ಶನಿವಾರ, ಡಿಸೆಂಬರ್ 13, 2008

ಕಾಂಕ್ರೀಟು ಕಾಡಿನ ಕನವರಿಕೆ...(ಪುಟಾಣಿ ಕತೆ-10)

ರಾತ್ರಿ ಹನ್ನೆರಡಿರಬೇಕು.

ನವಿಲು ರೆಕ್ಕೆ ಬಿಚ್ಚಿ ಹಣೆ ಮೇಲೆ ಕೂತಿತ್ತು. ಜೂನಲ್ಲಷ್ಟೇ ನವಿಲು ನೋಡಿದ ನೆನಪು ನನಗೆ. ಈಗಂತೂ ಕುಣಿದಾಡುವುದಷ್ಟೇ ಬಾಕಿ. ಬೆಂಗಳೂರಿನಂತಹ ಆದಿ ಇಲ್ಲದ ಅಂತ್ಯ ಪ್ರಾಸದಲ್ಲಿ ಈ ನವಿಲು ಬಂದದ್ದಾದರೂ ಹೇಗೆ? ಹೇಗೆ ಬಂದರೇನು? ನನಗೆ ನವಿಲು ಮಾತ್ರ ಮುಖ್ಯ.


ಸಾಕಬೇಕು ಈ ನವಿಲನ್ನು. ಅದು ತಿನ್ನುವ ಹುಳು-ಹುಪ್ಪಟೆ ಸಿಗುವ ಅಂಗಡಿ ತಡಕಾಡಬೇಕು. ಅದನ್ನೆಲ್ಲಿ ಮಲಗಿಸಬೇಕು ಎಂಬುದನ್ನೂ ಯೋಚಿಸಬೇಕಷ್ಟೇ. ಅಜ್ಜಿಯ ಹೇನು ತೆಗೆದ ಹಾಗೆ ನವಿಲಿನ ಗರಿಗಳನ್ನು ತೆಗೆಯಬೇಕು. ಈಗಂತೂ ನವಿಲಿನ ಗರಿಯ ಬೀಸಣಿಗೆ ಸಿಗುವುದೇ ಇಲ್ಲ. ಸಿಕ್ಕರೆ 100 ರುಪಾಯಿ ಎನ್ನುತ್ತಾರೆ ಬೋಳಿಮಕ್ಳು. ಈಗ ನವಿಲೇ ಮನೆಯಲ್ಲಿದೆ. ಬೇಕಿದ್ದಾಗ ಬೀಸಣಿಗೆ ಮಾಡಿಕೊಂಡರಾಯಿತು. ತೀರಾ ಅಗತ್ಯ ಬಿದ್ದರೆ ಮಾಂಸ ಮಾರಿ ತಿಂಗಳ ಬಾಡಿಗೆ ಕಟ್ಟಬಹುದು.


ಇಷ್ಟೆಲ್ಲ ಕಾಟ ಕೊಟ್ಟರೆ ನವಿಲು ಹಾರಿ ಹೋಗಲ್ವಾ? ಯಾಕೆ ಹಾರಿ ಹೋಗುತ್ತೆ? ಅದು ನನ್ನ ಗುಲಾಮ. ಆಫೀಸಿನಲ್ಲಿ ನಾನು ಬಾಸ್ಗೆ ಹೇಗೋ ಹಾಗೆ. ಆದರಿಲ್ಲಿ ನಾನೇ ಬಾಸ್. ಇದನ್ನೆಲ್ಲಾ ನವಿಲಿಗೆ ಅರ್ಥ ಮಾಡಿಸುವುದು ಹೇಗೆ? ಅದೇನು ಕಷ್ಟ ಅಲ್ಲ. ಬಾಸ್ ಪ್ರತೀ ಬಾರಿಯೂ ರಾತ್ರೋರಾತ್ರಿ ಕೆಲಸದ ಪ್ರಪಾತಕ್ಕೆ ಸದ್ದಿಲ್ಲದೆ ನನ್ನನ್ನು ನೂಕಿ ಸಿಗರೇಟು ಹಚ್ಚಿ ಕೂರುತ್ತಾನಲ್ಲ ಹಾಗೆ ಕೂರಬೇಕು. ಬಾಸ್ ಪ್ರತೀ ಬಾರಿ ಹೀಗೆ ಮಾಡಿದಾಗ ನನಗೆ ತಿಳಿಯಲೇ ಇಲ್ಲ. ಇನ್ನು ನವಿಲಿಗೆ ಹೇಗೆ ಗೊತ್ತಿರುತ್ತೆ ಇಂತಹ ಕಪಟತನಗಳು. ಕಾಡಿನಿಂದ ಬಂದ ಮುಂಡೇವಕ್ಕೆ ಏನು ಹೆಚ್ಚಿಗೆ ಗೊತ್ತಿರುತ್ತೆ. ನಿಯತ್ತು ಇರುತ್ತೆ. ಪ್ರತಿಭಟನೆಯ ಸುಳಿಯಂತೂ ಕನಸಿನ ಮಾತು.


ಹೀಗೆಲ್ಲ ಯೋಚಿಸುತ್ತಿದ್ದಾಗ ನವಿಲು ಜೋರಾಗಿ ಕೂಗಿತು. ನನ್ನ ಹಣೆ ಮೇಲೆ ನಾಲ್ಕಾರು ಬಾರಿ ಶತಪಥ ತಿರುಗಿತು.

ನೇರವಾಗಿ ನನ್ನ ಕಣ್ಣೊಂದನ್ನು ಕುಕ್ಕಿತು.

ಬುಧವಾರ, ಡಿಸೆಂಬರ್ 3, 2008

ಭಯೋತ್ಪಾದನೆ ವಿರುದ್ಧ ಸಮರಕ್ಕೂ ಸಿದ್ಧ

ಮುಂಬೈ ಘಟನೆಯಿಂದ ಇಡೀ ದೇಶ ಮತ್ತೆ ನಲುಗಿದೆ.

"ನಮ್ಮ ದೇಶ ಕೆಟ್ಟು ಕೆರ ಹಿಡಿದಿದೆ. ಯಾವತ್ತೂ ಬದಲಾಗೋಲ್ಲ" ಅಂತೆಲ್ಲಾ ಮಾತಾಡುತ್ತಿದ್ದ ವಿದ್ಯಾವಂತರು, ಯುವಕರು "ನಾವೇನಾದರು ಅಲ್ಪ-ಸ್ವಲ್ಪ ಕೊಡುಗೆಯನ್ನಾದರೂ ಕೊಡಬೇಕು. ಇಲ್ಲಾಂದ್ರೆ ಈ ದೇಶ ನಮ್ಮ ಮೊಮ್ಮಕ್ಕಳ ಕಾಲಕ್ಕೂ ಬದಲಾಗೋಲ್ಲ" ಅಂತ ನಿರ್ಧರಿಸಿದಂತಿದಂತಿದೆ. ಒಂದಾಗಿ ದೇಶವನ್ನು ಬದಲಾಯಿಸೋಣ ಬನ್ನಿ ಎಂದು ಪರಸ್ಪರರನ್ನು ಕರೆಯುತ್ತಿದ್ದಾರೆ. "ವಿ ನೀಡ್ ಚೇಂಜ್" ಎನ್ನುತ್ತಿದೆ, ಇಡೀ ದೇಶ. ಜಾತಿ-ಮತಗಳಿಗಿಂತ ನಾನು ಭಾರತೀಯ ಎನ್ನುವುದೇ ಮುಖ್ಯವಾಗುತ್ತಿದೆ ಇಲ್ಲಿ. "ರಾಜಕಾರಣಿಗಳಿಗೆ ನೋ ಎಂಟ್ರಿ" ಇದು ಎಲ್ಲೆಡೆಯೂ ಪ್ರತಿಧ್ವನಿಸುತ್ತಿರುವ ಆಕ್ರೋಶ.

ಮುಂಬೈಯಲ್ಲಿ ನಡೆದ ಭಯೋತ್ಪಾದಕ ಘಟನೆಯಲ್ಲಿ ಹುತಾತ್ಮರಾದ ವೀರ ಯೋಧರಿಗೆ, ಮಡಿದ ಮಂದಿಗೆ ನಮನ ಸಲ್ಲಿಸುವ ಪುಟ್ಟ ಸಮಾರಂಭ ಕಬ್ಬನ್ ಪಾರ್ಕ್ ಪಕ್ಕದ ಗಾಂಧಿ ಪ್ರತಿಮೆ ಎದುರು ನಡೆಯಿತು. ಆ ಕ್ಷಣಗಳು ಕ್ಯಾಮರಾ ಕಣ್ಣಲ್ಲಿ
.























(ಚಿತ್ರಗಳು:ಗೌತಮ್)




ಮಂಗಳವಾರ, ನವೆಂಬರ್ 4, 2008

ರುದ್ರ ಭೂಮಿಯೊಳು ಭದ್ರ ಸಮಾಧಿ....(ಕತೆ)

"ಏನೋ ದಿನೇ ದಿನೇ ತೆಳ್ಳಗಾಗುತ್ತಿದ್ದೀಯಾ"
"ಹೌದೌದು.ಮುಂದೊದು ದಿನ ಕರಗಿಯೇ ಹೋಗುತ್ತೇನೆ!"

ಅನುಮಾನವೇ ಇಲ್ಲ.ಅದು ಕಾಳಿಂಗ ಸರ್ಪ.ಗೊತ್ತಾಗುವಷ್ಟರಲ್ಲೇ ಕಚ್ಚಿಯಾಗಿತ್ತು. ಭಗ್ಗನೆ ಎದೆ ಭಯದಿಂದ ಹೊತ್ತಿಕೊಂಡಿತು. ಒಂದುಮಧ್ಯಾಹ್ನವಿರಬಹುದು, ಘಟನೆ ಸಂಭವಿಸಿದ್ದು. ಮನೆ ಕಡೆ ಹೆಜ್ಜೆ ಹಾಕಿದೆ. ಕಾಲುಗಳು ಬಸವಳಿಯುತ್ತಿವೆ ಎನಿಸಿತು. ಬಹುಷಃವಿಷವೇರುತ್ತಿರಬೇಕು. ಇನ್ನು ಐದೋ-ಆರೋ ನಿಮಿಷ. ಮತ್ತೆ ಮನೆ ಮುಂದೆ ವಿಷಾದದ ಛಾಯೆ. ಅಪ್ಪ ಗಾಡ ಮೌನಿಯಾಗುತ್ತಾನೆ. ಅಮ್ಮ ಕರಗಿ, ಕರಗಿ ಗೋಳಿಗೆ ಹಣೆ ಹಚ್ಚಿಕೊಳ್ಳುತ್ತಾಳೆ. ನಾನು ಸತ್ತು ನಾಲ್ಕೋ-ಐದು ಗಂಟೆಗಳಲ್ಲಿ ಸುಡಬಹುದು. ಹೆಚ್ಚೆಂದರೆದೊಡ್ಡಪ್ಪ ಬರುವವರೆಗೆ ಕಾಯಬಹುದೇನೋ. ಒಂಭತ್ತನೇ ದಿನಕ್ಕೆ ಹತ್ತಿರದವರು-ದೂರದವರು ಬರುತ್ತಾರೆ. ಊಟ ಮಾಡಿಹೋಗುತ್ತಾರೆ. ಇನ್ವಿಟೇಶನ್ ಕಾರ್ಡಲ್ಲಿ ರಾಹುಲ ಮೊಬೈಲ್ನಲ್ಲಿ ತೆಗೆದ ನನ್ನ ಫೋಟೋ ಹಾಕಬಹುದು. ಮನೆ ತಲುಪಿದರೆ ಅದನ್ನೇಹಾಕಬೇಕು ಅಂತ ಅವನಿಗೆ ಮೆಸೇಜು ಮಾಡಿಬಿಡಬೇಕು.

ಮನೆ ಹತ್ತಿರ ಬಂತು. ಛಾವಡಿಯಲ್ಲಿ ಕೂತೆ. ಫ್ಯಾನು ಅದುಮಿದೆ. ರೆಕ್ಕೆ ಬಡಿಯಲು ಪುರುಸೊತ್ತಿಲ್ಲದ ಪ್ರಾಣಪಕ್ಷಿಗೆ ಯಾಕೆ ಬೇಕುಫ್ಯಾನಿನ ಉಸಾಬರಿ?ಪ್ರಾಣ ದೇಹದಿಂದ ಕಳಚಿಕೊಂಡಾಗ ಮೈಯೆಲ್ಲ ಬೆವರುತ್ತದಾ? ಅಸಾಧ್ಯ ನೋವಾಗುತ್ತದಾ? ಗೊಂದಲಗಳಲ್ಲೇ ಕಣ್ಣು ಮುಚ್ಚಿದೆ.

ಫಕ್ಕನೆ ಎಚ್ಚರವಾಯ್ತು. ಕಣ್ಣು ಬಿಟ್ಟಾಗ ಬೆಳಿಗ್ಗೆ ಏಳು. ಇಷ್ಟಕ್ಕೂ ನಾನು ಈವರೆಗೆ ಅನುಭವಿಸಿದ್ದು ಕನಸೇ? ಕಾಳಿಂಗ ಸರ್ಪ ಕಚ್ಚಿದ್ದುನಿಜವಾ? ಕಚ್ಚಿದ್ದೇ ನಿಜವಾದರೆ ಅದು ನಿದ್ದೆಯಲ್ಲೋ,ಎಚ್ಚರದಲ್ಲೋ? ಇಷ್ಟೆಲ್ಲಾ ಆಗಿದ್ದರೂ ನಾನೇಕೆ ಸಾಯುತ್ತಿಲ್ಲ. ಸ್ಮೃತಿ-ವಿಸ್ಮೃತಿ
ಗಳ ನಡುವೆ ಕಳೆದು ಹೋಗುತ್ತಿದ್ದೇನೆಯೇ?

ಎದೆ ಶುಭ್ರವಾಗಿತ್ತು. ಮನಸ್ಸು ಗೊಂದಲಗಳ ಮೂಟೆ. ಮುಖಕ್ಕೆ ನೀರು ಚಿಮುಕಿಸಿದೆ. ಬಟ್ಟ ಬಯಲು ಅಪ್ಪಿಕೊಂಡ ಮೊದಲಮಳೆಯಂತೆ ಭಾಸವಾಯಿತು. ಉಲ್ಲಾಸ ಚಿಮ್ಮುತ್ತಿದೆಯೆನಿಸಿತು. ಎಂದಿನಂತೆ ಕನ್ನಡಿಯಲ್ಲಿ ಮುಖ ನೋಡಿಕೊಂಡೆ. ಬೆಚ್ಚಿಬಿದ್ದೆ. ಮೂರ್ಛೆ ಹೋಗುವುದೊಂದೇ ಬಾಕಿ. ಆಯಾಸಗಳೆಲ್ಲಾ ರಾತ್ರಿ ಕರಗಿ ನೆರಿಗೆಯಾಗಿ ಬಿದ್ದಿದೆಯೇನೋ ಎನ್ನುವಷ್ಟರ ಮಟ್ಟಿಗೆ ಮುಖದತುಂಬಾ ನೆರಿಗೆ. ಶುದ್ಧ ಬರಗೆಟ್ಟ ನೆಲದಂತಹ ಒಡೆದ ಮುಖ ವಿಕಾರವಾಗಿ ಆಕಳಿಸುತ್ತಿತ್ತು. ಬೆವರು ಕಟ್ಟೆ ಒಡೆಯಲು ಪ್ರಾರಂಭಿಸಿತು.ದೇಹ ಗಾಳಿಗೆ ಸಿಕ್ಕ ತರಗೆಲೆಯಂತೆ ಅಲ್ಲಾಡಿತು. ನನ್ನಲ್ಲಾದ ಬದಲಾವಣೆಯಿಂದ ಎದೆ, ಸಾವಿರ ಪಿಸ್ಟನ್ನಿನ ವೇಗದಂತೆಹೊಡೆದುಕೊಳ್ಳುತ್ತಿತ್ತು. ಸಾವು ರಕ್ತ ಹೀರಲು ಪ್ರಾರಂಭಿಸಿದೆಯೇ? ದಿನ ದಿನವೂ ಸ್ವಲ್ಪ ಸ್ವಲ್ಪವೇ ಸಾಯಲು ತಯಾರಿಮಾಡಿಕೊಳ್ಳಬೇಕೇ? ಇವತ್ತಂತೂ ಕಾಳೇಜಿಗೆ ಬೇಗ ಹೋಗಬೇಕು. ಅಸೈನ್ಮೆಂಟು ಬೇರೆ ಇಡಬೇಕು. ಸ್ನಾನಕ್ಕೆ ಬಚ್ಚಲಿಗೆ ಓಡಿದೆ. ಬೈರಾಸು ಜೊತೆಗಿತ್ತು. ಕರೆಂಟು ಬೇರೆ ಇರಲಿಲ್ಲ. ಹೊರಗೆ ಬೆಳಕಿದ್ದರೂ ಬಚ್ಚಲಿಗೆ ಯಾವತ್ತೂ ಸೂರ್ಯೋದಯವಾಗುತ್ತಿರಲಿಲ್ಲ. ಅಲ್ಲಿಬಲ್ಬೇ ಸೂರ್ಯ,ಚಂದ್ರ, ನಕ್ಷತ್ರ. ಇಲ್ಲದಿದ್ದರೆ ಅಮಾವಾಸ್ಯೆ ಕತ್ತಲು. ನಮ್ಮ ಮನೆಗೆ ಇದೊಂದು ಶಾಪ. ಬಾಲ್ದಿಗೆ ಹಂಡೆಯಿಂದ ಬಿಸಿನೀರು ತೋಡಿದೆ. ಸ್ವಲ್ಪ ತಣ್ಣೀರು ಹಾಕಿದೆ. ಉಗುರು ಬೆಚ್ಚಗಿನ ನೀರು ಅಂತ ಖಾತ್ರಿ ಮಾಡಿ, ಖುಷಿಯಿಂದ ಮೈಯ್ಗೆ ಸುರಿದಾಗ ಸುಟ್ಟುಹೋಗುವಷ್ಟು ಬಿಸಿ. ತಣ್ಣೀರು ಸಾಕಾಗಲಿಲ್ಲವೇನೋ. ಮತ್ತೆ ಬಾಲ್ದಿಗೆ ಸೇರಿಸಿದೆ. ಈಗಲೂ ಮೈ ತುಂಬಾ ಉರಿ, ಉರಿ. ಬಿಸಿ ನೀರಿನಸಹವಾಸ ಸಾಕಪ್ಪಾ ಸಾಕು ಅಂದುಕೊಂಡು ತಣ್ಣೀರನ್ನು ಮೈಗೆ ಹೊಯ್ದುಕೊಂಡೆ. ಯಾವತ್ತಿಗಿಂತಲೂ ನೀರು ತಂಪಾಗಿತ್ತು. ದೇಹಕ್ಕೂ ಹಿತ ಎನಿಸುತ್ತಿತ್ತು. ಮತ್ತೆರಡು ಬಾಲ್ದಿ ತಣ್ಣೀರು ಸುರಿದುಕೊಂಡೆ. ಜಲಪಾತವೊಂದರ ಕೆಳಗೆ ಬೆತ್ತಲೆ ನಿಂತ ಅನುಭವ. ಮನಸ್ಸು ಅರಳಲು ಪ್ರಾರಂಭವಾಯ್ತು. ಮೈಯೊರೆಸಲು ಬೈರಾಸು ತೆಗೆದಾಗ ಕರೆಂಟು ಬಂತು. ಒರಸುತ್ತಾ ಮೈ-ಕೈನೋಡಿಕೊಂಡಾಗ ಹೌಹಾರಿದೆ. ಎದೆಯ ಭಾಗದಲ್ಲಾಗಲೇ ಕೃಷ್ಣ ಕಪ್ಪು. ಕಪ್ಪುಪಟ್ಟೆ ಸುರುಳಿ ಬಿಚ್ಚಿತ್ತು. ಬಲಗೈಯ ಅರ್ಧಭಾಗದವರೆಗೆ ಹರಡಿ ಬೆಳೆಯುತ್ತಲೇ ಇತ್ತು. ನೋಡ ನೋಡುತ್ತಿದ್ದ ಹಾಗೆಯೇ ಸ್ವಲ್ಪ-ಸ್ವಲ್ಪವೇ ಆವರಿಸಿಕೊಳ್ಳುತ್ತಿತ್ತು. ಕಪ್ಪಾದಜಾಗದಲ್ಲೇನೋ ಮೃದುತ್ವ. ಮಿಂಚಿನ ಸಂಚಲನ.

ಅನುಮಾನವೇ ಇಲ್ಲ. ನಾನು ಸಾಯುತ್ತಿಲ್ಲ. ಹಾವಾಗಿ ಬದಲಾಗುತ್ತಿದ್ದೇನೆ. ಕಾಳಿಂಗ ಸರ್ಪವಾಗಿ ಬದಲಾಗುತ್ತಿದ್ದೇನೆ. ಸಾವು ಹೀಗೂಸಾಧ್ಯವಾ? ಪೂರ್ತಿ ಹಾವಾಗಿ ಹೆಡೆ ಬಿಚ್ಚಲು ಇನ್ನೆಷ್ಟು ಗಂಟೆ ಬೇಕು?ನಾನು ಹಾವಾಗಿ ಬದಲಾಗುತ್ತಿರುವುದು ವಾಸ್ತವವೇ ಅಥವಾನನ್ನ ಭ್ರಮೆಯ ಭಾಗವೇ? ಛೆ...ಛೆ... ಮನುಷ್ಯನೊಬ್ಬ ಹಾವಾಗುವುದು ಅಂದರೆ ನಂಬೋದಕ್ಕೆ ಸಾಧ್ಯಾನಾ? ಬಹುಷಃ ಸಾಯುವಮುಂಚೆ ಒಳ್ಳೆಯದೆಲ್ಲ ಕರಗಿ ಆವಿಯಾಗಿ ಕೆಟ್ಟದ್ದು ಕಪ್ಪಗಿ ಹೆಪ್ಪುಗಟ್ಟುತ್ತಿದೆಯೇ? ಗೊಂದಲದ ಕಡಲು ಉಕ್ಕುತ್ತಿತ್ತು.

ಕಾಳಿಂಗ ಕಚ್ಚಿದ ದಿನ ತೋಟದಿಂದ ಮನೆಗೆ ಬರುತ್ತಿದ್ದಾಗ ಗದ್ದೆ ಬದಿ ಅಚ್ಚಣ್ಣ ಸಿಕ್ಕಿದ್ದರು. ಮನೆಗೆ ಹೋಗಿದ್ದರಂತೆ. ನನ್ನನ್ನ ನೋಡಿತಿಂಗಳಾಯ್ತಲ್ಲೇನೋ ನಿನ್ನನ್ನ ನೋಡಿ. ದಿನೇ ದಿನೇ ತೆಳ್ಳಗಾಗುತ್ತಿದ್ದೀಯಾ ಮಾರಾಯ" ಅಂದರು. ನಾನು ನಗುತ್ತಾ "ಹೌದೌದುಮುಂದೊಂದು ದಿನ ಕರಗಿಯೇ ಹೋಗುತ್ತೇನೆ" ಎಂದಿದ್ದೆ. ಹಾಗಾದರೆ ನಾನು ಸಾಯುವ ವಿಚಾರ ನನಗೆ ಗೊತ್ತಿಲ್ಲದಿದ್ದರೂ, ನನ್ನಅರಿವಿಗೆ ಗೊತ್ತಿತ್ತಾ? ತಿಂಗಳಿನಿಂದ ಇಷ್ಟಿಷ್ಟೇ ಸಾಯುತ್ತಿದ್ದವನಿಗೆ ಸಾಯುತ್ತಿರುವ ಅನುಭವ ಕೊಟ್ಟದ್ದು ಕಾಳಿಂಗ ಸರ್ಪವಾ?

ಮೈ ಮುಚ್ಚಿಕೊಂಡು ಬಚ್ಚಲಿನಿಂದ ರೂಮಿಗೆ ದಡಬಡಿಸಿದೆ. ಉದ್ದನೆಯ ಕೈಯ ಅಂಗಿಯನ್ನು ಹುಡುಕಿ ಹಾಕಿದೆ. ಸರಸರ ನಡೆಯುತ್ತಾಗೇಟು ದಾಟಿದ ಮೇಲೆ 'ಅಮ್ಮ, ಕಾಲೇಜಿಗೆ ಹೋಗಿ ಬರ್ತೀನಿ' ಅಂತ ಕೂಗು ಹಾಕಿದೆ. 'ಕಾಲೇಜೂ ಬೇಡ. ಏನೂ ಬೇಡ. ಬೇಕಿದ್ದರೆಮಧ್ಯಾಹ್ನ ನಂತರ ಹೋದರಾಯಿತು' ಅಂತನ್ನಿಸುತ್ತಿತ್ತು. ಆದರೂ ಹೆಜ್ಜೆ ಸರಸರ ಸಾಗುತ್ತಿತ್ತು. ಮನೆಯಿಂದ ಎರಡು ಮೈಲಿ ನಡೆದರೆಸಾಕು. ಕಾಲೇಜಿಗೆ ಬಸ್ಸೋ, ಜೀಪೋ ಸಿಗುತ್ತಿತ್ತು. ಆದರೆ ಸಾಗುವ ಎರಡು ಮೈಲಿ ಮಾತ್ರ ನಿರ್ಜನ ಸಂತೆ. ಕಾಡು ಬೇರೆ. ಬಳುಕುವಹದಿಹರೆಯದ ಸುಂದರಿಯ ಹಾಗಿರುವ ಕಾಲುದಾರಿಯಲ್ಲಿ ನಡೆಯಬೇಕು.

ನಡೆಯುತ್ತಲೇ ಇದ್ದೆ. ಶ್ವಾಸಕೋಶಗಳನ್ನು ಮೊದಲ ಬಾರಿಗೆ ಹಿಂಡಿದಂತಾಯಿತು. ಕೆಮ್ಮು ಬಂತು ಅಂತ ಬಾಯಿ ತೆರೆದು ಕುಳಿತರೆಹೊರಬಿದ್ದದ್ದು ದೊಡ್ಡ ಶ್ವಾಸ. ನಂತರ ನಾನು ನಾನಾಗಿರಲಿಲ್ಲ. ಮೂಗಿನ ಹೊಳ್ಳೆ ಒಳಗೆ ಹೋದ ಗಾಳಿ ಹೊರ ಬಂದಾಗ ಬುಸ್ಎಂದು ಶಬ್ದ ಮಾಡುತ್ತಿತ್ತು. ಹೊರ ಬರುವ ಗಾಳಿಯಲ್ಲಿ ರೋಷವಿತ್ತೋ, ಆವೇಶವಿತ್ತೋ ಬಲ್ಲವರಾರು. ಅರ್ಧ ಮೈಲಿ ನಡೆದಿರಬಹುದು.
ನಡಿಗೆ ಮತ್ತೂ ವೇಗವಾಗುತ್ತಿದೆಯಲ್ಲ ಎಂದು ನನ್ನನ್ನ ನೋಡಿಕೊಂಡಾಗ ಆಶ್ಚರ್ಯವಾಯ್ತು. ನಾನು ನಡೆಯುತ್ತಿಲ್ಲ, ತೆವಳುತ್ತಿದ್ದೇನೆ. ಕೈ,ಕಾಲುಗಳೆಲ್ಲಾ ಅಂಟಿ ಆಗಲೇ ಹೊತ್ತಾಗಿತ್ತು. ಅಡ್ಡಡ್ಡ ಬೆಳೆದಿದ್ದವನು ದಾರಿಯುದ್ದಕ್ಕೂ ಉದ್ದುದ್ದ ಬೆಳೆದಿದ್ದೆ. ಆದರೆ ಎದೆಲ್ಲ ನನ್ನಗಮನಕ್ಕೇ ಬರಲಿಲ್ಲ. ಹಾಕಿದ್ದ ಜೀನ್ಸ್ ಪ್ಯಾಂಟು, ಅಂಗಿ ಪೊರೆ ಕಳಚಿದಂತೆ ದಾರಿಯಲ್ಲಿ ಕಳಚಿ ಬಿದ್ದಿತ್ತು. ನಗ್ನದೇಹಿ ನಾನೀಗ. ಸಾಯುವ ಪ್ರತೀ ಪ್ರಕ್ರಿಯೆಯೂ ಹೀಗೇನಾ? ನಡೆದೇ ಸಾಯಬೇಕಾ? ಕತ್ತು, ಮುಖ ಎರಡನ್ನು ಬಿಟ್ಟು ಇಡೀ ದೇಹ ಕಪ್ಪು ಕಪ್ಪಾಗಿತ್ತು. ಮೆತ್ತಗಾಗಿತ್ತು. ಸದ್ಯ, ಮಾತನಾಡಲಾದರೂ ಸ್ವಾತಂತ್ರ್ಯವಿದೆಯಲ್ಲ ಅಂದುಕೊಂಡೆ.

ಕ್ಲಾಸು ತಲುಪಿದೆ. ಆವತ್ತಿನ ಮೊದಲ ಪಿರೇಡು ಇಂಗ್ಲೀಷ್ ಲಿಟರೇಚರ್. ಕ್ಲಾಸಿಗೆ ಬಂದ ಪ್ರೊಫೆಸರ್ರು ಅಟೆಂಡೆನ್ಸು ಕರೆಯಲು ಶುರುಮಾಡಿದರು. ನನ್ನ ಹೆಸರು ಕರೆದರು. ಎಂದಿನಂತೆ 'ಎಸ್ ಸಾರ್' ಅಂದೆ. ಯಾವುದೋ ಅಗೋಚರ ಸಿಡಿಲ ಧ್ವನಿಸುಳಿಗಾಳಿಯೊಂದಿಗೆ ಹೊರಬಂದಂತಿತ್ತು, ನನ್ನ ಮಾತು. ನಾನು ಮಾತಾಡಿರಲಿಲ್ಲ, ಬುಸುಗುಟ್ಟಿದ್ದೆ. ನಾನು ಕುಳಿತುಕೊಳ್ಳುವಜಾಗದಲ್ಲಿ ನಾನಿರಲಿಲ್ಲ! 'ಸಾರ್ ನಾನು ಕಾಳಿಂಗ ಸರ್ಪವಾಗಿ ಬದಲಾಗಿದ್ದೇನೆ' ಎಂದು ಹೇಳಿದೆ. ಮೆಟಫಿಜಿಕಲ್ ಪೋಯೆಟ್ರಿಎಂದೆಲ್ಲಾ ಬಡಬಡಿಸುತ್ತಿದ್ದ ಪ್ರೊಫೆಸರಿಗೆ ನಾನವತ್ತು ಸೂಪರ್ ನ್ಯಾಚುರಲ್ ಎಲಿಮೆಂಟಿನಂತೆ ಕಂಡೆ. ಒಂದರೆಕ್ಷಣ ಇಡೀ ತರಗತಿಸ್ಥಬ್ದ. ನಂತರದ್ದು ಎದ್ದೆವೋ ಬಿದ್ದೆವೋ ಎಂಬ ಓಟ. ಜೊತೆಗೆ ಕಿರುಚಾಟ, ಅರಚಾಟ. ಕಾಳಿಂಗ....ಕಾಳಿಂಗ....ಸರ್ಪ....ಕಾ
"
ಳಿಂಗಸರ್ಪ.... ನಂತರ ನಾನಲ್ಲಿರಲಿಲ್ಲ.

'ಥೂ ಇವರ ಸಹವಾಸವೇ ಬೇಡ. ಬದಲಾದವರು ಯಾವತ್ತಿಗೂ ಇವರಿಗೆ ಬೇಡ. ಮೊದಲ ನೋಟದಲ್ಲಿ ಅವರಿಗೆ ಕಂಡ ಹಾಗೇನಾವಿರಬೇಕು. ಹಾಗಿದ್ದರೆ ಮಾತ್ರ ಲೋಕಕ್ಕೆ ಪ್ರೀತಿ-ಪಾತ್ರ. ಇತರರಿಗೆ ಬೇಕಾದಂತೆ ಬದುಕಬೇಕು. ಆಗ ಬದಲಾಯಿತು ಮುಖಅಂಗೈಯಗಲದ ಹೆಡೆಯಂತೆ. ಮೂಡಿತು ರೋಷದ ಕಡಲು. ರಣಚಂಡಿ ಬುಸುಗುಡುವಿಕೆ.

ಸೀದಾ ತೆವಳುತ್ತಾ, ಓಡುತ್ತಾ ಗುಡ್ಡವೊಂದರ ತುದಿಗೆ ಹೋಗಿ ನಿಂತೆ. ತುಂಬಾ ಹೊತ್ತು ಒಂಟಿಯಾಗಿದ್ದೆ. ನಿರಾಶನಾಗಿದ್ದೆ. ನನ್ನಬುಸುಗುಡುವಿಕೆ ಮಾತ್ರ ಕೇಳಿಸುತ್ತಿತ್ತು. ಮುಂದೇನು? ತೋಚಲಿಲ್ಲ. ಆಗ ಬಂದದ್ದು ರಣಹದ್ದು. ಗುಡ್ಡದ ಏಕಾಂಗಿ ಬೋಳು ಮರದತುದಿಯಲ್ಲಿ ಕೂತು ನನ್ನನ್ನೇ ನೋಡುತ್ತಿತ್ತು. ನಾನೂ ಹೆಡೆಯರಳಿಸಿದೆ. 'ನಿನಗೆ ಆಗಸ ತೋರಿಸುತ್ತೇನೆ. ಕನಸು ಕಾಣಬೇಡ. ಭವಿಷ್ಯದ ಚಿಂತೆ ಬೇಡ. ನಾನೇ ನಿನ್ನ ಕನಸು. ಎತ್ತರಕ್ಕೇರಲು ಗೋಪುರ ಕಟ್ಟಿದರೆ ಸಾಲದು. ಧೈರ್ಯ ಬೇಕು, ಬಾ' ಎಂದಿತು. ಕೊಕ್ಕಿನಿಂದ ಕುಕ್ಕಿತು.

ಆಗ ನಾನಂತೂ ಪೂರ್ಣ ಶೂನ್ಯ.

(ಉದಯವಾಣಿಯಲ್ಲಿ ಪ್ರಕಟವಾದ ಕತೆ)

ಸೋಮವಾರ, ಅಕ್ಟೋಬರ್ 13, 2008

ಯಾವ ಮೋಹನ ಮುರಳಿ ಕರೆಯಿತೋ...(ಪುಟಾಣಿ ಕತೆ-9)

ಊರಿಂದ ಪೇಟೆಗೆ ಹೊರಟಿದ್ದೆ.
ನನ್ನ ಸೀಟ್ ನಂಬರು:ಎ4, ಸ್ಲೀಪರ್ ಸೀಟು.
ಮೂಡುಬಿದಿರೆಯ ಏಕಾಂಗಿತನ, ಉಜಿರೆ ಪಕ್ಕದ ಕುಡುಮೌನಿ ಗಡಾಯಿಕಲ್ಲು, ಧರ್ಮಸ್ಥಳದ ದೀಪದ ಬೆಳಕು ದಾಟಿದಾಗ ಹತ್ತಿರ ಹತ್ತಿರ ಹನ್ನೆರಡು.

ಉಳುಕುತ್ತಾ,ಬಳುಕುತ್ತಾ ಬಸ್ಸು ಶಿರಾಡಿ ಘಾಟಿ ಏರುತ್ತಿದ್ದದ್ದು, ಬಲ ಬದಿಯಲ್ಲಿ ಜನರೇಟರಿನ ಬೆಳಕಲ್ಲಿ ರಾತ್ರಿ ಪಾಳಿಯ ಹೆಂಗಸರು, ಗಂಡಸರು ಗುಂಡ್ಯದ ಹೊಳೆಯ ಅಣೆಕಟ್ಟಿಗೆ ಕಾಂಕ್ರೀಟು ಹೊರುತ್ತಿದ್ದುದು ನೋಡಿದೆ. ನೋಡಿ ಆನಂದಿಸುವುದೋ, ದುಃಖಿಸುವುದೋ ಎಂದು ತಿಳಿಯುವ ಮೊದಲೇ ಮಂಪರು ನಿದ್ದೆ.

ಎದ್ದಾಗ ಬಸ್ಸು ಎಲ್ಲೋ ನಿಂತಿತ್ತು.
ಆಗ ಗಂಟೆ ಎರಡು. ಬಸ್ಸಿನಲ್ಲಿದ್ದವರಲ್ಲಿ ಬಹಳಷ್ಟು ಮಂದಿ ಹೊರಗೆ ಹೋಗಿದ್ದರು. ಉಳಿದವರು ಕೂತಲ್ಲಿ, ಕೆಲವರು ಮಲಗಿದಲ್ಲಿ ಚೆಲ್ಲಾಪಿಲ್ಲಿಯಾಗಿದ್ದರು.
ಅಷ್ಟು ಹೊತ್ತು ಬಲವಂತದಿಂದ ಕಟ್ಟಿಕೊಂಡಿದ್ದ ಉಚ್ಚೆಯನ್ನು ಹೊರಹಾಕಲು ಓಡಿದೆ. ಕೊರೆಯುವ ಚಳಿ. ಒಂದೈದು ನಿಮಿಷ ಒದ್ದಾಡಿದೆ.

ಒಂದರ ಪಕ್ಕ ಒಂದು. ಮಹಾನಗರದ ಕಡೆ ಹೊರಟ ಬಸ್ಸುಗಳು. ಕೆಲವರು ಹೊರಗಡೆ ಕಾಫಿ ಹೀರುತ್ತಿದ್ದರು. ಚಳಿಯಲ್ಲಿ ನಡುಗುತ್ತಿದ್ದರು. ಹೋಟೇಲಿನ ಸಿಡಿ ಪ್ಲೇಯರ್ "ಏನೋ ಒಂಥರಾ" ಎಂದು ಅರಚುತ್ತಿತ್ತು.

ಸ್ವಲ್ಪ ಹೊತ್ತಲ್ಲೇ
ಒಂದೊಂದೇ ಹೆಡ್ ಲೈಟುಗಳು ಬೆಳಗಿದವು.
ಬಸ್ಸಿನ ಡ್ರೈವರುಗಳು ಅಕ್ಸಿಲೇಟರಿನ ಮೇಲೆ ಕಾಲು ಅದುಮಲು ಶುರುಮಾಡಿದರು. ಸ್ಟೇರಿಂಗಿನ ಆಣತಿಯಂತೆ ಚಕ್ರಗಳು ತಿರುಗಿದವು ವೇಗವಾಗಿ, ಆಚೆ-ಈಚೆ.

ನನ್ನದು ಯಾವ ಬಸ್ ನಂಬರು?
C1, M,Y,Z,1,2,3.......
??????????
ಆ ಕ್ಷಣಕ್ಕೆ ಹೊಳೆಯಲಿಲ್ಲ.

ಅಕ್ಸಿಲೇಟರಿನ ವೇಗಕ್ಕೆ ಬಸ್ಸಿನ ಟಯರುಗಳು ಸ್ಪೀಡಾಗಿ ನನ್ನಿಂದ ದೂರ ಓಡಲು ಶುರು ಮಾಡಿದವು.
ವೇಗವಾಗಿ ಮತ್ತೂ ವೇಗವಾಗಿ.

ಶುಕ್ರವಾರ, ಅಕ್ಟೋಬರ್ 10, 2008

ಸಿಗ್ನಲ್ಲು ಹಳದಿಯಿಂದ ಹಸಿರಿಗೆ ತಿರುಗುತ್ತಿದ್ದಾಗ...(ಪುಟಾಣಿ ಕತೆ-8)


ಮೊನ್ನೆ ಮೊನ್ನೆ ಜೆ.ಸಿ.ರೋಡ್ ಬ್ಲಾಕ್ ಆದಾಗ ಒಂದು ಮುಖ ಕಂಡಿತ್ತು, ಟ್ರಾಫಿಕ್ಕಿನ ಮಧ್ಯೆ.
ತುಂಬಾ ಪರಿಚಿತ ಮುಖ ಅದು.
ಸಿಗ್ನಲ್ ಹಳದಿ ದೀಪಕ್ಕೆ ತಿರುಗಿ ನಂತರ ಹಸಿರು ದೀಪವನ್ನು ತೋರಿಸುತ್ತಿದ್ದಾಗ ಈ ಘಟನೆ ಸಂಭವಿಸಿದ್ದು.

ಮತ್ತೆ ಜೆ.ಸಿ. ರೋಡ್ ಬ್ಲಾಕ್ ಆಗಲಿಲ್ಲ.

ಇವತ್ತು ಟ್ರಾಫಿಕ್ ಜಾಮ್ ಆಗಿದೆ.
ಸಿಗ್ನಲ್ಲು ಹಳದಿಯಿಂದ ಹಸಿರಿಗೆ ತಿರುಗುತ್ತಿದೆ.
ಟ್ರಾಫಿಕ್ಕಿನ ಮಧ್ಯೆ ಯಾವುದೋ ಮುಖ ಮತ್ತೆ ಮತ್ತೆ ಪರಿಚಿತ ಅನ್ನಿಸುತ್ತಿದೆ.

ಇದು ಅದೇ ಹಳೆಯ ಮುಖವಾ ಅಥವಾ ಹೊಸ ಮುಖವಾ?




ಭಾನುವಾರ, ಅಕ್ಟೋಬರ್ 5, 2008

ವಿಧೇಯನಾಗಿ ಉಳಿದು ಹೋದ ಒಬ್ಬ ಸಾಮಾನ್ಯ ಮನುಷ್ಯ



ನಮಗೆಲ್ಲಾ ರಾಜ್ ಕುಮಾರ್ ಇವತ್ತಿಗೂ ಇಷ್ಟವಾಗುವುದಕ್ಕೆ ಕಾರಣಗಳಿವೆ.

ನಾವ್ಯಾವತ್ತೂ ಆತನನ್ನು ಹೊರಗಿನವನು ಅಂತ ಪರಿಗಣಿಸಲೇ ಇಲ್ಲ. ಇವತ್ತಿಗೂ ಆ ರಾಜಕುಮಾರ ನಮ್ಮ ಮನೆಯವನೇ. ಅಕ್ಕರೆಯ ಅಣ್ಣ, ಒಲುಮೆಯ ಗಂಡ,ನಲ್ಮೆಯ ಗೆಳೆಯ, ವಿಧೇಯ ಮಗ, ಬುದ್ಧಿವಂತ, ಹೃದಯವಂತ ವ್ಯಕ್ತಿಯಾಗಿಯೇ ನಮ್ಮ ಭಾವಕೋಶದಲ್ಲಿ ಉಳಿದು ಬಿಟ್ಟಿದ್ದಾನೆ.

ಆತನ ಸಿನಿಮಾಗಳಿಂದ ನಾವು ಕಲಿತಿದ್ದನ್ನು ಮರೆಯಲು ಸಾಧ್ಯವೇ....?
ಅವರೊಂಥರಾ ನಮ್ಮೆಲ್ಲರ ಪ್ರೀತಿಯ ಮೇಷ್ಟ್ರು. ಅದೆಷ್ಟು ಬಾರಿ ತಿದ್ದಿ, ತೀಡಿದ್ದಾರೆ ಅಪ್ರತ್ಯಕ್ಷವಾಗಿ. ಅದಕ್ಕೇ ರಾಜ್ ಹೊರಗಿನವರಲ್ಲ. ನಮ್ಮ ಕುಟುಂಬದ ಸದಸ್ಯ ಎನ್ನಲು ಪ್ರತೀ ಬಾರಿ ಹೆಮ್ಮೆ ಎನಿಸುತ್ತದೆ.
ಈ ಭಾವನೆ ಕರ್ನಾಟಕದುದ್ದಕ್ಕೂ ಇದೆ. ತಮ್ಮ ಸರಳ, ಸಜ್ಜನ, ನಡೆ-ನುಡಿ, ಅಭಿನಯದ ಮೂಲಕ ಪ್ರೀತಿಯ,ಸಂವೇದನೆಯ ಕೋಟೆಯನ್ನು ನಮ್ಮೊಳಗೆ ಕಟ್ಟಿ ಹೋಗಿದ್ದಾರೆ ರಾಜ್. ಅಭಿಮಾನಿಗಳಿಗೆ ಆತ ನಟಸಾರ್ವಭೌಮ, ವರನಟ, ಕನ್ನಡ ಕಂಠೀರವ. ಆದರೆ ನಮ್ಮೆಲ್ಲರ ಪಾಲಿಗೆ ಆತ ಕೇವಲ ರಾಜಣ್ಣ. "ಅಭಿಮಾನಿ ದೇವರುಗಳೇ" ಎಂದು ಸಂಬೊಧಿಸುತ್ತಾ ವಿಧೇಯನಾಗಿ ಉಳಿದು ಹೋದ ಒಬ್ಬ ಸಾಮಾನ್ಯ ಮನುಷ್ಯ.


ಅತ್ಯಂತ ಹಿಂದುಳಿದ, ಬಡ, ರೈತಾಪಿ ಕುಟುಂಬದಿಂದ ಬಂದ ದೊಡ್ಡ ಗಾಜನೂರಿನ ಸಿಂಗಾನೆಲ್ಲೂರು ಪುಟ್ಟಸ್ವಾಮಯ್ಯನವರ ಮಗ ಮುತ್ತುರಾಜ್, ಯಾವ ಗಾಡ್ ಫಾದರುಗಳ ಹಂಗಿಲ್ಲದೆ ಕನ್ನಡಿಗರ ಕಣ್ಮಣಿಯಾಗಿ ಬೆಳೆದ ರೀತಿ ಕಣ್ಮನ ತಣಿಯುವಷ್ಟೇ ಅಪೂರ್ವ. ರಾಜ್ ಕುಮಾರ್ ಅಭಿನಯಿಸಿದಷ್ಟು ವೈವಿಧ್ಯಮಯ ಪಾತ್ರಗಳು ಬಹುಷಃ ಇನ್ಯಾವ ನಟನಿಗೂ ಒಲಿದಿಲ್ಲ. ಸಾಮಾಜಿಕ ಪಾತ್ರಗಳಿಗಿಂತ ಪೌರಾಣಿಕ, ಐತಿಹಾಸಿಕ ಪಾತ್ರಗಳಿಂದಲೇ ರಾಜ್ ಕುಮಾರ್ ಮನೆ-ಮನ ತಟ್ಟಿದವರು.
ಬಬ್ರುವಾಹನನ ಆ ಅಸ್ಖಲಿತ ಸಂಭಾಷಣೆ, ಆವೇಶ ಮರೆಯಲು ಸಾಧ್ಯವೇ?--"ಏನು ಪಾರ್ಥ, ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನ ಗೆಲ್ಲಲಾರೆ" ಎನ್ನುವ ಸಂಭಾಷಣೆ ರಾಜ್ ಬಾಯಿಂದ ಕೇಳಿದರೆ ಇವತ್ತಿಗೂ ರೋಮಾಂಚನ,ಮೈಯೆಲ್ಲ ಕಿವಿಯಾಗುತ್ತದೆ. ಅರ್ಜುನನ ಬಗ್ಗೆ ಅನುಮಾನಗಳೇಳುತ್ತವೆ. ಯಾವ ಪಾತ್ರ ಕೊಟ್ಟರೂ ಪರಕಾಯ ಪ್ರವೇಶವೇ. ಕನಕದಾಸ, ಪುರಂದರದಾಸ, ಪುಲಿಕೇಶಿ, ಕಾಳಿದಾಸ, ಮಯೂರ ,ಕೃಷ್ಣದೇವರಾಯ ಹೇಗಿದ್ದರೋ ಗೊತ್ತಿಲ್ಲ. ಆದರೆ ಅವರನ್ನೆಲ್ಲಾ ನಾವು ಸಾಕ್ಷಾತ್ ನೋಡುವಂತಾಗಿದ್ದು ರಾಜ್ ಕುಮಾರ್ ಮೂಲಕ."ಬಂಗಾರದ ಮನುಷ್ಯ" ರಾಜೀವನನ್ನು ಮರೆತೆನೆಂದರೂ ಮರೆಯಲಿ ಹ್ಯಾಂಗ?

ಇವತ್ತು ಚಲನಚಿತ್ರ ಎನ್ನುವುದು ಪಕ್ಕಾ ಉದ್ಯಮ. ವ್ಯಾಪಾರಿ ಮನಃಸ್ಥಿತಿ, ಲಾಭ-ನಷ್ಟಗಳ ಲೆಕ್ಕಾಚಾರಗಳೇ ಏಣಿಯ ಅಂತಿಮ ಮೆಟ್ಟಿಲುಗಳು. ಆದರೆ ಚಲನಚಿತ್ರ ಮಾಧ್ಯಮವನ್ನು ಸಾಂಸ್ಕೃತಿಕ ಮಾಧ್ಯಮವಾಗಿ ಜೀವಿತಾವಧಿವರೆಗೂ ಬೆಳೆಸಿದ, ಪೊರೆದುಕೊಂಡು ಬಂದವರಲ್ಲಿ ರಾಜ್ ಅಗ್ರಗಣ್ಯ. ಡಬ್ಬಿಂಗ್ ಹಾವಳಿ ತಪ್ಪಿಸಲು ಸ್ನೇಹಿತರ ಜೊತೆ ಸೇರಿಕೊಂಡು ನಿರ್ಮಿಸಿದ "ರಣಧೀರ ಕಂಠೀರವ" ಚಲನಚಿತ್ರ ರಾಜ್ ಕುಮಾರ್ ಅವರಿಗಿದ್ದ ಸಾಂಸ್ಕೃತಿಕ ಮಾಧ್ಯಮದೆಡೆಗಿನ ಕಾಳಜಿಯ ಮತ್ತೊಂದು ರೂಪ. ಅನ್ಯ ಭಾಷಾ ಚಿತ್ರಗಳಲ್ಲಿ ನಟಿಸುವುದಿಲ್ಲ ಎನ್ನುವ ತಮ್ಮ ನಿಲುವಿಗೆ ಬದ್ಧವಾಗಿದ್ದದ್ದು, ಇದೇ ಕಾರಣಕ್ಕಾಗಿ ಅಮಿತಾಭ್ "ಕೂಲಿ" ಚಿತ್ರದಲ್ಲೊಂದು ಪಾತ್ರ ನಿರ್ವಹಿಸಲು ವಿನಂತಿಸಿದಾಗ ತಿರಸ್ಕರಿಸಿದ್ದು....... ಗೋಕಾಕ್ ಚಳವಳಿ ರಾಜ್ ಕುಮಾರ್ ಪ್ರವೇಶದ ನಂತರ ಪಡೆದುಕೊಂಡ ಜನಬೆಂಬಲ, ಸ್ಪಂದನೆ ಅವರ ಸಿನಿಮಾಗಳಷ್ಟೇ ಅಪೂರ್ವ ದ್ರಶ್ಯಾವಳಿಗಳ ಸಂಕಲನ.

"ಯಾರೇ ಕೂಗಾಡಲಿ, ಊರೇ ಹೋರಾಡಲಿ" ಎಂದು ಹಾಡಲು ಶುರು ಮಾಡುತ್ತಾ, "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು", "ಜನರಿಂದ ನಾನು ಮೇಲೆ ಬಂದೆ" ಎನ್ನುತ್ತಾ ಹೊಸ ಸಂಕಲ್ಪಕ್ಕೆ, ದೀಕ್ಷೆಗೆ, ಬದ್ಧತೆಗೆ ಜನಸಾಮಾನ್ಯನನ್ನು ತೆರೆದುಕೊಳ್ಳುವಂತೆ ಮಾಡಿದ್ದು ನಮ್ಮ ರಾಜ್ ಕುಮಾರ್.
ಇವತ್ತಿಗೂ ಕೂಡಾ ಮುತ್ತುರಾಜನ "ರಾಜಕುಮಾರ" ಎನ್ನುವ ಚೇತನ ಅನೇಕರ ಬದುಕುಗಳನ್ನು ಕಟ್ಟಿಕೊಳ್ಳಲು ಸಹಾಯಮಾಡುತ್ತಿದೆ, ತಿದ್ದಿಕೊಳ್ಳಲು ನೆರವಾಗುತ್ತಿದೆ. ಕುಸಿದು ಬಿದ್ದ ಮನೆಯ ಒಂದೊಂದೇ ಇಟ್ಟಿಗೆ ಪೇರಿಸಲು ಸಹಾಯ ಮಾಡುತ್ತಿದೆ.

ಇದೆಲ್ಲವನ್ನು ಸಾಧ್ಯಮಾಡುವುದು ಮತ್ತದೇ ನಮ್ಮ ರಾಜ್ ಕುಮಾರ್ ಎಂಬ ಪ್ರೀತಿಯ ಮೇಷ್ಟ್ರು, ಅಕ್ಕರೆಯ ಅಣ್ಣ, ಒಲುಮೆಯ ಗಂಡ, ನಲ್ಮೆಯ ಗೆಳೆಯ, ವಿಧೇಯ ಮಗ, ಬುದ್ಧಿವಂತ, ಹೃದಯವಂತ .......

ಎಲ್ಲಕ್ಕಿಂತ ಹೆಚ್ಚಾಗಿ ವಿಧೇಯನಾಗಿ ಉಳಿದು ಹೋಗುವ ಮನುಷ್ಯ.


ಚಿತ್ರಕೃಪೆ :ಪಿಕಾಸ ವೆಬ್ ಆಲ್ಬಮ್