂಗಡಿಗೆ ಹೋಗಿ ಲೋಕಾಭಿರಾಮದ ನಾಲ್ಕು ಮಾತನಾಡಿ ಸಾಮಾನು ತರುವುದು ಅದೆಷ್ಟೋ ಜನರ ದಿನಚರಿಯಾಗಿತ್ತು . ವರುಷಗಳು ಉರುಳಿದಂತೆ ಅಂಗಡಿಯವರೂ ಮನೆಯವರಂತೆ ಸಲಹೆ ಕೊಟ್ಟು ಸಹಾಯವನ್ನೂ ಮಾಡುತ್ತಿದ್ದರು. ಈಗೇನಿದ್ದರೂ ಎಲ್ಲವನ್ನೂ ಗಾಡಿಯಲ್ಲಿ ತುಂಬಿ ಕಾರ್ಡು ಉಜ್ಜೋದು ಅಥವಾ  ಮನೆಯಲ್ಲೇ ಕುಳಿತು ಲ್ಯಾಪ್ಟಾಪ್, ಮೊಬೈಲ್ ಯಾವುದೋ ಒಂದನ್ನು ಬಳಸಿ ಮನೆಯ ಬಾಗಿಲಿಗೆ ಸಾಮಾನು ತರಿಸೋದು.  ಇದರಿಂದ ಸಮಯ ಕೆಲ ಬಾರಿ ಹಣದ ಉಳಿತಾಯವೂ ಆಗಿದೆ ಎಂಬುದು ಒಂದು ವಾದ. ಇರಬಹುದೇನೋ. ಕಾಲನ ನಾಟಕ ರಂಗದಲ್ಲಿ ಸರಿ ತಪ್ಪುಗಳ ವಿಶ್ಲೇಷಣೆ ಎಷ್ಟೋ ಬಾರಿ ಸಾಧ್ಯವಾಗುವುದಿಲ್ಲ. ನಾಳೆಗಳಿಗಾಗಿ ಇಂದಿನ ಬದಲಾವಣೆಯನ್ನು ನಾವು ಒಪ್ಪಿಕೊಳ್ಳಲೇ ಬೇಕು. ಆದರೆ ನೆನ್ನೆಯ  ಬಂಧಗಳು ಕಳಚಿದಾಗ ಅದರ ಭಾಗವಾಗಿದ್ದವರೆಲ್ಲರೂ ನೊಂದಿದ್ದಾರೆ, ನೋಯುತ್ತಿದ್ದಾರೆ.
ಗುಬ್ಬಿ ಕಾಣೆಯಾಗಿ ಆ ಜಾಗಕ್ಕೆ ಪಾರಿವಾಳ ಬಂದು ಅದರ ಗೂ ಗೂ ಶಬ್ದ ಕೇಳುವವರೆಗೆ ನಮಗೆ ಗುಬ್ಬಿಯ ನೆನಪಾಗಲಿಲ್ಲ. ದುಃಖ ಮಡುಗಟ್ಟಿ ಹೇಳಲಾಗದೇ ಒದ್ದಾಡುವವರೆಗೆ  "ಹಂಗಾತೇನು ...ಇರ್ಲಿ ತಗ  ಸರಿ ಹೊಕ್ಕತಿ"  ಎನ್ನುತ್ತಿದ್ದ ಕೆಂಚಮ್ಮ ನೆನಪಾಗಲಿಲ್ಲ . ಇಲ್ಲೇನೋ ಇತ್ತು ಅದು ಈಗಿಲ್ಲ ಎಂದು ಅರ್ಥವಾಗಲು ವರುಷಗಳೇ ಹಿಡಿದವು. ಈಗ ಬಿದಿರಲ್ಲಿ, ಮಣ್ಣಲ್ಲಿ ಗುಬ್ಬಿ ಗೂಡು ಮಾಡಿ ಬಾಲ್ಕಾನಿಯಲ್ಲಿ , ಪಾರ್ಕಿನ ಮರದಲ್ಲಿ ನೇತು ಹಾಕುತ್ತಿದ್ದೇವೆ. ಗೂಡು , ಮಾಡು ಇನ್ನುಳಿದ ವಸ್ತುಗಳನ್ನೆಲ್ಲಿಂದ ತರುವುದು ?  ಹಾರಿ ಹೋದ  ಗುಬ್ಬಿಗೆ ನಮ್ಮ ಕೂಗು ಕೇಳೀತೆ?

'ಗುಬ್ಬಿಯಂತಹ ಸಂಬಂಧಗಳು' ಎಂದು ಓದಿದ್ದು ಬಹುಶಃ ರವಿ ಬೆಳಗೆರೆಯವರ ಬರಹದಲ್ಲಿ. ಇಂತಹ ಬಂಧಗಳು ಎಲ್ಲರ ಬದುಕಿನಲ್ಲೂ ಇರಬಹುದು. ಕಡೆಗೆ ಏನೂ ಆಗದೇ  ಉಳಿದರೂ ಕೂಡ ಆ ಹೊತ್ತಿಗೆ ಎಲ್ಲವೂ ಆದವರು. ನಮ್ಮ ನೆನ್ನೆಗಳ ಭಾಗವಾಗಿದ್ದವರು ಇಂದು ನೆನಪಾದಾಗ ಕಾಣದಾದವರು ನಾಳೆಗಳ ಭರವಸೆಗೆ ಅಗತ್ಯವಾದವರು.


                                            ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ

Thursday, August 20, 2015

ನೀರು ಲೋಹದ ಚಿಂತೆ - ವಿಜಯ ದಬ್ಬೆ




ಚಿತ್ರಕೃಪೆ : ಅಂತರ್ಜಾಲ

ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರಾದ ವಿಜಯ ದಬ್ಬೆಯವರ ಕವನ ಸಂಕಲನವನ್ನು ಪಠ್ಯದ ಭಾಗವಾಗಿ ಓದಿದಾಗಿನಿಂದ ಅವರ ಬಗ್ಗೆ ತೀರದ ಕೂತುಹಲವಿದೆ. ದಾರುಣ ಅಪಘಾತದಿಂದ ಚೇತರಿಸಿಕೊಂಡು, ಬದುಕಿನತ್ತ ಮುಖ ಮಾಡಿ  ಮತ್ತೆ ಲೇಖನಿ ಹಿಡಿದಿರುವ ಅದಮ್ಯ ಜೀವನೋತ್ಸಾಹದ ಮಹಿಳೆಯಾಗಿ ವಿಜಯ ದಬ್ಬೆಯವರು ಇಷ್ಟವಾಗುತ್ತಾರೆ. ಹೆಸರಿನೊಂದಿಗೆ ಗೂಗಲಿಸಿದರೆ  ಅವರ ಬಗ್ಗೆ ಹತ್ತು ಹಲವು ಬರಹಗಳು ಮತ್ತು ಅವರ ಸಂದರ್ಶನಗಳು ತೆರೆದುಕೊಳ್ಳುತ್ತವೆ. ರೂಪ ಹಾಸನ ಅವರ ವರ್ತಮಾನ ಪತ್ರಿಕೆಯಲ್ಲಿನ ಬರಹ ದಬ್ಬೆಯವರ ಬಗ್ಗೆ ಕೆಲ ಮುಖ್ಯ ಮಾಹಿತಿಗಳನ್ನು ಒದಗಿಸುವುದರ ಜೊತೆಗೆ ಅವರ ವ್ಯಕ್ತಿತ್ವದ ಪರಿಚಯವನ್ನೂ ಮಾಡಿಸುತ್ತದೆ. ಸ್ತ್ರೀವಾದ , ಮಹಿಳಾಪರ ಹೋರಾಟಗಳು ಹುಟ್ಟಿ,  ಬೆಳೆದ  ನಂತರದಲ್ಲಿ ಹುಟ್ಟಿದ ಪೀಳಿಗೆ ನಮ್ಮದು. ಆದರೂ ದಬ್ಬೆಯವರನ್ನು ಓದಿದಾಗ ಕೆಲವು ಚಿಂತನೆಗಳು , ಕೆಲವು ಸಾಲುಗಳು ಸೆಳೆದವು. ಆ ಸಾಲುಗಳಲ್ಲಿನ ಪ್ರಾಮಾಣಿಕ ಕಾಳಜಿ, ಅಬ್ಬರವಿಲ್ಲದ ಆದರೆ ದೃಢವಾದ ದನಿ ಇಷ್ಟವಾಯಿತು.  ಅವರ  'ನೀರು ಲೋಹದ ಚಿಂತೆ' ಕವನ ಸಂಕಲನ  ಬಿಡುಗಡೆಯಾಗಿದ್ದು ೧೯೮೫ರಲ್ಲಿ, ಅಲ್ಲಿನ ಕೆಲವು ಸ್ತ್ರೀ ಪರ ಕಾಳಜಿಯುಳ್ಳ ಕವಿತೆಗಳ ಬಗೆಗಿನ ನನ್ನ ಗ್ರಹಿಕೆ ಇಲ್ಲಿದೆ.

೮೦ರ ದಶಕದ ದಾಂಪತ್ಯದಲ್ಲಿ ಎಲ್ಲವೂ ಗಂಡಸಿನ ಮರ್ಜಿಯ ಮೇಲೆ ನಡೆಯುತ್ತಿರಲಿಲ್ಲ ಆದರೆ ಹೆಣ್ಣಿಗೆ ಇನ್ನೇನೋ ಬೇಕಿತ್ತು . ಅದೇನು ? ಎಂಬ ಪ್ರಶ್ನೆಗೆ  ಉತ್ತರ  'ಪತಿದೇವರಿಗೊಂದು ಬಹಿರಂಗ ಪತ್ರ' ಕವಿತೆಯಲ್ಲಿದೆ. ಕವಿತೆಗೆ ದನಿಯಾದವಳು ಗಂಡನಿಗೆ ಹೇಳುತ್ತಾಳೆ : 'ಹಿಂದಿನವರಂತೆ ,  ಪ್ರತೀ ಮುಂಜಾನೆಯೂ ಹೆಂಡತಿ ಪಾದಕ್ಕೆ ಹಣೆ ಹಚ್ಚಬೇಕೆಂಬ ನೀರೀಕ್ಷೆ ನಿನಗಿಲ್ಲ. ಆದರೆ ನೀನು ಕ್ರಾಪು ತಿದ್ದುವ ವೇಳೆ  ಕಾಫಿ  ಲೋಟದೊಂದಿಗೆ ಪರದೆಯ ಹಿಂದೆ ಕಾಯುವ ಪುಣ್ಯ ನನ್ನದು.'  ಮೂರ್ನಾಲ್ಕು ದಕಶಕಗಳ ಹಿಂದೆ ಮಹಿಳೆ ಹೊರ ಹೋಗಿ ದುಡಿಯಲು ಆರಂಭಿಸಿದ್ದರೂ ಮನೆಯಲ್ಲಿರುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಗಂಡ ಸ್ಕೂಟರ್ ಸ್ಟಾರ್ಟ್ ಮಾಡುವ ವೇಳೆ ಬಾಗಿಲಲ್ಲಿ ನಿಂತು ಕೈ ಬೀಸಿ ಸಂಜೆ ಅವನು ಬರುವ ಹೊತ್ತಿಗೆ ಅಲಂಕರಿಸಿಕೊಂಡು ಬಾಗಿಲಲ್ಲಿ ಕಾಯುತ್ತಿದ್ದವಳ ಚಿತ್ರಣ ಹಲವು ಕಡೆ ಬಂದು ಹೋಗಿದೆ . ದಬ್ಬೆಯವರು ಅವಳಿಗೆ ದನಿಯಾಗಿದ್ದಾರೆ. ಅವನ ಬೇಕು ಬೇಡಗಳ ಸುತ್ತ ಗಿರಕಿಹೊಡೆವ ಬದುಕು ಅವಳಿಗೆ ಬೇಡವಾಗಿದೆ. ಸೋಕದಂತೆ ಕಡಲ ದಂಡೆಯಲ್ಲಿ ಕುಳಿತು ಮಾತನಾಡುವ ಆಸೆ ಅವಳದ್ದು. ಬದುಕಿನ ಕಡಲ ದಂಡೆಯಲ್ಲಿ ಕ್ರಾಂತಿಯ ಬಾವುಟ ಹುಗಿದು ಸದಾ ಹಸಿರಿನ ಕನಸು ಕಾಣುವ ಅವಳನ್ನು ಜನ ಸುಲಭವಾಗಿ ಒಪ್ಪಲಾರರೆಂಬ ಸತ್ಯದ ಅರಿವಿರುವ ಹೆಣ್ಣು ಅವಳು. ಈ ಕ್ರಾಂತಿಯ ಫಲವನ್ನು ಉಂಡ ನನ್ನ ಪೀಳಿಗೆಗೆ ಈ ಕವಿತೆ ಎಲ್ಲಿಂದಲೋ ತೇಲಿ ಬರುವ  ಅಮ್ಮನ ಗುನುಗಿನಂತೆ ಕೇಳಬಹುದು. ಈ ಕಾರಣಕ್ಕಾಗಿಯೇ ನನಗೀ ಕವಿತೆ ಇಷ್ಟವಾಗಿದ್ದು.

ಸೀತೆ , ಅಹಲ್ಯೆ ದ್ರೌಪದಿಯರ ನೋವನ್ನು ಸಾಮಾನ್ಯವಾಗಿ ಎಲ್ಲ ಕವಯಿತ್ರಿಯರೂ ಒಂದಿಲ್ಲೊಂದು ರೀತಿಯಲ್ಲಿ ಹಾಡಾಗಿಸಿದ್ದಾರೆ. ಅವುಗಳನ್ನು ಓದುವಾಗಲೆಲ್ಲಾ ಇತ್ತೀಚಿಗೆ ನನಗೊಂದು ಪ್ರಶ್ನೆ ಬಿಟ್ಟೂ ಬಿಡದೇ ಕಾಡಿದೆ. ಕವಿತೆಯಲ್ಲಿ ವ್ಯಕ್ತವಾದ ನೋವು ಸೀತೆಯದ್ದೋ ? ಕವಯಿತ್ರಿಯದ್ದೋ ? ನೋವು ಸೀತೆಯದ್ದೇ ಆದರೆ ಅಲ್ಲಿ ರಾಮನ ನೋವೂ ಕಾಣ ಬೇಕಿತ್ತಲ್ಲವೇ ?  ಸೀತೆಯ ಕಂಬನಿಗೆ ಲೋಕವೇ ಕಣ್ಣಾಯಿತು , ರಾಮನ ನೋವು ಅಂತಃಪುರವನ್ನು ದಾಟಲಿಲ್ಲ. ಇರಲಿ , ಇದೊಂದು ಮುಗಿಯದ ವಾದದ ಸರಣಿ . ಬದುಕಿನ ಯಾವ ಹಂತದಲ್ಲಿದ್ದೇವೆ ಎಂಬುದರ ಮೇಲೆ ನಮ್ಮ ಪಾಲಿನ ಸತ್ಯ ಅವಲಂಬಿತವಾಗಿರುತ್ತದೆ.  ದಬ್ಬೆಯವರ ಕವಿತೆಯಲ್ಲಿ  ದಿನವೂ ಗರಗಸಕ್ಕೆ ತಲೆ ಕೊಡುವ ಹೆಣ್ಣೊಬ್ಬಳು ಸೀತೆಯ ಮೂಲಕ 'ಪರಂಪರೆ'ಯನ್ನು ಪ್ರಶ್ನಿಸುತ್ತಿದ್ದಾಳೆ. 
'ಬಿಚ್ಚ ಬಹುದು :
ಉಟ್ಟ ಸೀರೆಯನ್ನೂ
ಕಟ್ಟಿದ ಪೇಟವನ್ನೂ
ಬಿಚ್ಚಿ ತೋರಿಸಬಹುದೆ?
ತೋರಿಸಿ ಒಪ್ಪಿಸಬಹುದೆ?
ನಮ್ಮೆಲ್ಲ ಭೂತ -ವರ್ತಮಾನದ
ಸತ್ಯವನ್ನು ?

ನಡತೆ ಎಂಬುದು ಹೆಣ್ಣಿಗೆ ಮಾತ್ರ ಅತ್ಯಗತ್ಯ ಎಂಬ ಸಮಾಜದಲ್ಲಿ ಹುಟ್ಟಿದ ಸಾಲುಗಳು. ಅದಾವುದೋ ಅನುಮಾನದ ಬೆಂಕಿಯಲ್ಲಿ ಬೇಯುತ್ತಿರುವ ಹೆಣ್ಣಿನ ಈ ಪ್ರಶ್ನೆಗಳಿಗೆ ಉತ್ತರ ಇಂದಿಗೂ ಸಿಕ್ಕಿಲ್ಲ.   ಆದರೆ ದಬ್ಬೆಯವರ ಹೆಣ್ಣು  ಪ್ರಶ್ನೆಗಳಿಗೆ ಸೋಲಲಾರಳು,  ಸೀತೆಯ ದೃಢತೆಯೇ ಕಣ್ಣ ಬೆಳಕಾಗಿ ಬಂದು ಅವಳ ಮಲ್ಲಿಗೆಯಂತಾ ಮನಸಿಗೆ ವಜ್ರದ ಲೇಪ ಕೊಡಲಿ ಎಂದು ಆಶಿಸುತ್ತಾಳೆ. ಹಾಗೆ ಆಶಿಸುತ್ತಲೇ ಮತ್ತೆ ಮತ್ತೆ ಕೇಳುತ್ತಾಳೆ  ಈ ಶಿಕ್ಷೆ ಯಾಕಾಗಿ ?
ನಿಮ್ಮೆಲ್ಲರ ದೃಢತೆ
ಕಣ್ಣ ಬೆಳಕಾಗಿ ಬಂದು
ಈ ಮನದ ಮಲ್ಲಿಗೆಗೆ
ವಜ್ರಲೇಪವ ಬಳಿದು ಉಳಿಸಬೇಕು

ಇಂದಿಗೂ ಅನುಮಾನಕ್ಕೆ ಬಲಿಯಾಗುವ ಹೆಣ್ಣುಗಳ ಸಂಖ್ಯೆ ಕಡಿಮೆ ಏನಲ್ಲ. ಆದರೆ ನಾವೀಗ ಸೀತೆ , ಅಹಲ್ಯೆ , ದ್ರೌಪದಿಯರ ಹೆಸರಿನಲ್ಲಿ ಅವರ ಮೂಲಕ ಪ್ರಶ್ನೆ ಮಾಡುವ ಹಂತದಿಂದ ಮುಂದೆ ಸಾಗಿದ್ದೇವೆ, ಸಾಗಬೇಕು  ಎಂಬುದು ನನ್ನ ಅನಿಸಿಕೆ ಮತ್ತು ಆಶಯ. ಹೆಣ್ಣು ತನ್ನ ನೋವನ್ನು ಹಿಂದಿಗಿಂತ ಸ್ಪಷ್ಟವಾಗಿ ಅರುಹಬಲ್ಲಳು. ಕೆಲವು ಕೇಳುವ ಕಿವಿಗಳೂ ಇವೆ. ಮನದ ಮಲ್ಲಿಗೆಗೆ ವಜ್ರದ ಲೇಪ ಬಳಿಯುವ ದೃಢತೆಯಿಂದಾಗಿ ಈ ಕವಿತೆ ಆಪ್ತವಾಗುತ್ತದೆ .  ಈ ದೃಢತೆ ಸಾರ್ವಕಾಲಿಕ ಅಗತ್ಯ ಕೂಡ.

ಸಂಕಲನದ ಶೀರ್ಷಿಕೆಯಾದ 'ನೀರು ಲೋಹದ ಚಿಂತೆ' ಎಂಬುದು  ಎಂಟು ಸಾಲಿನ ಕವಿತೆ.  ಜೀವದ ಅಸ್ತಿತ್ವದ ಪ್ರಶ್ನೆಯನ್ನು ನೀರು ಮತ್ತು ಲೋಹದ ಮೂಲಕ ಕೇಳುವ ಕವಿತೆ.

ಈ ಸಂಕಲನದ ನನ್ನಿಷ್ಟದ ಸಾಲುಗಳು 'ನಿಸಿದಿ ನಾಡಿನ ಹಾಡು' ಎಂಬ ಹನಿಗವನದ್ದು :
ತೊರೆದಿದ್ದೇವೆ : ಬಟ್ಟೆಯ ಹಂಗು
ಸೂರ ಹೊಕ್ಕಿಲ್ಲ : ಹುಟ್ಟಿದ ಮೇಲೆ
ಸಲ್ಲೇಖನ : ನಿತ್ಯನೇಮ
ಇಷ್ಟೇ ವ್ಯತ್ಯಾಸ : ಆಯ್ಕೆ ನಮ್ಮದಲ್ಲ .

ಅತೀ ಕಡಿಮೆ ಪದಗಳಲ್ಲಿ ಎಲ್ಲವನ್ನೂ ಹೇಳಬಹುದೇ ? ಎಂಬ ಪ್ರಶ್ನೆಗೆ ಉತ್ತರ ಈ ಸಾಲುಗಳು. ನಾಲ್ಕು ಸಾಲಿನ ಬಗ್ಗೆ ಬರೆಯುತ್ತಲೇ ಇರಬಹುದು ಆದರೆ ಈ ಸಾಲುಗಳು ಒಳಗಿಳಿಯಲು ಬರಹದ ಅಗತ್ಯವಿಲ್ಲ .
ಬರೆದಂತೆ ಬದುಕಿದ  ಬದುಕನ್ನೇ ಬರಹವಾಗಿಸಿದ ಪ್ರಾಮಾಣಿಕತೆಯಿಂದಾಗಿ  , ಕೋಮಾದೊಡನೆ ಹೋರಾಡಿದ ನಂತರವೂ ಕವಿತೆ ಕಟ್ಟ ಬಯಸುವ ಜೀವನ್ಮುಖಿಯಾಗಿ ,  ಮಮತೆಯ ದನಿಯ ಸ್ತ್ರೀವಾದಿಯಾಗಿ ವಿಜಯ ದಬ್ಬೆ ಹೆಚ್ಚು ಆಪ್ತವಾಗುತ್ತಾರೆ , ಇಷ್ಟವಾಗುತ್ತಾರೆ. (ಸ್ತ್ರೀವಾದಿ ಎಂಬ ಪದದ ಬಗ್ಗೆ ನನ್ನದೇ ಆದ ಆಕ್ಷೇಪಣೆಗಳಿದ್ದರೂ ಅವರು ಹಾಗೆಯೇ ಗುರುತಿಸಿಕೊಂಡಿರುವುದರಿಂದ ನಾನೂ ಹಾಗೇ ಬಳಸಿದ್ದೇನೆ)  ಮುಂದೆ ಬರೆಯಲು ಮತ್ತೆ ಪದಗಳು ಸಿಗುವವರೆಗೆ ವಿಜಯ ದಬ್ಬೆಯವರಿಗೆ ಗೌರವ ಪೂರ್ವಕ ನಮಸ್ಕಾರಗಳು.

ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ

Monday, August 17, 2015

ಎಂದೂ ಮುಗಿಯದ ಹಾಡಿನ ಬಂಡಿ

ಒಂದನೇ ಕ್ಲಾಸಿನಲ್ಲಿ  ಕಲಿತ ಪದ್ಯಗಳು ಮತ್ತು ಕೆಲವು ಚಿತ್ರ ಗೀತೆಗಳು  ಎಂದೆಂದಿಗೂ ನೆನಪಿನಿಂದ ಮಾಸುವುದಿಲ್ಲ. ಆ ತರಹದ ಕೆಲವು ಕನ್ನಡ ಚಿತ್ರಗೀತೆಗಳ ಬಗ್ಗೆ ಈ ಬರಹ. ಎಷ್ಟೋ ಬಾರಿ ಸಿನೆಮಾ ಹಿಟ್ ಎನಿಸಿಕೊಳ್ಳದಿದ್ದರೂ  ಹಾಡುಗಳು ನಾಲಿಗೆಯಲ್ಲಿ ನಲಿದಾಡಿವೆ. ಗ್ರಾಮಾಫೋನ್ ರೆಕಾರ್ಡ್ಗಳಿಂದ ಪುಟ್ಟ ಪೆನ್ ಡ್ರೈವ್ ವರೆಗೆ ಎಲ್ಲವೂ ನಮ್ಮ ನೆನಪುಗಳನ್ನು ಹೊತ್ತಿವೆ. ಟಿ.ವಿ. ಸಾಮಾನ್ಯವಾಗದ ಕಾಲದಲ್ಲಿ ಹಾಡಿನ ಹಸಿವನ್ನು ನೀಗಿಸಿದ್ದು ಕ್ಯಾಸೆಟ್ಟುಗಳು . ಸೋಶಿಯಲ್ ಮಿಡಿಯಾ ಇಲ್ಲದ ಕಾಲದಲ್ಲಿ  ಸಿನೆಮಾ ಬರುವ ಮುಂಚೆ ಅದರ ಹಾಡುಗಳ ಕ್ಯಾಸೆಟ್ ತಂದು ಸಿನೆಮಾ ಹೇಗಿದೆ, ಕಥಾ ಹಂದರ ಏನಿರಬಹುದು  ಎಂದು ಹೇಳುವ ಪ್ರಯತ್ನ ನಡೆಯುತ್ತಿತ್ತು. ನಂತರದಲ್ಲಿ  ಸಿಡಿಗಳು ಬಂದು ಕ್ಯಾಸೆಟ್ಗಳು ಮೂಲೆ ಸೇರಿದವು.  ಚಿತ್ರಗೀತೆಗಳು ನಮ್ಮ ಪ್ರಾರ್ಥನೆಯಾಗಿವೆ, ಕನಸುಗಳ ಲಾಲಿ ಹಾಡಿವೆ , ಸೋತು ಕುಂತಾಗ ಒಂದಷ್ಟು ಭರವಸೆ ತುಂಬಿವೆ.

ಬಹುತೇಕ ಕಾನ್ವೆಂಟ್ ಗಳಲ್ಲಿ ಇಂದಿಗೂ ಪರಲೋಕದಲ್ಲಿರುವ ನಮ್ಮ ತಂದೆಯೇ ....ಎಂಬ ಪ್ರಾರ್ಥನೆ ಹೇಳುವ ಪರಿಪಾಟವಿದೆ. ಕಾನ್ವೆಂಟ್ ಪ್ರಾರ್ಥನೆ ಕೇಳಿದ ನಾನು 'ನಿನ್ನೊಲೊಮೆ ನಮಗಿರಲಿ ತಂದೆ ..' ಅನ್ನೋ ಹಾಡು ಏಸುಸ್ವಾಮಿಗಾಗೇ ಬರೆದದ್ದು ಎಂದುಕೊಂಡಿದ್ದೆ ಮತ್ತು ಇಂದಿಗೂ ಆ ಹಾಡು ಕೇಳಿದರೆ ಕಣ್ಣ ಮುಂದೆ ಕಾನ್ವೆಂಟ್ ಬರುತ್ತದೆ. ನಂತರದಲ್ಲಿ ಅದರ ವಿಶಾಲ ಅರ್ಥದ  ಚೂರುಪಾರು ಅಂದಾಜು ಸಿಕ್ಕಿತೆನ್ನಿ. ಕನ್ನಡ ಚಿತ್ರಗಳ ಸುಂದರವಾದ ಪ್ರಾರ್ಥನಾ ಗೀತೆಗಳಿಗೆ ನಾನು ತೆರೆದುಕೊಂಡಿದ್ದು ಹೀಗೆ. 'ತಾಯಿ ಶಾರದೆ ಲೋಕ ಪೂಜಿತೆ ..' ಎನ್ನುವ ಪಿಬಿಸ್ ದನಿಗೆ ತಲೆದೂಗದವರಾರು ?  'ತಂದೆ ನೀ ನೀಡು ಬಾ..' ಹಿಂದಿ ಮತ್ತು ಕನ್ನಡ ಎರಡೂ ಭಾಷೆಗಳಿಗೆ ಒಗ್ಗಿಕೊಂಡ ಗೀತೆ. ಕೃಷ್ಣ , ರಾಮ , ಅಲ್ಲಾ ಎಲ್ಲರಿಗೂ ಪ್ರಾರ್ಥನೆ ತಲುಪಿಸಿದ್ದಾರೆ ನಮ್ಮ ಸಾಹಿತಿಗಳು.

ಹೆಣ್ತನದ ಜೋಕಾಲಿಯಲ್ಲಿ ಜೀಕಿದ  ಕನಸುಗಳಿಗೆ ಮೊದಲು ದನಿಯಾದವರು ಜಾನಕಮ್ಮ. 'ಬಾನಲ್ಲೂ ನೀನೆ...' ಎಂಬ ಹಾಡನ್ನು ಆಕೆಗಿಂತ ಸೊಗಸಾಗಿ ಯಾರೂ ಹಾಡಲಾರರೆಂದು ಹೇಳುವುದನ್ನು ಕೇಳಿದ್ದೇನೆ , ಅದು ಉತ್ಪ್ರೇಕ್ಷೆ  ಎನಿಸಿಲ್ಲ. 'ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ...' 'ಬಾಳ  ಬಂಗಾರ ನೀನು ...'  ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಮ್ಮ ಹಿಂದಿನ ಪೀಳಿಗೆಯವರು 'ಕರೆಯೇ ಕೋಗಿಲೆ ಮಾಧವನ ...' , ' ಹೇಳೇ ಗೆಳತಿ ಪ್ರಿಯ ಮಾಧವ ಬಾರನೇ ಇಂದು ...'  ಎಂದು ಇಂದಿಗೂ ಗುನುಗುತ್ತಾರೆ. ಇವು ಹೆಣ್ಣಿನ ಕನಸಿನ ಸರಗಳಾದರೆ ಗಂಡಿನೆದೆಯ ಹಾಡನ್ನು ಪಿ.ಬಿ.ಎಸ್ , ಎಸ್ .ಪಿ.ಬಿ. ಮನದುಂಬಿ ಹಾಡಿದರು .  'ನನ್ನವಳು ನನ್ನೆದೆಯ ಹೊನ್ನಾಡನಾಳುವಳು ..' ಅಪ್ಪನ ಕಾಲದ್ದಾದರೆ ನಂತರದ ದಿನಗಳಲ್ಲಿ 'ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ ...' ಎಂದು ಪ್ರೇಮವೇ ದನಿಯಾದಂತೆ ಎಸ.ಪಿ.ಬಿ. ಹಾಡಿದರು. ಯುಗಳ ಗೀತೆಗಳ ಯುಗ 'ಈ ಸಂಭಾಷಣೆ ...' ಯಿಂದ ಮೊದಲುಗೊಂಡು 'ಜೀವ ವೀಣೆ ..' ಮಿಡಿದು 'ಸುಖದಾ ಸ್ವಪ್ನಗಾನ ....' ವಾಗಿ ಮುಂದುವರೆಯುತ್ತಲೇ ಇದೆ. ಕಪ್ಪು ಬಿಳುಪಿನ ' ಆಕಾಶವೇ ಬೀಳಲಿ ಮೇಲೆ '  'ನೀ ಬಂದು ನಿಂತಾಗ ...'  ನಮ್ಮ ಪೀಳಿಗೆಯವರೂ ಮೆಚ್ಚಿ ಮುಂದಿನವರಿಗೂ ಕಲಿಸಿದ್ದಾಯಿತು.  ಬದುಕಿನ ದಾರಿ ಒಂದಷ್ಟು ಸವೆದಾಗ 'ನಿನ್ನಾಸೆಗೆಲ್ಲಿ ಕೊನೆಯಿದೆ ..' ಎಂಬ ತತ್ವ ಎಷ್ಟು ಸುಂದರಗೀತೆಯಾಗಿ ತೇಲಿಬಂದಿತು ! 'ಮಾನವ  ಮೂಳೆ ಮಾಂಸದ ತಡಿಕೆ ...' ಎಂದು ಕೇಳಿದಾಗ  ಕುಂಬಾರ ಕಾಣದಿರಲು ಹೇಗೆ ಸಾಧ್ಯ ?

ಇವು ಈ ಕ್ಷಣಕ್ಕೆ ನೆನಪಾದ ಕೆಲವು ಹಾಡುಗಳು. ಕನ್ನಡ ಚಿತ್ರಗಳನ್ನು ನೋಡುವ ಎಲ್ಲ ಪ್ರೇಕ್ಷಕರಿಗೂ ಇವುಗಳು ಬಹುತೇಕ ಕಂಠಪಾಠವಾಗಿರುತ್ತವೆ. ಬದುಕಿನ ಬಂಡಿ ಸಾಗಲು ಹಾಡಿನ ಬಂಡಿಯ ಅಗತ್ಯವನ್ನು ನಾವೆಂದೋ ಕಂಡುಕೊಂಡಿದ್ದೇವೆ.ಇಂದಿಗೂ ಆಟಕ್ಕಾಗಿ ಬಂಡಿ ಕಟ್ಟಿ ನಮ್ಮ ಹಾಡುಗಳನ್ನೂ , ಕನಸುಗಳನ್ನೂ , ಬದುಕಿನ ಹಾದಿಯನ್ನೂ ನೆನಪಿಸಿಕೊಳ್ಳುತ್ತೇವೆ. ನಮ್ಮ ಹಾಡನ್ನು ನಮ್ಮ ಸಾಹಿತಿಗಳು ಪದಗಳಲ್ಲಿ ಅಲಂಕರಿಸಿದರೆ ಸಂಗೀತಗಾರರು , ಗಾಯಕರು ನಮ್ಮ ದನಿಯಾಗಿದ್ದಾರೆ. ಆರ್.ಏನ್. ಜಯಗೋಪಾಲ್, ಚಿ. ಉದಯ ಶಂಕರ್, ಹುಣಸೂರು ಕೃಷ್ಣಮೂರ್ತಿಯವರಿಂದ ಮೊದಲುಗೊಂಡು ಸಿದ್ದಲಿಂಗಯ್ಯ , ಎಂ.ಏನ್. ವ್ಯಾಸರಾವ್, ದೊಡ್ಡರಂಗೇ ಗೌಡ, ಹಂಸಲೇಖಾ ...ರೊಟ್ಟಿಗೆ ಬೆಳೆದು ಈಗ ಕಾಯ್ಕಿಣಿ,  ಭಟ್ರು , ಭಂಡಾರಿಯವರೊಂದಿಗೆ ಮುನ್ನಡೆದಿದೆ. ಇನ್ನು ಘಂಟಸಾಲರಿಂದ ಪಿ.ಬಿ.ಎಸ್ , ಎಸ.ಪಿ.ಬಿ, ಸೋನು ನಿಗಮ್, ಸುಶೀಲಾ , ಜಾನಕಿ , ಚಿತ್ರಾ, ಶ್ರೆಯಾರ ವರೆಗೆ ಅದೆಷ್ಟೋ ಗಾಯಕರು ಸೊಗಸಾಗಿ ಹಾಡಿ ಸಾಹಿತ್ಯ, ಸಂಗೀತವನ್ನು ನಮ್ಮದಾಗಿಸಿದ್ದಾರೆ. ಕ್ಯಾಸೆಟ್ಟುಗಳು ಸಾಮಾನ್ಯವಾಗುವ ಮುನ್ನ ಆಕಾಶವಾಣಿಯ ಕಾರ್ಯಕ್ರಮಗಳಿಗೆ ಕಾಯುತ್ತಿದ್ದ ದಿನಗಳಿದ್ದುವಂತೆ. ಅಮಿನ್ ಸಯಾನಿಯ  'ಬಿನಾಕ ಗೀತ್ ಮಾಲ' ಮರೆತವರಾರು ?   ಸಿನೆಮಾವೊಂದರ ಹಾಡುಗಳ ಸಣ್ಣ ಪುಸ್ತಕ ಮಾಡಿ ಥಿಯೇಟರುಗಳ ಮುಂದೆ ಮಾರುತ್ತಿದ್ದುದ್ದನ್ನು  ನಮ್ಮ ಪೀಳಿಗೆಯೂ ಕಂಡಿದೆ. ಹಾಡುಗಳಿಗೆ ಇನ್ನೊಂದಷ್ಟು ವಾದ್ಯಗಳನ್ನು ಸೇರಿಸುವ ಅದೆಂಥದೋ 'ಝಂಕಾರ್ ಬೀಟ್ಸ್' ಅನ್ನೋದು ಕೆಲವರ್ಷ ಚಾಲ್ತಿಯಲ್ಲಿತ್ತು. 'ವಿತ್ ಜಾಂಕಾರ್ ಬೀಟ್ಸ್' ಅಂತ ಕ್ಯಾಸೆಟ್ಟುಗಳ ಮೇಲೆ ಬರೆದಿರೋದು. ಕೆಲವರಿಗದು ಇಷ್ಟವಾದರೆ ಕೆಲವರಿಗೆ ಕಿರಿಕಿರಿ. ಹಾಡುಗಳ , ಸಿನೆಮಾಗಳ ಕ್ಯಾಸೆಟ್ಟುಗಳನ್ನು ಬಾಡಿಗೆ ಕೊಡುವ ಲೈಬ್ರರಿಗಳು ಗಲ್ಲಿ ಗಲ್ಲಿಗೂ ಇದ್ದವು .  ಅಲ್ಲೊಂದು ಇಲ್ಲೊಂದು ಸಿ.ಡಿ ಲೈಬ್ರರಿಗಳು ಕಂಡರೂ,  ಈಗ ಎಲ್ಲವನ್ನೂ ಆನ್ಲೈನ್ ನಲ್ಲಿ ಕೇಳಿ ನೋಡುವ ಕಾಲ.

ಹಾಡುಗಳನ್ನು ಕೇಳುವ ರೀತಿ ಬದಲಾದಂತೆ ಹಾಡುಗಳೂ ಬದಲಾಗಿವೆ.  'ಕುಣಿವ ನವಿಲು ಗಂಡು ಕೇಳೆಲೆ ...' ಎಂದ ಹೀರೋ ಈಗ ' ಗಂಡು ನವಿಲಿಗೆ ಮಾತ್ರನೇ ಪುಕ್ಕ ಕೊಟ್ಟ ಭಗವಂತ ...ಹೆಣ್ಣು ಮಕ್ಕಳು ಕುಣಿಸೋದಕ್ಕೆ ವರ್ಲ್ಡು ಫೇಮಸ್ಸು ...' ಅಂತಿದಾನೆ. ಅಮೃತವರ್ಷಿಣಿ ಸಿನೆಮಾದ ಹಾಡುಗಳ ಗುಂಗು ಇಂದಿಗೂ ಕಡಿಮೆಯಾಗಿಲ್ಲ.  ತನ್ನ ಪ್ರೀತಿ ಸುಳ್ಳಾದರೆ ಜಗತ್ತೇ ಸುಳ್ಳು ಎನ್ನುವ ವಿಶ್ವಾಸ ಯಾವ ಪ್ರೆಮಿಗಿದ್ದೀತು ? 'ಮನಸೇ ಬದುಕು ನಿನಗಾಗಿ ಬವಣೆ ನಿನಗಾಗಿ... '  ಎಂದ ಪ್ರೇಮಿ ಅಮರನಾಗಿದ್ದಾನೆ. ಒಂದಿಡಿ ಕ್ಯಾಸೆಟ್ಟಿನಲ್ಲಿ 'ಮನಸೇ ...'  ಎಂಬ ಹಾಡನ್ನೇ ಮತ್ತೆ ಮತ್ತೆ ಹಾಡಿಸಿ ಕೇಳಿದವರಿದ್ದಾರೆ.
ಇಲ್ಲಿಯವರೆಗೆ ೮೦-೯೦ರ ದಶಕದ ಹಾಡುಗಳ ಬಗ್ಗೆ ಬರೆದಿದ್ದು ನೋಡಿ ಇತ್ತೀಚಿನ ಹಾಡುಗಳು ಚೆನ್ನಾಗಿಲ್ಲವೇ ? ಎಂದು ಕೇಳಬೇಡಿ. ನನ್ನಂತ  ಸಾಮಾನ್ಯ ಪ್ರೇಕ್ಷಕರು  ನೋಡಿಸಿಕೊಂಡು ಹೋಗುವ  ಎಲ್ಲ ಸಿನೆಮಾಗಳು ಕೇಳಬಲ್ಲ ಎಲ್ಲ ಹಾಡುಗಳೂ ನಮ್ಮವೇ. ಮುಂಗಾರುಮಳೆಯಿಂದ ಇತ್ತೀಚಿನ ರಂಗಿತರಂಗದ ವರೆಗಿನ ಎಲ್ಲ ಹಾಡುಗಳೂ ನಮ್ಮ ಪಯಣದ ಭಾಗವಾಗಿವೆ.  ಅಷ್ಟಾಗಿ ಸಿನೆಮಾ ನೋಡದವರಿಗೂ ಹಾಡುಗಳ ಪರಿಚಯವಿದೆ. ಬದುಕಿನ ಪ್ರತೀ ಹಂತದಲ್ಲೂ ನಮ್ಮ ದನಿಯಾದ ಹಾಡುಗಳಿವೆ. ಮೌನವಾಗಿ ಏಕಾಂತದಲ್ಲಿ ಬದುಕುವುದು ಕೆಲವರಿಗೆ ಮಾತ್ರ ಸಾಧ್ಯ ಉಳಿದವರಿಗೆ ಬದುಕು ಎಂದೆಂದಿಗೂ ಹಾಡಿನ ಬಂಡಿ. ಬದುಕಿನ ಪ್ರತೀ ಘಟ್ಟಕ್ಕೂ ಒಂದು ಹಾಡು ಕೊಟ್ಟವರಿಗೆಲ್ಲರಿಗೂ ನಮನಗಳು.






                                         ಈ ಬರಹ ಅವಧಿಯಲ್ಲಿ ಪ್ರಕಟವಾಗಿದೆ